ಸಚಿನ್ ಅವರ 100 ಶತಕಗಳ ದಾಖಲೆ ಮುರಿಯುವ ಸಾಮರ್ಥ್ಯ ಕೊಹ್ಲಿಗಿದೆ: ರವಿ ಶಾಸ್ತ್ರಿ ಮುಂಬೈ: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ಮತ್ತೊಂದು ದಾಖಲೆ ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50 ಶತತಕಗಳ ಜೊತೆ ಟೆಸ್ಟ್ ಕ್ರಿಕೆಟ್‌ನಲ್ಲೂ 29 ಶತಕ, ಟಿ–20ಯಲ್ಲಿ1 ಶತಕ ಸಿಡಿಸಿದ್ದಾರೆ. ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ವಿಶ್ವಕಪ್ ಸರಣಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 50ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದರು. 'ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಗಳಿಸಿದಾಗ ಯಾರಾದರೂ ಅವರ ಹತ್ತಿರ ಬರಬಹುದು ಎಂದು ಯಾರೂ ಭಾವಿಸಿರಲಿಲ್ಲ. ಕೊಹ್ಲಿ ಅವರು 80 ಅಂತರರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ್ದಾರೆ’ ಎಂದು ಐಸಿಸಿ ರಿವ್ಯೂ ಸಂದರ್ಭದಲ್ಲಿ ಶಾಸ್ತ್ರಿ ಹೇಳಿದ್ದಾರೆ. ‘ಅಂತಹ ಆಟಗಾರರಿಗೆ ಏನೂ ಅಸಾಧ್ಯವಲ್ಲ. ಏಕೆಂದರೆ, ಅವರು ಫಾರ್ಮ್‌ನಲ್ಲಿದ್ದಾಗ ಬಹು ಬೇಗನೆ ಶತಕಗಳನ್ನು ಗಳಿಸುತ್ತಾರೆ. ಕೊಹ್ಲಿ ಅವರ ಮುಂದಿನ 10 ಇನಿಂ ಗ್ಸ್‌ನಲ್ಲಿ ಬಹುಶಃ ನೀವು ಐದು ಶತಕಗಳನ್ನು ನೋಡಬಹುದು. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ವಿರಾಟ್ ಆಡುತ್ತಿದ್ದಾರೆ. ಇನ್ನೂ 3–4 ವರ್ಷ ಅವರು ಅದ್ಬುತ ಕ್ರಿಕೆಟ್ ಆಡಬಲ್ಲರು’ ಎಂದು ಶಾಸ್ತ್ರಿ ಹೇಳಿದ್ದಾರೆ. ಒತ್ತಡವನ್ನು ನಿರ್ವಹಿಸುವ ಕೊಹ್ಲಿ ಸಾಮರ್ಥ್ಯದ ಬಗ್ಗೆ ಶಾಸ್ತ್ರಿ ಬೆರಗಾಗಿದ್ದಾರೆ. ವಿಶ್ವಕಪ್ ಸರಣಿಯ ಸಂದರ್ಭ ಆಟದ ಮೇಲೆ ಅವರ ಹಿಡಿತ, ತಾಳ್ಮೆ ಮತ್ತು ಬಾಡಿ ಲಾಂಗ್ವೇಜ್ ಎಲ್ಲವೂ ಸುಧಾರಣೆ ಕಂಡಿದೆ. ಕ್ರೀಸ್‌ಗೆ ಬಂದ ಕೂಡಲೇ ರನ್ ಹೊಡೆಯುವ ಆತುರ ಪ್ರದರ್ಶಿಸುತ್ತಿದ್ದರು. ಈಗ ಅವರು ತಮ್ಮದೇ ಆದ ಸಮಯ ತೆಗೆದುಕೊಂಡು ಒತ್ತಡವನ್ನು ನಿರ್ವಹಿಸುತ್ತಾರೆ. ದೀರ್ಘಕಾಲ ಬ್ಯಾಟಿಂಗ್ ಮಾಡಬೇಕೆಂಬ ತಮ್ಮ ಪಾತ್ರದ ಬಗ್ಗೆ ಸರಿಯಾಗಿ ಅರಿತುಕೊಂಡಿದ್ದಾರೆ. ಅವರೊಬ್ಬ ಅದ್ಬುತ ಆಟಗಾರ ಎಂದು ಹೊಗಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.