ಪ್ರತಿರೋಧದ `ಜ್ಯೋತಿ' ಮೂಡಿಸಿದ ಬೆಳಕು ದೆಹಲಿಯಲ್ಲಿ ಬರ್ಬರ ಅತ್ಯಾಚಾರಕ್ಕೆ ಒಳಗಾದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಲಕ್ಷಾಂತರ ಜನರ ಎದೆಯಲ್ಲಿ ಪ್ರತಿರೋಧದ `ಜ್ಯೋತಿ'ಯನ್ನು ಹೊತ್ತಿಸಿದಳು. ಪ್ರಕರಣದ ತನಿಖೆಗೆಂದು ನೇಮಕಗೊಂಡ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿಯು ಅತ್ಯಂತ ಕಡಿಮೆ ಅವಧಿಯಲ್ಲಿ 80,000 ಪ್ರತಿಕ್ರಿಯೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಸಂಘಟನೆಗಳೊಂದಿಗೆ ಸಮಾಲೋಚಿಸಿ ಉತ್ತಮ ವರದಿಯನ್ನು ತಯಾರಿಸಿದ್ದು ಒಂದು ದಾಖಲೆಯೇ ಸರಿ. ಹಲವು ಅಂಶಗಳಿಂದಾಗಿ ಈ ವರದಿ ಮಹಿಳಾ ಚಳವಳಿಯ ಹಾದಿಯಲ್ಲಿ ಒಂದು ಮೈಲಿಗಲ್ಲಾಗಿದೆ. ಇಷ್ಟೂ ಕಾಲ ಅತ್ಯಾಚಾರ ಎಂಬುದು ಹಿಂಸೆ ಮತ್ತು ಅಪರಾಧದ ವಿಷಯವಾಗಿತ್ತು. ಆದರೆ ಇದನ್ನು ಈಗ ಸಂವಿಧಾನಾತ್ಮಕ ನೆಲೆಯಲ್ಲಿ ನೋಡಿ ಇದು ಸಂವಿಧಾನದ 21ನೇ ಕಲಮಿನ ಬದುಕುವ ಹಕ್ಕಿನ ಉಲ್ಲಂಘನೆ ಎಂದು ವರ್ಮಾ ಸಮಿತಿ ವರದಿ ಪರಿಗಣಿಸಿದೆ. ಅತ್ಯಾಚಾರವನ್ನು ಮಹಿಳೆಯ ಮೇಲಿನ ಕಳಂಕವಾಗಿ ನೋಡದೆ ಸಮಾಜದ ಕಳಂಕವನ್ನಾಗಿ ನೋಡಿರುವುದು ಬಹುಮುಖ್ಯ ವಿಚಾರ. ಅತ್ಯಾಚಾರದ ಪ್ರಕರಣದಲ್ಲಿ ಬಹುಮುಖ್ಯವಾಗಿ ಪರಿಗಣಿಸಲಾಗುತ್ತಿದ್ದ `ಒಪ್ಪಿಗೆ' ಎಂಬ ಅಂಶವನ್ನು ಸಹ ಈ ವರದಿ ಭಿನ್ನವಾಗಿ ನೋಡಿದೆ. `ಒಪ್ಪಿಗೆ'ಯನ್ನು ಅತ್ಯಾಚಾರಕ್ಕೆ ಒಳಗಾದವರು ಸಾಬೀತುಪಡಿಸುವ ಅಗತ್ಯವಿಲ್ಲ. ಬದಲಿಗೆ ಆರೋಪಿ ಸಾಬೀತುಪಡಿಸಬೇಕು. ವಿವಾಹದೊಳಗೂ ನಡೆಯುವ ಬಲಾತ್ಕಾರದ ಲೈಂಗಿಕ ಸಂಬಂಧವನ್ನು ಅತ್ಯಾಚಾರವೆಂದೇ ಪರಿಗಣಿಸಬೇಕು. ಲೈಂಗಿಕ ದೌರ್ಜನ್ಯವನ್ನು ರಾಜ್ಯ, ಕೇಂದ್ರ, ಸೇನೆ ಯಾರೇ ನಡೆಸಿದರೂ ಸಮರ್ಥನೀಯವಲ್ಲ. ಅತ್ಯಾಚಾರ ಎಸಗಿದವರಷ್ಟೆ ಅಲ್ಲ ನೋಡಿದವರು, ಸಹಕರಿಸಿದವರೂ ಆರೋಪಿಗಳೇ. ಸಾರ್ವಜನಿಕವಾಗಿ ಬೆತ್ತಲೆ ಮಾಡುವುದು, ಹಿಂಬಾಲಿಸುವುದು, ಕದ್ದು ನೋಡುವುದು, ಅಶ್ಲಿಲ ಮಾತು, ವರ್ತನೆ, ಸಾಹಿತ್ಯ, ಜನನಾಂಗಗಳ ಹಾನಿ, ಆಸಿಡ್ ದಾಳಿಗಳನ್ನೆಲ್ಲ ಅಪರಾಧಗಳೆಂದು ವರ್ಮಾ ಸಮಿತಿ ಪರಿಗಣಿಸಿದೆ. ಬಲಾತ್ಕಾರದ ಯೋನಿ - ಶಿಶ್ನ ಸಂಭೋಗವಷ್ಟೆ ಅಲ್ಲದೆ, ದೇಹದ ಇತರೆ ಅಂಗಗಳನ್ನೋ, ವಸ್ತುಗಳನ್ನು ಬಳಸುವುದು ಕೂಡ ಅತ್ಯಾಚಾರವೆಂದು ಪರಿಗಣಿಸಲಾಗಿದೆ. ಬರ್ಬರ ಅತ್ಯಾಚಾರಕ್ಕೆ ಒಳಗಾಗುವುದಲ್ಲದೆ, ಅಂಗಛೇಧನ, ಜನನಾಂಗದಲ್ಲಿ ಮರದ ತುಂಡು, ಏನೆಲ್ಲವನ್ನು ತುಂಬಿಸಿ, ಕೊಲೆಯಾಗುವ ದಲಿತ ಸೋದರಿಯ ಪ್ರಕರಣಗಳನ್ನು ವರದಿ ಆಧಾರವಾಗಿಸಿಕೊಂಡಿದೆ. (ನಿರ್ದಿಷ್ಟವಾಗಿ ಖೈರ್ಲಾಂಜಿಯಲ್ಲಿ ನಡೆದ ದಲಿತ ಕುಟುಂಬದ ಮೇಲಿನ ಅತ್ಯಾಚಾರ) ಯುವ ಜನತೆ ಕುರಿತು ವರ್ಮಾ ಸಮಿತಿ ಹೇಳಿರುವ ಮಾತುಗಳೂ ವಿಶೇಷವಾಗಿವೆ. `ಭಾರತ ದೇಶದ ಯುವಜನತೆ ತಮ್ಮ ಅಸಾಧಾರಣ ಪ್ರತಿಭಟನೆಯ ಮೂಲಕ ವಿವೇಕ ಮೆರೆದಿದ್ದಾರೆ. ಸಂವಿಧಾನದ ಆಶಯದ ಹಿನ್ನೆಲೆಯಲ್ಲಿ ಪ್ರಭುತ್ವ ಮತ್ತು ರಾಜಕೀಯ ಗಣ್ಯರೊಂದಿಗೆ ಅವರು ಸಂಘರ್ಷಕ್ಕೆ ಇಳಿದಿದ್ದಾರೆ. ಜಾತಿ, ಮತ, ಲಿಂಗ, ಧರ್ಮ, ಸಮುದಾಯದ ಗೋಡೆಗಳನ್ನು ಮೀರಿ ಅವರು ನಡೆಸಿದ ಹೋರಾಟವನ್ನು ಅಧಿಕಾರದ ಹಮ್ಮು ಪ್ರತಿಷ್ಠೆಯಲ್ಲಿ ಹತ್ತಿಕ್ಕಿದರೆ ರಾಜಕೀಯ ವರ್ಗದ ಉಳಿವಿಗೆ ಗಂಡಾಂತರ ಕಾದಿದೆ'. ತಾನೇ ನೇಮಿಸಿದ ಸಮಿತಿಯ ವರದಿಯ ಶಿಫಾರಸ್ಸುಗಳನ್ನು ಪೂರ್ಣವಾಗಿ ಪರಿಗಣಿಸದೆ ಸುಗ್ರೀವಾಜ್ಞೆ ಜಾರಿ ಮಾಡಿರುವ ಸರ್ಕಾರಕ್ಕೆ ಮೇಲಿನ ಮಾತುಗಳು ಎಚ್ಚರಿಕೆಯಂತಿವೆ. ಇಂತಹದೊಂದು ಆರೋಗ್ಯಕರ, ಮಹಿಳಾ ಪರ ವರದಿಯೊಂದು ರಚನೆಯಾಗುವುದು ಈ ಹೊತ್ತಿನ ತುರ್ತಾಗಿ ಕಾಣುವುದಾದರೂ ಅದರ ಹಿಂದೆ ಮಹಿಳಾ ಚಳವಳಿಯ ನಿರಂತರ ಹೋರಾಟವಿದೆ ಎಂಬುದು ಚಾರಿತ್ರಿಕ ಸತ್ಯ. ಮಥುರಾ, ರಮೀಜಾಬಿ, ಮಾಯಾತ್ಯಾಗಿ, ಭನ್ವರಿ ದೇವಿ.... ಪ್ರಕರಣಗಳು ಹುಟ್ಟುಹಾಕಿದ ಹೋರಾಟಗಳು ಅತ್ಯಾಚಾರ ಕುರಿತ ಕಾಯ್ದೆಗಳಲ್ಲಿ ಅಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಹಲವು ಬದಲಾವಣೆಗಳನ್ನು ತಂದಿವೆ. ಯುದ್ಧ, ಕೋಮುವಾದ, ಪರಿಸರ, ಅಣ್ವಸ್ತ್ರೀಕರಣ, ಸ್ಥಳಾಂತರ .... ಹೀಗೆ ಹಲವು ವಿಷಯಗಳನ್ನು ಒಳಗೊಳ್ಳುತ್ತ ತನ್ನ ನೆಲೆಯನ್ನು ವಿಸ್ತರಿಸಿಕೊಂಡು ಮಿತಿಗಳನ್ನು ಮೀರುವ ಪ್ರಯತ್ನಗಳನ್ನು ಮಾಡಿಕೊಂಡೆ ಬಂದಿದೆ. ಆದರೂ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳ, ಹಿಂಸೆ ಇಲ್ಲದ ಮಹಿಳೆಯರ ಬದುಕು ಎಂಬುದು ಈ ಹೊತ್ತಿಗೂ ಒಂದು `ಯುಟೋಪಿಯ' ಎನಿಸಿರುವುದು ಸತ್ಯ. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹೆಣ್ಣಿನ ಮೇಲೆ ನಡೆಯುವ ಕಿರುಕುಳ, ಹಿಂಸೆ, ಹಲ್ಲೆ, ದಾಳಿ ಎಂಬುದು ಮಾನವ ಸಮಾಜಕ್ಕೆ ತಗುಲಿರುವ ಮದ್ದಿಲ್ಲದ ಕಾಯಿಲೆಯಾಗಿಬಿಟ್ಟಿದೆಯೆ? ಹಿಂಸೆಯ ಬರ್ಬರತೆಯನ್ನು ಕಂಡಾಗ ಇದೊಂದು ಮಾರಣಾಂತಿಕ ಕಾಯಿಲೆ ಎನಿಸಿ ದಿಗಿಲಾಗುತ್ತದೆ. ಈ ಕಾಯಿಲೆಗೆ ಮದ್ದು ಹುಡುಕುವುದು ಸುಲಭದ್ದಲ್ಲ. ಕಾರಣ ನೋಡುವ ಕಣ್ಣುಗಳಿಗೆ ಪೊರೆ ಬಂದಿರುವುದರಿಂದ ಅರಿವಿನ ಬೆಳಕಿಗೆ ಕಿಟ್ಟ ಕಟ್ಟಿರುವುದರಿಂದಾಗಿಯೇ ಕಾಯಿಲೆ ಕಾಯಿಲೆಯಾಗಿಯೇ ಕಾಣಿಸುತ್ತಿಲ್ಲ. ಹಾಗಾಗಿಯೇ, ಈ ನಾಡಿನ ಕೆಲವು ಧಾರ್ಮಿಕ ಮುಖಂಡರಿಗೆ ಅಪ್ಪಂದಿರು, ತಾತಂದಿರು, ಸೋದರರೇ ಅತ್ಯಾಚಾರವೆಸಗುವುದು ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಮಾನುಷ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳು ಮಂತ್ರ ಜಪಿಸಿದ್ದರೆ, `ಅಣಾ'್ಣ ಎಂದಿದ್ದರೆ ಸುಮ್ಮನಾಗುತ್ತಿದ್ದರೆಂದು ಹೇಳುತ್ತಾರೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಗಳು ಸಾವು ಬದುಕಿನ ನಡುವೆ ಹೋರಾಡುವಾಗ, ಆಕೆ ಬದುಕಿದರೂ ಜೀವಂತ ಶವದಂತೆ ಎಂದರು ಈ ನಾಡಿನ ಅಧಿಕಾರ ಕೇಂದ್ರವಾದ ಲೋಕಸಭೆಯ ನಾಯಕಿಯೊಬ್ಬರು. ಈ ನಾಡಿನ ನ್ಯಾಯಾಂಗ ವ್ಯವಸ್ಥೆಗೂ ಇದೇ ಕಾಯಿಲೆ ತಗುಲಿದೆ. ಪೊಲೀಸ್ ಠಾಣೆಯಲ್ಲಿ, ಪೊಲೀಸರೆ ಅತ್ಯಾಚಾರ ಎಸಗಿದ ಕೇವಲ 14 ವರ್ಷ ವಯಸ್ಸಿನ ಬಾಲಕಿ ಮೈಮೇಲೆ, ಪ್ರತಿಭಟಿಸಿದ ಗುರುತು ಇರಲಿಲ್ಲವಾದ್ದರಿಂದ ಆಕೆಯ ಒಪ್ಪಿಗೆ ಇತ್ತು. ಹಾಗಾಗಿ ಅವಳ ಪ್ರತಿರೋಧ ಸುಳ್ಳಿನ ಕತೆ ಎಂದು ನ್ಯಾಯಾಲಯವೊಂದು ತೀರ್ಪು ನೀಡಿದೆ. ಈ ನಾಡಿನ ಪ್ರತಿಷ್ಠಿತರು, ಸಾಮಾನ್ಯರಾದಿಯಾಗಿ, ಅತ್ಯಾಚಾರ ತಡೆ ಕುರಿತು ನೀಡುವ ಪುಕ್ಕಟೆ ಸಲಹೆಗಳೆಂದರೆ `ಹೆಣ್ಣು ಮಕ್ಕಳಿಗೆ ಸರಿಯಾದ ಬಟ್ಟೆ ತೊಡಲು ಹೇಳಿ', `ಬೇಕಾಬಿಟ್ಟಿ ತಿರುಗಾಡಬೇಡಿರೆಂದು ಹೇಳಿ' ಇತ್ಯಾದಿ. ಇದೊಂದು ಪುರಾತನ ಕಾಯಿಲೆ. ಇತಿಹಾಸದ ಮೂಲದ್ಲ್ಲಲೇ ಇದರ ಬೇರುಗಳನ್ನು ಕಾಣಬಹುದು. ಅಪ್ರಯೋಜಕನಾದರೂ ಸರಿಯೇ ಹೆಂಡತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎನ್ನುತ್ತದೆ ಮನುಧರ್ಮಶಾಸ್ತ್ರ. ಸಕಲ ಸಂಪತ್ತು, ಅಧಿಕಾರ, ರಾಜ್ಯ, ಒಡಹುಟ್ಟಿದ ಸೋದರರನ್ನು ಅಡವಿಟ್ಟು ಸೋತ ಮೇಲೂ ಹೆಂಡತಿಯನ್ನು ಅಡವಿಡುತ್ತಾನೆ ಮಹಾಭಾರತದ ಧರ್ಮರಾಯ. ಹೆಣ್ಣುಗಳನ್ನು ಹೊಡೆದು, ಬಡಿದು, ಬಾರಿಸಿ, ಉಪವಾಸ ಕೆಡವಿ, ಪಳಗಿಸುವ ಕತೆಗಳನ್ನು ಮೌಖಿಕ ಕಾವ್ಯಗಳು ಹೇಳುತ್ತವೆ. ಕಾಯಿಲೆಯ ಲಕ್ಷಣಗಳನ್ನು ಅರ್ಥಮಾಡಿಕೊಂಡರೆ ಕಾಯಿಲೆಗೊಂದು ಹೆಸರು ಕಟ್ಟಬಹುದಷ್ಟೆ. ಕಾಯಿಲೆಗೆ ಕಾರಣಗಳು ಅರ್ಥವಾದಾಗ ಮಾತ್ರ ವಾಸಿ ಮಾಡುವ ಚಿಕಿತ್ಸೆಗಳು ಹೊಳೆಯಬಹುದು. ಬದಲಾಗಿರುವುದು ಹೆಣ್ಣು ಮಕ್ಕಳ ಬದುಕು, ಗಂಡಸರದಲ್ಲ. ಹೆಚ್ಚೆಂದರೆ ಆ ಬಗ್ಗೆ ಅವರಿಗೆ ಮಾಹಿತಿ ಇದೆ, ಅಂಕಿ - ಅಂಶಗಳು ಗೊತ್ತಿವೆಯಷ್ಟೆ. ಆ ಕಾರಣಕ್ಕಾಗಿಯೇ ಮಹಿಳೆ ಚಳವಳಿ ಏನೆಲ್ಲ ಆಳವಾದ, ವಿಸ್ತಾರವಾದ ಅಧ್ಯಯನ, ಸಂಶೋಧನೆ, ಹೋರಾಟ ಮಾಡಿ ಪುರಾವೆಗಳ ಸಮೇತ ದೌರ್ಜನ್ಯ, ದಾಳಿ, ಹಿಂಸೆಯ ಹಿಂದೆ ಕೆಲಸ ಮಾಡುವುದು `ಅಧಿಕಾರ'ವೆಂದು ಮೂರು ದಶಕಗಳಿಂದ ಹೇಳುತ್ತಲೇ ಬಂದರೂ, `ಬಟ್ಟೆ ಸರಿಯಾಗಿ ಹಾಕಿ ಕೊಳ್ಳದೆ ಅವೇಳೆಯಲ್ಲಿ ತಿರುಗಾಡಬೇಡಿ' ಎಂಬಂತಹ ಸವೆದು ಹೋದ ಮಾತುಗಳೇ ಮತ್ತೆ ಮತ್ತೆ ಚರ್ಚೆಯಲ್ಲಿ ಬರುತ್ತವೆ. ಮಹಿಳೆಯರ ಬದುಕು ಏನೇ ಬದಲಾವಣೆ ಕಾಣಲಿ, ತಮ್ಮ ಅಧಿಕಾರಕ್ಕೆ ಚ್ಯುತಿ ಬರಬಾರದು, ನಿರೀಕ್ಷೆಗಳಿಗೆ ಲೋಪವೇ ಬರಬಾರದು ಎಂಬುದು ಅವೆಷ್ಟು ಬಲವಾಗಿವೆ ಎಂದರೆ `ಮಹಿಳೆಯೇ ಶೋಷಕಿ' ಎಂದು ತಮ್ಮ ರಕ್ಷಣೆಗಾಗಿ ಸಮಿತಿ ಮಾಡಿಕೊಂಡಿರುವ ಪುರುಷರು ಸಹ ನಿರೀಕ್ಷೆಗಳ ಬೆಟ್ಟಗಳನ್ನು ಹೆಣ್ಣಿನ ಮೇಲೆ ಹೊರಿಸುತ್ತಾರೆ. `ಮನೆಗೆ ನಂದಾದೀಪವಾಗಬೇಕು', `ಸುಖ - ಸಂಸಾರ ಛಿದ್ರವಾಗಿದೆ', `ನನ್ನ ತಾಯಿಯನ್ನು ತನ್ನ ತಾಯಿಯಂತೆ ನೋಡಿಕೊಳ್ಳಲು ಮದುವೆಯಾದೆ' ಎಂಬ ಮಾತುಗಳು ಹೆಣ್ಣಿನ ಕುರಿತಾದ ನಿರೀಕ್ಷೆಗಳ ಭಾರವನ್ನು ಸೂಚಿಸುತ್ತವೆ. `ಶೋಷಕಿ'ಯರ ವಿರುದ್ಧ ಸಮರ ಸಾರಲು ಇಂತಹವರು ಮಹಿಳೆಯನ್ನೆ ಮುಂಚೂಣಿಯಲ್ಲಿಟ್ಟುಕೊಂಡಿರುವುದು ಸಹ ಒಂದು ತಂತ್ರವಾಗಿದೆ. ತಂತ್ರ ರಚನೆಯಲ್ಲಿ ಪುರುಷ ರಾಜಕಾರಣ ಅದೆಷ್ಟು ಪಳಗಿದೆ ಎಂದರೆ ಅದು ಅದರ ಉಸಿರೇ ಆಗಿದೆ. ಅಧಿಕಾರ, ಅಹಂ, ಪ್ರತಿಷ್ಠೆಯ ಪುರುಷ ರಾಜಕಾರಣಕ್ಕೆ ಹೆಣ್ಣು ಎಂದೂ ಸಹಜೀವಿಯಾಗಿ, ಸಹಜ ಜೀವಿಯಾಗಿ ಕಾಣುವುದೇ ಇಲ್ಲ. ಸಮಾನತೆ, ಸಹನೆ, ಸಹಬಾಳ್ವೆ ಬರೀ ನಾಲಿಗೆಯ ಜಪವಾಗಿದೆ. ಅನ್ನ, ಸೂರು, ಜ್ಞಾನ, ಸಂಪತ್ತು, ಅಧಿಕಾರವನ್ನು ಸಹ ಜೀವಿಗಳೊಂದಿಗೆ ಹಂಚಿ ಉಣ್ಣುವ ಆನಂದವೇ ತಿಳಿದಿಲ್ಲ ಏಕೆ? ಎದೆಯೊಳಗಿನ ಮೂಲ ಬೆಳಕ ನೆನಪು ಮಾಡಿಕೊಡುವುದು ಹೇಗೆ? ಗುಬ್ಬಚ್ಚಿ, ಕಾಗೆ, ಮಂಗಟ್ಟೆ, ಗಿಳಿ, ಕೋಗಿಲೆ, ನವಿಲು .... ಪಕ್ಷಿ ಲೋಕದ ಚೆಲ್ವ ಗಂಡುಗಳು ನೆನಪಾಗುತ್ತಿವೆ. ಇವುಗಳ ವಿಳಾಸ ಹುಡುಕಿ ಕೊಡಬೇಕು ಸಹಜೀವಿ ಪುರುಷರಿಗೆ. ಬರ್ಬರ ಹಿಂಸೆ ಬಿತ್ತಬಹುದಾದ ನಂಜನ್ನು ಜೀರ್ಣಿಸಿಕೊಳ್ಳಲು ಪದೇ ಪದೇ ಪ್ರಜ್ಞಾಪೂರ್ವಕವಾಗಿ ಕೆಲವೇ ಕೆಲವು `ತಾಯ್ತನ'ದ ಪುರುಷರ ನೆನಪು ಮಾಡಿಕೊಳ್ಳಬೇಕು. ಈ ಸಮಾಜದ ಭಾಗವೇ ಆಗಿ ಅದಕ್ಕೆ ತಗುಲಿರುವ ಕಾಯಿಲೆ ನಮಗೆ ತಗುಲದಂತೆ, ತಗುಲಿದ್ದರೆ ಸೂಕ್ತ ಪಥ್ಯ, ಮದ್ದು ಮಾಡಿಕೊಳ್ಳುವ ಎಚ್ಚರದೊಂದಿಗೆ ಪಯಣ ಮುಂದುವರೆಸಬೇಕು. ಮುಳ್ಳು, ಕತ್ತಲು ತುಂಬಿರುವ ದಾರಿಯಲಿ ಸಜ್ಜಾಗಬೇಕು, ಒಂದು ಜೊತೆ ಮೆಟ್ಟು, ಒಂದು ಮಿನುಗು ದೀಪದೊಂದಿಗೆ. ಸಿಕ್ಕ ತಿರಸ್ಕಾರ, ಅವಮಾನ, ತುಚ್ಛಭಾವಗಳ ಅರೆದರೆದು ದೀಪಕ್ಕೆ ಎಣ್ಣೆಯಾಗಿರಬೇಕು. ಹಿಂಸೆಯ ಕತ್ತಲಲಿ ಅಹಿಂಸೆಯ ಬೆಳಕಿನಂತಿರುವ ಇರೋಮ್ ಶರ್ಮಿಳಾ, ತನಗಾದ ಅನ್ಯಾಯವನ್ನೆ ಮುರಿದು ನಾಡಿನ ಮಹಿಳೆಯರಿಗೆಲ್ಲ ನ್ಯಾಯವಾಗಿಸಿದ ಭನ್ವರಿದೇವಿ, ನಾಶದೆದುರು ಬದುಕನ್ನು ಕಟ್ಟುತ್ತಲೇ ಬಂದಿರುವ ಅಸಂಖ್ಯಾತ ಸೋದರಿಯರ ಚೈತನ್ಯವೇ ಸಂಜೀವಿನಿ. ಅಧಿಕಾರ ಸಂಸ್ಕೃತಿಯನ್ನು ಮುರಿದು ಜೀವಪರ ಸಂಸ್ಕೃತಿಯನ್ನು ಕಟ್ಟಬೇಕಾಗಿರುವುದು ಇಂದಿನ ತುರ್ತು. ಅಂತಹದೊಂದು ಆಶಯದೊಂದಿಗೆ ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಸಲ ಹಿಂಸೆಯ ಬೀಡಾಗುತ್ತಿರುವ ಮಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಕರ್ನಾಟಕದ ಹಲವಾರು ಮಹಿಳಾ ಸಂಘಟನೆಗಳು ಒಗ್ಗೂಡಿ, ಸಮಾನ ಆಶಯವುಳ್ಳವರೆಲ್ಲರ ಸಹಕಾರ, ಬೆಂಬಲದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿಶಾಖ ಮಾರ್ಗದರ್ಶಿ ಸೂತ್ರಗಳಿಗೆ ಕಾರಣಕರ್ತರಾದ , ಸಾಮೂಹಿಕ ಅತ್ಯಾಚಾರದ ವಿರುದ್ಧ ದಿಟ್ಟತನದಿಂದ ಹೋರಾಡಿದ ಭನ್ವರಿದೇವಿ, ಮಹಾರಾಷ್ಟ್ರದ ದಲಿತ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಊರ್ಮಿಳಾ ಪವಾರ್ ಈ ಕಾರ್ಯಕ್ರಮದಲ್ಲಿರುತ್ತಾರೆ. ಜೊತೆಗೆ ಸಮಾನತೆ, ಸಹಬಾಳ್ವೆ ಆಶಯವಿರುವ ಎಲ್ಲ ಧರ್ಮ ಜಾತಿ, ಜಿಲ್ಲೆಯ ಅಸಂಖ್ಯಾತ ಮಹಿಳೆಯರು ಅಲ್ಲಿ ಸೇರಲಿದ್ದಾರೆ ಶಾಂತಿ, ಸಹನೆ, ಸಮಾನತೆಯ ಸಂದೇಶ ಸಾರಲು. ಬೇಡ ನಮಗೆ ಯಾವುದೇ ಪ್ರಾಧಾನ್ಯತೆ ಬೇಕು ನಮಗೆ ಸರ್ವರ ಸಮಾನತೆ ಎಲ್ಲ ರೀತಿಯ ಹಿಂಸೆ ಕೊನೆಯಾಗಲಿ ಶಾಂತಿ, ಸಹನೆ ಉಳಿಯಲಿ ನಿಮ್ಮ ಅನಿಸಿಕೆ ತಿಳಿಸಿ: @.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.