ಬದಲಾವಣೆಗೆ ಮುನ್ನುಡಿ ಬರೆದ ತಾಯಂದಿರು ಅವರಿಗೆ ಸಮಾಜದ ಕಟ್ಟುಪಾಡುಗಳನ್ನು ಮುರಿಯುವ ಉದ್ದೇಶ ಇರಲಿಲ್ಲ. 30 ವರ್ಷಗಳ ಹಿಂದೆ ಉತ್ತರ ವಿಯೆಟ್ನಾಂನ ಈ ಹಳ್ಳಿಯಲ್ಲಿ ಕೆಲವು ಮಹಿಳೆಯರು ತೆಗೆದುಕೊಂಡಿದ್ದ ದಿಟ್ಟ ನಿರ್ಧಾರವು ಮಾತೃತ್ವ, ಪಿತೃತ್ವದ ವ್ಯಾಖ್ಯಾನವನ್ನು ಪುನರ್ ವಿಮರ್ಶೆಗೊಳಪಡಿಸಲು ದಾರಿ ಮಾಡಿಕೊಟ್ಟಿದೆ. ವಿಯೆಟ್ನಾಂನ `ಲಾಯ್' ಎಂಬ ಪುಟ್ಟ ಹಳ್ಳಿಯ ದಿಟ್ಟೆಯರ ಕಥೆ ಇದು. ಅದು ಯುದ್ಧ ಕಾಲ. ಊರಿನ ಬಹುತೇಕ ಪುರುಷರು ಸಮರಕ್ಕೆ ಹೋದವರು ಅಲ್ಲಿಯೇ ಮಣ್ಣಾದರು. ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಏಕಾಂಗಿ ಜೀವನ ಅಣಕಿಸುತ್ತಿತ್ತು. ಬದುಕಿನ ಸಂಜೆ ಬರುವುದೇ ಬೇಡ ಎಂಬಂಥ ಸ್ಥಿತಿ ಅವರದಾಗಿತ್ತು. ಕೊನೆಗಾಲದಲ್ಲಿ ತಮಗೆ ಆಸರೆ ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಕೊನೆಗೂ ಅವರೊಂದು ದೃಢ ನಿರ್ಧಾರಕ್ಕೆ ಬಂದರು. ಈ ಎಲ್ಲ ಸಂಕಷ್ಟಗಳಿಗೆ `ತಾಯ್ತನ'ದಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾದರು. ಆ ಕಾಲದಲ್ಲಿ ವಿಯೆಟ್ನಾಂನಲ್ಲಿ 15 ಅಥವಾ 16ನೇ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳನ್ನು ಮದುವೆ ಮಾಡಿಬಿಡುತ್ತಿದ್ದರು. 20 ವರ್ಷವಾದರೂ ಅವಿವಾಹಿತರಾಗಿಯೇ ಉಳಿಯುವ ಹೆಣ್ಣುಮಕ್ಕಳನ್ನು `ಕ್ವಾ ಲುವಾ' (ಮದುವೆ ವಯಸ್ಸು ಮೀರಿದವರು) ಎಂದು ಪರಿಗಣಿಸುತ್ತಿದ್ದರು. ಯುದ್ಧದಲ್ಲಿ ಬದುಕುಳಿದ ಅವಿವಾಹಿತ ಪುರುಷರು ಇಂಥ ಹೆಣ್ಣುಮಕ್ಕಳನ್ನು ಕೈಹಿಡಿಯಲು ನಿರಾಕರಿಸುತ್ತಿದ್ದರು. ಅವರು ಚಿಕ್ಕ ವಯಸ್ಸಿನ ಹುಡುಗಿಯರನ್ನೇ ತಮ್ಮ ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಯುದ್ಧದಲ್ಲಿ ಪುರುಷರು ಮೃತಪಟ್ಟ ಹಿನ್ನೆಲೆಯಲ್ಲಿ ಲಿಂಗಾನುಪಾತದಲ್ಲಿ ಭಾರಿ ಅಂತರ ಇತ್ತು. 2009ರ ವಿಯೆಟ್ನಾಂ ಜನಗಣತಿ ಪ್ರಕಾರ, 1979ರಲ್ಲಿ ಮರು ಏಕೀಕರಣದ ಬಳಿಕ 20ರಿಂದ 44 ವರ್ಷ ವಯೋಮಾನದ ಪ್ರತಿ ನೂರು ಮಹಿಳೆಯರಿಗೆ ಸರಾಸರಿ ಕೇವಲ 88 ಪುರುಷರು ಇದ್ದರು. ಹಳೆಯ ಪೀಳಿಗೆಯ ಅನೇಕ ವಿಯೆಟ್ನಾಮಿ ಮಹಿಳೆಯರು ಏಕಾಂಗಿಯಾಗಿ ಬದುಕು ಸವೆಸಬೇಕಾದ ಸಂದರ್ಭ ಎದುರಾದಾಗ ಅದನ್ನು ತಮ್ಮ ಹಣೆಬರಹ ಎಂದು ಒಪ್ಪಿಕೊಂಡು ಬಿಟ್ಟಿದ್ದರು. ಆದರೆ ಲಾಯ್ ನ ಮಹಿಳಾ ಗುಂಪೊಂದು ತಾಯ್ತನವನ್ನು ತನ್ನದಾಗಿಸಿಕೊಳ್ಳಲು ನಿರ್ಧರಿಸಿತು. ಅವರು ಯುದ್ಧದ ಬಿಸಿ ಅನುಭವಿಸಿ ಹೊಸ ಶಕ್ತಿ ಪಡೆದುಕೊಂಡಿದ್ದವರು. ಏಕಾಂಗಿ ಯಾಗಿ ಸಾಯುವುದು ಬೇಡ ಎಂಬುದು ಅವರ ನಿರ್ಧಾರವಾಗಿತ್ತು. ಮಕ್ಕಳನ್ನು ಪಡೆಯುವುದಕ್ಕಾಗಿ ಪರಪುರುಷರ ಒಡನಾಟ ಹೊಂದಿದರು. ಮಕ್ಕಳನ್ನು ಪಡೆದಾದ ನಂತರ, ಆ ಪುರುಷನೊಂದಿಗೆ ಮುಂದೆಂದೂ ಅವರ ಒಡನಾಟ ಇರುತ್ತಿರಲಿಲ್ಲ. `ಕೊನೆಗಾಲದಲ್ಲಿ ಮಕ್ಕಳಾದರೂ ಆಸರೆಯಾಗಿರಲಿ' ಎನ್ನುವುದು ಈ ಮಹಿಳೆಯರ ನಿರೀಕ್ಷೆಯಾಗಿತ್ತು. ಈ ರೀತಿ ಮಕ್ಕಳನ್ನು ಪಡೆಯುವ ಪದ್ಧತಿಯನ್ನು `ಕ್ಸಿನ್ ಕಾನ್' ಎಂದು ಕರೆಯುತ್ತಾರೆ. ಕಟ್ಟುಪಾಡುಗಳನ್ನು ಮುರಿದ ಕಾರಣಕ್ಕೆ ಇಂಥ ಮಹಿಳೆಯರನ್ನು ತಾರತಮ್ಯದಿಂದ ನೋಡಲಾಗುತ್ತಿತ್ತು. ಸಂಕಷ್ಟಗಳ ನಡುವೆಯೂ ಏಕಾಂಗಿಯಾಗಿ ಮಗುವನ್ನು ಬೆಳೆಸುವ ಸವಾಲು ಇವರ ಮುಂದೆ ಇತ್ತು. `ಇದು ವಿಚಿತ್ರವಾದರೂ ಗಮನಾರ್ಹವಾದ ಬೆಳವಣಿಗೆ' ಎನ್ನುತ್ತಾರೆ ಸೀಟಲ್ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಪ್ರೊ. ಹ್ಯಾರಿಯಟ್ ಫಿನ್ನೆ. ವಿಯೆಟ್ನಾಂನಲ್ಲಿ ಚಾಲ್ತಿಗೆ ಬಂದ `ಕ್ಸಿನ್ ಕಾನ್' ಪದ್ಧತಿಯ ಕುರಿತು ಅವರು ಗ್ರಂಥ ರಚಿಸುತ್ತಿದ್ದಾರೆ. `ನಿಜಕ್ಕೂ ಇದೊಂದು ಕ್ರಾಂತಿಕಾರಿ ಬೆಳವಣಿಗೆ. ದಿಟ್ಟ ಮಹಿಳೆಯರು ಮಾತ್ರ ಇಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ' ಎಂದು ಫಿನ್ನೆ ಶ್ಲಾಘಿಸುತ್ತಾರೆ. ಅಷ್ಟೇ ಅಲ್ಲ, ಇದು ಯುದ್ಧದ ನಂತರ ಮಹಿಳೆಯರು ಎದುರಿಸಿದ ವಿಶಿಷ್ಟ ಸನ್ನಿವೇಶದ ಚಿತ್ರಣವೂ ಹೌದು. ವಿಯೆಟ್ನಾಂನಲ್ಲಿ ಯುದ್ಧದಲ್ಲಿ ಸಂಗಾತಿಯನ್ನು ಕಳೆದುಕೊಂಡ ಸಾವಿರಾರು ಮಹಿಳೆಯರು ಏಕಾಂಗಿಯಾಗಿ ಮಕ್ಕಳನ್ನು ಬೆಳೆಸುವ ಸ್ಥಿತಿ ನಿರ್ಮಾಣವಾಗಿತ್ತು. `ಲಾಯ್' ಗ್ರಾಮದಲ್ಲಿ ಕೆಲವು ಮಹಿಳೆಯರು ತಮ್ಮ ಕಥೆಯನ್ನು ಹೇಳಿಕೊಳ್ಳಲು ಮುಂದಾಗಿದ್ದರು. ಆದರೂ ತಮ್ಮ ಮಕ್ಕಳ ತಂದೆ ಯಾರು ಎನ್ನುವ ಗುಟ್ಟನ್ನು ಮಾತ್ರ ಇವರು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಪರ ಪುರುಷನಿಂದ ಮಗುವನ್ನು ಪಡೆದ ಮಹಿಳೆಯರಲ್ಲಿ ಗುಯೆನ್ ಥಿ ನಾನ್ ಕೂಡ ಒಬ್ಬರು. ಅವರಿಗೆ ಈಗ 58 ವರ್ಷ. ಯುದ್ಧದಲ್ಲಿ ಇವರು ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದರು. ಇದಕ್ಕಾಗಿ ನಾನ್ ಅವರಿಗೆ ಶೌರ್ಯ ಪದಕ ನೀಡಿ ಗೌರವಿಸಲಾಗಿದೆ. ಇವರ ಪತಿ ಕೂಡ ಯುದ್ಧದಲ್ಲಿ ಭಾಗವಹಿಸಿದ್ದರು. ಯುದ್ಧದ ನಂತರ ಈತ ಪತ್ನಿಯನ್ನು ತೊರೆದು ಬೇರೆ ಹೋದ. ನಂತರದಲ್ಲಿ ಆಕೆ ಪರ ಪುರುಷನಿಂದ ಗಂಡು ಮಗುವನ್ನು ಪಡೆದರು. ಏಕಾಂಗಿ ಬದುಕಿನ ಆರಂಭಿಕ ವರ್ಷಗಳಲ್ಲಿ ನಾನ್ ಪಾಲಿಗೆ ಬರೀ ಕಷ್ಟಗಳೇ ಎದುರಾದವು. ಹೊಟ್ಟೆಪಾಡಿಗೆ ಪರದಾಡಬೇಕಾಯಿತು. ಮೊದ ಮೊದಲು ಈಕೆಯನ್ನು ತಾರತಮ್ಯದಿಂದ ನೋಡುತ್ತಿದ್ದ ಗ್ರಾಮಸ್ಥರು ಕ್ರಮೇಣ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡರು. ನಾನ್ ಅವರಂತೆಯೇ ಏಕಾಂಗಿಯಾಗಿ ಮಕ್ಕಳನ್ನು ಬೆಳೆಸಿದ ಇನ್ನಷ್ಟು ಮಹಿಳೆಯರು ಈ ಗ್ರಾಮದಲ್ಲಿ ಇದ್ದಾರೆ. ಇವರಲ್ಲಿ ಗುಯೆನ್ ಥಿ ಲು ಕೂಡ ಒಬ್ಬರು. ಇವರಿಗೆ ಈಗ 63 ವರ್ಷ. ಈಕೆ ಪ್ರೀತಿಸಿದ್ದ ವ್ಯಕ್ತಿ 1972ರ ಯುದ್ಧದಲ್ಲಿ ಮೃತಪಟ್ಟಿದ್ದರು. `ಯುದ್ಧ ಮುಗಿದಾಗ ಆಗಿನ್ನೂ ನನಗೆ 26 ವರ್ಷ. ಅಂದರೆ ಆ ಕಾಲದಲ್ಲಿ ಮದುವೆ ಹಂತವನ್ನು ಮೀರಿದ ವಯಸ್ಸು. `ದುರ್ನಡತೆಯ ವಯೋವೃದ್ಧ ವ್ಯಕ್ತಿಯನ್ನು ವರಿಸುವುದು ನನಗೆ ಬೇಕಿರಲಿಲ್ಲ. ಅವಿವಾಹಿತ ಪುರುಷರು ನನ್ನ ಕೈಹಿಡಿಯಲು ಬರಲಿಲ್ಲ'- ಹೀಗೆ ತಾವು ಅನುಭವಿಸಿದ್ದ ಯಾತನೆಯನ್ನು ಲು ಒಂದೊಂದಾಗಿಯೇ ವಿವರಿಸುತ್ತ ಹೋಗುತ್ತಾರೆ. ಕೊನೆಗಾಲದಲ್ಲಿ ಆಸರೆ ಬೇಕು ಎಂದು ಅವರಿಗೆ ಅನಿಸಿತ್ತು. ಹಾಗಾಗಿಯೇ ತಾಯಿಯಾಗಲು ನಿರ್ಧರಿಸಿದರು. ಅದೂ ಅಲ್ಲದೆ ವಿಯೆಟ್ನಾಂನಲ್ಲಿ ವಯೋವೃದ್ಧರ ಯೋಗಕ್ಷೇಮ ನೋಡಿಕೊಳ್ಳಲು ಸರಿಯಾದ ನರ್ಸಿಂಗ್ ಹೋಂ ಇಲ್ಲ. ವೃದ್ಧರನ್ನು ನೋಡಿಕೊಳ್ಳುವುದು ಅವರ ಮಕ್ಕಳ ಕರ್ತವ್ಯ ಎಂದು ಭಾವಿಸಲಾಗುತ್ತದೆ. ಪರ ಪುರುಷನಿಂದ ಮಗುವನ್ನು ಪಡೆಯುವ ಲು ನಿರ್ಧಾರದಿಂದ ಮನೆಯವರು ಸಿಟ್ಟಿಗೆದ್ದರು. ಕೊನೆಗೆ ಅವರಿಗೂ ಅರಿವಾಯಿತು. `ಲಾಯ್' ಗ್ರಾಮದಲ್ಲಿ ಮಗಳಿಗೆಂದೇ ನಿವೇಶನವೊಂದನ್ನು ಖರೀದಿಸಿದರು. `ಇಲ್ಲಿ ನನ್ನಂತೆಯೇ ಹಲವು ಮಹಿಳೆಯರು ಇದ್ದಾರೆ. ನಮ್ಮದೇ ಒಂದು ಸಂಘದಲ್ಲಿ ಬದುಕುವುದು ಹಿತವೆನಿಸುತ್ತದೆ' ಎನ್ನುವಾಗ ಲು ಮುಖದಲ್ಲಿ ಆತ್ಮವಿಶ್ವಾಸ ಎದ್ದುಕಾಣುತ್ತದೆ. `ಲಾಯ್' ಗ್ರಾಮ ಮಾತ್ರವಲ್ಲ, ವಿಯೆಟ್ನಾಂನ ಹಲವೆಡೆ ಅನೇಕ ಮಹಿಳೆಯರು ಇದೇ ನಿರ್ಧಾರಕ್ಕೆ ಬಂದರು. ಕ್ರಮೇಣ ಏಕಾಂಗಿ ತಾಯಂದಿರ ಸಂಖ್ಯೆ ಹೆಚ್ಚಾಗತೊಡಗಿತು. ಇದು ಸರ್ಕಾರದ ಮಹಿಳಾ ಕಲ್ಯಾಣ ಇಲಾಖೆ ಗಮನಕ್ಕೂ ಬಂತು. `ವಿಯೆಟ್ನಾಂನಲ್ಲಿ ಅನೇಕ ಮಹಿಳೆಯರು ಯುದ್ಧದಲ್ಲಿ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಅವರ ತ್ಯಾಗವನ್ನು ಗುರುತಿಸುವುದು ಮುಖ್ಯವಾಗುತ್ತದೆ'- ಹನೊಯ್‌ನ ಸೊಕ್ ಸನ್ ಜಿಲ್ಲೆಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಟ್ರಾನ್ ಥಿ ಗೊಯ್ ಹೇಳುವ ಮಾತಿದು. 1986ರಲ್ಲಿ ಅಲ್ಲಿನ ಸರ್ಕಾರ ವಿವಾಹ ಮತ್ತು ಕೌಟುಂಬಿಕ ಕಾಯ್ದೆಗೆ ಅನುಮೋದನೆ ನೀಡಿತು. ಮೊಟ್ಟ ಮೊದಲ ಬಾರಿ ಏಕಾಂಗಿ ತಾಯಂದಿರು ಹಾಗೂ ಅವರ ಮಕ್ಕಳಿಗೆ ಕಾನೂನು ಮನ್ನಣೆ ಸಿಕ್ಕಿತು. ಇದು `ಲಾಯ್' ಹಾಗೂ ಇತರೆಡೆ ಇರುವ ಏಕಾಂಗಿ ತಾಯಂದಿರಿಗೆ ದೊರೆತ ಜಯವಾಗಿತ್ತು. `ಪ್ರತಿ ಮಹಿಳೆಗೂ ಪತ್ನಿ ಹಾಗೂ ತಾಯಿಯಾಗುವ ಹಕ್ಕು ಇದೆ. ಒಂದು ವೇಳೆ ಮದುವೆ ಆಗದಿದ್ದರೂ ಮಹಿಳೆಗೆ ತಾಯ್ತನದ ಹಕ್ಕು ಇದೆ' ಎಂದು ಪ್ರತಿಪಾದಿಸುತ್ತಾರೆ ಗೊಯ್. ವಿವಾಹ ಮತ್ತು ಕೌಟುಂಬಿಕ ಕಾಯ್ದೆಗೆ ಅನುಮೋದನೆ ದೊರೆತ ಬಳಿಕ ಸರ್ಕಾರವು ಅಂತರರಾಷ್ಟ್ರೀಯ ಸಂಸ್ಥೆಗಳ ಜತೆ ಸೇರಿಕೊಂಡು ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವರ ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸುವ ದಿಸೆಯಲ್ಲಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಇಷ್ಟೆಲ್ಲ ಆದರೂ ಏಕಾಂಗಿ ತಾಯಂದಿರ ಬವಣೆ ನೀಗಿಲ್ಲ. ಗ್ರಾಮೀಣ ಭಾಗದಲ್ಲಿ ಇಂಥ ಮಹಿಳೆಯರು ಈಗಲೂ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ; ಅವಮಾನ ಎದುರಿಸುತ್ತಿದ್ದಾರೆ. `ಲಾಯ್'ನಲ್ಲಿ ಒಟ್ಟು 17 ಮಂದಿ ಸೇರಿಕೊಂಡು `ಏಕಾಂಗಿ ತಾಯಂದಿರ' ಸಂಘವನ್ನು ಹುಟ್ಟುಹಾಕ್ದ್ದಿದರು. ಇವರಲ್ಲಿ ಮೂವರು ಮೃತಪಟ್ಟಿದ್ದಾರೆ. ಕೆಲವರು ತಮ್ಮ ಮಕ್ಕಳ ಜತೆ ಬೇರೆ ಊರಿನಲ್ಲಿ ವಾಸವಾಗಿದ್ದಾರೆ. ಮತ್ತೆ ಕೆಲವರು ಮದುವೆಯಾಗಿದ್ದಾರೆ. ಈಗ ಈ ಸಂಘದಲ್ಲಿ ನಾಲ್ವರು ಮಾತ್ರ ಇದ್ದಾರೆ. ಇವರು ತಮ್ಮ ಗುಡಿಸಲನ್ನು ಮನೆಯಾಗಿ ಪರಿವರ್ತಿಸಿಕೊಂಡಿದ್ದಾರೆ. ಮಕ್ಕಳಿಂದ ಇವರಿಗೆ ಸ್ವಲ್ಪ ಹಣ ಬರುತ್ತದೆ. `ಏಕಾಂಗಿ ತಾಯ್ತನ' ಪದ್ಧತಿಯನ್ನು ಶುರುಮಾಡಿದ್ದೇ ತಾವು ಎಂಬ ಭಾವನೆ ಇವರಲ್ಲಿ ಇಲ್ಲ. ತಮ್ಮ ಈ ನಿರ್ಧಾರದಿಂದ ಉಂಟಾದ ಪರಿಣಾಮದ ಬಗ್ಗೆಯೂ ಇವರು ತಲೆ ಕೆಡಿಸಿಕೊಳ್ಳುವುದಿಲ್ಲ. `ನಾನೇ ಇದಕ್ಕೆ ಪ್ರೇರೇಪಣೆಯಾದೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ತಾಯಿ ಆಗಬೇಕೆಂದು ಹಂಬಲಿಸಿದ್ದೆ. ಯಾರಿಂದಲೂ ನನ್ನ ನಿರ್ಧಾರವನ್ನು ಬದಲಿಸಲು ಸಾಧ್ಯವಾಗಲಿಲ್ಲ'- ಹೆಸರು ಹೇಳಲು ಬಯಸದ ಮಹಿಳೆಯೊಬ್ಬರು ಹೇಳುವ ಮಾತಿದು. ನಿಮ್ಮ ಅನಿಸಿಕೆ ತಿಳಿಸಿ: @.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.