ನ್ಯಾಯಾಲಯವೇ ತೀರ್ಮಾನಿಸಲಿ ರಾಮಜನ್ಮಭೂಮಿ-ಬಾಬರಿ ಮಸೀದಿ ನಿವೇಶನ ವಿವಾದ ಅರವತ್ತು ವರ್ಷಗಳ ಸುದೀರ್ಘ ಕಾನೂನು ಸಮರದ ಒಂದು ಸುತ್ತು ಮುಗಿಸಿ ಪ್ರಾರಂಭದ ಸ್ಥಿತಿಗೆ ಮರಳಿದೆ. ವಿವಾದಾತ್ಮಕ ನಿವೇಶನವನ್ನು ಮೂರು ಭಾಗಗಳಾಗಿ ಮಾಡಿ ಹಂಚಿದ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ನಿರೀಕ್ಷಿತವೂ ಆಗಿತ್ತು. ಕಾನೂನು ಮತ್ತು ನಂಬಿಕೆ ಬೇರೆ ಬೇರೆ. ಲಖನೌ ಪೀಠದ ತೀರ್ಪು ಕಾನೂನಿನ ಮೂಲಕ ಕಂಡುಕೊಂಡ ಪರಿಹಾರವಾಗಿರದೆ ನಂಬಿಕೆಯ ಆಧಾರಗಳನ್ನಿಟ್ಟುಕೊಂಡು ಮಾಡಿದ ಸಂಧಾನದ ಪ್ರಯತ್ನವಾಗಿತ್ತು. ಈ ಕಾರಣದಿಂದಾಗಿಯೇ ಶುದ್ಧ ಕಾನೂನಿನ ಒರೆಗೆ ಹಚ್ಚಿದಾಗ ಗಟ್ಟಿಯಾಗಿ ನಿಲ್ಲಬಲ್ಲ ಶಕ್ತಿ ಆ ತೀರ್ಪಿಗೆ ಇರಲಿಲ್ಲ. ವಿವಾದವನ್ನು ಬಗೆಹರಿಸಲು ಲಖನೌ ಪೀಠ ಅನುಸರಿಸಿದ ವಿಧಾನವನ್ನೇ ಬಹುಮುಖ್ಯವಾಗಿ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಮೂವರು ಫಿರ್ಯಾದಿದಾರರು ಕೇಳಿದ್ದು ವಿವಾದಾತ್ಮಕ ಭೂಮಿಯ ಸಂಪೂರ್ಣ ಒಡೆತನವನ್ನೇ ಹೊರತು ಅದರಲ್ಲಿ ಒಂದು ಪಾಲನ್ನಲ್ಲ. ಆದರೆ ಲಖನೌ ಪೀಠ ಫಿರ್ಯಾದಿದಾರರು ಕೋರಿಕೆ ಸಲ್ಲಿಸದೆ ಇದ್ದರೂ ಅದನ್ನು ಪಾಲು ಮಾಡಿಕೊಟ್ಟಿತ್ತು. ಈ ಅಂಶದ ಬಗ್ಗೆ ಸುಪ್ರೀಂ ಕೋರ್ಟ್ ಸಹಜವಾಗಿಯೇ ಅಚ್ಚರಿ ವ್ಯಕ್ತಪಡಿಸಿದೆ. ತಡೆಯಾಜ್ಞೆಗೆ ಇದೇ ಮುಖ್ಯ ಕಾರಣವಾಗಿದೆ. ದೇವರು ಧರ್ಮದ ಬಗೆಗಿನ ನಂಬಿಕೆಯ ನೆಲೆಗಳು ನೂರಾರು. ಹಿಂದೂಗಳು ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುವ ಹಲವಾರು ಪುಣ್ಯಕ್ಷೇತ್ರಗಳು ದೇಶದಲ್ಲಿವೆ. ಆದರೆ ಅಯೋಧ್ಯೆಯನ್ನು ಸಾಮಾನ್ಯ ಹಿಂದೂಗಳು ಪುಣ್ಯಕ್ಷೇತ್ರವೆಂದು ಎಂದೂ ಪರಿಗಣಿಸಿರಲಿಲ್ಲ. ಸಾಹಿತ್ಯದ ಪುಟಗಳನ್ನು ತಿರುವಿಹಾಕಿದರೆ ಕಾಶೀಯಾತ್ರೆಯ ಪ್ರಸಂಗಗಳು ಅಲ್ಲಲ್ಲಿ ಕಂಡುಬರುತ್ತವೆ, ಆದರೆ ಅಯೋಧ್ಯೆ ಯಾತ್ರೆಯ ಪ್ರಸಂಗ ಎಲ್ಲೂ ಇದ್ದಂತಿಲ್ಲ. ‘ರಾಜಕೀಯ’ದಲ್ಲಿ ಸೇರಿಕೊಂಡ ನಂತರವೇ ಅಯೋಧ್ಯೆ ಬಗ್ಗೆ ಜನರಲ್ಲಿ ಆಸಕ್ತಿ ಭಕ್ತಿ ಹುಟ್ಟಿಕೊಂಡದ್ದು. ಆದರೆ ರಾಮನ ಬಗ್ಗೆ ರಾಜಕಾರಣಿಗಳಲ್ಲಿದ್ದ ಪ್ರೀತಿಯಲ್ಲಿನ ಆತ್ಮವಂಚನೆ ಅರಿವಾಗುತ್ತಿದ್ದಂತೆಯ ಜನ ವಿವಾದದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾ ಬಂದರು. ಈ ಕಾರಣದಿಂದಾಗಿಯೇ ಲಖನೌ ಪೀಠದ ತೀರ್ಪು ಹೊರಬಂದಾಗ ಜನ ಅದನ್ನು ನಿರ್ಭಾವುಕರಾಗಿ ಸ್ವೀಕರಿಸಿದ್ದರು. ಆ ತೀರ್ಪಿಗೆ ತಡೆಯಾಜ್ಞೆ ನೀಡಿದಾಗಲೂ ಜನ ಅದೇ ಸ್ಥಿತಪ್ರಜ್ಞತೆಯಿಂದ ನಡೆದುಕೊಂಡಿದ್ದಾರೆ. ವಿವಾದದ ಬಗ್ಗೆ ಎಂಬತ್ತರ ದಶಕದಲ್ಲಿ ಜನರಲ್ಲಿದ್ದ ಆಸಕ್ತಿ ಇಂದು ಉಳಿದಿಲ್ಲ ಎನ್ನುವುದಕ್ಕೆ ಜನತೆಯ ಈ ಪ್ರತಿಕ್ರಿಯೆಯೇ ಸಾಕ್ಷಿ. ಇದು ಸಂಧಾನದ ಮೂಲಕ ಬಗೆಹರಿಸಲಾಗದ ವಿವಾದ ಎನ್ನುವುದು ಈ ವರೆಗಿನ ಅನುಭವದಿಂದ ಸಾಬೀತಾಗಿದೆ. ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವುದೇ ಈಗ ಉಳಿದಿರುವ ದಾರಿ. ವಿವಾದಾತ್ಮಕ ನಿವೇಶನದಲ್ಲಿರುವ ರಾಮ ಲಲ್ಲಾನ ಪೂಜೆಯನ್ನು ಹೊರತುಪಡಿಸಿ ಬೇರೇನೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ವಿವಾದದಲ್ಲಿ ಗುರುತಿಸಿಕೊಂಡ ಸಂಘಟನೆಗಳೆಲ್ಲವೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಜನರ ಭಾವನೆಗಳನ್ನು ಕೆರಳಿಸುವ ದುಸ್ಸಾಹಸಕ್ಕೆ ಯಾರೂ ಇಳಿಯಬಾರದು. ವಿವಾದ ಇತ್ಯರ್ಥದ ನ್ಯಾಯಾಂಗ ಪ್ರಕ್ರಿಯೆಯನ್ನು ಲಂಬಿಸಲು ಹೋಗದೆ ಸಾಧ್ಯವಾದಷ್ಟು ಶೀಘ್ರವಾಗಿ ಇದನ್ನು ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್ ಮುಂದಾಗಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು ಮುಖ್ಯವಾಗಿ ಧಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಜವಾಬ್ದಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.