ಪಿಯು ಫಲಿತಾಂಶ; ಇಲಾಖೆ ವೈಫಲ್ಯ ವೃತ್ತಿಬದುಕನ್ನು ರೂಪಿಸಿಕೊಳ್ಳುವುದರಲ್ಲಿ ಮಹತ್ವದ ಹಂತ ಪಿಯು ಶಿಕ್ಷಣ. ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದೃಷ್ಟಿಯಿಂದ ತುಂಬ ಮಹತ್ವದ್ದು. ಆದ್ದರಿಂದ ವಿಜ್ಞಾನ, ಕಲೆ ಇಲ್ಲವೇ ವಾಣಿಜ್ಯ ವಿಷಯದ ಯಾವುದೇ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರೂ ಈ ಅವಧಿಯ ಎರಡು ವರ್ಷಗಳು ವಿದ್ಯಾರ್ಥಿಗಳ ಪಾಲಿಗೆ ಅಧ್ಯಯನಕ್ಕೆ ಮೀಸಲಿಟ್ಟ ಕಟ್ಟುನಿಟ್ಟಿನ ಕಾಲ. ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರೊಂದಿಗೆ ವೈದ್ಯಕೀಯ ಇಲ್ಲವೇ ಎಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವಕಾಶ ಪಡೆಯಲು ವಿವಿಧ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಒತ್ತಡವೂ ಈ ವಿದ್ಯಾರ್ಥಿಗಳಿಗೆ ಇರುತ್ತದೆ. ಆದ್ದರಿಂದ ವೃತ್ತಿ ಶಿಕ್ಷಣ ವ್ಯಾಸಂಗಕ್ಕೆ ಮಕ್ಕಳನ್ನು ಕಳುಹಿಸಲು ಧಾವಂತ ಪಡುವ ಹೆತ್ತವರಿಗೂ ಇದು ಪರೀಕ್ಷೆಯ ಕಾಲ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮಹತ್ವ ಪಡೆದಿರುವ ಈ ಹಂತದ ಶಿಕ್ಷಣ ನೀಡಿಕೆಯಲ್ಲಿ ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯ ಸಾಧನೆ ಹೀನಾಯವಾಗಿರುವುದು ಶೋಚನೀಯ ಸಂಗತಿ. ಈ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಶೇ 49ರಷ್ಟು ಆಗಿರುವುದೇ ಇಲಾಖೆಯ ವೈಫಲ್ಯಕ್ಕೆ ನಿದರ್ಶನ. ಕಳೆದ ಸಾಲಿನಲ್ಲಿ ಕೂಡ ಇದೇ ಪ್ರಮಾಣದ ಫಲಿತಾಂಶ ಬಂದಿತ್ತು. ಹಾಗೆ ನೋಡಿದರೆ ಕಳೆದ ಹತ್ತು ವರ್ಷಗಳಲ್ಲಿ 2005ರಿಂದ 2007ವರೆಗಿನ ಮೂರು ವರ್ಷಗಳಲ್ಲಿ ಮಾತ್ರ ಫಲಿತಾಂಶ ಶೇ 50ರಷ್ಟನ್ನು ಮುಟ್ಟಿತ್ತು. ಇದೇ ಗರಿಷ್ಠ ಸಾಧನೆ ಆಗಿರುವುದು ಇಲಾಖೆಯ ಕಾರ್ಯವೈಖರಿಗೆ ನಿದರ್ಶನ. ಈ ಪರಿಸ್ಥಿತಿಯ ಸುಧಾರಣೆಗೆ ಶಿಕ್ಷಣ ಇಲಾಖೆಯ ಮಟ್ಟದಲ್ಲಿ ತೀವ್ರವಾದ ಆತ್ಮಾವಲೋಕನ ನಡೆಯುವುದು ಅವಶ್ಯಕ. ಕೇಂದ್ರ ಸರ್ಕಾರಿ ನೆರವಿನ ಸಿಬಿಎಸ್‌ಇ ಪಠ್ಯಕ್ರಮದ ಕೇಂದ್ರೀಯ ಶಾಲೆಗಳಲ್ಲಿ ದ್ವಿತೀಯ ಪಿಯು ಹಂತದ ಪರೀಕ್ಷೆ ಫಲಿತಾಂಶ ಯಾವಾಗಲೂ ಶೇ 90ಕ್ಕಿಂತ ಹೆಚ್ಚಿನದಿರುತ್ತದೆ. ರಾಜ್ಯ ಸರ್ಕಾರದ ಪದವಿಪೂರ್ವ ಶಿಕ್ಷಣ ಇಲಾಖೆ, ಕೇಂದ್ರೀಯ ಶಾಲೆಗಳಿಗೆ ಕಡಿಮೆ ಇಲ್ಲದ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಷ್ಟಿದ್ದರೂ ಪರೀಕ್ಷೆಯ ಫಲಿತಾಂಶ ಶೇ 50ರಷ್ಟೂ ಆಗದಿದ್ದರೆ ಈ ಪರಿಸ್ಥಿತಿಯನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ. ಈಗಿನ ಶಿಕ್ಷಣ ಪದ್ಧತಿಯೇ ಪರೀಕ್ಷಾ ಕೇಂದ್ರಿತವಾಗಿದೆ ಎಂಬುದು ನಿಜ. ಪರೀಕ್ಷೆಯಲ್ಲಿ ಯಶಸ್ಸು ಪಡೆಯುವುದಷ್ಟೇ ಶಿಕ್ಷಣದ ಗುರಿ ಎನ್ನುವಷ್ಟು ಲೌಕಿಕ ದೃಷ್ಟಿ ಇರುವುದನ್ನು ಅಲ್ಲಗಳೆಯಲಾಗದು. ಆದರೆ, ವಿದ್ಯಾರ್ಥಿಗಳು ಶೇ 35ರಷ್ಟು ಅಂಕಗಳನ್ನಾದರೂ ಪಡೆದು ತೇರ್ಗಡೆ ಆಗುವಂತೆ ತರಬೇತುಗೊಳಿಸುವ ಕನಿಷ್ಠ ಹೊಣೆಗಾರಿಕೆಯ ಅರಿವು ಈ ಹಂತದ ಶಿಕ್ಷಕರಲ್ಲಿ ಮೂಡದಿದ್ದರೆ ಈ ಪರಿಸ್ಥಿತಿ ಬದಲಾಗದು. ಈ ಸಲ 40 ಪದವಿಪೂರ್ವ ಕಾಲೇಜುಗಳ ಫಲಿತಾಂಶ ‘ಶೂನ್ಯ ಸಂಪಾದನೆ’ಯಾಗಿರುವುದು ಒಳ್ಳೆಯ ಲಕ್ಷಣವಲ್ಲ ಎಂಬುದನ್ನು ಶಿಕ್ಷಣ ಸಚಿವರು ಗಮನಿಸಬೇಕು. ನಗರ ಪ್ರದೇಶಗಳಲ್ಲಾಗಲೀ, ಗ್ರಾಮೀಣ ಭಾಗಗಳಲ್ಲಾಗಲೀ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರೆಂಬ ಸಂಗತಿ ಶಿಕ್ಷಕರ ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಈಗಿನ ಫಲಿತಾಂಶ ಶಿಕ್ಷಣ ಇಲಾಖೆಗೆ ಕಾಯಕಲ್ಪ ನೀಡುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.