ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್: ಬುಕ್ಕಿ ಬಂಧನ ಬೆಂಗಳೂರು: ವಿಶ್ವಕಪ್‌ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿ ಸತೀಶ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‘ಬಂಧಿತ ಸತೀಶ್, ಬೆಟ್ಟಿಂಗ್ ಬುಕ್ಕಿ. ಈತನಿಂದ ₹ 1.50 ಲಕ್ಷ ನಗದು ಜಪ್ತಿ ಮಾಡಲಾಗಿದೆ. ₹ 41.71 ಲಕ್ಷ ಹಣವಿರುವ 3 ಬ್ಯಾಂಕ್‌ ಖಾತೆಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ. ಪ್ರಮುಖ ಬುಕ್ಕಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಬೆಟ್ಟಿಂಗ್‌ಗಾಗಿ ಜಾಲತಾಣ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿರುವ ಆರೋಪಿಗಳು, ಯೂಸರ್ ನೇಮ್ – ಪಾಸ್‌ವರ್ಡ್ ಮೂಲಕ ಖಾತೆ ತೆರೆದಿದ್ದರು. ನಂತರ, ಹಲವರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನೂ ರಚಿಸಿಕೊಂಡಿದ್ದರು’ ಎಂದು ತಿಳಿಸಿವೆ. ‘ವಿಶ್ವಕಪ್ ಆರಂಭಕ್ಕೂ ಮುನ್ನ ಪ್ರಮುಖ ಬುಕ್ಕಿ, ಇತರೆ ಆರೋಪಿಗಳಿಗೆ ತರಬೇತಿ ನೀಡಿದ್ದ. ವಿಶ್ವಕಪ್ ಕ್ರಿಕೆಟ್ ಆರಂಭದಿಂದ ಇದುವರೆಗೂ ಆರೋಪಿಗಳು, ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಸಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಮೂಲಗಳು ಹೇಳಿವೆ. ‘ಶಂಕರಪುರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಮುಂಭಾಗದಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾಗಲೇ ಸತೀಶ್‌ನನ್ನು ಬಂಧಿಸಲಾಗಿದೆ. ಈತನಿಂದ 6 ಮೊಬೈಲ್ ಹಾಗೂ 1 ಟ್ಯಾಬ್ ಸಹ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.