ಲಿಂಗ ಅಸಮಾನತೆ ನಿಗ್ರಹಕ್ಕೆ ಬದ್ಧತೆ ವ್ಯಕ್ತಪಡಿಸುವ ದಿನ.. ಅಮೆರಿಕದ ವಿದೇಶಾಂಗ ಸಚಿವನಾಗಿ (ಸೆಕ್ರೆಟರಿ ಆಫ್ ಸ್ಟೇಟ್) ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲಿಯೇ ಮ್ಯಾನ್ಮಾರ್‌ನ ಧೈರ್ಯಶಾಲಿ ಮಹಿಳೆಯರ ಸಮೂಹ ಭೇಟಿ ಮಾಡುವ ಗೌರವ ನನ್ನದಾಗಿತ್ತು. ಅವರಲ್ಲಿ ಇಬ್ಬರು ಮಾಜಿ ರಾಜಕೀಯ ಕೈದಿಗಳು. ನಂಬಲಸಾಧ್ಯವಾದ ಸಂಕಷ್ಟಗಳನ್ನು ತಮ್ಮ ಜೀವನದಲ್ಲಿ ಕಂಡು ಉಂಡಿದ್ದ ಅವರು, ಬಾಲಕಿಯರಿಗೆ ಶಿಕ್ಷಣ ಹಾಗೂ ತರಬೇತಿ, ನಿರುದ್ಯೋಗಿಗಳಿಗೆ ಉದ್ಯೋಗ ಹುಡುಕುವ ಹಾಗೂ ನಾಗರಿಕ ಸಮಾಜದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯ ಪ್ರತಿಪಾದನೆಗೆ ತಮ್ಮ ಬದ್ಧತೆ ವ್ಯಕ್ತಪಡಿಸುವ ಮೂಲಕ ಜೀವನದಲ್ಲಿ ಮುನ್ನಡೆದಿದ್ದರು. ಬದಲಾವಣೆಯ ಸಮರ್ಥ ಹರಿಕಾರರಾಗಿ ಮುಂದುವರೆದು, ಮುಂದಿನ ವರ್ಷಗಳಲ್ಲಿ ತಮ್ಮ ಸಮುದಾಯ ಹಾಗೂ ತಮ್ಮ ದೇಶಗಳಿಗೆ ಅಭಿವೃದ್ಧಿ ತರುತ್ತಾರೆ ಎಂಬ ಕುರಿತು ನನಗೆ ಯಾವುದೇ ಅನುಮಾನವಿಲ್ಲ. ಮಹಿಳೆಯರು ಹಾಗೂ ಬಾಲಕಿಯರ ಹಕ್ಕುಗಳ ರಕ್ಷಣೆ ಹಾಗೂ ಅವುಗಳ ಮುನ್ನಡೆಗೆ ವಿಶ್ವದಾದ್ಯಂತ ಸರ್ಕಾರಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳೊಂದಿಗೆ ಅಮೆರಿಕವು ಏಕೆ ದುಡಿಯುತ್ತಿದೆ ಎಂಬುದರ ಮಹತ್ವವನ್ನು ಇಂಥ ಅವಕಾಶಗಳು ನಮಗೆ ನೆನಪಿಸುತ್ತವೆ. ನಮ್ಮ ದೇಶದಂತೆಯೇ, ವಿಶ್ವದ ಅತ್ಯಂತ ಗಂಭೀರವಾದ ಆರ್ಥಿಕ, ಸಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಮಹಿಳೆಯರ ಸಂಪೂರ್ಣ ಪಾಲ್ಗೊಳ್ಳುವಿಕೆ ಇಲ್ಲದೇ, ಪರಿಹರಿಸುವುದು ಸಾಧ್ಯವಿಲ್ಲ. ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ, ಲಿಂಗ ಭೇದ ಹೆಚ್ಚಿರುವ ದೇಶಗಳಿಗಿಂತ ಅಂದರೆ, ಮಹಿಳೆಯರು ಹಾಗೂ ಬಾಲಕಿಯರಿಗೆ ವೈದ್ಯಕೀಯ ಕಾಳಜಿ, ಶಿಕ್ಷಣ, ಅಧಿಕಾರಕ್ಕೆ ಚುನಾಯಿತರಾಗುವ, ಹಾಗೂ ಮಾರುಕಟ್ಟೆಗಳಿಗೆ ಅವಕಾಶವಿಲ್ಲದ ಅಥವಾ ಅತ್ಯಂತ ಕಡಿಮೆ ಅವಕಾಶಗಳಿರುವಂಥ ದೇಶಗಳಿಗಿಂತ ಪುರುಷರು ಹಾಗೂ ಸ್ತ್ರೀಯರು ಬಹುತೇಕ ಸಮಾನ ಹಕ್ಕುಗಳನ್ನು ಅನುಭವಿಸುತ್ತಿರುವ ದೇಶಗಳು, ಆರ್ಥಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿವೆ. ಅದೇ ತೆರನಾಗಿ, ವಿಶ್ವಸಂಸ್ಥೆಯ ಅಂಗಗಳಾದ ಆಹಾರ ಹಾಗೂ ಕೃಷಿ ಸಂಸ್ಥೆಯ ಅಂದಾಜಿನಂತೆ, ಪುರುಷರಂತೆ ಮಹಿಳೆಯರಿಗೂ ಬೀಜ, ಗೊಬ್ಬರ ಹಾಗೂ ತಂತ್ರಜ್ಞಾನ ಲಭ್ಯವಾದರೆ, ವಿಶ್ವದಲ್ಲಿ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆಯನ್ನು 15 ಕೋಟಿಗೆ ಅಂದರೆ, 10 ಕೋಟಿಯಷ್ಟು ಕಡಿಮೆ ಮಾಡಬಲ್ಲರು. ಈಗಲೂ, ಅನೇಕ ಸಮಾಜಗಳಲ್ಲಿ ಹಾಗೂ ಅನೇಕ ಮನೆಗಳಲ್ಲಿ ಮಹಿಳೆಯರು ಹಾಗೂ ಬಾಲಕಿಯರು ಕಡೆಗಣನೆಗೆ ಒಳಗಾಗುತ್ತಾರೆ, ಶಾಲೆಗೆ ಹೋಗುವ ಅವಕಾಶದಿಂದ ವಂಚಿತರಾಗುತ್ತಾರೆ ಹಾಗೂ ಬಾಲ್ಯದಲ್ಲಿಯೇ ಮದುವೆ ಹೇರಲಾಗುತ್ತದೆ. ಲಿಂಗಾಧಾರಿತ ಹಿಂಸೆಯಿಂದಾಗಿ, ಅನೇಕ ಜೀವಗಳು ಕಳೆದು ಹೋಗಿವೆ ಇಲ್ಲವೇ ಶಾಶ್ವತವಾಗಿ ಬದಲಾಗಿ ಬಿಟ್ಟಿವೆ. ಕೇವಲ ಮಹಿಳೆ ಎಂಬ ಕಾರಣಕ್ಕೆ ನವದೆಹಲಿಯ ಬಸ್ಸೊಂದರಲ್ಲಿ ಕೊಲೆಯಾದ 23ರ ಹರೆಯದ `ನಿರ್ಭಯಾ'ಳ ಪೋಷಕರ ವೇದನೆ, ಅಥವಾ ಶಾಲೆಗೆ ಹೋಗುವ ಬಯಕೆಯಿಂದ ಬಸ್ ಹತ್ತಿದ್ದಕ್ಕಾಗಿ ಉಗ್ರಗಾಮಿಗಳ ಗುಂಡೇಟು ತಿಂದ ಮಲಾಲಾ ಯೂಸುಫ್ ಝೈ ಅವರ ಪೋಷಕರ ತಲ್ಲಣವನ್ನು ಎರಡು ಹೆಣ್ಣು ಮಕ್ಕಳ ತಂದೆಯಾದ ನಾನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಆದರೆ, ತನ್ನ ಧ್ಯೇಯದೆಡೆಗಿನ ಮಲಾಲಾಳ ದೃಢವಾದ ಬದ್ಧತೆ, ಸಾಯುವ ಸಂದರ್ಭದಲ್ಲಿಯೂ ದಾಳಿಕೋರರನ್ನು ನ್ಯಾಯಸ್ಥಾನಕ್ಕೆ ಎಳೆದು ತರಬೇಕೆನ್ನುವ `ನಿರ್ಭಯಾ'ಳ ಛಲ ಹಾಗೂ ತಮ್ಮ ಮಕ್ಕಳ ಪರವಾಗಿ ಹಾಗೂ ಎಲ್ಲೆಡೆ ಇರುವ ಮಹಿಳೆಯ ಪರವಾಗಿ ಮಾತನಾಡಲು ಮುಂದಾಗಿರುವ ಅವರ ಅಪ್ಪಂದಿರ ಧೈರ್ಯ ನನಗೆ ಸ್ಪೂರ್ತಿ ನೀಡಿದೆ. ತನ್ನ ಜನಸಂಖ್ಯೆಯ ಅರ್ಧದಷ್ಟು ಜನರನ್ನು ಹಿಂದೆ ಬಿಟ್ಟು ಯಾವುದೇ ದೇಶ ಮುಂದುವರಿಯಲು ಸಾಧ್ಯವಿಲ್ಲ. ಸಮೃದ್ಧಿ, ಸ್ಥಿರತೆ ಹಾಗೂ ಶಾಂತಿಯಂಥ ಸಮಾನ ಗುರಿಗಳನ್ನು ಸಾಧಿಸಬೇಕಾದರೆ ಲಿಂಗ ಸಮಾನತೆಯು ನಿರ್ಣಾಯಕ ಎಂದು ಅಮೆರಿಕ ನಂಬುತ್ತದೆ. ಹಾಗಾಗಿಯೇ ಅಮೆರಿಕದ ವಿದೇಶಾಂಗ ನೀತಿಮುನ್ನಡೆಸಲು ವಿಶ್ವದಾದ್ಯಂತ ಮಹಿಳೆಯರು ಹಾಗೂ ಬಾಲಕಿಯರ ವಿಚಾರದಲ್ಲಿ ಬಂಡವಾಳ ಹೂಡಿಕೆ ಅನಿವಾರ್ಯವಾಗುತ್ತದೆ. ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಿ, ಮಾರ್ಗದರ್ಶನ ನೀಡುವಂಥ ಕಾರ್ಯಕ್ರಮಗಳಲ್ಲಿ ನಾವು ಬಂಡವಾಳ ಹೂಡಿಕೆ ಮಾಡುವ ಮೂಲಕ, ಆ ಮಹಿಳೆಯರು ತಮ್ಮ ಕುಟುಂಬಗಳನ್ನು ಮೇಲೆತ್ತುವುದು ಮಾತ್ರವಲ್ಲ, ದೇಶಗಳ ಆರ್ಥಿಕತೆ ಬೆಳೆಯಲೂ ನೆರವಾಗುತ್ತಾರೆ. ಬಾಲಕಿಯರ ಶಿಕ್ಷಣದಲ್ಲಿ ನಾವು ಹೆಚ್ಚು ಹಣ ಹೂಡಿಕೆ ಮಾಡುವ ಮೂಲಕ, ಬಲವಂತದ ಬಾಲ್ಯದ ಮದುವೆಯನ್ನು ಅವರು ತಪ್ಪಿಸಿಕೊಳ್ಳುವಂತೆ ಮಾಡಿ, ಬಡತನದ ಚಕ್ರ ಮುರಿದು ಹಾಗೂ ಸಮುದಾಯದ ನಾಯಕರಾಗಿ ಹಾಗೂ ಕ್ರಿಯಾಶೀಲ ನಾಗರಿಕರಾಗಿ ಅಭಿವೃದ್ಧಿ ಹೊಂದುವಂತೆ ಮಾಡಬಹುದು. ಬಾಲಕಿಯರಲ್ಲಿ ಹಾಗೂ ಮಹಿಳೆಯರಲ್ಲಿ ಶಿಕ್ಷಣದ ಮಟ್ಟ ಹೆಚ್ಚಿಸಿ, ಸಂಪನ್ಮೂಲಗಳಿಗೆ ಅವರಿಗೆ ಮುಕ್ತ ಪ್ರವೇಶ ಕಲ್ಪಿಸುವ ಮೂಲಕ ಮುಂದಿನ ತಲೆಮಾರಿನ ಆರೋಗ್ಯ ಹಾಗೂ ಶಿಕ್ಷಣ ಸುಧಾರಿಸಬಹುದು. ತಾಯಂದಿರ ಆರೋಗ್ಯ ಸುಧಾರಿಸುವುದು, ಮಹಿಳಾ ಕೃಷಿಕರ ಸಬಲೀಕರಣ, ಹಾಗೂ ಲಿಂಗಾಧಾರಿತ ಹಿಂಸೆ ತಡೆಯುವುದು ಹಾಗೂ ಪರಿಹರಿಸುವತ್ತ ವಿಶ್ವಾದ್ಯಂತ ಇರುವ ನಮ್ಮ ಸಹಭಾಗಿಗಳೊಂದಿಗೆ ನಾವು ಕೆಲಸ ಮಾಡುತ್ತಿದ್ದೆೀವೆ. ಏಕೆಂದರೆ ಎಲ್ಲ ಮಹಿಳೆಯರು ಆರೋಗ್ಯವಾಗಿ, ಸುರಕ್ಷಿತರಾಗಿದ್ದರೆ, ಅದು ಎಲ್ಲ ಸಮಾಜಗಳಿಗೂ ಲಾಭದಾಯಕ. ಅವರು ತಮ್ಮ ದುಡಿಮೆ, ನಾಯಕತ್ವ ಹಾಗೂ ಸೃಜನಶೀಲತೆಯ ಮೂಲಕ ವಿಶ್ವದ ಆರ್ಥಿಕತೆಗೂ ಕೊಡುಗೆ ನೀಡಬಲ್ಲರು. ಅಮೆರಿಕ ಸಂಯುಕ್ತ ಸಂಸ್ಥಾನದ ರಾಜತಾಂತ್ರಿಕರು ಎಲ್ಲೆಡೆಯ ಶಾಂತಿ ಮಾತುಕತೆಗಳಲ್ಲಿ ಹಾಗೂ ರಕ್ಷಣಾ ಯತ್ನಗಳಲ್ಲಿ ಮಹಿಳೆಯರನ್ನೂ ಸಂಪೂರ್ಣವಾಗಿ ಸೇರಿಕೊಳ್ಳಲು ಶ್ರಮಿಸುತ್ತಾರೆ. ಮಹಿಳೆಯರ ಅನುಭವ, ಆತಂಕ ಹಾಗೂ ಒಳನೋಟಗಳೊಂದಿಗೆ ಭವಿಷ್ಯದ ಸಂಘರ್ಷ ತಪ್ಪಿಸಿ ಹಾಗೂ ಶಾಂತಿ ಮುಂದುವರಿಸಲು ಸಾಧ್ಯವಾಗುತ್ತದೆ. ಇಂದು ಅಂತರರಾಷ್ಟ್ರೀಯ ಮಹಿಳಾ ದಿನ, ಸಂಭ್ರಮದ ದಿನ. ವಿಶ್ವದ ಮೂಲೆಗಳಲ್ಲಿ ಪ್ರಗತಿಗೆ ತಡೆಯೊಡ್ಡುವ ಅಸಮಾನತೆ ನಿಗ್ರಹಿಸಲು ನಾವು ಪ್ರತಿಯೊಬ್ಬರು ನಮ್ಮ ಬದ್ಧತೆ ವ್ಯಕ್ತಪಡಿಸುವ ದಿನ. ನಮ್ಮ ಹೆಣ್ಣು ಮಕ್ಕಳು ತಮ್ಮ ಶಾಲೆಗಳಿಗೆ ಯಾವುದೇ ಭೀತಿಯಲ್ಲದೇ ಶಾಲಾ ಬಸ್‌ಗಳಲ್ಲಿ ಹೋಗಲು ಸಾಧ್ಯವಾಗುವಂತೆ, ನಮ್ಮೆಲ್ಲ ಸೋದರಿಯರು ತಮ್ಮ ಪ್ರಚಂಡವಾದ ಸಾಮರ್ಥ್ಯ ಸಾಬೀತು ಪಡಿಸಲು ಹಾಗೂ ಪ್ರತಿಯೊಬ್ಬ ಮಹಿಳೆ ಹಾಗೂ ಬಾಲಕಿಯೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಜೀವಿಸಲು ಅನುವಾಗುವಂತೆ ನಾವು ನಮ್ಮ ಬದ್ಧತೆ ವ್ಯಕ್ತಪಡಿಸಲೇಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.