ಭ್ರಷ್ಟಾಚಾರ ತಡೆ ಯತ್ನ ಐಎಎಸ್ ಮತ್ತು ಇತರ ಕೇಂದ್ರ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ಚರ ಆಸ್ತಿಯ ವಿವರಗಳನ್ನು ಏಪ್ರಿಲ್ 20ರ ಒಳಗೆ ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲದಿದ್ದರೆ ಬಡ್ತಿ ತಡೆಯೂ ಸೇರಿದಂತೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಹೊಸ ಅಂಶಗಳೇನೂ ಇಲ್ಲ. ಇದು ಆಡಳಿತ ವ್ಯವಸ್ಥೆಯಲ್ಲಿರುವ ಸಾಮಾನ್ಯ ಕ್ರಮ. ಐಎಎಸ್ ಮತ್ತಿತರ ಕೇಂದ್ರ ಸೇವೆಯ ಅಧಿಕಾರಿಗಳಷ್ಟೇ ಅಲ್ಲ, ರಾಜ್ಯಗಳಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳೂ ಪ್ರತಿ ವರ್ಷ ತಮ್ಮ ಆಸ್ತಿಪಾಸ್ತಿಗಳ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು; ತಪ್ಪಿದರೆ ಶಿಕ್ಷೆ ಎಂಬ ಎಚ್ಚರಿಕೆಯೂ ಈಗಿನ ಸರ್ಕಾರಿ ನಿಯಮಗಳಲ್ಲಿದೆ. ಬಿಹಾರ ಮತ್ತು ಛತ್ತೀಸಗಢ ರಾಜ್ಯಗಳಿಗೆ ಸೇರಿದ ಐಎಎಸ್ ಹಾಗೂ ಇನ್ನಿತರ ಕೇಂದ್ರ ಸೇವೆಯ ಅಧಿಕಾರಿಗಳಿಗೆ ತಮ್ಮ ಆಸ್ತಿ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸುವುದಲ್ಲದೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ವೆಬ್‌ಸೈಟ್‌ಗಳಲ್ಲಿ ಹಾಕಲು ಸೂಚಿಸಿರುವುದರಿಂದ ಕೇಂದ್ರ ಸರ್ಕಾರವೂ ಈ ನಿಯಮವನ್ನು ಅನುಸರಿಸಿದೆ. ಜೊತೆಗೆ ಆಸ್ತಿವಿವರ ಸಲ್ಲಿಸದ ಅಧಿಕಾರಿಗಳ ಹೆಸರುಗಳನ್ನು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಹಾಗೂ ಬಡ್ತಿ ಸಂದರ್ಭದಲ್ಲಿ ಈ ಲೋಪವನ್ನು ಗಮನಿಸುವ ಎಚ್ಚರಿಕೆಯನ್ನೂ ನೀಡಿದೆ. ಭ್ರಷ್ಟಾಚಾರದ ಹಲವು ಹಗರಣಗಳು ಬಹಿರಂಗವಾಗಿ ಸರ್ಕಾರದ ಬಗ್ಗೆ ಜನತೆಯಲ್ಲಿ ತೀವ್ರ ಬಗೆಯ ಅಸಮಾಧಾನ ಉಂಟಾಗಿರುವ ಹಿನ್ನೆಲೆಯಲ್ಲಿ ಆಡಳಿತಾಂಗದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸಂದೇಶವನ್ನು ಸಾರುವುದಕ್ಕೆ ಈ ಆದೇಶ ಹೊರಟಿರುವಂತಿದೆ. ಅಖಿಲ ಭಾರತ ಸೇವೆಯ ಅಧಿಕಾರಿಗಳ ಆಸ್ತಿಪಾಸ್ತಿಯ ವಿವರ ಕೋರಿ ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಲ್ಲಿಸುತ್ತಿದ್ದ ಅರ್ಜಿಗಳನ್ನು ಇದುವರೆಗೆ ಕೇಂದ್ರ ಸರ್ಕಾರವೇ ರಹಸ್ಯಪಾಲನೆಯ ನೆಪ ಒಡ್ಡಿ ತಿರಸ್ಕರಿಸುತ್ತಿತ್ತು. ಭ್ರಷ್ಟಾಚಾರದ ವಿರುದ್ಧ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿ ಹೋರಾಟ ನಡೆಸುವ ಬಗ್ಗೆ ಸಾಮಾಜಿಕ ಕಾರ್ಯಕರ್ತರಲ್ಲಿ ಮೂಡುತ್ತಿರುವ ಜಾಗೃತಿಯನ್ನು ನಿರ್ಲಕ್ಷಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಈ ಆದೇಶದಿಂದ ಸ್ಪಷ್ಟವಾಗಿದೆ. ಅಧಿಕಾರಿಗಳ ಆಸ್ತಿ ಬಹಿರಂಗಪಡಿಸುವ ಕ್ರಮ ಭ್ರಷ್ಟಾಚಾರ ನಿಯಂತ್ರಣದಲ್ಲಿ ಒಂದು ಹೆಜ್ಜೆಯಷ್ಟೆ. ಅದೇ ಅಂತಿಮವಲ್ಲ. ಭ್ರಷ್ಟ ಅಧಿಕಾರಿಗಳು ತಮ್ಮ ಹೆಸರಲ್ಲಿ ಆಸ್ತಿ ಮಾಡಿಕೊಳ್ಳುವಷ್ಟು ದಡ್ಡರಲ್ಲ. ಅವರು ಹತ್ತಿರದ ಬಂಧುಗಳ ಹೆಸರಲ್ಲಿ ಬೇನಾಮಿಯಾಗಿ ಆಸ್ತಿ ಮಾಡಿಕೊಳ್ಳುವುದು ಸರ್ಕಾರಕ್ಕೂ ಗೊತ್ತಿಲ್ಲದ ಸಂಗತಿಯಲ್ಲ. ಭ್ರಷ್ಟರಿಗೆ ಜೈಲು ಶಿಕ್ಷೆ, ಅಕ್ರಮ ಆಸ್ತಿಯ ಮುಟ್ಟುಗೋಲು ಎಂಬಂಥ ಉಗ್ರಕ್ರಮಗಳು ಮಾತ್ರ ಅಧಿಕಾರಿಗಳನ್ನು ಭ್ರಷ್ಟಮಾರ್ಗದಿಂದ ಹಿಂಜರಿಯುವಂತೆ ಮಾಡಬಹುದು. ಸ್ವಜನ ಪಕ್ಷಪಾತ, ಕಾಯ್ದೆಯಲ್ಲಿನ ದುರ್ಬಲ ಅಂಶಗಳ ದುರುಪಯೋಗ, ರಾಜಕಾರಣಿಗಳ ಕೃಪಾಶ್ರಯದ ಆಸರೆಯ ಆಮಿಷಗಳು ಅಖಿಲ ಭಾರತ ಮಟ್ಟದ ಅಧಿಕಾರಿಗಳನ್ನೂ ಬಿಟ್ಟಿಲ್ಲ. ತಪ್ಪಿಗೆ ಕಠಿಣ ಶಿಕ್ಷೆ ಖಚಿತ ಎಂಬುದು ಸ್ಪಷ್ಟವಾದರೆ ಭ್ರಷ್ಟಾಚಾರಕ್ಕೆ ಆಸ್ಪದ ಕಡಿಮೆ. ಅಷ್ಟಕ್ಕೂ ಆಡಳಿತ ನಡೆಸುವ ಜನಪ್ರತಿನಿಧಿಗಳು ಭ್ರಷ್ಟಾಚಾರಕ್ಕೆ ವಿರುದ್ಧವಿದ್ದರೆ ಅವರ ಅಡಿಯಲ್ಲಿ ಕೆಲಸ ಮಾಡಬೇಕಿರುವ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಇರುತ್ತಾರೆ. ತಮಗಾಗಿ, ಪಕ್ಷದ ವೆಚ್ಚಕ್ಕಾಗಿ, ಚುನಾವಣೆಗಾಗಿ ಹಣ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡುವ ಜನಪ್ರತಿನಿಧಿಗಳಿದ್ದರೆ ಭ್ರಷ್ಟಾಚಾರ ನಿರ್ಮೂಲನ ಮರೀಚಿಕೆಯಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.