ಅಸ್ಪೃಶ್ಯತೆಯ ಅಳಿವು; ಭಾರತದ ಉಳಿವು ಹಾನಗಲ್ಲ ತಾಲ್ಲೂಕಿನ ಕಾಳಂಗಿಯಲ್ಲಿ ಎರಡು ದಿನಗಳ ಶರಣಸಂಸ್ಕೃತಿ ಉತ್ಸವ ನಡೆಯುತ್ತಿತ್ತು. ನನ್ನನ್ನು ಆ ಊರಿನ ಒಬ್ಬರ ಮನೆಯಲ್ಲಿ ಉಳಿಸಲಾಗಿತ್ತು. ಸಂಸ್ಕಾರವಂತ ಮನೆತನ; ಅಷ್ಟೇ ಮಡಿವಂತರು. ಕೆಲವರು ಮಡಿವಂತಿಕೆಯನ್ನೇ ಸಂಸ್ಕಾರವೆಂದು ಭಾವಿಸುತ್ತಾರೆ. ಧಾರ್ಮಿಕ ಲೋಕದ ದೊಡ್ಡ ದುರಂತವಿದು. ಮಡಿವಂತಿಕೆಯು ಬಹಿರಂಗದಲ್ಲಿ ತೊಳೆಯುವುದಾಗಿರುತ್ತದೆ. ಸಂಸ್ಕಾರವು ಸೌಜನ್ಯಶೀಲ ವರ್ತನೆ ಆಗಿರುತ್ತದೆ. ಮಡಿವಂತರೆಲ್ಲ ಸೌಜನ್ಯರಲ್ಲ, ಜೀವಪರ ಕಾಳಜಿವುಳ್ಳವರಲ್ಲ. ಬಸವಾದಿ ಶರಣರು ಪ್ರತಿಪಾದಿಸಿದ ಜೀವಕಾರುಣ್ಯ ಇವರಿಗೆ ಪರಿಚಯವಿಲ್ಲ. ಮಧ್ಯಾಹ್ನದ ಸಮಯ. ನಮ್ಮಲ್ಲಿ ತರಬೇತಿಯನ್ನು ಪಡೆದ ಒಬ್ಬ ಸಾಧಕರು ತಮ್ಮ ಅನುಯಾಯಿಗಳೊಂದಿಗೆ ನನ್ನನ್ನು ಕಾಣಲು ಅದೇ ಮನೆಗೆ ಬಂದರು. ಅವರು ಸಮಾರಂಭವೊಂದಕ್ಕೆ ಆಹ್ವಾನಿಸಲು ಬಂದಿದ್ದು, ಆ ಬಗ್ಗೆ ಅವರೊಂದಿಗೆ ಸುದೀರ್ಘವಾಗಿ ಸಮಾಲೋಚಿಸಿದೆ. ವೇಳೆಯಾಗುತ್ತಿತ್ತು. ಮಧ್ಯಾಹ್ನದ ಭೋಜನ (ಪ್ರಸಾದ)ದ ವೇಳೆ. ಮನೆಯ ಪೂಜಾ ಕೋಣೆಯಲ್ಲಿ ಪ್ರಸಾದದ ವ್ಯವಸ್ಥೆ. ಆಹಾರ ಮತ್ತು ಅನ್ನವನ್ನು ಶರಣರು ಪ್ರಸಾದೀಕರಣಗೊಳಿಸಿದ್ದಾರೆ. ಆದ್ದರಿಂದ ಶರಣಸಂಸ್ಕೃತಿಯಲ್ಲಿ ಉಪಹಾರ, ಊಟ, ಭೋಜನ ಇತ್ಯಾದಿಗಳು ಪ್ರಸಾದವೆಂದು ಭಾವಿಸಲಾಗುತ್ತದೆ. ಮಠ-ಮಂದಿರಗಳಲ್ಲಿ ಕೈಯಲ್ಲಿ ಕೊಡುವುದನ್ನು ಕೆಲವರು ಪ್ರಸಾದವೆಂದು ಭಾವಿಸುತ್ತಾರೆ. ಊಟ ಮಾಡಿರಿ ಅನ್ನುವುದರ ಬದಲು ಪ್ರಸಾದ ಮಾಡಿರೆಂದು ಹೇಳುತ್ತಾರೆ. ಕಾರಣ ದೂರದಿಂದ ಬಂದ ಆ ಸಾಧಕರು ಮತ್ತಿತರರನ್ನು ನನ್ನೊಟ್ಟಿಗೆ ಪ್ರಸಾದ ಸ್ವೀಕರಿಸಲು ಕರೆದೆ. ಆ ಸಾಧಕರು (ಸ್ವಾಮಿಗಳು) ಛಲವಾದಿ ಜನಾಂಗಕ್ಕೆ ಸೇರಿದವರಾಗಿದ್ದು, ಅವರೊಂದಿಗೆ ಬಂದವರು ಆ ಸಮುದಾಯಕ್ಕೆ ಸೇರಿದವರಾಗಿದ್ದರು. ಮನೆಯ ಮಾಲೀಕರು ಅವರನ್ನು ಪೂಜಾಮನೆಗೆ ಬಿಡಲು ಸಿದ್ಧರಿರಲಿಲ್ಲ. ಅವರು ಶೋಷಿತ ಜನಾಂಗಕ್ಕೆ ಸೇರಿದವರೆಂಬ ಕಾರಣಕ್ಕೆ ಅವರನ್ನು ಪೂಜಾಮನೆಗೆ ಪ್ರವೇಶಿಸಲು ಒಪ್ಪಲಿಲ್ಲ. ನನಗೆ ಇದು ಈ ಕಾಲದ ಸ್ವಾಭಿಮಾನದ ಸವಾಲು. ಅವರು ಹೊರಗೆ ಕುಳಿತು, ನಾನು ಒಳಗೆ ಕುಳಿತು ಪ್ರಸಾದ ಸ್ವೀಕರಿಸಿದರೆ ಅಸ್ಪೃಶ್ಯ ಭಾವನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಸಹಭೋಜನ ಸಂಘಟಿಸುತ್ತ, ನೆರವೇರಿಸುತ್ತ, ಬಂದಿದ್ದೇನೆ. ಸಹಭೋಜನವು ಸಾಮಾಜಿಕ ಸಾಮರಸ್ಯಕ್ಕೆ ಒಂದು ಉತ್ತಮ ಹೆಜ್ಜೆ. ಕೆಲವರು ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡುತ್ತಾರೆ. ಅವರ ಸಂಗಡ ಸಹಭೋಜನ ಮಾಡಲು ಹಿಂಜರಿಯುತ್ತಾರೆ. ಈಗಾಗಲೇ ಶೋಷಿತ ಸಮುದಾಯದ ಎಲ್ಲ ಮನೆಗಳಲ್ಲಿ ನಾನು ಸಹಪಂಕ್ತಿ ಭೋಜನ ಸ್ವೀಕರಿಸಿದ್ದೇನೆ. ಮುಸ್ಲಿಂ ಧರ್ಮದವರ ಮನೆಯಲ್ಲೂ. ಈ ದೃಷ್ಟಿಯಿಂದಲೇ ಹಳ್ಳಿಗೆ ಏಕರಾತ್ರಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಹಭೋಜನದಿಂದ ಶೋಷಿತರ ಸ್ಥಿತಿ ಸುಧಾರಿಸುತ್ತದೆಂಬ ಭ್ರಮೆ ನನಗಿಲ್ಲ. ಆದರೆ ಸ್ಪೃಶ್ಯ- ಅಸ್ಪೃಶ್ಯ ಭಾವನೆ ಸ್ವಲ್ಪಮಟ್ಟಿಗಾದರೂ ದೂರವಾಗಿ, ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆಂಬ ವಿಶ್ವಾಸ. ಕಾಳಂಗಿ ಗ್ರಾಮದ ಸಮಸ್ಯೆಯನ್ನು ಹಾಗೇ ಬಿಟ್ಟು ಬರುವಂತಿಲ್ಲ. ಅದು ಮುಂದೆ ಎರಡು ಕೋಮಿನವರ ನಡುವೆ ಸಂಘರ್ಷವಾಗಿ ಪರಿಣಮಿಸಬಹುದು. ಇದರ ಎಚ್ಚರ ನನ್ನಲ್ಲಿದ್ದುದರಿಂದ ನಾನು ಮನೆಯ ಮಾಲಿಕರನ್ನು ಕರೆದು, ನೋಡಿ ಜಾತೀಯತೆಯನ್ನು ಯಾವ ಕಾರಣಕ್ಕೂ ಆಚರಿಸಬಾರದು. ಅದರಲ್ಲಿಯೂ ಬಸವಣ್ಣನವರ ಅನುಯಾಯಿಗಳಾದ ನಾ(ನೀ)ವುಗಳು ಅಸ್ಪೃಶ್ಯತೆಯನ್ನು ಆಚರಿಸಬಾರದು. ಇವರು ನನ್ನಿಂದ ದೀಕ್ಷೆ ಪಡೆದುಕೊಂಡಿದ್ದಾರೆ. ಭವಿಭಕ್ತ ವರ್ಗೀಕರಣವಿಲ್ಲದೆ ಸಮಾನತೆಯನ್ನು ತರುವುದು ಒಳ್ಳೆಯದು. ಕೆಲವರು ಲಿಂಗಲಾಂಛನಧಾರಿ ಆಗಿರುತ್ತಾರೆ. ಆದರೆ ಬಾಯಲ್ಲಿ ಬಿರುನುಡಿ; ವರ್ತನೆಯಲ್ಲಿ ಕೋಪ-ತಾಪ. ಕೆಲವರು ಸ್ವಭಾವತಃ ಸಾತ್ವಿಕರಿರುತ್ತಾರೆ. ಕೆಲವರು ಸಂಸ್ಕಾರದಿಂದ ಸಾತ್ವಿಕರೆನಿಸಿಕೊಳ್ಳುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ಕೆಲವರಲ್ಲಿ ಅನಾಗರಿಕ ವರ್ತನೆ. ಪರಿಸರದಂತೆ ಪ್ರಭಾವ. ಧಾರ್ಮಿಕ, ಸಾಮಾಜಿಕ, ತಾತ್ವಿಕವಾಗಿ ದೀಕ್ಷೆಯನ್ನು ಪಡೆದುಕೊಂಡಿದ್ದು, ಬಸವ (ಲಿಂಗಾಯತ) ಧರ್ಮದಂತೆ ನಡೆದುಕೊಳ್ಳುತ್ತಿದ್ದರೆ, ಇಂಥವರೊಂದಿಗಾದರು ರೋಟಿ-ಭೇಟಿ ಮಾಡಬಹುದು. ದಾಸೀ ಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಕಾಣುವುದು ಈ ವಿಚಾರದಲ್ಲಿ ನಾನವರಿಗೆ ತಿಳಿವಳಿಕೆ ಮಾಡಿಕೊಟ್ಟೆ. ಪೂಜಾಕೋಣೆಯಲ್ಲಿಯೇ ಬಂದಿದ್ದ ಅತಿಥಿ(ಜಂಗಮ)ಗಳೊಂದಿಗೆ ಪ್ರಸಾದ ಸ್ವೀಕರಿಸಿದೆ. ಬಸವಣ್ಣನವರು ನಾಗಿದೇವನ ಮನೆಯಲ್ಲಿ ಪ್ರಸಾದ ಸ್ವೀಕರಿಸಿದ್ದು ಒಂದು ಐತಿಹಾಸಿಕ ಸಂದರ್ಭ. ಮಾದಾರ ಚನ್ನಯ್ಯನ ಅಂಬಲಿ ಪ್ರಸಾದಕ್ಕೆ ಹಂಬಲಿಸಿದ್ದು, ಅಸ್ಪೃಶ್ಯತೆಯ ನಿವಾರಣೆಗೆ. ಸವರ್ಣೀಯರ ಮನೆಯಲ್ಲಿ ಶೋಷಿತ ಜನಾಂಗಕ್ಕೆ ಸೇರಿದ ಸ್ವಾಮಿಗಳನ್ನು ಪ್ರಸಾದ ಮಾಡಿಸುವಂತಹ ಪರಿಸರ ನಿರ್ಮಿಸಿದ್ದು, ಸಮಕಾಲೀನ ಸಂದರ್ಭದಲ್ಲಿ ಒಂದು ಪ್ರಗತಿಯ ಹೆಜ್ಜೆ. ಇದರಲ್ಲಿ ನಾನು ಯಶಸ್ವಿಯಾದೆ. ಕಾವಿನಿಂದ ಕೂಡಿದ ಸಂದರ್ಭವನ್ನು ನಾನು ತಿಳಿಗೊಳಿಸಿದೆ. ಮನೆ ಮಂದಿಯೆಲ್ಲ ಅದಕ್ಕೆ ಸ್ಪಂದಿಸಿದರು. ಇದು ಅಂತರವನ್ನು ನಿವಾರಿಸುವ, ಮುಂದಿನ ಸಂಘರ್ಷಗಳನ್ನು ತಪ್ಪಿಸುವ ದೂರದೃಷ್ಟಿ ಅಥವಾ ಮಾರ್ಗದರ್ಶನ. ಇನ್ನೊಮ್ಮೆ ನೇಪಾಳದಲ್ಲಿ ಮಕ್ಕಳ ಕಮ್ಮಟ ಮುಗಿಸಿಕೊಂಡು ಕಾಶಿಗೆ ಭೇಟಿ ಕೊಟ್ಟೆವು. ಅಲ್ಲಿನ ವಿಶ್ವನಾಥ ದೇವಸ್ಥಾನ ಸುಪ್ರಸಿದ್ಧ. ಆದಿಚುಂಚನಗಿರಿ ಮಠದ ಶಾಖಾಮಠದಲ್ಲಿ ನಮ್ಮ ವಾಸ್ತವ್ಯ. ಅಲ್ಲಿನ ಸ್ವಾಮಿಗಳು ನಮ್ಮನ್ನು ಪ್ರೀತಿಯಿಂದ ನೋಡಿಕೊಂಡರು. ಮುಂಜಾನೆ ದೇವಮಂದಿರದ ದರ್ಶನಕ್ಕೆ ಮೈಲುದ್ದ ಸಾಲು. ಹತ್ತಿರಕ್ಕೆ ಹೋಗುವಂತಿಲ್ಲ. ಅದಕ್ಕೆ ಆ ಸ್ವಾಮೀಜಿಯವರು ರಾತ್ರಿ ಮೂರುಗಂಟೆಗೆ ವ್ಯವಸ್ಥೆ ಮಾಡಿದ್ದರು. ಸ್ಥಾವರಗಳಲ್ಲಿ ನನಗೆ ಭಕ್ತಿ ಅಷ್ಟಕ್ಕಷ್ಟೇ. ನನಗೆ ಅಲ್ಲಿನ ವ್ಯವಸ್ಥೆ, ವಾಸ್ತುಶಿಲ್ಪ ಇತ್ಯಾದಿಗಳ ಬಗ್ಗೆ ಕುತೂಹಲ. ಇಡೀ ದೇವಸ್ಥಾನವು ನವಿರಾದ ಕಲ್ಲಿನಿಂದ ಕಟ್ಟಲ್ಪಟ್ಟಿದ್ದು, ಅದಕ್ಕೆಲ್ಲ ಸುಣ್ಣ-ಬಣ್ಣ ಲೇಪಿಸಿರುವುದರಿಂದ ಅದರ ಪ್ರಾಚೀನತೆ ಮೂಲೆಗುಂಪಾಗಿದೆ. ಅದು ನೋವಿನ ಸಂಗತಿ. ಇನ್ನು ಮೂಲಗರ್ಭಗುಡಿಗೆ ಹೋದಾಗ ಅಲ್ಲಿನ ನಾಲ್ಕೈದು ಜನ ಪುರೋಹಿತರು, ತುಂಬ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದರು. ಹತ್ತಿರ ಬಂದವರನ್ನು ದೂರ ಸರಿಯಿರೆಂದು ಹೇಳುವುದೇ ಅವರ ಮಂತ್ರವಾಗಿತ್ತು. ಬಂದ ಭಕ್ತಾದಿಗಳಿಗೆ ದೇವರ ದರ್ಶನದ ಹಂಬಲ. ಅಲ್ಲಿದ್ದ ಪೂಜಾರಿ ಪುರೋಹಿತರಿಗೆ ಬಂದ ಭಕ್ತಾದಿಗಳನ್ನು ಬಿಡದೆ ತಳ್ಳುವ ಛಲ. ನಿಜವಾಗಿಯೂ ಅವರಿಗೆ ಧರ್ಮ ದೇವರ ದರ್ಶನ ಆಗಿದ್ದಿದ್ದರೆ, ಅವರಲ್ಲಿ ರಾಕ್ಷಸ ವರ್ತನೆ ಇರುತ್ತಿರಲಿಲ್ಲ. ಬಂದವರನ್ನು ಪ್ರೀತಿಯಿದ ಕಾಣಬೇಕು, ಸೌಜನ್ಯದಿಂದ ವರ್ತಿಸಿ ತಮ್ಮ ಪರಂಪರೆಯನ್ನು ಶ್ರೀಮಂತಗೊಳಿಸಬೇಕೆಂಬ ಕಾಳಜಿ ಅವರಲ್ಲಿ ಏಕಿಲ್ಲವೋ ತಿಳಿಯದು. ಸ್ಪೃಶ್ಯ-ಅಸ್ಪೃಶ್ಯ ಭಾವನೆ ಏನೆಲ್ಲ ಅಂತರವನ್ನು ಸೃಷ್ಟಿಸಿದೆ. ಮಾನವ ಕುಲವನ್ನೇ ಕಲಕಿದೆ. ಭ್ರಷ್ಟಾಚಾರವು ಭಾರತದ ಒಂದು ದೊಡ್ಡ ಪಿಡುಗು. ಅದು ಅಳಿಯಲೇಬೇಕು. ಭ್ರಷ್ಟಾಚಾರರಹಿತ ಭಾರತ ನಿರ್ಮಾಣವಾಗಬೇಕು. ಅದಕ್ಕಾಗಿ ಅಧಿಕಾರ ದುರುಪಯೋಗ ಆಗುವುದು ತಪ್ಪಬೇಕು. ಎರಡು ಮಾತಿಲ್ಲ. ಆದರೆ ಭ್ರಷ್ಟಾಚಾರಕ್ಕಿಂತ ಭಯಾನಕವಾದ ಮತ್ತೊಂದು ಸಾಮಾಜಿಕ ಪಿಡುಗೆಂದರೆ ಅಸ್ಪೃಶ್ಯತೆ. ಅಸ್ಪೃಶ್ಯತೆಯ ಅಳಿವು, ಭಾರತದ ಉಳಿವು. ತತ್ವ ಸಿದ್ಧಾಂತಗಳಿಗೆ ಆಗಲೇ ಗೆಲುವು. ಪರಧರ್ಮ ಸಹಿಷ್ಣುತೆಯನ್ನು ಹೊಂದಿರುವ ಭಾರತೀಯ, ಶೋಷಿತರ ಬಗೆಗೂ ಪ್ರೀತಿಯನ್ನು ತೋರಿಸಬೇಕಾಗುತ್ತದೆ. ಈ ಸಂಕುಚಿತ ಭಾವನೆ ನಿವಾರಣೆಯಾದಾಗ ಮಾತ್ರ ಭವ್ಯಭಾರತ. ಅದು ಸಾಧ್ಯವಾಗದಿದ್ದಲ್ಲಿ ಭಾರತ ಮೂರು ಭಾಗವಾಗುತ್ತದೆ. ನಗರ ಭಾರತ, ಗ್ರಾಮ ಭಾರತ ಹಾಗೂ ಅಸ್ಪೃಶ್ಯ ಭಾರತ. ಸಮಸ್ತರ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ. ಆದರೆ ದೇಶದಲ್ಲಿ ಅಸ್ಪೃಶ್ಯತೆಯೆಂಬ ಯಾತನೆಯನ್ನು ಒಡಲಾಳದಲ್ಲಿ ಅನುಭವಿಸುತ್ತಿರುವವರ ಸಂಖ್ಯೆ ಕೋಟಿಕೋಟಿ. ಅಂಬೇಡ್ಕರ್‌ರವರ ಅಭಿಪ್ರಾಯದಂತೆ 1947ರ ಸ್ವಾತಂತ್ರ್ಯ ಕೆಲವರಿಗೆ ಮಾತ್ರ. ಬಡತನ ರೇಖೆಗಿಂತ ಕೆಳಗಡೆ ಇರುವವರು, ಶೋಷಿತರು, ಜನಸಾಮಾನ್ಯರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತಿತರರಿಗೆ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಬೇಕಾಗಿದೆ. ಇವರನ್ನು ಎಲ್ಲ ಪಕ್ಷಗಳು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡು ರಾಜಕಾರಣಕ್ಕೆ ಬಳಸುತ್ತಿವೆ. ಅಷ್ಟರಿಂದಲೇ ಅವರ ಉದ್ಧಾರ ಅಸಾಧ್ಯ. ಭ್ರಷ್ಟಾಚಾರ ವಿರೋಧಿ ಆಂದೋಲನ ನೇತೃತ್ವವನ್ನು ವಹಿಸಿಕೊಂಡಂತೆ ಅಸ್ಪೃಶ್ಯತಾ ವಿರೋಧಿ ಆಂದೋಲನಕ್ಕೂ ನೇತೃತ್ವ ಬೇಕಾಗುತ್ತದೆ. ಎಲ್ಲ ಧಾರ್ಮಿಕರು ಒಟ್ಟಾಗಿ ಈ ಆಂದೋಲನವನ್ನು ಕೈಗೆತ್ತಿಕೊಂಡರೆ ಅದೊಂದು ಉತ್ತಮ ಬೆಳವಣಿಗೆ. ಇಂಥ ಸಂಗ್ರಾಮಕ್ಕೆ ಚಾಲನೆ ಸಿಗುವುದಾದರೆ ಬಹುತೇಕ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಇದಾಗುವುದು. ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಸಂಗ್ರಾಮ ನಡೆಯಿತು. ಅದನ್ನು ಪಡೆದಾಯಿತು. ಆದರೆ ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆ ಇನ್ನೂ ಜೀವಂತವಾಗಿವೆ. ಇವು ಭಾರತೀಯ ವ್ಯವಸ್ಥೆಯನ್ನು ಅಮಾನವೀಯಗೊಳಿಸುತ್ತವೆ ಮಾತ್ರವಲ್ಲ; ಅವಮಾನಕ್ಕೆ ಈಡುಮಾಡುತ್ತವೆ. ಗಾಂಧೀಜಿಯವರ ಹೋರಾಟ ನಿಂತು ಹೋಯಿತು. ಆದರೆ ಶೋಷಿತರ ಪರವಾದ ಹೋರಾಟಗಳು ನಿಲ್ಲುವ ಹಂತದಲ್ಲಿಲ್ಲ. ಮೀಸಲು ಸೌಲಭ್ಯ ಅವರ ಉದ್ಧಾರಕ್ಕಾಗಿಯೇ ಇದೆ. ಮೀಸಲಾತಿ ಮುಖಾಂತರ ಒಂದಷ್ಟು ಆರ್ಥಿಕ ಸಮಾನತೆ ಅಥವಾ ಭದ್ರತೆ ಸಿಕ್ಕಬಹುದು. ಆದರೆ ಸಾಮಾಜಿಕ ಸಮಾನತೆ? ಸ್ವಾತಂತ್ರ್ಯಾನಂತರ ಭಾರತದ ಜಟಿಲವಾದ ಸಮಸ್ಯೆಯೆಂದರೆ, ಮತಾಂತರ. ಮತಾಂತರ ಮಾಡುವ ಅಧಿಕಾರವು ಸಂವಿಧಾನಬದ್ಧವಾದುದು. ನಮ್ಮ ಸಂವಿಧಾನದ ಪ್ರಕಾರ ಯಾರು ಯಾವ ಧರ್ಮವನ್ನಾದರೂ ಸೇರಬಹುದು; ಆಚರಿಸಬಹುದೆಂಬ ಪ್ರಜಾಸತ್ತಾತ್ಮಕವಾದ ಧೋರಣೆಯನ್ನು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ. ಮತಾಂತರವು ಒತ್ತಾಯಪೂರ್ವಕವಾಗಿ ನಡೆಯುತ್ತದೆ. ಅದರ ಹಿನ್ನೆಲೆಯಲ್ಲಿ ಆಮಿಷ ಕೆಲಸ ಮಾಡುತ್ತದೆಂಬ ಭಾವನೆಯಿದೆ. ಅನ್ನ, ಅರಿವೆ ಮತ್ತು ಆಶ್ರಯಗಳಿಗಾಗಿ ಮತಾಂತರ ಆಗುತ್ತಿದೆ ಎಂಬುದನ್ನು ಒಂದುಕಡೆ ಇಟ್ಟು ಚಿಂತಿಸೋಣ. ಇವು ಪ್ರಾಥಮಿಕವಾದ ಅಗತ್ಯಗಳು. ಇವುಗಳಿಗಾಗಿಯೇ ಮತಾಂತರ ಮಾಡುವಷ್ಟು ದುರ್ಬಲರಲ್ಲ ನಮ್ಮ ಜನ. ಅಂಥವರ ಪ್ರಮಾಣ ಅತ್ಯಲ್ಪ. ಮತಾಂತರದ ಮೂಲವನ್ನು ಹುಡುಕುತ್ತ ಹೋದಾಗ ಮಲತಾಯಿ ಧೋರಣೆ ಎದ್ದುಕಾಣುತ್ತದೆ. ಶೋಷಿತರಿಗೆ ಬೇಕಾಗಿರುವುದು ಪ್ರೀತಿ, ಪರಸ್ಪರ ಸಮಾನತೆ. ಶೋಷಿತರು ಭಾರತ ಸಮಾಜದ ಅವಿಭಾಜ್ಯ ಅಂಗ. ಅವರೂ ನಮ್ಮಟ್ಟಿಗೆ ಹುಟ್ಟಿದ್ದಾರೆ; ಬಾಳುತ್ತಿದ್ದಾರೆ. ಅವರಿಗೆ ಸಲ್ಲಬೇಕಾಗಿರುವ, ಸಿಗಬೇಕಾಗಿರುವ ಹಕ್ಕುಗಳಿಗಾಗಿ ಅವರು ಹೋರಾಡುತ್ತಾರೆ. ಅವು ಸಿಗದಿದ್ದ ಸಂದರ್ಭದಲ್ಲಿ ಹೋರಾಟ ಅನಿವಾರ್ಯ. ಹೋರಾಟಕ್ಕೆ ಇಳಿದ ಸಂದರ್ಭದಲ್ಲಿ ಅವರ ಮೇಲೆ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರಗಳಂತಹ ಅಮಾನವೀಯ ನಡವಳಿಕೆಗಳು ನಾಗರೀಕ ಸಮಾಜವನ್ನು ನಾಚಿಸುವಂತೆ ಮಾಡುತ್ತವೆ. ಹರಿಜನ ಕೇರಿಯನ್ನು ಕಟ್ಟಿಕೊಟ್ಟು, ಅವರು ಹೊರಗಡೆ ವಾಸಿಸಬೇಕೆನ್ನುತ್ತವೆ ದಲಿತ ವಿರೋಧಿ ಮನಸ್ಸುಗಳು. ನಾಗರೀಕತೆಯ ಮುಖವಾಡ ಹಾಕಿಕೊಂಡು, ಶೋಷಿಸುವವರು ಈ ದೇಶದ ಶತ್ರುಗಳು. ನಿರ್ಲಕ್ಷಿತರಾಗಿದ್ದುಕೊಂಡು, ಶೋಷಣೆಯನ್ನು ಅನುಭವಿಸುತ್ತಿರುವವರು ನಿಜವಾಗಿಯೂ ಅಮಾಯಕರು; ಅಸಹಾಯಕರು. ಅಸ್ಪೃಶ್ಯತೆ ಮತ್ತು ಜಾತೀಯತೆ ರಾಷ್ಟ್ರಮಟ್ಟದ ಸಮಸ್ಯೆ. ಬಡತನ ನಿವಾರಣೆ ಆಗಬೇಕೆನ್ನುವವರು ಅನಕ್ಷರತೆಯ ವಿರುದ್ಧ ಹೋರಾಡಬೇಕು. ಸಾಕ್ಷರತೆಯ ಮೂಲಕ ಸಾಮಾಜಿಕ ನ್ಯಾಯ ಸಾಧ್ಯವಾಗುತ್ತದೆ. ಸಾಮಾಜಿಕ ನ್ಯಾಯವು ಬಡತನದಿಂದ ಹೊರಬರಲು ಪ್ರೇರಣೆ ನೀಡುತ್ತದೆ. ಸಾಮಾಜಿಕ ನ್ಯಾಯದ ಪರವಾಗಿ ನಡೆಯುವ ಹೋರಾಟವು ನಿಲ್ಲಬೇಕೆನ್ನುವವರು, ಅಗ್ರಜ ಮತ್ತು ಅಂತ್ಯಜರ ನಡುವೆ ಇರುವ ಅಂತರವನ್ನು ನಿವಾರಿಸಲು ಯತ್ನಿಸಬೇಕಾಗುತ್ತದೆ. ಅಲ್ಲಿಯವರೆಗೂ ದಲಿತಪರವಾದ ಚಳವಳಿಗಳು ನಡೆಯುತ್ತಲೇ ಇರುತ್ತವೆ. ಭಾರತ ದೇಶ ಒಂದು, ಭಾರತೀಯರೆಲ್ಲ ಒಂದು ಎಂಬ ಭಾವನೆ ಉದಯವಾಗಬೇಕಾದರೆ, ಮೊದಲು ಭಾವ ಒಂದಾಗಬೇಕಾಗುತ್ತದೆ. ಭಾವನೆ ಒಂದಾದರೆ, ಭಾರತ ಒಂದಾಗುತ್ತದೆ. ಭಾರತೀಯರ ಭಾವನೆಯನ್ನು ಒಗ್ಗೂಡಿಸುವ ಕಾರ್ಯ ಭರದಿಂದ ನಡೆಯಬೇಕಾಗಿದೆ. ಬುದ್ಧ - ಬಸವ -ವಾಲ್ಮೀಕಿ -ಕನಕ -ಕಬೀರ-ಶಿಶುನಾಳ ಶರೀಫ ಮುಂತಾದ ದಾರ್ಶನಿಕರು ಅಸ್ಪೃಶ್ಯತೆಯನ್ನು ಬೇರು ಸಮೇತ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ಭಾರತದ ಶತ್ರುಗಳು (ಬ್ರಿಟಿಷರು) ಅಂದು ಹೊರಗಡೆ ಇದ್ದರು. ಹೊರಗಿನ ವಿರೋಧಿಗಳಿಗಿಂತ ಒಳಗಿನ ವಿರೋಧಿಗಳು ಹೆಚ್ಚು ಅಪಾಯಕಾರಿ. ಅವರೆಂದರೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಮಡಿವಂತಿಕೆ, ಶೋಷಣೆ, ಅನಕ್ಷರತೆ ಮುಂತಾದವುಗಳು. ಅಸ್ಪೃಶ್ಯತೆಯೇ, ಜಾತಿವಾದವೇ `ಭಾರತ ಬಿಟ್ಟು ತೊಲಗಿ' ಎಂದು ಹೇಳಬೇಕಾಗಿದೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.