` ನಂದಿ ಉಳಿಸಿ' ಆಂದೋಲನದಲ್ಲಿ ದಲಿತರಿಗೇನಿದೆ? ಆಶಿಶ್ ನಂದಿಯವರ ಹೇಳಿಕೆಗಿಂತ ಹೆಚ್ಚಾಗಿ ಈ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ, ನನ್ನನ್ನೂ ಸೇರಿದಂತೆ ಇಡೀ ದಲಿತ ಸಮುದಾಯವನ್ನು ತಳಕು ಹಾಕಿರುವ ರೀತಿ ನನಗೆ ತುಂಬಾ ನೋವುಂಟು ಮಾಡಿದೆ. ನಮ್ಮನ್ನು ಭ್ರಷ್ಟ ಜನ, ಅಸಹಿಷ್ಣುಗಳು, ಹಾಸ್ಯಪ್ರಜ್ಞೆ ಇಲ್ಲದವರು, ಬಲುಬೇಗ ಆಕ್ರೋಶಗೊಳ್ಳುವವರು.. ಇನ್ನೂ ಏನೇನೋ ಮೂದಲಿಸುತ್ತಿದ್ದಾರೆ. `ನಂದಿ ಉಳಿಸುವ' ಈ ಆಂದೋಲನದಲ್ಲಿ ದಲಿತ ಸಮುದಾಯದ ಭಾವನೆಗಳಿಗೆ ಇರಿಯುತ್ತಿದ್ದಾರೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಕೊಟ್ಟ `ದಲಿತ ಕ್ಯಾಮೆರಾ' ಕ್ಕೆ ನಾನು ಋಣಿ. ಏಕೆಂದರೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ನಮ್ಮ ಅಭಿಪ್ರಾಯಗಳಿಗೆ ಸ್ಥಳ ಇಲ್ಲ. ಹೀಗಾಗಿ `ದಲಿತ ಕ್ಯಾಮೆರಾ'ದಂಥ ಪರ್ಯಾಯ ಮಾಧ್ಯಮಗಳು ನಮಗೆ ಮುಖ್ಯವಾಗುತ್ತವೆ. ಪ್ರೊ. ನಂದಿಯ ಬೆಂಬಲಿಗರು ಪ್ರತಿಕ್ರಿಯಿಸುತ್ತಿರುವ ರೀತಿ ನಿಜಕ್ಕೂ ಆಘಾತಕಾರಿಯಾಗಿದೆ. ನಂದಿಯ ಸ್ನೇಹಿತರೊಬ್ಬರು, `ಈ ದೇಶದಲ್ಲಿ ಎಸ್ಸಿ, ಎಸ್‌ಟಿ, ಒಬಿಸಿಗಳನ್ನು ಪವಿತ್ರ ಗೋವಿನಂತೆ (ಹೋಲಿ ಕೌ) ಕಾಣಲಾಗುತ್ತಿದೆ' ಎಂದಿದ್ದಾರೆ. ನಮ್ಮ ದನಿ ಕೇಳಿಸಲು, ನಮ್ಮ ಕಾಳಜಿಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳ ಬೆಂಬಲ ಕೂಡ ಇಲ್ಲದ ನಾವು `ಪವಿತ್ರ ಗೋವು'ಗಳಾಗಲು ಹೇಗೆ ಸಾಧ್ಯ? ಹೇಳಬೇಕೆಂದರೆ, ಈ ಇಡೀ `ನಂದಿ ಉಳಿಸಿ' ಆಂದೋಲನಕ್ಕೆ ಬಲವಾಗಿ ಪ್ರತಿಕ್ರಿಯಿಸಲು ದಲಿತರಿಗೆ ಸಾಧ್ಯವಾಗಿಯೇ ಇಲ್ಲ. `ಕಫಿಲ' ಬ್ಲಾಗಿನ ಒಂದು ಲೇಖನ ಮತ್ತು `ರೌಂಡ್ ಟೇಬಲ್'ನ ಎರಡು ಲೇಖನಗಳನ್ನು ಬಿಟ್ಟರೆ ನಂದಿ ಹೇಳಿದ್ದು ತಪ್ಪು ಎಂದು ಸ್ಪಷ್ಟವಾಗಿ ಹೇಳುವ ಲೇಖನಗಳನ್ನು ಬೇರೆಲ್ಲೂ ನಾನು ನೋಡಿಲ್ಲ. ನಂದಿ ಹೇಳಿದ್ದು ತಪ್ಪು ಎಂದು ದಲಿತರಿಗೆ ಬಲವಾಗಿ ಅನ್ನಿಸಿದ್ದರೂ ಅದನ್ನು ಹೇಳಿಕೊಳ್ಳುವ ದಾರಿಗಳಿಲ್ಲ. ಹೀಗಾಗಿ ಇಲ್ಲಿ ನಿಜವಾದ `ಪವಿತ್ರ ಗೋವು' ಆಶಿಶ್ ನಂದಿಯೇ ಹೊರತು ದಲಿತರಲ್ಲ. ನಂದಿ ಟೀಕೆಗಳಿಗೆ ನಿಲುಕದ ಪ್ರಕಾಂಡ ಬುದ್ಧಿಜೀವಿ, ಕಳಂಕವೇ ಇಲ್ಲದ ಸ್ಫಟಿಕ ಮಣಿ ಎಂದು ಸಾಬೀತು ಮಾಡುವ ಧಾವಂತದಲ್ಲಿ ಅವರನ್ನು ಪವಿತ್ರ ಗೋವಾಗಿಸಲು ಇವರೆಲ್ಲ ಹೆಣಗುತ್ತಿದ್ದಾರೆ. ನಂದಿಗೆ ಕಾರ್ಪೊರೆಟ್ ಮಾಧ್ಯಮದ ಬಲವಾದ ಬೆಂಬಲವಿದೆ. ಒಂದು ಸಾಲಿಡಾರಿಟಿ ಬ್ಲಾಗೇ ಇದೆ. ನಂದಿಯನ್ನು ಬೆಂಬಲಿಸಿ ಪ್ರತಿಷ್ಠಿತರ ಬಿನ್ನವತ್ತಳೆ ಆಂದೋಲನ ನಡೆದಿದೆ. ಉದಾರವಾದಿಗಳು, ಎಡಪಂಥೀಯ ಬುದ್ಧಿಜೀವಿಗಳು ಈ ಆಂದೋಲನದ ಮುಂಚೂಣಿಯಲ್ಲಿದ್ದಾರೆ. ಪ್ರಮುಖ ರಾಷ್ಟ್ರೀಯ ಟಿವಿ ಚಾನೆಲ್‌ಗಳು ನಂದಿಯನ್ನು ಸಮರ್ಥಿಸಿಕೊಳ್ಳಲೆಂದೇ ಕಾರ್ಯಕ್ರಮಗಳನ್ನು ನಡೆಸುತ್ತಾ ಅವರೊಂದಿಗೆ ಸಂಪೂರ್ಣ ಸಹಮತದಲ್ಲಿವೆ. ನಂದಿ ಒಬ್ಬ ಪ್ರಸಿದ್ಧ ಸಮಾಜಶಾಸ್ತ್ರಜ್ಞ, ಬುದ್ಧಿಜೀವಿ ಎನ್ನುವ ಕಾರಣಕ್ಕೆ ಅವರು ಹೇಳಿದ್ದನ್ನೆಲ್ಲಾ ಇವರು ಸಮರ್ಥಿಸಿಕೊಳ್ಳುತ್ತಿದ್ದಾರೆಯೇ ಹೊರತು ಅದರ ವಿವರಗಳನ್ನು ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ. ಯಾವ ಸಮುದಾಯಗಳನ್ನು ಗುರಿಯಾಗಿಸಿ ನಂದಿ ಮಾತನಾಡಿದ್ದಾರೋ ಆ ಸಮುದಾಯಗಳ ಪ್ರತಿಕ್ರಿಯೆ ಕೇಳುವ ಕಾಳಜಿ ಇವರಿಗೆ ಇಲ್ಲ. ಇದನ್ನು ಚರ್ಚಿಸುವ ಅವಕಾಶವನ್ನೇ ಅವರು ಕೊಡುತ್ತಿಲ್ಲ. ಇದು ಸಾಲದೆಂಬಂತೆ ನಂದಿಯ ಮಾತುಗಳು ದಲಿತ ಪರವಾಗಿಯೇ ಇವೆ ಎಂದು ಅವರ ಬೆಂಬಲಿಗರು, ಮಾಧ್ಯಮದವರು ಹೇಳುತ್ತಿರುವುದನ್ನು ನೋಡಿ ನಾನು ದಂಗಾಗಿ ಹೋಗಿದ್ದೇನೆ. ನಂದಿಯ ಮಾತು ದಲಿತ ಪರವಾದದ್ದೇ, ವಿರೋಧವಾದದ್ದೇ ಎನ್ನುವುದು ಪ್ರತ್ಯೇಕ ಚರ್ಚೆಯ ವಿಷಯ. ಆದರೆ ನಂದಿಯವರನ್ನು ತಪ್ಪು ತಿಳಿದುಕೊಳ್ಳಲಾಗಿದೆ ಎಂದು ಹೇಳುತ್ತಾ, ಈ ವಿಚಾರದ ಮುಂದುವರೆದ ಚರ್ಚೆಗೆ ಆಸ್ಪದವೇ ಕೊಡದಂತೆ ಇವರೆಲ್ಲಾ ವರ್ತಿಸುತ್ತಿರುವುದು ನಿಜಕ್ಕೂ ವಿಚಿತ್ರವಾಗಿದೆ. ಇಲ್ಲಿ ನಂದಿಯನ್ನು ಸಮರ್ಥಿಸಲು ಅವರ ಬಯೋಗ್ರಫಿಯನ್ನು ಮುಂದಿಡುತ್ತಿದ್ದಾರೆ. ನಂದಿ ಯಾವಾಗಲೂ ಮೀಸಲಾತಿಯ ಪರವಾಗಿಯೇ ಇದ್ದಾರೆ, ದಲಿತರ/ಒಬಿಸಿಯ ಪರವಾಗಿ ಬೇಕಾದಷ್ಟು ಬರೆದಿದ್ದಾರೆ ಎನ್ನುತ್ತಿದ್ದಾರೆ. ನಂದಿ ದಲಿತರ ಬಗ್ಗೆ ಏನು ಬರೆದಿದ್ದಾರೋ ನಾ ಕಾಣೆ. ಅವರ ಬರವಣಿಗೆಯ ವೈಖರಿ, ಅವರ ನಿಲುವುಗಳು ಯಾವಾಗಲೂ ವಿಭಿನ್ನ ವ್ಯಾಖ್ಯಾನಗಳಿಗೆ, ವಿವರಣೆಗಳಿಗೆ ಗ್ರಾಸವಾಗುವಂತೆ ಇರುತ್ತವೆ. ಅವರ ಬರಹಗಳು ದಲಿತರ, ಒಬಿಸಿಗಳ ಪರವಾಗಿವೆಯೆಂದು ನನಗಂತೂ ಅನ್ನಿಸಿಲ್ಲ. ಇವತ್ತಿಗೂ ಈ ವಿಚಾರ ಚರ್ಚಾರ್ಹವೇ ಆಗಿದೆ. ಹೀಗಿರುವಾಗ ಅವರ ಬಯೋಗ್ರಫಿಯನ್ನು ಮುಂದಿಟ್ಟು, ಅವರ ಬರಹಗಳು ವ್ಯಕ್ತಿ ವಿಲಕ್ಷಣತೆಯಿಂದ ಕೂಡಿರುತ್ತವೆ, ಅವರನ್ನು ಓದಲು ಹಾಸ್ಯಪ್ರಜ್ಞೆ ಇರಬೇಕು, ಅರ್ಥ ಮಾಡಿಕೊಳ್ಳಲು ಸೂಕ್ಷ್ಮತೆ ಇರಬೇಕು ಇತ್ಯಾದಿ.. ಇತ್ಯಾದಿ.. ವ್ಯಾಖ್ಯಾನಗಳಿಂದ ಜೈಪುರದ ಸಾಹಿತ್ಯ ಹಬ್ಬದಲ್ಲಿ ನಡೆದದ್ದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಅಲ್ಲಿ ಹೇಳಿದ ಮಾತುಗಳ ಯೋಗ್ಯಾಯೋಗ್ಯತೆಯನ್ನು ಮುಲಾಜಿಲ್ಲದೆ ಸಾರ್ವಜನಿಕ ವಿಚಾರಣೆಗೆ ತಂದು ನಿಲ್ಲಿಸಬೇಕು. ಅದು ಬಿಟ್ಟು `ಸಂಪ್ರದಾಯಬದ್ಧವಲ್ಲದ ನಂದಿಯವರ ವಿಚಾರಗಳು ಅನೇಕರಿಗೆ ರುಚಿಸುವುದಿಲ್ಲ' ಎಂದರೆ ಅದು ವಂಚನೆಯಾಗುತ್ತದೆ. ಅಷ್ಟಕ್ಕೂ ಇದು ಇಷ್ಟು ಸರಳವಾದ ವಿಚಾರ ಅಲ್ಲವೇ ಅಲ್ಲ. ನಂದಿಯವರು, `ಎಸ್ಸಿ, ಎಸ್ಟಿ ಮತ್ತು ಒಬಿಸಿಗಳು ಇಂದು ಈ ದೇಶದ ಅತ್ಯಂತ ಭ್ರಷ್ಟ ಸಮುದಾಯಗಳು, ಇವರು ಮೇಲ್ಜಾತಿ-ವರ್ಗಗಳ (ಭ್ರಷ್ಟಾಚಾರದಲ್ಲಿ) ಅನುಕರಣೆಯಲ್ಲಿ ನಿಪುಣತೆ ಸಾಧಿಸಿದ್ದಾರೆ, ಇದು ಪ್ರಜಾಪ್ರಭುತ್ವಕ್ಕೆ ದಾರಿಯಾಗುತ್ತದೆ' ಎನ್ನುವಂಥ ವಿಲಕ್ಷಣ ಮಾತುಗಳನ್ನು ತೂರಿ ಬಿಟ್ಟಿದ್ದಾರೆ. ನಂದಿಯವರ ಇಂಥ ವಾದಕ್ಕೆ ಮಧು ಕೋಡೆ ಮಾದರಿ. ನಂದಿ ನಮಗೆ ಆರೋಪಿಸುತ್ತಿರುವ ಇಂಥ ಗುಣ ವಿಶೇಷಣ ಕೆಲ ಮೇಲ್ಜಾತಿ/ ಮೇಲ್ವರ್ಗದವರಿಗೆ ರಸವತ್ತಾಗಿ ಕಾಣುತ್ತಿದೆ. `ನಂದಿಯೇನೂ ಇಲ್ಲಿ ದಲಿತರ ಗುಣ ವೈಶಿಷ್ಟ್ಯವನ್ನು ಎತ್ತಿ ಹೇಳುತ್ತಿಲ್ಲ. ದಲಿತರಿಗೆ ಏಜೆನ್ಸಿ ಕೊಡುತ್ತಿದ್ದಾರೆ' ಎನ್ನುತ್ತಿದ್ದಾರೆ ಅವರು. ದಲಿತರು ಭ್ರಷ್ಟಚಾರಿಗಳು ಎನ್ನುವ ಯೋಗ್ಯತಾ ಪತ್ರವಾಗಲೀ, ಏಜೆನ್ಸಿಯಾಗಲೀ ನಮಗೆ ಬೇಕಾಗಿಲ್ಲ. ನಂದಿ ಮತ್ತು ಅವರ ಪಾಂಡಿತ್ಯದ ಪರಮ ಶ್ರೇಷ್ಠತೆ ಏನೇ ಇರಲಿ, ಜೈಪುರದ ಅವರ ಮಾತುಗಳ ಸಮರ್ಥನೆಗೆ ಅದು ಆಯುಧವಾಗಲಾರದು. ಹಾಗೆಯೇ ನಂದಿ ಜೈಪುರದಲ್ಲಿ ಹೇಳಿದ್ದನ್ನು ವಾಕ್ ಸ್ವಾತಂತ್ರ್ಯದ ನೆಲೆಯಲ್ಲಿ ಸಮರ್ಥಿಸುವುದೂ ಸಾಧ್ಯವಿಲ್ಲ. ಏಕೆಂದರೆ, ಇದರ ಮುಂದಿನ ಹೆಜ್ಜೆ- `ದಲಿತರು ಪುಂಡರು, ಅಸಹಿಷ್ಣುಗಳು, ಪ್ರಜಾತಂತ್ರೀಯ ನಡವಳಿಕೆ ಇಲ್ಲದವರು' ಎನ್ನುವಂಥ ಸೆನ್ಸಾರ್‌ಷಿಪ್ಪನ್ನು ಬಳಸಿ ಒಂದು ಮಹತ್ವವಾದ ಚರ್ಚೆಯ ಅವಕಾಶವನ್ನೇ ಇವರು ವಂಚಿಸಿಬಿಡುತ್ತಿದ್ದಾರೆ. ಪ್ರಸ್ತುತ ನಂದಿ ಪ್ರಕರಣಕ್ಕೆ ಸಂಬಂಧಿಸಿ ಬಹುತೇಕ ದಲಿತ ವಿದ್ವಾಂಸರು ಮತ್ತು ದಲಿತ ಕಾರ್ಯಕರ್ತರು ಮಾತನಾಡದೆ ಇರುವುದಕ್ಕೆ ಅವರು ಒಳಗಾಗಿರುವ ಮಾನಸಿಕ ಒತ್ತಡವೇ ಕಾರಣ. `ನೀವು ದಲಿತರ ಬಗ್ಗೆ ಏನಾದರೂ ಹೇಳಿದರೆ ದಲಿತರು ನಿಮ್ಮ ತಲೆ ಒಡೆಯುತ್ತಾರೆ, ಎಸ್ಸಿ/ಎಸ್ಟಿ ಕಾಯಿದೆಯಡಿ ನಿಮ್ಮ ಮೇಲೆ ಕೇಸು ಹಾಕುತ್ತಾರೆ' ಎಂಬ ಚಿತ್ರಣ ಕೊಟ್ಟು ನಮ್ಮನ್ನು ಅಪಾರ ಮಾನಸಿಕ ಒತ್ತಡಕ್ಕೆ ಒಳಪಡಿಸುತ್ತಿದ್ದಾರೆ. ಇವರು ಇಷ್ಟು ಸಲೀಸಾಗಿ ಇಷ್ಟೊಂದು ಗಂಭೀರವಾದ ಆರೋಪ ಮಾಡುವುದನ್ನು ನೋಡಿ ನನಗೆ ನಿಜಕ್ಕೂ ಶಾಕ್ ಆಗಿದೆ. `ದಲಿತರು ಈ ದೇಶದ ಅತ್ಯಂತ ಅಸಹಿಷ್ಣು ಜನ' ಎನ್ನುವ ಚಿತ್ರಣವನ್ನು ಇವರೆಲ್ಲಾ ಕೊಡುತ್ತಿರುವುದಾದರೂ ಏಕೆ? `ನಂದಿ ಏನು ಹೇಳಿದ್ದಾರೆ' ಎಂಬುದರ ಬಗ್ಗೆ ಇವರೇಕೆ ಮಾತನಾಡುತ್ತಿಲ್ಲ? ಇದು ನನ್ನನ್ನು ಕಾಡುವ ಪ್ರಶ್ನೆ. `ನಂದಿಗೆ ಕಿರುಕುಳ ಕೊಡುತ್ತಿದ್ದಾರೆ, ಪಾಪ, ಅವರನ್ನು ಬೇಟೆಯಾಡುತ್ತಿದ್ದಾರೆ' ಅನ್ನುವ ಮಾತು ಕೇಳಿಬರುತ್ತಿದೆ. ಯಾರು ನಂದಿಗೆ ಕಿರುಕುಳ ಕೊಡುತ್ತಿರುವುದು? ನಿಮ್ಮ ಮಾತಿನ ಅರ್ಥ ದಲಿತರು ಎಂದು ತಾನೆ? ಶತ ಶತಮಾನಗಳಿಂದ ಕ್ರೂರ ಹಿಂಸೆಗೆ, ಇತರರ ಅಸಹಿಷ್ಣುತೆಗೆ ಒಳಗಾದವರು ನಾವು. ನಮ್ಮನ್ನು ಹೀಗೆ ಅಸಹಿಷ್ಣುಗಳು ಎಂದು ಬಿಂಬಿಸುತ್ತಿರುವುದು ವಿಪರ್ಯಾಸ. ಈ ಇಡೀ ವಿವಾದವನ್ನು ಹುಟ್ಟು ಹಾಕಿದವರು ಪ್ರೊ. ನಂದಿ. ಅದೂ ಉಳ್ಳವರ ಹಬ್ಬದಲ್ಲಿ. ಇದಕ್ಕೆ ಪ್ರತಿರೋಧ ವ್ಯಕ್ತವಾದದ್ದೂ ಅದೇ ವೇದಿಕೆಯಲ್ಲಿದ್ದವರಿಂದ ಮತ್ತು ಅವರಂಥ ಇತರರಿಂದಲೇ ಹೊರತು ದಲಿತರಿಂದಲ್ಲ. ನಂತರ ಅದು ಸಾರ್ವಜನಿಕ ಚರ್ಚೆಗೆ ಬಂದು ದೊಡ್ಡ ವಿವಾದದ ರೂಪು ಪಡೆದುಕೊಂಡಿತು. ಹೀಗೆ ಅವರೇ ಹುಟ್ಟುಹಾಕಿದ ವಿವಾದದಲ್ಲಿ, ನಂದಿಯನ್ನು ಹೀರೋ ಮಾಡಲು ಕಾರ್ಪೊರೆಟ್ ಮಾಧ್ಯಮಗಳು ` ಎಸ್ಸಿ/ಎಸ್ಟಿ/ಒಬಿಸಿಗಳು ಅತ್ಯಂತ ಭ್ರಷ್ಟ ಜನ' ಎನ್ನುವ ಸಾಲುಗಳನ್ನು ಪದೇ ಪದೇ ಪದೇ .. ಪ್ರಸಾರ ಮಾಡುವುದರಿಂದ ಈ ಸಮುದಾಯಗಳಿಗೆ ಎಂಥ ಘಾಸಿಯಾಗಿದೆ ಎಂದು ಇವರು ಯೋಚಿಸಿದ್ದಾರಾ? ನಮ್ಮನ್ನು ಎಂದೋ `ಕಳಂಕಿತ' ಸಮುದಾಯ ಎಂದು ಪರಿಗಣಿಸಿಬಿಟ್ಟಾಯಿತು. ಈಗ ನಮಗೆ `ಅತ್ಯಂತ ಭ್ರಷ್ಟರು' ಎಂಬ ಪಟ್ಟ ಬೇರೆ. ಈ ವಿಚಾರದಲ್ಲಿ ಸಾರ್ವಜನಿಕ ಅಭಿಪ್ರಾಯ ಮೂಡಿಸುತ್ತಿದ್ದಾರೆ. ಹೌದು, ನಂದಿಯೇ ಹೇಳುವಂತೆ ನಾವು ತುಂಬಾ ಪ್ರಚಾರಕ್ಕೆ ಬಂದು ಬಿಟ್ಟಿದ್ದೇವೆ! `ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಅನುಕರಣೆಯನ್ನು ದಲಿತರು ಕ್ರಿಯೆಟಿವ್ ಆಗಿ ಮಾಡುತ್ತಿದ್ದಾರೆ ` ಎನ್ನುವ ಮಾತುಗಳನ್ನಾಡುವ ಮೂಲಕ ಪ್ರೊ. ನಂದಿ ಬೇರೆಂದಿಗಿಂತಲೂ, ಬೇರಾರಿಗಿಂತಲೂ ಹೆಚ್ಚಿನ ಘಾಸಿಯನ್ನು ನಮಗೆ ಮಾಡಿದ್ದಾರೆ. ಈ ವಿವಾದದ ಚರ್ಚೆಯಲ್ಲಿ ದಲಿತ ರಾಜಕಾರಣಿಗಳನ್ನು, ದಲಿತ ನಾಯಕರನ್ನು `ವಿಕ್ಟಿಮ್‌ಹುಡ್ ಮುರಿದವರು' ಎಂದು ವ್ಯಾಖ್ಯಾನಿಸುತ್ತಾ, ಇವರು `ಐಡೆಂಟಿಟಿ ರಾಜಕಾರಣದ ಪಾದಾಳುಗಳು', ನಂದಿ ಪ್ರಕರಣದಿಂದ `ರಾಜಕೀಯ ಬಂಡವಾಳ' ಮಾಡಿಕೊಳ್ಳುತ್ತಿದ್ದಾರೆ, ಪ್ರಚಾರಕ್ಕಾಗಿ ಹಾತೊರೆಯುವ ಜನ, ಹಾಸ್ಯ ಪ್ರಜ್ಞೆ ಇಲ್ಲದ ಜನ, ವೈಚಾರಿಕತೆಯ ಸೂಕ್ಷ್ಮಗಳು ಇವರಿಗೆ ಅರ್ಥವಾಗುವುದಿಲ್ಲ, ನಂದಿ ಥರದ ದೊಡ್ಡಮಟ್ಟದ ವೈಚಾರಿಕ ಚರ್ಚೆ ಇವರೊಂದಿಗೆ ಸಾಧ್ಯವಿಲ್ಲ, ಇತ್ಯಾದಿ, ಇತ್ಯಾದಿಯಾದ ಅಭಿಪ್ರಾಯಗಳು ನಿರಾಯಾಸವಾಗಿ ಹೊಮ್ಮಿಬರುತ್ತಲೇ ಇವೆ. ಬಹುತೇಕ ಮೇಲ್ಜಾತಿ, ಸೆಕ್ಯುಲರ್ ಚರ್ಚೆಗಳಲ್ಲಿ ಸಾಮಾನ್ಯವಾಗಿ ದಲಿತರನ್ನು ಬಿಂಬಿಸುವುದು ಹೀಗೆಯೇ. ದಲಿತ ಸಮುದಾಯವನ್ನು ಈ ಥರದ ಪಡಿಯಚ್ಚಿನ ಎರಕಕ್ಕೆ ಹೊಯ್ಯುವುದು ಈ ಇಡೀ ಚರ್ಚೆಯಲ್ಲಿರುವ ದೊಡ್ಡ ಸಮಸ್ಯೆ. ಯಾವುದೋ ಘಟನೆ ನಡೆಯಿತು. ದಲಿತ ಸಂಘಟನೆಗಳು ಪ್ರತಿಭಟಿಸಿದವು. ಯಾರೋ ಎಲ್ಲೋ ಒಂದು ಎಫ್‌ಐಆರ್ ಫೈಲ್ ಮಾಡಿದರು. ಇದು ಇನ್ಯಾರಿಗೋ ರುಚಿಸಲಿಲ್ಲ. ಆಗ ಅವರು `ಎಸ್ಸಿ/ಎಸ್ಟಿ ಕಾಯಿದೆ ಬರ್ಬರವಾಗಿದೆ, ದಲಿತರು ಅದನ್ನು ದುರ್ಬಳಕೆ ಮಾಡುತ್ತಿದ್ದಾರೆ' ಎನ್ನುವ ಸಾರ್ವಜನಿಕ ಅಭಿಪ್ರಾಯ ಹುಟ್ಟುಹಾಕಲು ಪ್ರಯತ್ನಿಸುತ್ತಾರೆ. ಈ ಕಾಯಿದೆಯೇ ಸರಿಯಿಲ್ಲ ಎನ್ನುವಾಗ ತಮ್ಮದೇ ಪ್ರಜಾತಾಂತ್ರೀಯ ಸಂಸ್ಥೆಗಳನ್ನು ವಿರೋಧಿಸುತ್ತಿದ್ದೇವೆ ಎನ್ನುವುದನ್ನೂ ಇವರು ಮರೆಯುತ್ತಿದ್ದಾರೆ. ನಂದಿ ಅತ್ಯಂತ ಆಕ್ಷೇಪಾರ್ಹ ಮಾತುಗಳನ್ನಾಡಿದರು. ಅದು ವಿವಾದಕ್ಕೆ ಒಳಗಾದಾಗ ಕ್ಷಮೆ ಕೇಳಲು ನಿರಾಕರಿಸಿದರು,' ಸ್ಪಷ್ಟನೆಗಳನ್ನು ಕೊಡುತ್ತೇನೆ' ಎಂದರು. ಅವರ ಬೆಂಬಲಿಗರು ಅವರಿಗಿಂತ ಮುಂದಾಗಿ ಸ್ಪಷ್ಟನೆಗಳನ್ನು ಕೊಡಲು ಶುರು ಮಾಡಿದರು. ಇದರಿಂದ ನಂದಿ ನೂರಾನೆ ಬಲ ಬಂದಂತೆ ಆಡತೊಡಗಿದರು. ಜೈಪುರದಿಂದ ದೆಹಲಿಗೆ ವಾಪಸ್ಸಾದ ನಂತರ, `ನಾನು ಆಡಿದ ಮಾತಿಗೆ ನಾನು ಬದ್ಧವಾಗಿದ್ದೇನೆ' ಎಂದು ಗಟ್ಟಿಯಾಗಿ ಹೇಳತೊಡಗಿದರು. ಒಂದು ಕಡೆ, ದಲಿತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ದಲಿತರು ಒಳಗಾಗುತ್ತಿರುವ ಅವಮಾನಗಳು, ಇನ್ನೊಂದು ಕಡೆ ದಲಿತರನ್ನು ಅವಹೇಳನ ಮಾಡುವ ಈ ಬಗೆಯ ಸಾರ್ವಜನಿಕ ಚರ್ಚೆಗಳು. ನಂದಿಯವರು ತಾವಾಡಿದ ಮಾತುಗಳಿಗೆ ತಡವಾಗಿಯಾದರೂ ಸಾರ್ವಜನಿಕ ಕ್ಷಮೆ ಕೇಳಬೇಕು. (ಲೇಖಕರು: ದಲಿತ ವಿದ್ವಾಂಸರು ಮತ್ತು ಕಾರ್ಯಕರ್ತರು, ಇಎಫ್‌ಎಲ್ ಯೂನಿವರ್ಸಿಟಿ, ಹೈದರಾಬಾದ್) ಸೌಜನ್ಯ: ದಲಿತ ಕ್ಯಾಮೆರಾ ವಿಡಿಯೋ ನ್ಯೂಸ್ ಜರ್ನಲ್ ಮತ್ತು ರೌಂಡ್ ಟೇಬಲ್ ಇಂಡಿಯಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.