ವಿವೇಕರ ಗ್ರಹಿಕೆಯಲ್ಲೂ ಪೂರ್ವಗ್ರಹಗಳ ಪೊರೆ ವಿವೇಕಾನಂದರ ಜೀವನವೇ ಒಂದು ಅಚ್ಚರಿಗಳ ಕಣಜ. ಅವರ ಬದುಕನ್ನು ಅಭ್ಯಾಸ ಮಾಡುತ್ತಾ ಹೋದರೆ, ಒಬ್ಬ ಮನುಷ್ಯ ತನ್ನ ನ್ಯೂನತೆಗಳನ್ನು ಮೆಟ್ಟಿ ನಿಲ್ಲುತ್ತಾ ಮಹತ್ತರವಾದುದನ್ನು ಹೇಗೆ ಸಾಧಿಸಬಹುದು ಎಂಬುದು ತಿಳಿಯುತ್ತಾ ಹೋಗುತ್ತದೆ. ಬಾಲಕ ನರೇಂದ್ರನಲ್ಲಿದ್ದ ಕುತೂಹಲಗಳೂ, ಆತನಿಗೆ ಮೂಡುತ್ತಿದ್ದ ಪ್ರಶ್ನೆಗಳೂ ಸಾಮಾನ್ಯವಾದದ್ದೇನಲ್ಲ. ಪೋಷಕರು ದೇವರನ್ನು ಪೂಜಿಸಬೇಕೆಂದಾಗ, ಆತ `ದೇವರನ್ನು ಪೂಜಿಸುವುದೇನೋ ಸರಿ .ಆದರೆ ದೇವರನ್ನು ನೋಡಿದವರು ಯಾರು? ನನಗೂ ತೋರಿಸಬಲ್ಲಿರಾ?' ಎಂದು ಕೇಳುತ್ತಿದ್ದ. ಅದೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟ ನರೇಂದ್ರನನ್ನು ಎಲ್ಲರೂ ಮೂದಲಿಸಿದವರೆ. ಆದರೆ ವಿಧಿ ಅವರನ್ನು ದಕ್ಷಿಣೇಶ್ವರಕ್ಕೆ ಕರೆತಂದಿತು. ಅಲ್ಲಿ ಒಬ್ಬ ಬಡಕಲು ದೇಹದ ಆಸಾಮಿ, ಕಾಳೀ ಮಾತೆಯನ್ನೇ ದಿಟ್ಟಿಸುತ್ತಾ, ತಮ್ಮಷ್ಟಕ್ಕೆ ತಾವೇ ಏನೇನೋ ಪಿಸುಗುಡುತ್ತಾ ಕುಳಿತುಬಿಟ್ಟಿದ್ದರು. ಅವರನ್ನು ನೋಡಿದವರು ಹೇಳಿದ್ದು, ಈತನ್ಯಾರೋ ತಲೆ ಕೆಟ್ಟ ಮನುಷ್ಯ ಎಂದೇ. ಲೋಕದ ಕಣ್ಣಿಗೆ ತಲೆ ಕೆಟ್ಟವರಂತೆ ಕಂಡ ಈ ಇಬ್ಬರ ಸಮಾಗಮ, ಇಡೀ ಮನುಕುಲದ ಚಿಂತನೆಯನ್ನೇ ಬದಲಿಸಬಲ್ಲ ವಿಚಾರಧಾರೆಗೆ ಮುನ್ನುಡಿ ಬರೆಯಿತು. ನಿಮಗೆ ಆಶ್ಚರ್ಯವಾಗಬಹುದು, ಬಾಲಕ ನರೇಂದ್ರನನ್ನು ನೋಡಿದ ರಾಮಕೃಷ್ಣರು ಒಮ್ಮೆಲೇ ಸಂತಸದಿಂದ ಕುಣಿದಾಡಿದರಂತೆ. 'ಈಗ ಬಂದಿಯೇನಪ್ಪಾ, ಇಷ್ಟು ದಿವಸ ನನ್ನನ್ನು ಕಾಯಿಸಿಬಿಟ್ಟೆಯಲ್ಲೋ, ಸ್ವತಃ ನಾರಾಯಣನ ಅಂಶವಪ್ಪ ನೀನು' ಎಂದು ಅಪ್ಪಿಕೊಂಡಾಗ. 'ಅರೆರೆ, ನನ್ನನ್ನು ಮೊದಲು ನೋಡಿಯೇ ಇಲ್ಲ, ಆಗಿದ್ದಾಗಿಯೂ ಹೀಗೆನ್ನುತ್ತಿದ್ದಾರಲ್ಲಾ' ಎಂದುಕೊಂಡ ನರೇಂದ್ರನ ಮನದಲ್ಲಿ `ಈತ ನಿಜಕ್ಕೂ ಹುಚ್ಚನೇ' ಇರಬಹುದೆ ಎಂಬ ಸಂಶಯ ಮೂಡಿತ್ತು. `ಆದದ್ದಾಗಲಿ' ಎಂದು `ನೀವು ನನಗೆ ದೇವರನ್ನು ತೋರಿಸುತ್ತೀರಾ?' ಎಂದು ಕೇಳಿಯೇ ಬಿಟ್ಟ ನರೇಂದ್ರ. `ಅಯ್ಯೋ ಅದಕ್ಕೇನಂತೆ. ನಾನು ಪ್ರತಿ ದಿನವೂ ದೇವರೊಂದಿಗೆ ಮಾತನಾಡುತ್ತೇನೆ, ತೋರಿಸಿದರಾಯಿತು' ಎಂದು ಬಿಟ್ಟರು ರಾಮಕೃಷ್ಣರು. ರಾಮಕೃಷ್ಣರ ಸ್ಪರ್ಶದಿಂದಲೇ ನರೇಂದ್ರನಲ್ಲಿ ವಿದ್ಯುತ್ ಪ್ರವಹಿಸಿದ ಅನುಭವವಾಯಿತು. ಹೀಗೆ ಶುರುವಾದ ಗುರು ಶಿಷ್ಯರ ಅನುಬಂಧ ವಿವೇಕರನ್ನು ಜಗತ್ತಿಗೆ ಪರಿಚಯಿಸಿತು. ಜೊತೆಜೊತೆಗೇ ರಾಮಕೃಷ್ಣರ ತತ್ವಗಳೂ ಜಗತ್ತಿಗೆ ತೆರೆದು ಕೊಂಡವು. ಸ್ನೇಹಿತರ ಒತ್ತಾಯದ ಮೇರೆಗೆ, ಸ್ನೇಹಿತರೇ ಮನೆಮನೆಗೆ ತಿರುಗಿ ಸಂಗ್ರಹಿಸಿಕೊಟ್ಟ ಹಣದಿಂದಲೇ ವಿಶ್ವ ಧರ್ಮ ಸಮ್ಮೇಳನಕ್ಕೆ ಅಮೆರಿಕಕ್ಕೆ ಬಂದಿಳಿದ ವಿವೇಕಾನಂದರಿಗೆ ದಾರಿಯೇನು ಸುಲಭವಿರಲಿಲ್ಲ. ಮೇರಿ ಲೂಯಿಸ್ ಬ್ರೂಕ್ ``‘ : ’ ಎಂಬ ಗ್ರಂಥದಲ್ಲಿ ಅಮೆರಿಕದಲ್ಲಿ ವಿವೇಕರು ಮೊದಮೊದಲು ಅನುಭವಿಸಿದ ಯಾತನೆ ನಂತರ ಗಳಿಸಿಕೊಂಡ ಜನಮನ್ನಣೆ ಎಲ್ಲದರ ಬಗ್ಗೆ ಬರೆಯುತ್ತಾ ಹೋಗುತ್ತಾರೆ. ವಿವೇಕರು ಅಮೆರಿಕಕ್ಕೆ ಬಂದು, ತಮ್ಮಂದಿಗಿದ್ದ ಹಣವನ್ನೆಲ್ಲಾ ಕಳೆದುಕೊಂಡು ಬರಿಗೈಲಿ ನಿಂತಾಗ ಅವರಿಗೆ ಆಶ್ರಯ ನೀಡಿದವರು ಜಾನ್ ಹೆನ್ರಿ ರೈಟ್ ಎಂಬ ಒಬ್ಬ ಸಜ್ಜನ. ಆತ ಬೇರೊಂದು ಊರಿನಲ್ಲಿದ್ದ ತನ್ನ ತಾಯಿಗೆ ಪತ್ರ ಬರೆಯುತ್ತಾ ಹೇಳುತ್ತಾನೆ `ನನ್ನ ಮನೆಗೆ ಭಾರತದಿಂದ ಸಂತರೊಬ್ಬರು ಅತಿಥಿಯಾಗಿ ಬಂದಿದ್ದಾರೆ. ಅವರ ಮುಖದ ತೇಜಸ್ಸು, ಸದೃಢ ಕಾಯ, ತೀಕ್ಷ್ಣ ದೃಷ್ಟಿ, ಅಸಾಧಾರಣ ಬುದ್ಧಿವಂತಿಕೆಯನ್ನು ಕಂಡು ನಾನು ಬೆರಗಾಗಿದ್ದೇನೆ. ಈವರೆಗೂ ಈ ದೇಶದಲ್ಲಿ ನಾನು ಇಂತಹ ವ್ಯಕ್ತಿಯನ್ನು ನೋಡಿಲ್ಲ' ಕೇವಲ ಹೆನ್ರಿ ರೈಟ್ ಒಬ್ಬರಲ್ಲ, ವಿವೇಕಾನಂದರ ವ್ಯಕ್ತಿತ್ವದಿಂದ ಆಕರ್ಷಿತರಾದ ಅಮೆರಿಕನ್ನರ ಸಂಖ್ಯೆ ನಂತರ ದೊಡ್ಡದಾಗುತ್ತಾ ಹೋಯಿತು. ಅಮೆರಿಕದ ವಿವಿಧೆಡೆ ಪ್ರವಚನಗಳು ನಡೆದವು. ಪ್ರವಚನಗಳಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಸ್ತಾಪವಾಗುತ್ತಿತ್ತು. ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಹೋರಾಟವನ್ನು ವಿವರಿಸುತ್ತಾ, `ಆಕೆ ನಿಜಕ್ಕೂ ದೇವತೆ' ಎಂದು ಕಣ್ಣೀರಿಡುತ್ತಿದ್ದರಂತೆ ಸ್ವಾಮೀಜಿ. ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಅಮೋಘ ಭಾಷಣದ ನಂತರವಂತೂ ಅನೇಕ ಚರ್ಚುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ವಿವೇಕರ ಭಾಷಣ ಏರ್ಪಾಡಾಗುತ್ತಿತ್ತು. ಪತ್ರಿಕೆಗಳು ಈ ಧೀರ ಸನ್ಯಾಸಿಯ ಬಗ್ಗೆ ಪುಟಗಟ್ಟಲೆ ಬರೆದವು. ಆದರೆ ಯಶಸ್ಸು ಅವರ ವಿನಯವನ್ನು ಕಸಿಯಲಿಲ್ಲ, ಅಹಂಭಾವ ಬೆಳೆಸಲಿಲ್ಲ. ಸ್ವಾಮೀಜಿಗೆ ಶಿಕಾಗೋದಲ್ಲಿ ಆಶ್ರಯ ನೀಡಿದ ಜಾನ್ ಲಿಯಾನ್ಸ್‌ರ ಮೊಮ್ಮಗಳು ಕಾರ್ನೇಲಿಯ ಬರೆಯುತ್ತಾರೆ.  ಆಗ ನನಗಿನ್ನು 6 ವರ್ಷ, ಸ್ವಾಮೀಜಿ ನನ್ನನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಭಾರತದ ಬಗ್ಗೆ ಕಥೆ ಹೇಳುತ್ತಿದ್ದರು. ಊಟಕ್ಕೆ ಕೂತಾಗ ನಮ್ಮಂದಿಗೆ ಕುಳಿತು ನಾವೆಲ್ಲಾ ಸೇವಿಸುತ್ತಿದ್ದ ಆಹಾರವನ್ನೇ ಅವರು ಸಂತೋಷದಿಂದ ಸ್ವೀಕರಿಸುತ್ತಿದ್ದರು. ಮಾಂಸಾಹಾರವನ್ನು ಖುಷಿಪಟ್ಟು ಸೇವಿಸುತ್ತಿದ್ದರು. ಪ್ರವಚನಗಳನ್ನು ಮುಗಿಸಿ ಬಂದಾದಮೇಲೆ ಅಲ್ಲಿ ನೀಡಿದ್ದ ಹಣವನ್ನು ತಮ್ಮ ವಸ್ತ್ರದಲ್ಲಿ ಸುತ್ತಿಕೊಂಡು ಬಂದು ನನ್ನ ಅಜ್ಜಿಯ ಮುಂದೆ ಹರವಿ ಪುಟ್ಟ ಮಗುವಿನಂತೆ ಕೂರುತ್ತಿದ್ದರು. ಅಜ್ಜಿ ಅವರಿಗೆ ನಾಣ್ಯಗಳನ್ನು ಎಣಿಸುವುದನ್ನು ಕಲಿಸಿದರು. ಸಂಗ್ರಹವಾದ ಹಣವನ್ನು ಭಾರತದಲ್ಲಿ ಅವರು ಕೈಗೊಳ್ಳಬೇಕಿದ್ದ ಯೋಜನೆಗಳಿಗೆ ಕೂಡಿಡುತ್ತಿದ್ದರು. ನಮ್ಮ ಮನೆಯಲ್ಲಿದ್ದಷ್ಟು ದಿನ ಅವರು ಹೊರಗಿನವರೆಂದು ಅನ್ನಿಸಲೇ ಇಲ್ಲ ಅಷ್ಟು ಸಲಿಗೆಯಿಂದ ನಮ್ಮಂದಿಗೆ ಬೆರೆತರು''. ಅದು ವಿವೇಕಾನಂದರ ವ್ಯಕ್ತಿತ್ವ. ಮುಖ್ಯವಾಗಿ ವಿವೇಕಾನಂದರನ್ನು ಗ್ರಹಿಸುವಾಗ ನಮಗೆ ಕೆಲವು ಪೂರ್ವಗ್ರಹಗಳು ಅಡ್ಡ ಬರುತ್ತವೆ. ಒಂದು ವರ್ಗ ಅವರನ್ನು ದೈವತ್ವಕ್ಕೇರಿಸಿ ಜೈಕಾರ ಹಾಕಿದರೆ, ಇದಕ್ಕೆ ತದ್ವಿರುದ್ಧವಾಗಿ ಮತ್ತೊಂದು ವರ್ಗ ಅವರ ಜೀವನ ಶೈಲಿಯ ಕೆಲವು ಅಂಶಗಳನ್ನು ಪ್ರಸ್ತಾಪಿಸುವುದುಂಟು. ಆದರೆ ನಾವು ವಿವೇಕಾನಂದರನ್ನು ಅರ್ಥಮಾಡಿಕೊಳ್ಳಬೇಕಾದ್ದು ಅವರೂ ನಮ್ಮ ನಿಮ್ಮಂತೆಯೇ ಬದುಕಿದ್ದ ಮೇರು ಚಿಂತನೆಗಳಿಂದ ಶ್ರೇಷ್ಠತೆ ಗಳಿಸಿಕೊಂಡ ವ್ಯಕ್ತಿ ಎಂಬ ನೆಲೆಯಲ್ಲಿಯೇ. ವಿವೇಕಾನಂದರನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅವರ ಜೀವನವನ್ನು ಅಭ್ಯಾಸ ಮಾಡುವ ಜೊತೆಗೆ ಅವರು ಕೊಟ್ಟ ಸಂದೇಶ, ಮಾಡಿದ ಭಾಷಣಗಳು, ಪ್ರವಾಸ ಎಲ್ಲದರ ಮೂಲಕವೂ ಹಾದುಹೋಗಬೇಕಾಗುತ್ತದೆ. ನಾವು ಮಾಡುವ ತಪ್ಪೆಂದರೆ ಯಾವುದೇ ಒಬ್ಬ ಮೇರು ಸಾಧಕನ ಸಂದೇಶಗಳಲ್ಲಿ ನಮಗೆ ಬೇಕಾದ್ದನ್ನು ಮಾತ್ರ ಹೆಕ್ಕಿಕೊಂಡು ಉಳಿದದ್ದನ್ನು ಉಪೇಕ್ಷಿಸುತ್ತೇವೆ. ವಿವೇಕರ ವಿಷಯದಲ್ಲೂ ಆಗುತ್ತಿರುವುದು ಅದೇ. 'ಏಳೀ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' 'ಗರ್ವದಿಂದ ಘರ್ಜಿಸು ನಾನೊಬ್ಬ ಹಿಂದು' `‘‘ ’ ಎಂಬ ಘೋಷಣೆಗಳನ್ನು ಮಾತ್ರ ಹೆಕ್ಕಿಕೊಂಡು ಬ್ಯಾನರ್ ಕಟ್ಟುವ, ಟೀ ಶರ್ಟ್ ಮೇಲೆ ಬರೆದುಕೊಳ್ಳುವ ನಾವು ಇಷ್ಟುಮಾತ್ರದಿಂದ ವಿವೇಕರನ್ನು ಆವಾಹಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಅವರ ಅನೇಕ ಸಂದೇಶಗಳು ಅವರ ಬದುಕಿನ ಮಿತಿಗಳನ್ನು ಮೀರುವ ಪ್ರಯತ್ನದಲ್ಲಿಯೇ ಒಡಮೂಡಿದವು. ತೀರಾ ಹಸಿವು ಕಾಡಿದಾಗ 'ಬದುಕಿದ್ದಾಗ ಆಹಾರ ನೀಡದೆ ಸತ್ತಮೇಲೆ ಸ್ವರ್ಗದ ಭೋಗ ದಯಪಾಲಿಸುವ ದೇವರು ನನಗೆ ಬೇಕಿಲ್ಲ' ಎಂದರು. ` ' ಎಂದು ಹೇಳುವಾಗ ಬಡವನಿಗೆ ಮೊದಲು ಅನ್ನದ ಮಾರ್ಗ ಹೇಳಿ ನಂತರ ದೇವರು, ಧರ್ಮ ಎಂಬ ನೋವಿತ್ತು. ದೈಹಿಕವಾಗಿ ತಾವು ಬಳಲಿದ್ದರಿಂದ ಇನ್ನೂ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಲಿಲ್ಲವೆಂದೇ `ಮೊದಲು ದೇಹವನ್ನು ಸದೃಢಗೊಳಿಸಿಕೊಳ್ಳಿ, ಗೀತಾಧ್ಯಯನಕ್ಕಿಂತ ಫುಟ್ಬಾಲ್ ಆಟದಿಂದ ಮುಕ್ತಿಗೆ ಹತ್ತಿರ ಹೋಗುವಿರಿ' ಎಂದು ಯುವಕರನ್ನು ಹುರಿದುಂಬಿಸಿದರು. ಅಸ್ಪೃಶ್ಯತೆ ಮತ್ತು ಅಸಮಾನತೆಗಳ ಅಟ್ಟಹಾಸ ನೋಡಿಯೇ ಯುವಜನತೆ ಸಮಾನತೆಗೆ ತುಡಿಯಬೇಕು ಎಂದು ಕರೆಕೊಟ್ಟರು. ಮುಖ್ಯವಾಗಿ ವಿವೇಕರ ಕಾಳಜಿಯಿದ್ದದ್ದು ಮಹಿಳೆ ಮತ್ತು ದಲಿತರ ಸ್ಥಿತಿಗತಿಗಳ ಮೇಲೆ. ಇವು ಭಾರತದಲ್ಲಿ ಸುಧಾರಿಸದ ಹೊರತು ಭಾರತ ತನ್ನ ಗತವೈಭವಕ್ಕೆ ಮರಳಲು ಸಾಧ್ಯವಿಲ್ಲ ಎಂದೇ ಅಭಿವ್ಯಕ್ತಿಸಿದವರು ವಿವೇಕಾನಂದ. ಆದರೆ ಇಂದಿಗೂ ಇದ್ಯಾವುದರಲ್ಲಾದರೂ ಕೊಂಚವಾದರೂ ಬದಲಾವಣೆಗಳಾಗಿವೆಯೇ? ರವೀಂದ್ರನಾಥ ಟ್ಯಾಗೋರ್ `ಭಾರತ ಅರ್ಥವಾಗಬೇಕಿದ್ದರೆ, ಮೊದಲು ವಿವೇಕಾನಂದರನ್ನು ಅಭ್ಯಾಸ ಮಾಡಿ' ಎಂದಿದ್ದರು. ಆದರೆ ವಿವೇಕಾನಂದರನ್ನು ಪೂರ್ವಗ್ರಹದಿಂದ ನೋಡಿದರೆ ಒಂದೋ ಎಡ ಅಥವಾ ಬಲ ಸಿದ್ಧಾಂತದಲ್ಲಿ ರೂಪುಗೊಂಡ ಭಾರತ ಎದುರಿಗೆ ನಿಲ್ಲುತ್ತದೆ. ಪೂರ್ವಗ್ರಹದ ಪೊರೆ ಕಳಚಿ ಅವರ ಒಟ್ಟೂ ಚಿಂತನೆಗಳನ್ನು ಮನನ ಮಾಡಿದಾಗಷ್ಟೇ ಸಮಗ್ರ ಭಾರತ ಅರ್ಥವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.