ಕೇರಳದಲ್ಲಿ ಅಮಾನವೀಯತೆ ದೇಶದಲ್ಲಿಯೇ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದ ಮೊದಲ ರಾಜ್ಯ ಕೇರಳ. ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ಸಮಾನತೆಯ ಆದರ್ಶ ತತ್ವಗಳು ಅಲ್ಲಿ ನೆಲೆಗೊಂಡಿದ್ದ ಕಾರಣ ದೇಶದಲ್ಲಿಯೇ ಮೊಟ್ಟಮೊದಲ ಕಮುನಿಸ್ಟ್ ಸರ್ಕಾರ ಅಲ್ಲಿ ಪ್ರಜಾಪ್ರಭುತ್ವದ ತತ್ವಗಳ ಆಧಾರದಲ್ಲಿ ರಚನೆಯಾಗಿತ್ತು. ಕೇರಳ ನೈಸರ್ಗಿಕ ಸೌಂದರ್ಯದ ಕಾರಣದಿಂದ ದೇವರ ಸ್ವಂತ ನಾಡು ಎಂಬ ಪ್ರಸಿದ್ಧಿಯನ್ನೂ ಪಡೆದಿದೆ. ಆದರೆ ಸಾಕ್ಷರತೆಯ ಸಾಧನೆಯಾಗಲೀ, ತಾತ್ವಿಕ ಪ್ರತಿಪಾದನೆಯಾಗಲೀ, ಪ್ರವಾಸಿ ಆಕರ್ಷಣೆಯ ಸೌಂದರ್ಯವಾಗಲೀ ಜನರ ಮಾನವೀಯ ನಡವಳಿಕೆಯಲ್ಲಿ ಸುಧಾರಣೆ ತರುತ್ತಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಶೈಕ್ಷಣಿಕ ಉನ್ನತಿ, ಪಾರಂಪರಿಕ ಕರ್ಮಠ ವರ್ತನೆಯನ್ನು ಬದಲಿಸಲಾರದು ಎಂಬುದಕ್ಕೆ ದಲಿತ ಅಧಿಕಾರಿಯೊಬ್ಬರ ಕಚೇರಿ, ಪೀಠೋಪಕರಣ ಮತ್ತು ಅವರು ಬಳಸುತ್ತಿದ್ದ ವಾಹನವನ್ನು, ಅವರ ನಿವೃತ್ತಿಯ ನಂತರ, ಸೆಗಣಿ ನೀರಿನಿಂದ ‘ಪರಿಶುದ್ಧ’ಗೊಳಿಸಿದ ಘಟನೆ ನಿದರ್ಶನ. ಆಡಳಿತ ವ್ಯವಸ್ಥೆಯಲ್ಲಿ ಹೀಗೆ ಅಸ್ಪೃಶ್ಯತೆಯನ್ನು ಆಚರಿಸಿದ ರೀತಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ನೋಂದಣಿ ಇಲಾಖೆಯ ಮಹಾನಿರೀಕ್ಷಕ (ಐಜಿ) ಹುದ್ದೆಗೆ ಏರಿದ್ದ ದಲಿತ ಅಧಿಕಾರಿಯ ಕುರಿತಾಗಿ ಇತರ ಸಮುದಾಯದ ನೌಕರರಲ್ಲಿ ಈ ಬಗೆಯ ಅಸ್ಪೃಶ್ಯತೆಯ ಭಾವನೆ ಇದ್ದರೆ ಸಾಮಾನ್ಯ ನೌಕರಿಯಲ್ಲಿರುವ, ಇಲ್ಲವೇ ನೌಕರಿಯ ಭದ್ರತೆ ಇಲ್ಲದ ದಲಿತರ ಪಾಡು ಊಹೆಗೂ ನಿಲುಕದ ಸಂಗತಿ. ಸ್ವಾತಂತ್ರ್ಯ ಗಳಿಸಿದ ಆರು ದಶಕಗಳ ನಂತರವೂ ಸಮಾನತೆಯ ತತ್ವವಾಗಲೀ, ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿ ಅದನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಿದ ಕಾಯ್ದೆಯ ಅಂಶಗಳಾಗಲೀ ಕೇರಳದ ಸುಶಿಕ್ಷಿತ ನೌಕರ ವರ್ಗದ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ. ದಲಿತರ ಕುರಿತಾದ ಇಂಥ ಅವಹೇಳನಕಾರಿ ವರ್ತನೆ ಕೇರಳಕ್ಕೆ ಸೀಮಿತವಾದದ್ದಲ್ಲ. ಅಪಮಾನಕ್ಕೆ ಒಳಗಾದ ನಿವೃತ್ತ ಅಧಿಕಾರಿ ಎ.ಕೆ. ರಾಮಕೃಷ್ಣನ್ ನೀಡಿದ ದೂರನ್ನು ಸ್ವೀಕರಿಸಿದ ಕೇರಳದ ರಾಜ್ಯ ಮಾನವ ಹಕ್ಕು ಆಯೋಗ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಸರ್ಕಾರದ ಇಲಾಖೆಯೊಂದರಲ್ಲಿ ನಡೆದ ಅಸ್ಪೃಶ್ಯತೆಯ ಆಚರಣೆಯನ್ನು ಅದು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕಾಗಿದೆ. ಸುಶಿಕ್ಷಿತರಿಂದ ಆಗುವ ಇಂಥ ಅಸ್ಪೃಶ್ಯತಾ ಆಚರಣೆ ಗ್ರಾಮೀಣ ಭಾಗದಲ್ಲಿ ಅಶಿಕ್ಷಿತರಿಂದ ನಡೆಯುವ ದಲಿತರ ವಿರುದ್ಧದ ದೌರ್ಜನ್ಯಕ್ಕಿಂತ ಹೇಯವಾದದ್ದು. ಪ್ರಜ್ಞಾಪೂರ್ವಕವಾಗಿ ನಡೆಯುವ ಈ ಹೇಯ ಅಪರಾಧ ಎಸಗಿದ ನೌಕರರನ್ನು ಶಿಕ್ಷೆಗೆ ಒಳಪಡಿಸುವುದು ಸರ್ಕಾರದ ಕರ್ತವ್ಯ. ಅಭಿವೃದ್ಧಿ ಚಿಂತನೆಯ ಎಡ ಪಕ್ಷಗಳ ಕೂಟ ಅಧಿಕಾರದಲ್ಲಿದ್ದಾಗಲೂ ಇಂಥ ಕೃತ್ಯಗಳಿಗೆ ಅವಕಾಶವಾಗಿರುವುದು ಆಶ್ಚರ್ಯಕರ. ಮಾನವ ಹಕ್ಕು ಆಯೋಗ ತನಿಖೆಗೆ ಕೈಗೆತ್ತಿಕೊಂಡಿದ್ದರೂ ಘಟನೆ ನಡೆದ ಸ್ಥಳಕ್ಕೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಸ್ವಯಂ ಪ್ರೇರಣೆಯಿಂದ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸುವ ಹೊಣೆ ಸರ್ಕಾರದ ಮೇಲಿದೆ. ಈ ಮೂಲಕ ಯಾವುದೇ ಬಗೆಯ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ಸರ್ಕಾರ ನೀಡಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.