ಹೆಚ್ಚಿದ ಜನಸಂಖ್ಯೆ; ಇನ್ನು ಬೆಂಗಳೂರು ಬೆಳೆದದ್ದು ಸಾಕು! ಇದೀಗ 2011ರ ಜನಗಣತಿಯ ವಿವರಗಳು ನಿಧಾನವಾಗಿ ಪ್ರಕಟವಾಗುತ್ತಿವೆ. ಈ ಜನಗಣತಿಯಲ್ಲಿ ಮಾಹಿತಿಯ ಸಂಸ್ಕರಣವು ಶೀಘ್ರವಾಗಿ ನಡೆಯುತ್ತಿದೆ. ಜನಸಂಖ್ಯೆಯ ನಡೆಯನ್ನು ಅತ್ಯಂತ ಅಪಾಯಕಾರಿ ಸಂಗತಿಯಾಗಿ ಪರಿಭಾವಿಸಿಕೊಳ್ಳುವ ಪದ್ಧತಿಯೊಂದು ಅರ್ಥಶಾಸ್ತ್ರದಲ್ಲಿದೆ. ಆದರೆ ನಮ್ಮ ರಾಜ್ಯದ ಜನಸಂಖ್ಯೆಯ ನಡೆಯು ಆತಂಕಕಾರಿಯಾಗಿಲ್ಲ. ಈ ವಿಷಯ ಕುರಿತಂತೆ ಒಂದು ಪ್ರಸಿದ್ಧ ಪ್ರಬಂಧದಲ್ಲಿ ಅಮರ್ತ್ಯಸೆನ್ ‘ಜನಸಂಖ್ಯೆಯ ಬೆಳವಣಿಗೆಯ ಪರಿಣಾಮಗಳನ್ನು ಬಹಳ ಅತಿ ಮಾಡಿ ನೋಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಜನಸಂಖ್ಯೆಯ ನಡೆಯನ್ನು ಕುರಿತಂತೆ ಚರ್ಚೆ ಮಾಡುವಾಗ ಎಚ್ಚರದಿಂದಿರಬೇಕು. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಬೃಹತ್ ಅಂಕಿಅಂಶಗಳ ರಾಶಿಯನ್ನು ಸರಳವಾಗಿ ಮತ್ತು ಅಲ್ಪಕಾಲಾವಧಿಯಲ್ಲಿ ಸಂಸ್ಕರಿಸಿ ಫಲಿತಾಂಶಗಳನ್ನು ನೀಡಬಹುದಾಗಿದೆ. ಇದೀಗ ಕರ್ನಾಟಕದ 2011ರ ಜನಗಣತಿಯ ಮೊದಲ ಹಂತದ ಮಾಹಿತಿಯನ್ನು ಜನಗಣತಿ ನಿರ್ದೇಶನಾಲಯವು ಬಿಡುಗಡೆ ಮಾಡಿದೆ. ಇದು ತಾತ್ಪೂರ್ತಿಕ ಮಾಹಿತಿ. ಇಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ, ಸಾಕ್ಷರತೆ, ಲಿಂಗ ಅನುಪಾತ, 0-6 ವಯೋಮಾನದ ಸಂಖ್ಯೆ, ಲಿಂಗ ಸಂಬಂಧಗಳು ಮುಂತಾದ ವಿಷಯಗಳ ಮಾಹಿತಿಯನ್ನು ಜಿಲ್ಲಾವಾರು ಬಿಡುಗಡೆ ಮಾಡಲಾಗಿದೆ. ಕರ್ನಾಟಕವು ಜನಸಂಖ್ಯೆಯ ವಿಷಯದಲ್ಲಿ ಅತ್ಯಂತ ಪ್ರಗತಿಗಾಮಿ ರಾಜ್ಯವಾಗಿದೆ. ಜನಸಂಖ್ಯೆಗೆ ಸಂಬಂಧಿಸಿದಂತೆ ದಕ್ಷಿಣ ಭಾರತದ ರಾಜ್ಯಗಳ ನಡೆಗೆ ಸರಿಸಮನಾಗಿ ಕರ್ನಾಟಕವು ಉತ್ತಮ ಸಾಧನೆಯನ್ನು ಸಾಧಿಸಿಕೊಂಡಿದೆ. ನಮ್ಮ ಸಾಧನೆಗಳು: ಕಳೆದ ದಶಕದಲ್ಲಿ (2001-2011) ರಾಜ್ಯದ ಜನಸಂಖ್ಯೆಯ ವಾರ್ಷಿಕ ನಡೆಯ ಪ್ರಮಾಣ ಶೇ 1.56ರಷ್ಟಿದೆ. ಜನಸಂಖ್ಯೆಯ ನಡೆಯು 1991-2001ರಲ್ಲಿದ್ದ ವಾರ್ಷಿಕ ಪ್ರಮಾಣಕ್ಕಿಂತ (ಶೇ1.75) 2001-2011ರಲ್ಲಿ ಶೇ 0.19ರಷ್ಟು ಕಡಿಮೆಯಾಗಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆಯ ಪಾಲು 2001ರಲ್ಲಿ ಶೇ 5.14ರಷ್ಟಿದ್ದುದು 2011ರಲ್ಲಿ ಶೇ 5.05ಕ್ಕಿಳಿದಿದೆ. 2001 ರಿಂದ 2011ರ ಅವಧಿಯಲ್ಲಿ ಹೆಚ್ಚುವರಿಯಾಗಿ ಸೇರಿದ ಜನಸಂಖ್ಯೆ 82.80 ಲಕ್ಷ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 18.48 ಪಾಲು ಪಡೆದಿರುವ ಗುಲ್ಬರ್ಗ ವಿಭಾಗವು ರಾಜ್ಯದಲ್ಲಿ ಹೆಚ್ಚುವರಿಯಾಗಿ ಸೇರಿದ ಸಂಖ್ಯೆಯಲ್ಲಿ ಶೇ 21.26 ಪಾಲು ನೀಡಿದೆ. ಈ ಕಾರಣಕ್ಕೆ ಇರಬೇಕು ರಾಜ್ಯದ 30 ಜಿಲ್ಲೆಗಳ ಪೈಕಿ 2001 ರಿಂದ 2011ರ ಅವಧಿಯಲ್ಲಿ 26 ಜಿಲ್ಲೆಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಕಡಿಮೆಯಾಗಿದ್ದರೆ ಬೆಂಗಳೂರು ನಗರ, ಬಳ್ಳಾರಿ, ವಿಜಾಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರ ಅದು ಅಧಿಕವಾಗಿದೆ. ವಿಶೇಷ ಕಾರಣದ ಆಧಾರದ ಮೇಲೆ ಬೆಂಗಳೂರು ನಗರ ಜಿಲ್ಲೆಯನ್ನು ಬದಿಗಿಟ್ಟು ನೋಡಿದರೆ ಜನಸಂಖ್ಯೆಯ ಬೆಳವಣಿಗೆ ವಿಷಯದಲ್ಲಿ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವ ರಾಜ್ಯದ ಜಿಲ್ಲೆಗಳೆಂದರೆ ವಿಜಾಪುರ, ಬಳ್ಳಾರಿ ಮತ್ತು ಯಾದಗಿರಿ ಮಾತ್ರ. ಹದಿನೇಳು ಜಿಲ್ಲೆಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ 1ಕ್ಕಿಂತ ಕಡಿಮೆಯಿದೆ. ಮೈಸೂರು ವಿಭಾಗದ ಜನಸಂಖ್ಯೆ 2001ರಲ್ಲಿ 11.79 ಲಕ್ಷವಿದ್ದುದು 2011ರಲ್ಲಿ ಅದು 11.41 ಲಕ್ಷಕ್ಕೆ ಇಳಿದಿದೆ. ಇವೆಲ್ಲ ಶ್ಲಾಘನೀಯ ಸಾಧನೆಗಳಾಗಿವೆ. ರಾಷ್ಟ್ರಮಟ್ಟದಲ್ಲಿ ಲಿಂಗ ಅನುಪಾತವು 2001ರಲ್ಲಿ 933ರಷ್ಟಿದ್ದುದು 2011ರಲ್ಲಿ 940ಕ್ಕೇರಿದೆ. ಆದರೆ ನಮ್ಮ ರಾಜ್ಯದಲ್ಲಿ ಅದು 2001ರಲ್ಲಿ 965ರಷ್ಟಿದ್ದುದು 2011ರಲ್ಲಿ 968ಕ್ಕೇರಿದೆ. ಅಂದರೆ ಲಿಂಗ ಅನುಪಾತವು ಕರ್ನಾಟಕದಲ್ಲೂ ಕೆಳಮಟ್ಟದಲ್ಲಿದೆ. ಆದರೆ ಅದು ರಾಷ್ಟ್ರಮಟ್ಟದಲ್ಲಿರುವುದಕ್ಕಿಂತ ಉತ್ತಮವಾಗಿದೆ ಎಂಬುದು ಸಮಾಧಾನದ ಸಂಗತಿ. ರಾಷ್ಟ್ರಮಟ್ಟದಲ್ಲಿ 2011ರಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆಯು (3.57ಕೋಟಿ) ಒಟ್ಟು ಮಹಿಳೆಯರ (49.65ಕೊಟಿ) ಸಂಖ್ಯೆಯ ಶೇ 6.35ರಷ್ಟಿದ್ದರೆ ರಾಜ್ಯದಲ್ಲಿ 2011ರಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆಯು (9.85 ಲಕ್ಷ) ಅಲ್ಲಿನ ಒಟ್ಟು ಮಹಿಳೆಯರ ಸಂಖ್ಯೆಯ (300.73 ಲಕ್ಷ) ಶೇ 3.27ರಷ್ಟಿದೆ. ಇದು ಒಂದು ಉತ್ತಮವಾದ ಸಂಗತಿಯಾಗಿದೆ. ಅತ್ಯಂತ ಮೆಚ್ಚುಗೆಯ ಸಂಗತಿಯೆಂದರೆ ಐದು ಜಿಲ್ಲೆಗಳಲ್ಲಿ (ಉಡುಪಿ, ಕೊಡಗು, ದಕ್ಷಿಣ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು) ಲಿಂಗ ಅನುಪಾತವು ಸಾವಿರಕ್ಕಿಂತ ಅಧಿಕವಾಗಿದೆ. ನಿಜಕ್ಕೂ ಇದು ಇರಬೇಕಾದ ಲಿಂಗ ಅನುಪಾತ. ರಾಜ್ಯವು ಜನಸಂಖ್ಯೆಯ ಗತಿಶೀಲತೆಗೆ ಸಂಬಂಧಿಸಿದಂತೆ ಮಾಡಿರುವ ಸಾಧನೆಯೆಂದರೆ ಜನಸಂಖ್ಯೆಯಲ್ಲಿ 0-6 ವಯೋಮಾನದ ಮಕ್ಕಳ ಸಂಖ್ಯೆಯು ತೀವ್ರ ಗತಿಯಲ್ಲಿ ಕಡಿಮೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿ 0-6 ವಯೋಮಾನದ ಮಕ್ಕಳ ಸಂಖ್ಯೆಯು 1991ರಲ್ಲಿ 74.77 ಲಕ್ಷವಿದ್ದುದು 2001ರಲ್ಲಿ 71.82 ಲಕ್ಷಕ್ಕೆ ಮತ್ತೆ 2011ರಲ್ಲಿ ಅದು 68.55 ಲಕ್ಷಕ್ಕೆಇಳಿದಿದೆ. ಒಟ್ಟು ಜನಸಂಖ್ಯೆಯಲ್ಲಿ ಅವರ ಪ್ರಮಾಣ 2001ರಲ್ಲಿ ಶೇ 13.59 ರಷ್ಟಿದ್ದುದು 2011ರಲ್ಲಿ ಶೇ 11.21ಕ್ಕೆ ಇಳಿದಿದೆ. ಜನಸಂಖ್ಯಾಶಾಸ್ತ್ರದಲ್ಲಿ 0-6 ವಯೋಮಾನದ ಮಕ್ಕಳ ಪ್ರಮಾಣದಲ್ಲಿನ ಕಡಿತವನ್ನು ಒಟ್ಟು ಸಂತಾನೋತ್ಪತ್ತಿ ಪ್ರಮಾಣದ ಕಡಿತದ ಸೂಚಿಯನ್ನಾಗಿ ಗುರುತಿಸಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಅದರ ಪ್ರಮಾಣ 2011ರಲ್ಲಿ ಶೇ13.12ರಷ್ಟಿದೆ. ಸಾಕ್ಷರತೆಯಲ್ಲಿ ರಾಜ್ಯದ ಸಾಧನೆಯು ರಾಷ್ಟ್ರಮಟ್ಟಕ್ಕಿಂತ ಯಾವಾಗಲೂ ಉತ್ತಮವಾಗಿದೆ. ಪ್ರಸ್ತುತ 2011ರಲ್ಲಿ ರಾಜ್ಯದ ಒಟ್ಟು ಸಾಕ್ಷರತೆಯು ಶೇ 75.6ರಷ್ಟಿದ್ದರೆ ರಾಷ್ಟ್ರಮಟ್ಟದಲ್ಲಿ ಅದು ಶೇ 74.04ರಷ್ಟಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಸಾಕ್ಷರತೆಯ ಪ್ರಮಾಣವು ರಾಜ್ಯಮಟ್ಟದ ಸಾಕ್ಷರತೆಯ ಪ್ರಮಾಣಕ್ಕಿಂತ (ಶೇ 75.60) ಅಧಿಕವಿದೆ. ಇಲ್ಲಿನ ದುರಂತವೆಂದರೆ ಈ 12 ಜಿಲ್ಲೆಗಳ ಗುಂಪಿನಲ್ಲಿ ಗುಲಬರ್ಗ ವಿಭಾಗದ ಒಂದೂ ಜಿಲ್ಲೆ ಸೇರಿಲ್ಲ. ಗುಲಬರ್ಗ ವಿಭಾಗದ ಆರೂ ಜಿಲ್ಲೆಗಳಲ್ಲಿ ಸಾಕ್ಷರತಾ ಪ್ರಮಾಣವು ರಾಜ್ಯ ಸರಾಸರಿಗಿಂತ ಕೆಳಮಟ್ಟದಲ್ಲಿದೆ. ನಮ್ಮ ರಾಜ್ಯದ ಬಾಗಲಕೋಟೆ, ವಿಜಾಪುರ, ಬಳ್ಳಾರಿ, ಕೊಪ್ಪಳ, ಗುಲಬರ್ಗ, ರಾಯಚೂರು, ಯಾದಗಿರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆಯು ಶೇ 60 ಕ್ಕಿಂತ ಕಡಿಮೆಯಿದೆ. ರಾಷ್ಟ್ರಮಟ್ಟದಲ್ಲಿ ಸಾಕ್ಷರತೆಯಲ್ಲಿನ ಲಿಂಗ ಸಂಬಂಧಿ ಅಸಮಾನತೆಯು 2011ರಲ್ಲಿ ಶೇ16.68 ಅಂಶಗಳಷ್ಟಿದ್ದರೆ ರಾಜ್ಯದಲ್ಲಿ ಅದು ಕೇವಲ ಶೇ 14.67 ಅಂಶಗಳಷ್ಟಿದೆ. ಆದರೆ ಒಟ್ಟು ಅಕ್ಷರಸ್ಥರಲ್ಲಿ (410.31ಲಕ್ಷ) ಪುರುಷರ ಪ್ರಮಾಣ ಶೇ 55.58 ರಷ್ಟಿದ್ದರೆ ಅನಕ್ಷರಸ್ಥರಲ್ಲಿ ಅವರ ಪ್ರಮಾಣ ಶೇ 35.56. ಆದರೆ ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ 44.44ರಷ್ಟಿದ್ದರೆ ಅನಕ್ಷರಸ್ಥರಲ್ಲಿ ಅವರ ಪ್ರಮಾಣ ಶೇ 64.26ರಷ್ಟಿದೆ. ಇಲ್ಲಿರುವ ತಾರತಮ್ಯದ ಸ್ವರೂಪವನ್ನು ನಾವು ಗಮನಿಸಬೇಕು. ಆತಂಕಕಾರಿ ಸಂಗತಿಗಳು: ಬೆಂಗಳೂರು ನಗರದ ಮಿತಿಮೀರಿದ ಬೆಳವಣಿಗೆಯು ಅಪಾಯಕಾರಿ ಸಂಗತಿಯಾಗಿದೆ. ಇಡೀ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅದರ ಪಾಲು 2001ರಲ್ಲಿ (65.37ಲಕ್ಷ) ಶೇ 12.36ರಷ್ಟಿದ್ದುದು 2011ರಲ್ಲಿ ಅದರ ಪಾಲು (95.89 ಲಕ್ಷ) ಶೇ15.68ಕ್ಕೆ ಏರಿದೆ. ರಾಜ್ಯದ ಪ್ರತಿ ಆರು ಕರ್ನಾಟಕಸ್ಥರಲ್ಲಿ ಒಬ್ಬರು ಬೆಂಗಳೂರಿನವರಾಗಿದ್ದಾರೆ. ರಾಜ್ಯಮಟ್ಟದ ಜನಸಾಂದ್ರತೆಯು 319ರಷ್ಟಿದ್ದರೆ ಬೆಂಗಳೂರು ನಗರ ಜಿಲ್ಲೆಯಲ್ಲಿನ ಜನಸಾಂದ್ರತೆಯು 4378. ಅಲ್ಲಿನ ಜನಸಂಖ್ಯೆಯು 2001-2011ರ ಅವಧಿಯಲ್ಲಿ ವಾರ್ಷಿಕ ಶೇ 4.67ರ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ರಾಜ್ಯ ಸರಾಸರಿ ಬೆಳವಣಿಗೆ ಪ್ರಮಾಣವಾದ ಶೇ 1.56ಕ್ಕಿಂತ ಇದು ಬಹಳಷ್ಟು ಅಧಿಕವಾಗಿದೆ. ಇನ್ನು ಬೆಂಗಳೂರು ಬೆಳೆದದ್ದು ಸಾಕು! ಈ ಜನಗಣತಿಯ ಒಂದು ಅತಿ ಮುಖ್ಯ ಸಂದೇಶವೇನೆಂದರೆ ಬೆಂಗಳೂರು ನಗರದ ಬೆಳವಣಿಗೆಯನ್ನು ತಡೆಯಬೇಕು ಎಂಬುದಾಗಿದೆ. ಈ ನಗರದ ಧಾರಣಾ ಸಾಮರ್ಥ್ಯವು ಬರಿದಾಗುತ್ತಿದೆ. ಈ ಸಂಗತಿಯನ್ನೇ ಜನಗಣತಿ ನಮಗೆ ತಿಳಿಸುತ್ತಿದೆ. ಇದರಿಂದ ನಾವು ಪಾಠ ಕಲಿಯಬಹುದಾಗಿದೆ. ಎರಡನೆಯ ಆತಂಕಕಾರಿ ಸಂಗತಿಯೆಂದರೆ ನಮ್ಮ ಜನಸಂಖ್ಯೆಯ ಪ್ರ್ರಾದೇಶಿಕ ಸ್ವರೂಪ. ಯಾದಗಿರಿ ಜಿಲ್ಲೆಯಲ್ಲಿನ ಸಾಕ್ಷರತಾ ಪ್ರಮಾಣವು (ಶೇ 52.36) ಉಡುಪಿ ಜಿಲ್ಲೆಯ ಸಾಕ್ಷರತಾ ಪ್ರಮಾಣದ (ಶೇ 86.29) ಶೇ 60.67ರಷ್ಟಿದೆ. ರಾಜ್ಯಮಟ್ಟದಲ್ಲಿ ಜನಸಂಖ್ಯೆಯ ನಡೆಯ ಪ್ರಮಾಣ ವಾರ್ಷಿಕ ಶೇ 1.56ರಷ್ಟಿದ್ದರೆ ಯಾದಗಿರಿಯಲ್ಲಿ ಅದು ಶೇ 2.27ರಷ್ಟಿದೆ. ಅದೇ ರೀತಿಯಲ್ಲಿ ಬಳ್ಳಾರಿ ಮತ್ತು ವಿಜಾಪುರ ಜಿಲ್ಲೆಗಳಲ್ಲೂ ಅದು ಕ್ರಮವಾಗಿ ಶೇ 2.49 ಮತ್ತು ಶೇ 2.04ರಷ್ಟಿದೆ. ರಾಜ್ಯದ 26 ಜಿಲ್ಲೆಗಳಲ್ಲಿ 2001 ಕ್ಕೆ ಹೋಲಿಸಿದರೆ 2011ರಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಕಡಿಮೆಯಾಗಿದ್ದರೆ ಯಾದಗಿರಿ, ಬಳ್ಳಾರಿ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಮಾತ್ರ ಅದು ಅಧಿಕಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಅದು ಅಧಿಕಗೊಂಡಿದೆ. ಆದರೆ ಅಲ್ಲಿನ ಸಮಸ್ಯೆಯು ವಲಸೆಯದಾಗಿದೆ. ಮಹಿಳೆಯರ ಸಾಕ್ಷರತಾ ಪ್ರಮಾಣ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೇ 50 ಮೀರಿಲ್ಲ. ನೀತಿ ನಿರ್ದೇಶನ: ಜನಸಂಖ್ಯೆಯ ನಡೆಗೆ ಸಂಬಂಧಿಸಿದ ಪ್ರಾದೇಶಿಕ ಸಂಗತಿಯನ್ನು ನಾವು ಗಂಭೀರವಾಗಿ ಗಮನಿಸಬೇಕಾಗುತ್ತದೆ. ವಿಜಾಪುರ, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ಮಹಿಳಾ ಸಾಕ್ಷರತೆಯು ಕಡಿಮೆಯಿರುವುದಕ್ಕೂ ಮತ್ತು ಅಲ್ಲಿ ಜನಸಂಖ್ಯೆಯು ಅಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದಕ್ಕೂ ಸಂಬಂಧವಿದೆ. ಡಿಎಲ್‌ಎಚ್ ಸಮೀಕ್ಷೆ ಪ್ರಕಾರ 2007-08ರಲ್ಲಿ ವಿಜಾಪುರ ಜಿಲ್ಲೆಯಲ್ಲಿ ಹದಿನೆಂಟು ವರ್ಷ ತುಂಬುವುದರೊಳಗೆ ಮದುವೆಯಾಗುವ ಹೆಣ್ಣು ಮಕ್ಕಳ ಪ್ರಮಾಣ ಶೇ 43.1. ಈ ಪ್ರಮಾಣ ಗುಲಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೇ 41.60ರಷ್ಟಿದೆ. ಇದರ ಪ್ರಮಾಣ ಬಳ್ಳಾರಿ ಜಿಲ್ಲೆಯಲ್ಲಿ ಶೇ 36.3ರಷ್ಟಿದೆ. ಜನಸಂಖ್ಯೆಯ ಸಮಸ್ಯೆಯೆಂದರೆ ಕೇವಲ ಅದು ಜನನ ಪ್ರಮಾಣಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಪ್ರಾದೇಶಿಕ ಅಸಮತೋಲನವೆಂದರೆ ಅದು ಕೇವಲ ಆರ್ಥಿಕವಾದ ಸಂಗತಿಯಲ್ಲ. ಅದಕ್ಕೆ ಲಿಂಗ ಸಂಬಂಧಿ ಆಯಾಮವಿರುತ್ತದೆ. ಅಲ್ಲಿ ದುಡಿಮೆಗಾರರ ರಚನೆಯ ಪ್ರಶ್ನೆಯಿರುತ್ತದೆ. ಉದಾಹರಣೆಗೆ, ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲೆಲ್ಲ ಭೂ ರಹಿತ ದಿನಗೂಲಿ ದುಡಿಮೆಗಾರರ ಪ್ರಮಾಣ ರೂಢಿಗತ ಮಟ್ಟಕ್ಕಿಂತ ಅಧಿಕವಾಗಿರುತ್ತದೆ. ರಾಜ್ಯದಲ್ಲಿ ಇದರ ಪ್ರಮಾಣ 2001ರಲ್ಲಿ ಶೇ 26ರಷ್ಟಿದ್ದರೆ ಹಿಂದುಳಿದ ಜಿಲ್ಲೆಗಳಲ್ಲಿ ಅದು ಶೇ40ರಷ್ಟಿದೆ. ನಮ್ಮ ರಾಜ್ಯದ 2011ರ ಜನಗಣತಿ ಮಾಹಿತಿಯು ನಮಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ತಿಳಿಸಬಲ್ಲದು. ಈಗ ದುಡಿಮೆಗಾರರ ರಚನೆಯ 2011ರ ವಿವರಗಳಿನ್ನೂ ಪ್ರಕಟವಾಗಿಲ್ಲ. ಮೆಹಬೂಬ್ ಉಲ್ ಹಕ್ 1990ರಲ್ಲಿ ಹೇಳಿದ ‘ವರಮಾನವೇ ಜನರ ಬದುಕಿನ ಮೊತ್ತವಲ್ಲ’ ಎಂಬ ಹೇಳಿಕೆಯಿಂದ ನಾವು ಪಾಠ ಕಲಿಯಬೇಕಾಗಿದೆ. ಉದಾಹರಣೆಗೆ ವಿಜಾಪುರ ಜಿಲ್ಲೆಯ ಒಟ್ಟು ತಲಾ ಆಂತರಿಕ ಉತ್ಪನ್ನ 2007-08ರಲ್ಲಿ ಹಾಸನ ಜಿಲ್ಲೆಯ ಒಟ್ಟು ತಲಾ ಆಂತರಿಕ ಉತ್ಪನ್ನಕ್ಕಿಂತ ಅಧಿಕವಿದೆ ಮತ್ತು ಬಳ್ಳಾರಿ ಜಿಲ್ಲೆಯ ತಲಾ ವರಮಾನವು ಉಡುಪಿ ಜಿಲ್ಲೆಯ ತಲಾ ವರಮಾನಕ್ಕಿಂತ ಅಧಿಕವಿದೆ. ಆದರೆ ವಿಜಾಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಜನರ ಬದುಕು, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಜನರ ಬದುಕಿನ ಮಟ್ಟಕ್ಕೆ ಹೋಲಿಸಿದರೆ ಅತ್ಯಂತ ದುಃಸ್ಥಿತಿಯಲ್ಲಿದೆ. ಇದನ್ನು ಜನಸಂಖ್ಯೆಯ ಅನೇಕ ಸೂಚಿಗಳು ತೋರಿಸುತ್ತವೆ. ಜನಸಂಖ್ಯಾ ಬೆಳವಣಿಗೆ, ಸಾಕ್ಷರತೆ, ಲಿಂಗ ಅನುಪಾತ, ಸಂತಾನೋತ್ಪತ್ತಿ ಆರೋಗ್ಯ, ನಗರೀಕರಣ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನೀತಿ ರೂಪಿಸುವಾಗ ನಾವು ಅವುಗಳ ಪ್ರಾದೇಶಿಕತೆ, ಲಿಂಗ ಸಂಬಂಧಿ ನೆಲೆಗಳು ಮತ್ತು ದಲಿತರ ಬವಣೆ ಮುಂತಾದವುಗಳನ್ನು ಅವಶ್ಯ ಗಮನಿಸಬೇಕಾಗುತ್ತದೆ. ಜನಗಣತಿ ಮಾಹಿತಿ ಆಧಾರದಿಂದ ನಮ್ಮ ಅಭಿವೃದ್ಧಿ ನೀತಿಯನ್ನು ಪುನಾರಚಿಸಿಕೊಳ್ಳಬೇಕಾಗುತ್ತದೆ. (ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.