ಆಸ್ಪತ್ರೆಗಳಿಗೆ ಆಗಬೇಕಿದೆ ಚಿಕಿತ್ಸೆ ರಾಜ್ಯದಲ್ಲಿನ ಉನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಅವುಗಳ ಅಧೀನದಲ್ಲಿರುವ ಆಸ್ಪತ್ರೆಗಳ ಪರಿಸ್ಥಿತಿ ಮತ್ತು ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎನ್ನುವ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿವೆ. ಅಲ್ಲಿನ ಪರಿಸ್ಥಿತಿಯನ್ನು ಉತ್ತಮಪಡಿಸಬೇಕೆನ್ನುವ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಅವರ ಪ್ರಯತ್ನವನ್ನು ಮೆಚ್ಚಲೇಬೇಕು. ಮೈಸೂರು ಕೆ.ಆರ್. ಆಸ್ಪತ್ರೆ, ಬೆಂಗಳೂರಿನ ವಾಣಿ ವಿಲಾಸ, ವಿಕ್ಟೋರಿಯಾ, ಕಿದ್ವಾಯಿ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡಿ ಅಲ್ಲಿನ ಔಷಧೋಪಚಾರ ಮತ್ತು ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ್ದಾರೆ. ಆದರೆ ಈ ಯಾವುದೇ ಆಸ್ಪತ್ರೆಗಳ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲದಿರುವುದು ದುರದೃಷ್ಟಕರ. ರೋಗಿಗಳ ಬಗೆಗೆ ದಿವ್ಯ ನಿರ್ಲಕ್ಷ್ಯ, ಔಷಧಗಳ ಕೊರತೆ, ಶುಚಿತ್ವ ಇಲ್ಲದಿರುವುದು ಕಂಡು ಬಂದಿದೆ. ಇದೆಲ್ಲವನ್ನೂ ನಿರ್ವಹಿಸಬೇಕಾದ ಸಿಬ್ಬಂದಿಯಲ್ಲಿ ಅಶಿಸ್ತು ಮನೆ ಮಾಡಿದ್ದು, ಹೆಚ್ಚಾಗಿ ಮೇಲಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಗೈರು ಪತ್ತೆಯಾಗಿದೆ. ಕಳೆದ ವಾರ ಸಚಿವರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ನಿರ್ದೇಶಕರು ಸೇರಿದಂತೆ 38 ಮಂದಿ ಗೈರು ಆಗಿದ್ದುದನ್ನು ಪತ್ತೆಹಚ್ಚಿ, ನವಜಾತ ಶಿಶುಗಳನ್ನು ಹೆತ್ತವರಿಗೆ ತೋರಿಸಲು ಹಣ ಕೀಳುತ್ತಿದ್ದ ಆರೋಪದ ಮೇಲೆ ನಾಲ್ವರು ಆಯಾಗಳ ಅಮಾನತು ಸೇರಿದಂತೆ ಅವರು ಶಿಸ್ತು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಕಿಮ್ಸ್ ಮತ್ತು ಅದರ ವ್ಯಾಪ್ತಿಯಲ್ಲಿರುವ ಆಸ್ಪತ್ರೆ ಹಲವಾರು ವರ್ಷಗಳಿಂದ ಸರ್ಕಾರ ಮತ್ತು ವೈದ್ಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಲ್ಲಿನ ವೈದ್ಯರಿಗೆ ತಾವು ಕೆಲಸ ಮಾಡುವ ಆಸ್ಪತ್ರೆಗಿಂತ ಹೊರಗಡೆ ದುಡಿಮೆಯಲ್ಲಿನ ಆಸಕ್ತಿಯೇ ಹೆಚ್ಚು. ಬೆಂಗಳೂರು ಕಡೆಯಿಂದ ವರ್ಗಾವಣೆಗೊಂಡವರಂತೂ ಮತ್ತೆ ಬೆಂಗಳೂರಿಗೆ ವಾಪಸ್ ಹೋಗಲು ವಿಧಾನಸೌಧವನ್ನು ಸುತ್ತುವುದರಲ್ಲೇ ಕಾಲಕಳೆಯುತ್ತಾರೆ ಎನ್ನುವ ಆರೋಪಗಳಿವೆ. ಜೊತೆಗೆ ಅಲ್ಲಿ ಹಾಸಿಗೆ, ಔಷಧಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವುಗಳ ತನಿಖೆ ನಡೆಸುವುದಾಗಿ ಸಚಿವರು ಘೋಷಿಸಿದ್ದಾರೆ. ಆದರೆ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿರುವ ಉದಾಹರಣೆ ಅಷ್ಟಾಗಿ ಕಾಣುವುದಿಲ್ಲ. ಸಚಿವರು ಉತ್ಸಾಹದಿಂದ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಷ್ಟೇ ಸಾಲದು. ಪರಿಶೀಲನೆ ವೇಳೆ ಕಂಡು ಬರುವ ಲೋಪ ದೋಷಗಳನ್ನು ಸರಿಮಾಡುವತ್ತಲೂ ಹೆಚ್ಚು ಮುತುವರ್ಜಿ ವಹಿಸಬೇಕಿದೆ. ಉನ್ನತ ವೈದ್ಯಕೀಯ ಶಿಕ್ಷಣ ವ್ಯಾಪ್ತಿಯ ದೊಡ್ಡ ಆಸ್ಪತ್ರೆಗಳ ಸ್ಥಿತಿಯೇ ಶೋಚನೀಯವಾಗಿದ್ದರೆ, ಇನ್ನು ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟದ ಸಾರ್ವಜನಿಕ ಆಸ್ಪತ್ರೆಗಳ ಸ್ಥಿತಿಯನ್ನಂತೂ ಕೇಳುವಂತಿಲ್ಲ. ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಹಲವು ಆರೋಗ್ಯ ಕಾರ್ಯಕ್ರಮಗಳು ಸದಾ ಜಾರಿಯಲ್ಲಿರುತ್ತವೆ. ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಆಸ್ಪತ್ರೆಗಳಿಗೆ ಹಣ ನೀಡಿದರಷ್ಟೇ ಸಾಲದು. ಅವುಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ, ಸರ್ಕಾರದ ನಿರೀಕ್ಷೆಯಂತೆ ಜನರಿಗೆ ಆರೋಗ್ಯ ಸೌಲಭ್ಯ ಸಿಗುತ್ತಿದೆಯೇ ಎಂದು ನೋಡಿಕೊಳ್ಳಬೇಕಿದೆ. ಇದನ್ನೆಲ್ಲ ನೋಡಿಕೊಳ್ಳಬೇಕಾದ ಆರೋಗ್ಯ ಸಚಿವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದೇ ಜನರಿಗೆ ತಿಳಿಯದಾಗಿದೆ. ಇದು ನಿಜಕ್ಕೂ ವಿಪರ್ಯಾಸ. ಒಟ್ಟಾರೆ ಈ ಇಲಾಖೆ ಮತ್ತು ರೋಗಪೀಡಿತ ಆಸ್ಪತ್ರೆಗಳಿಗೇ ತುರ್ತಾಗಿ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.