ವರ್ಗಾವಣೆ ದಂಧೆ ಆಗದಿರಲಿ ರಾಜ್ಯ ಸರ್ಕಾರ ಮುಂದಿನ ತಿಂಗಳು ನೌಕರರ ಸಾಮಾನ್ಯ ವರ್ಗಾವಣೆಗೆ ಕೈಹಾಕಿದೆ. ಈ ಸಂಬಂಧ ವರ್ಗಾವಣೆ ನೀತಿಗೆ ಹೊಸ ನಿಯಮಾವಳಿಗಳನ್ನು ರೂಪಿಸಿ ಆದೇಶ ಹೊರಡಿಸಿದೆ. ಯಾವುದೇ ಸರ್ಕಾರ ಮಾಡುವ ಸಹಜ ಪ್ರಕ್ರಿಯೆ ಇದು. ಸಮಸ್ಯೆ ಇರುವುದು ಸರ್ಕಾರ ತಾನೇ ಹೊರಡಿಸಿದ ಅದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು. ಆರ್ ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಹೊರತು ಪಡಿಸಿದರೆ ವರ್ಗಾವಣೆ ವಿಷಯದಲ್ಲಿ ಯಾವುದೇ ಸರ್ಕಾರ ಕಟ್ಟು ನಿಟ್ಟಾಗಿ ನಿಯಮಾವಳಿಗಳನ್ನು ಪಾಲಿಸ್ಲ್ದಿಲ್ಲ. ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಿ ವರ್ಗಾವಣೆ ಮಾಡುವುದು ಗುಟ್ಟಿನ ವಿಷಯವೇನಲ್ಲ. ರಾಜಕಾರಣಿಗಳಿಗೆ ಮತ್ತು ಇಲಾಖೆಯ ಉನ್ನತಾಧಿಕಾರಿಗಳಿಗೆ ವರ್ಗಾವಣೆ ಕಾಮಧೇನು ಇದ್ದಹಾಗೆ. ಇದು ಸುಲಭವಾಗಿ ಮನೆಬಾಗಿಲಿಗೆ ಹಣ ಬಂದು ಬೀಳುವ ದಂಧೆಯಾಗಿರುವುದು ದುರಂತ. ಹಾಗಾಗಿ ಸರ್ಕಾರ ವರ್ಗಾವಣೆಗೆ ಒಂದು ತಿಂಗಳು ಎಂದು ಹೇಳಿದರೂ, ಅದು ಹಳೆಯ ದಿನಾಂಕಗಳನ್ನು ನಮೂದಿಸಿ ಬೇಕೆಂದಾಗಲೆಲ್ಲ ವರ್ಗಾವಣೆ ನಡೆಯುವುದು ಮಾಮೂಲಿ. ಹಲವು ಪ್ರಕರಣಗಳಲ್ಲಿ ಇಡೀ ವರ್ಷವೆಲ್ಲ ವರ್ಗಾವಣೆ ನಡೆಯುತ್ತಲೇ ಇರುತ್ತದೆ. ಈ ಪ್ರವೃತ್ತಿಗೆ ಹೈಕೋರ್ಟ್ ಈ ಹಿಂದೆ ಕಡಿವಾಣ ಹಾಕಿದೆ. ಆದರೆ ಸರ್ಕಾರ ಅದನ್ನು ಉಲ್ಲಂಘಿಸಿರುವ ಪ್ರಕರಣಗಳೇ ಹೆಚ್ಚು. ಸಾಮಾನ್ಯ ನೌಕರರು ಹಾಗೂ ಅಧಿಕಾರಿಗಳನ್ನು ಪದೇ ಪದೇ ವರ್ಗ ಮಾಡುವುದರಿಂದ ಆಡಳಿತ ಬಿಗಿ ಕಳೆದುಕೊಳ್ಳುತ್ತದೆ. ವರ್ಗಾವಣೆ ಭೀತಿ ಇರುವವರು ಮನಸ್ಸಿಟ್ಟು ಕೆಲಸ ಮಾಡುವುದಿಲ್ಲ. ಹಣಕೊಡುವ ಸ್ಥಿತಿಯಲ್ಲಿಲ್ಲದ ಮತ್ತು ಈ ದಂಧೆಯಿಂದ ದೂರವಿರುವ ಬೆರಳೆಣಿಕೆಯಷ್ಟು ಪ್ರಾಮಾಣಿಕರು ಅಭದ್ರ ಸ್ಥಿತಿಯನ್ನು ಎದುರಿಸುತ್ತಾರೆ. ಶಾಸಕರು ಮತ್ತು ಆಳುವ ಪಕ್ಷದ ಸ್ಥಳೀಯ ನಾಯಕರು ತಮ್ಮ ಕ್ಷೇತ್ರದ ಆಯಕಟ್ಟಿನ ಹುದ್ದೆಗಳಿಗೆ ತಮ್ಮ ಮಾತನ್ನು ಕೇಳುವ ಮತ್ತು ಸ್ವಜಾತಿ ಅಧಿಕಾರಿಗಳನ್ನು ವರ್ಗ ಮಾಡಿಸಿಕೊಳ್ಳುತ್ತಾರೆ. ವರ್ಗಾವಣೆ ನಡೆಯುವುದೇ ಹೀಗಿರುವುದರಿಂದ ಆಡಳಿತ ವ್ಯವಸ್ಥೆ ದುರ್ಬಲವಾಗಲು ಕಾರಣ. ಎಲ್ಲ ಹಂತಗಳಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆ ಮಾಯವಾಗುತ್ತದೆ. ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ವಿಧಾನಸೌಧದಿಂದ ಹಿಡಿದು ಮಂಡಲ ಪಂಚಾಯತ್‌ವರೆಗೆ ತಾಂಡವವಾಡುತ್ತದೆ. ಇದೆಲ್ಲ ಸರ್ಕಾರ ನಡೆಸುವವರಿಗೆ ತಿಳಿಯದ ಸಂಗತಿಯೇನಲ್ಲ. ನಿಯಮಾವಳಿ ಮೀರಿದ ಇಂತಹ ಎರ್ರಾಬಿರ್ರಿ ವರ್ಗಾವಣೆಯಿಂದ ಸರ್ಕಾರಕ್ಕಂತು ಕೆಟ್ಟ ಹೆಸರು ಕಟ್ಟಿಟ್ಟಬುತ್ತಿ. ಆದ್ದರಿಂದ ವರ್ಗಾವಣೆಯಿಂದ ಸರ್ಕಾರಕ್ಕೆ ಕಳಂಕ ಬರದಂತೆ ನೋಡಿಕೊಳ್ಳುವುದು ಆಡಳಿತದ ಸೂತ್ರ ಹಿಡಿದವರ ವಿವೇಚನೆಗೆ ಬಿಟ್ಟದ್ದು. ವರ್ಗಾವಣೆಯನ್ನೇ ದಂಧೆಯನ್ನಾಗಿ ಮಾಡಿಕೊಂಡಿರುವವರ ಮರ್ಜಿಗೆ ಒಳಗಾದರೆ ಆಡಳಿತದಲ್ಲಿ ದಕ್ಷತೆ ಖಂಡಿತಾ ಬರಲಾರದು. ಕೊನೆಗೆ ಅಭಿವೃದ್ಧಿ ಮತ್ತು ಸ್ವಚ್ಛ ಆಡಳಿತ ನೀಡುತ್ತೇವೆ ಎನ್ನುವುದೆಲ್ಲ ಬರೇ ಮಾತಿನಲ್ಲೇ ಉಳಿದುಬಿಡುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.