ಸಾತ್ವಿಕ ಹೋರಾಟದ ಗೆಲುವು ಉನ್ನತ ಸ್ಥಾನಗಳಲ್ಲಿನ ಭ್ರಷ್ಟಾಚಾರ ತನಿಖೆಗೆ ಬಲಿಷ್ಠ ಲೋಕಪಾಲ ವ್ಯವಸ್ಥೆ ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಕಿದ ಸಾತ್ವಿಕ ಒತ್ತಾಯಕ್ಕೆ ಫಲ ಸಿಕ್ಕಿದೆ. ‘ಸಿವಿಲ್ ಸೊಸೈಟಿ’ ಸಂಘಟಿಸಿದ ಹೋರಾಟದಲ್ಲಿ ಅಣ್ಣಾ ಹಜಾರೆಯವರ ಅನಿರ್ದಿಷ್ಟ ನಿರಶನ ಮೂಡಿಸಿದ ಸಂಚಲನ ಈಚಿನ ವರ್ಷಗಳಲ್ಲಿ ಕಂಡು ಕೇಳರಿಯದ್ದು. ಹಳ್ಳಿಯಿಂದ ದಿಲ್ಲಿಯವರೆಗೆ ನಾನಾ ರೂಪಗಳಲ್ಲಿ ವ್ಯಾಪಿಸುತ್ತಿರುವ ಭ್ರಷ್ಟಾಚಾರದ ಕರಾಳ ಅವತಾರಗಳಿಗೆ ಜನ ಎಷ್ಟರಮಟ್ಟಿಗೆ ರೋಸಿ ಹೋಗಿದ್ದಾರೆಂದರೆ ಅಣ್ಣಾ ಹಜಾರೆಯವರ ನಿರಶನವನ್ನು ಬೆಂಬಲಿಸಿ ದೇಶದಾದ್ಯಂತ ಪ್ರತಿಭಟನೆಗಳು ಸ್ವಯಂಪ್ರೇರಣೆಯಿಂದ ಸಂಘಟಿತವಾದವು. ಅಹಿಂಸಾ ಮಾರ್ಗದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯ ಎದುರು ಲೋಕಪಾಲ ಮಸೂದೆ ಕುರಿತಂತೆ ಅಣ್ಣಾ ಬೇಡಿಕೆಗೆ ಒಪ್ಪದೆ ಸರ್ಕಾರಕ್ಕೆ ಅನ್ಯಮಾರ್ಗವಿರಲಿಲ್ಲ. ಸರ್ಕಾರೇತರ ಸಂಘಟನೆಯ ಸಲಹೆಗಳನ್ನು ಕಾಯ್ದೆ ರೂಪಿಸುವಂಥ ಮಹತ್ವದ ಪ್ರಕ್ರಿಯೆಯಲ್ಲಿ ಪರಿಗಣಿಸಿದರೆ ಅದು ಕೆಟ್ಟ ಮೇಲ್ಪಂಕ್ತಿಯಾಗಲಾರದೇ ಎಂಬಂಥ ತಾಂತ್ರಿಕ ಸಂಗತಿಗಳ ಕುಂಟು ನೆಪಗಳನ್ನು ಸರ್ಕಾರ ಮುಂದೆ ಮಾಡಿತ್ತಾದರೂ ನಾಲ್ಕು ದಿನಗಳಿಂದ ದೇಶದಾದ್ಯಂತ ವ್ಯಕ್ತವಾಗುತ್ತಿದ್ದ ಜನರ ಸಾತ್ವಿಕ ಆಕ್ರೋಶದ ಎದುರು ಮಣಿಯಲೇ ಬೇಕಾಯಿತು. ಸಿವಿಲ್ ಸೊಸೈಟಿ ಮಂಡಿಸಿದ ಎಲ್ಲ ಬೇಡಿಕೆಗಳನ್ನೂ ಸರ್ಕಾರ ಒಪ್ಪಿಕೊಂಡಿದೆ. ದೇಶದ ಜನತೆ, ಅದರಲ್ಲಿಯೂ ಯುವಕ-ಯುವತಿಯರು, ಲೋಕಪಾಲ ವ್ಯವಸ್ಥೆಯ ಇತಿಮಿತಿಗಳ ಅರಿವು ಇಲ್ಲದವರು ಕೂಡ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂಬ ಮಾತ್ರಕ್ಕೆ ಸಂಘಟಿತರಾಗಿ ಬೀದಿಗೆ ಇಳಿದಿದ್ದನ್ನು ಸರ್ಕಾರ ಕಡೆಗಣಿಸಲಾಗಲಿಲ್ಲ. ಇದು ಅಣ್ಣಾ ಹಜಾರೆಯವರೇ ವಿನಮ್ರತೆಯಿಂದ ಹೇಳಿರುವಂತೆ ಜನತೆಯ ಸಾತ್ವಿಕ ಹೋರಾಟಕ್ಕೆ ಸಂದ ಗೆಲುವು. ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಲೋಕಪಾಲ ವ್ಯವಸ್ಥೆಯೂ ಒಂದು. ಈಗ ಕೇಂದ್ರ ಸರ್ಕಾರ ಮತ್ತು ಅಣ್ಣಾ ಹಜಾರೆ ಅವರೊಂದಿಗೆ ಆಗಿರುವ ಒಪ್ಪಂದದಂತೆ ಸರ್ಕಾರದ ಕಡೆಯಿಂದ ಐವರು ಮತ್ತು ಸಿವಿಲ್ ಸೊಸೈಟಿ ಕಡೆಯಿಂದ ಅಣ್ಣಾ ಹಜಾರೆ ಸೇರಿದಂತೆ ಐವರು ಸೇರಿ ಬಲಿಷ್ಠ ಲೋಕಪಾಲ ವ್ಯವಸ್ಥೆಗೆ ಅಗತ್ಯವಾದ ಮಸೂದೆಯನ್ನು ರಚಿಸಲಿದ್ದಾರೆ. ಅದು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಲೋಕಪಾಲರ ನೇಮಕವಾಗಬೇಕು. ಲೋಕಪಾಲ ವ್ಯವಸ್ಥೆ ಜಾರಿಗೆ ಬಂದರೆ ಅದರ ತನಿಖೆಗೆ ಒಳಪಟ್ಟು ಗರಿಷ್ಠ ಪ್ರಮಾಣದ ಜೈಲುವಾಸವನ್ನು ಪಡೆಯಬಹುದಾದ ಅಪರಾಧ ಹಿನ್ನೆಲೆಯ ನೂರೈವತ್ತಕ್ಕೂ ಹೆಚ್ಚಿನ ವ್ಯಕ್ತಿಗಳು ವಿವಿಧ ಕಾಯ್ದೆಗಳ ತಾಂತ್ರಿಕ ಅಂಶಗಳ ಬಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ತಮ್ಮ ವಿರುದ್ಧ ತನಿಖೆ ನಡೆಸಿ ಜೈಲು ಶಿಕ್ಷೆ ವಿಧಿಸುವಂಥ ಕಾಯ್ದೆಯನ್ನು ರಚಿಸುವುದಕ್ಕೆ ಈ ಜನಪ್ರತಿನಿಧಿಗಳು ಎಷ್ಟರಮಟ್ಟಿಗೆ ಬೆಂಬಲ ನೀಡುತ್ತಾರೆ ಎಂಬುದು ಕುತೂಹಲಕಾರಿ. ಭ್ರಷ್ಟಾಚಾರ ನಿಗ್ರಹ ಕುರಿತಾಗಿ ಎಲ್ಲ ರಾಜಕೀಯ ಪಕ್ಷಗಳ ನಿಲುವನ್ನು ಲೋಕಪಾಲ ಮಸೂದೆ ಒರೆಗೆ ಹಚ್ಚಲಿದೆ. ಭಸ್ಮಾಸುರನಂತೆ ಬೆಳೆದಿರುವ ಭ್ರಷ್ಟಾಚಾರದ ಪೆಡಂಭೂತವನ್ನು ಎದುರಿಸಲು ಲೋಕಪಾಲ ವ್ಯವಸ್ಥೆಯಷ್ಟೇ ಸಾಲದು. ಚುನಾವಣಾ ಆಯೋಗ, ಸಿಬಿಐ, ಮಹಾಲೇಖಪಾಲರು, ಕೇಂದ್ರ ಜಾಗೃತ ಆಯೋಗ, ಲಂಚನಿರೋಧ ಕಾಯಿದೆಗಳು, ನ್ಯಾಯಾಂಗ, ವಿಧಾನಸಭಾಧ್ಯಕ್ಷರು, ರಾಜ್ಯಪಾಲರು ಮೊದಲಾದ ಸಾಂವಿಧಾನಿಕ ಸ್ಥಾನಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ರೂಪುಗೊಂಡರೆ ಭ್ರಷ್ಟಾಚಾರ ನಿರ್ಮೂಲನ ಸಾಧ್ಯವಾದೀತು. ಅಂಥ ಬದ್ಧತೆ ರಾಜಕೀಯ ಪಕ್ಷಗಳಿಗೆ ಇದೆ ಎಂಬ ವಿಶ್ವಾಸ ಜನತೆಯಲ್ಲಿ ಮೂಡುತ್ತಿಲ್ಲ. ಲೋಕಪಾಲ ವ್ಯವಸ್ಥೆಗಾಗಿ ಅಣ್ಣಾ ಹಜಾರೆ ಆರಂಭಿಸಿದ ಸಾತ್ವಿಕ ಆಂದೋಲನ ಉಳಿದ ಸಂಸ್ಥೆಗಳ ಸ್ವಾಯತ್ತತೆಗೂ ಅವಶ್ಯಕ ಎನಿಸುವಂತೆ ತೋರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.