ಮಾತುಕತೆಯೇ ಪರಿಹಾರ ಏರ್ ಇಂಡಿಯಾದ ಪೈಲಟ್‌ಗಳು ಮತ್ತೆ ಮುಷ್ಕರಕ್ಕೆ ಇಳಿದಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಇದು ಎರಡನೇ ಮುಷ್ಕರ. ಮುಷ್ಕರದಿಂದ ಅಮಾಯಕ ಪ್ರಯಾಣಿಕರಿಗೆ ಆಗುವ ಕಷ್ಟನಷ್ಟಗಳ ಬಗ್ಗೆ ಅವರು ಯೋಚನೆಯನ್ನೇ ಮಾಡಿಲ್ಲ. ಪ್ರಯಾಣಿಕರ ಹಿತವನ್ನೇ ಗಮನದಲ್ಲಿಟ್ಟುಕೊಂಡು ದೆಹಲಿ ಹೈಕೋರ್ಟ್ ಮುಷ್ಕರ ನಡೆಸಬಾರದೆಂದು ನೀಡಿದ್ದ ಆದೇಶವನ್ನೂ ಅವರು ಲೆಕ್ಕಿಸಿಲ್ಲ. ಪೈಲಟ್‌ಗಳ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಸಿ.ಎಸ್.ಧರ್ಮಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿ ಸೋಮವಾರವಷ್ಟೇ ಕಾರ್ಯಾರಂಭ ಮಾಡಿದ್ದು ಅದರ ವರದಿಗಾಗಿ ಕಾಯುವ ತಾಳ್ಮೆಯನ್ನೂ ಪೈಲಟ್‌ಗಳು ತೋರಿಲ್ಲ. ಮುಷ್ಕರದಿಂದಾಗಿ ಈಗಾಗಲೇ 60ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನಿರ್ವಹಣಾ ಪೈಲಟ್‌ಗಳನ್ನೂ ಮುಷ್ಕರಕ್ಕೆ ಸೆಳೆಯುವ ಪ್ರಯತ್ನ ಸಫಲಗೊಂಡರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು. ಇದೇ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿರುವ ಖಾಸಗಿ ವಿಮಾನ ಸಂಸ್ಥೆಗಳು ಟಿಕೆಟ್ ದರವನ್ನು ಎರ್ರಾಬಿರ್ರಿ ಹೆಚ್ಚಿಸಿ ಪ್ರಯಾಣಿಕರ ಶೋಷಣೆಗೆ ಇಳಿದಿವೆ. ಮುಷ್ಕರದ ಬಗ್ಗೆ ಕಠಿಣ ನಿಲುವು ತಾಳಿರುವ ಏರ್‌ಇಂಡಿಯಾ ಆಡಳಿತ ಮಂಡಳಿ ಮುಷ್ಕರದ ನೇತೃತ್ವ ವಹಿಸಿರುವ ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘದ (ಐಸಿಪಿಎ) ಮಾನ್ಯತೆಯನ್ನು ರದ್ದುಮಾಡಿ ಅದರ ಕೆಲವು ನಾಯಕರನ್ನು ಕೆಲಸದಿಂದ ವಜಾಗೊಳಿಸಿದೆ. ಇದರ ಜತೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಯೋಚನೆಯನ್ನೂ ಮಾಡುತ್ತಿದೆ. ಇಂತಹ ಕ್ರಮಗಳು ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಬಹುದೇ ಹೊರತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗಲಾರದು. ಯಾಕೆಂದರೆ ಈಗಿನ ಬಿಕ್ಕಟ್ಟಿಗೆ ಮುಷ್ಕರನಿರತ ಪೈಲಟ್‌ಗಳಷ್ಟೇ ಅಲ್ಲ ಏರ್‌ಇಂಡಿಯಾ ಕೂಡಾ ಕಾರಣ. ನಾಲ್ಕು ವರ್ಷಗಳ ಹಿಂದೆ ಏರ್‌ಇಂಡಿಯಾದಲ್ಲಿ ಇಂಡಿಯನ್ ಏರ್‌ಲೈನ್ಸ್ ಅನ್ನು ವಿಲೀನಗೊಳಿಸಲಾಗಿತ್ತು. ಖಾಸಗಿ ವಿಮಾನ ಸಂಸ್ಥೆಗಳ ಪೈಪೋಟಿಯನ್ನು ಎದುರಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಬಲಗೊಳಿಸುವುದರ ಜತೆಯಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ವಿಲೀನದ ಉದ್ದೇಶವಾಗಿತ್ತು. ಆದರೆ ವಿಲೀನದ ನಂತರ ನಷ್ಟದ ಪ್ರಮಾಣ ಹಲವಾರು ಪಟ್ಟು ಹೆಚ್ಚಿದೆ. ಇದರಿಂದಾಗಿ ಇಂಡಿಯನ್ ಏರ್‌ಲೈನ್ಸ್‌ನಿಂದ ಬಂದ ಪೈಲಟ್‌ಗಳಿಗೆ ಏರ್ ಇಂಡಿಯಾದ ಪೈಲಟ್‌ಗಳಿಗೆ ಸಮನಾದ ವೇತನವನ್ನು ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ.ವೇತನದಲ್ಲಿನ ತಾರತಮ್ಯವೇ ಮುಷ್ಕರ ನಿರತ ಪೈಲಟ್‌ಗಳ ಮುಖ್ಯ ಬೇಡಿಕೆ. ‘ಅವರಿಗೆ (ಪೈಲಟ್‌ಗಳಿಗೆ) ಅನ್ಯಾಯವಾಗಿರುವುದು ಮೇಲ್ನೋಟದಲ್ಲಿ ಕಂಡುಬರುತ್ತದೆ.ಇದನ್ನು ಬಗೆಹರಿಸಲು ಇಷ್ಟೊಂದು ವರ್ಷಗಳು ಬೇಕೇ?’ ಎಂದು ದೆಹಲಿ ಹೈಕೋರ್ಟ್ ಕೂಡಾ ಏರ್ ಇಂಡಿಯಾ ಆಡಳಿತಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ತಪ್ಪು ಎರಡೂ ಕಡೆಗಳಿಂದಲೂ ಆಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ನಿರತ ಪೈಲಟ್‌ಗಳು ಮತ್ತು ಏರ್ ಇಂಡಿಯಾ ಆಡಳಿತ ಮಂಡಳಿ ಪ್ರತಿಷ್ಠೆಗೆ ಬಲಿ ಬೀಳದೆ ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಇತ್ಯರ್ಥಗೊಳಿಸಲು ಮುಂದಾಗಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಮುಷ್ಕರವನ್ನು ಹಿಂದೆಗೆದುಕೊಂಡು ಮಾತುಕತೆಗೆ ಪೂರಕವಾದ ವಾತಾವರಣವನ್ನು ಪೈಲಟ್‌ಗಳು ನಿರ್ಮಾಣಮಾಡಬೇಕು. ಕನಿಷ್ಠ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ತಜ್ಞರ ಸಮಿತಿ ವರದಿ ನೀಡುವ ವರೆಗಾದರೂ ಅವರು ಸಂಯಮ ವಹಿಸಬೇಕು. ಇದೇ ವೇಳೆ ಏರ್‌ಇಂಡಿಯಾ ಆಡಳಿತ ಮಂಡಳಿ ಸೇಡಿನ ಧೋರಣೆ ತಳೆಯದೆ ಸೌಹಾರ್ದಯುತವಾಗಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಮುಕ್ತಮನೋಭಾವವನ್ನು ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.