ಮಹಾತ್ಮರೂ, ಮನುಷ್ಯರೂ, ಮರ್ತ್ಯತೆಯೂ ಪ್ರಪಂಚದ ಅತ್ಯಂತ ಪ್ರಸಿದ್ಧ ಸಂತರಾದ ಸತ್ಯ ಸಾಯಿಬಾಬಾ ಅವರ ಅಂತ್ಯ ಅವರ ಅಪಾರ ಭಕ್ತಸ್ತೋಮವನ್ನು ಕಂಬನಿಯ ಕಡಲೊಳಗೆ ಅದ್ದಿಬಿಟ್ಟಿದೆ. ಇದೇ ಸಮಯದಲ್ಲಿ ಬಾಬಾ ಅವರ ಪವಾಡಗಳ ಟೀಕಾಕಾರರು, ಈ ಸಾವು ಬಾಬಾ ಅವರೂ ಕೇವಲ ಮನುಷ್ಯರು, ಮರ್ತ್ಯರು ಎಂಬುದನ್ನು ಸಾಬೀತು ಪಡಿಸಿದೆ ಎಂದು ಸಾರಿ ಹೇಳುತ್ತಿದ್ದಾರೆ. ಬಾಬಾ ಅವರ ಅಂತ್ಯದ ಸುದ್ದಿ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ದೆಹಲಿಯ ಪ್ರಸಿದ್ಧ ವಿಚಾರವಾದಿಗಳಾ ಸನಲ್ ಎದುಮುರುಕು ಅವರು ವ್ಯಾಪಕವಾಗಿ ಹೀಗೆ ಎಸ್.ಎಂ.ಎಸ್. ಕಳಿಸತೊಡಗಿದರು: ’ಸತ್ಯ ಸಾಯಿಬಾಬಾ ತಾವು 96ನೆ ವಯಸ್ಸಿಗೆ ಕಾಯ ಬಿಡುವುದಾಗಿ ಸಾರಿಕೊಂಡಿದ್ದರು. ಆದರೆ 85ನೆ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಇನ್ನಾದರೂ ಅವರ ಭಕ್ತರು ಕಣ್ ತೆರೆಯಲಿ. ಅಂಧವಿಶ್ವಾಸದಿಂದ ಬಿಡುಗಡೆ ಹೊಂದಲಿ.’ ಆದರೆ ಸನಲ್ ಅವರಂಥ ರ್ಯಾಷನಲಿಷ್ಟರ ವಿಚಾರವಾದಿ ಬೆಳಕು ಬಾಬಾ ಭಕ್ತಸ್ತೋಮದ ಕಣ್ಣುಗಳಲ್ಲಿ ಎಂದಾದರೂ ಮೂಡಬಲ್ಲುದೆ? ಸಾಮಾನ್ಯರಾದ ನಮ್ಮಂಥವರು ಸಾವಿನ ದವಡೆಯಲ್ಲೇ ಸುಖವನ್ನರಸುತ್ತಿರುತ್ತೇವೆ, ಹಾವಿನ ಬಾಯಿಯ ಕಪ್ಪೆ ಹಸಿದು, ಹಾರುವ ನೊಣಕ್ಕೆ ಬಯಸಿದ ಹಾಗೆ. ಇಚ್ಛಾಮರಣಿಗಳೆಂದು ಕರೆದುಕೊಳ್ಳುವ ಮಹಾತ್ಮರು ಮಾತ್ರ ಸಾವನ್ನು ಗೆದ್ದೆವೆಂದು ಭಕ್ತರನ್ನು ನಂಬಿಸುವ ಪ್ರಯತ್ನ ಮಾಡುತ್ತಾರೆ. ಬಾಬಾ ಅವರು ತಮ್ಮ ಆಯುಷ್ಯವನ್ನು ತಾವೇ ನಿಗದಿ ಪಡಿಸಬಲ್ಲೆವು ಎಂದು ಭಕ್ತರನ್ನು ನಂಬಿಸಿದ್ದರು. ಭಕ್ತರೂ ನಂಬಿದ್ದರು. ಅವರು ಏನನ್ನು ತಾನೇ ನಂಬುವುದಿಲ್ಲ? ಭಾರತದ ಇನ್ನೊಬ್ಬ ಪ್ರಸಿದ್ಧ ಸಂತರಾಗಿದ್ದ ಮಹರ್ಷಿ ಅರವಿಂದರೂ ತಮ್ಮ ದೇಹಕ್ಕೆ ಸಾವು ತಗುಲಲಾರದೆಂದು ಭವಿಷ್ಯವಾಣಿ ನುಡಿದಿದ್ದರು. ತಾವು ತಮ್ಮ ಪೂರ್ಣಯೋಗ ಸಾಧನೆಯಿಂದ ತಮ್ಮ ಮರ್ತ್ಯ ಕಾಯವನ್ನು ಅಮರಗೊಳಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದರು. ತಮ್ಮ ಆತ್ಮ, ದೇಹವನ್ನು ತೊರೆದ ನಂತರವೂ ದೇಹ ಕೆಡುವುದಿಲ್ಲ ಅಂತಲೂ, ಅದನ್ನು ಸಂಸ್ಕಾರ ಮಾಡದೆ ಹಾಗೇ ಸಂರಕ್ಷಿಸಬೇಕೆಂತಲೂ ಸೂಚನೆ ನೀಡಿದ್ದರಂತೆ. ಆದರೆ ಅವರು ನಿಧನರಾದ ಕೆಲವೇ ಗಂಟೆಗಳಲ್ಲಿ ಪೂರ್ಣಯೋಗ ಸಾಧನೆ ಮಾಡಿದ್ದ ಆ ದಿವ್ಯ ಕಾಯವೂ ಕೊಳೆಯತೊಡಗಿತು. ಅಂತ್ಯ ಸಂಸ್ಕಾರ ಮಾಡಬೇಕಾಗಿ ಬಂತು. ಗುರುವಿನ ಭವಿಷ್ಯವಾಣಿ ಹೀಗೆ ಸ್ಪಷ್ಟವಾಗಿ ಸುಳ್ಳಾದರೂ ಅವರ ಭಕ್ತರ ನಂಬಿಕೆ ಕುಂದಲಿಲ್ಲ. ಸಾವಿಗೆ ಸವಾಲು ಹಾಕಿ ಸೋಲುವ ಸಂತರನ್ನು ತಮಾಷೆ ಮಾಡುವುದರಲ್ಲಿ ವಿಚಾರವಾದಿಗಳೇ ಮೊದಲಿಗರಲ್ಲ. ಸಾವನ್ನು ಗೆದ್ದ ಮಹಾಮಹಿಮರಲ್ಲೊಬ್ಬನೆಂದು ಸ್ವಾತ್ಮಾರಾಮ ಯೋಗಿಯ ಹಠಯೋಗಪ್ರದೀಪಿಕೆಯಲ್ಲಿ ಕೀರ್ತಿತನಾಗಿರುವ ಅಲ್ಲಮಪ್ರಭು ತನ್ನೊಂದು ವಚನದಲ್ಲಿ ಋಷಿ, ಮುನಿ, ಸಂತರ ಕುರಿತು ಹೀಗೆನ್ನುತ್ತಾನೆ: ’ಇವರು ಸತ್ಯರೆಂಬುದು ಹುಸಿ, ನಿತ್ಯರೆಂಬುದು ಹುಸಿ, ಸತ್ತರೆಂಬುದು ದಿಟ, ಗೊಗ್ಗೇಶ್ವರ’. ಹೆಚ್ಚೂಕಡಿಮೆ ಸಾಯಿಬಾಬಾ ಅವರಷ್ಟೇ ಅಧಿಕ ಸಂಖ್ಯೆಯಲ್ಲಿ ವಿಶ್ವದಾದ್ಯಂತ ಭಕ್ತರನ್ನು ಸಂಪಾದಿಸಿರುವ ಕೇರಳದ ಸಂತರಾ ಮಾತಾ ಅಮೃತಾನಂದಮಯಿ ಅವರು ಸಾಯಿಬಾಬಾ ಅವರ ಅಂತ್ಯದ ಬಗ್ಗೆ ನೀಡಿದ ಪ್ರತಿಕ್ರಿಯೆ ಮಾರ್ಮಿಕವಾಗಿತ್ತು: ’ಈ ಮೂಲಕ ಎಲ್ಲರೂ ದೇಹದ ಅಂತಿಮ ನಶ್ವರತೆಯನ್ನು ಅರ್ಥಮಾಡಿಕೊಳ್ಳಲಿ’ ಜಾತಸ್ಯ ಮರಣಂ ಧ್ರುವಂ. ನಿಜ, ಎಲ್ಲ ಸಂತ ಮಹಾತ್ಮರೂ ಸಾವಿಗೆ ಸವಾಲು ಹಾಕುವವರಲ್ಲ. ಉದಾಹರಣೆಗೆ ಭಗವಾನ್ ಬುದ್ಧ. ಆತನನ್ನು ಧಮ್ಮ ಪಥದಲ್ಲಿ ತೊಡಗಿಸಿದ್ದೇ ಕಾಯಿಲೆ, ಮುಪ್ಪು ಮತ್ತು ಸಾವಿನ ಅನುಭವ. ಹುಟ್ಟಿದ್ದಕ್ಕೆ ಮೃತ್ಯು ತಪ್ಪದೆನ್ನುವುದು ಬೌದ್ಧಧರ್ಮದ ಅನುಲ್ಲಂಘನೀಯ ತತ್ವ.ಬುದ್ಧನ ಕೊನೆಯ ದಿನದ ಕಥನ ’ಮಹಾ ಪರಿನಿಬ್ಬಾಣ ಸುತ್ತ’ದಲ್ಲಿ ಸಿಗುತ್ತದೆ. ಚುಂದನೆಂಬುವ ಭಕ್ತನ ಮನೆಯಲ್ಲಿ ‘ಸೂಕರಮದ್ದ’ವನ್ನು ಸೇವಿಸಿದ ಬಳಿಕ ಬುದ್ಧನಿಗೆ ಹೊಟ್ಟೆನೋವು ಶುರುವಾಗುತ್ತದೆ. ಆಗ ಬುದ್ಧ ಶಿಷ್ಯ ಆನಂದನಿಗೆ ಹೇಳುತ್ತಾನೆ: ‘ಈ ದೇಹವನ್ನು ಬಿಡುವ ಘಳಿಗೆ ಸಮೀಪಿಸುತ್ತಿದೆ. ಮಾರ ಮತ್ತೆ ಮತ್ತೆ ಬಂದು ಕರೆಯುತ್ತಿದ್ದಾನೆ.’ ಈ ಮಧ್ಯೆ ಬುದ್ಧನ ಬೋಧನೆಯ ದಾಹದಿಂದ ಕೆಲವು ಜನ ಆಗ ಬುದ್ಧನ ತಂಗುದಾಣವಾಗಿದ್ದ ಕುಶಿನಾರಕ್ಕೆ ಬರುತ್ತಾರೆ. ತನಗೆ ಅತೀವ ಬೇನೆ ಇದ್ದರೂ ಕರುಣಿ ಬುದ್ಧ ಅವರಿಗೆ ಧರ್ಮಬೋಧನೆ ಮಾಡುತ್ತಾನೆ. ನಂತರ ಶಿಷ್ಯರಿಗೆ ಮತ್ತೆ ಉಪದೇಶ ಮಾಡಿ ಎಲ್ಲರಂತೆ ದೇಹ ಬಿಡುತ್ತಾನೆ. ಸಾವೆಂಬ ಸಾಮಾನ್ಯ ಘಟನೆಯನ್ನು ಈ ’ಸುತ್ತ’ ಸ್ವಲ್ಪಮಟ್ಟಿಗೆ ದಂತಕತೆಯ ಬಣ್ಣ ಹಚ್ಚಿ ಹೇಳುತ್ತರಾದರೂ ಇಲ್ಲಿ ಸಾವಿನ ನಿರಾಕರಣೆಯಾಗಲೀ ಆ ಬಗ್ಗೆ ದಿಗಿಲಾಗಲೀ ಇಲ್ಲ. ಇದೇ ರೀತಿ ಸಲ್ಲೇಖನಾದಿ ವ್ರತಗಳನ್ನು ಕೈಗೊಳ್ಳುವ ಜೈನ ಮುನಿಗಳು, ತಮ್ಮ ದೇಹದ ಭಾಗಗಳನ್ನು, ಕೆಲವು ಸಲ ಶಿರಸ್ಸನ್ನು ಕಡಿದು ಹಾಕಿಕೊಳ್ಳುವ ಉಗ್ರ ತಾಂತ್ರಿಕ ಖಂಡಮುಂಡನ ಯೋಗಿಗಳು, ತಮ್ಮ ಇಹದ ಮಣಿಹ ಮುಗಿದ ನಂತರ ಶಿಷ್ಯ ಸಮೇತ ಗುಹಾಪ್ರವೇಶವನ್ನು ಮಾಡಿದ ಕಾಶ್ಮೀರದ ಸಂತ ಆಚಾರ್ಯ ಅಭಿನವ ಗುಪ್ತ- ಈ ಎಲ್ಲರೂ ಸಾವನ್ನು ಒಪ್ಪಿಕೊಂಡವರು ಮಾತ್ರವಲ್ಲ, ಅಪ್ಪಿಕೊಂಡವರು. ಇವರೆಲ್ಲರ ಆಧ್ಯಾತ್ಮಿಕತೆಗೆ ಸಾವು ಎದುರಾಳಿಯಲ್ಲ, ಬುನಾದಿ. ಕಬೀರ ಒಂದು ಕಡೆ ಅನ್ನುತ್ತಾನೆ: ‘ಇಲ್ಲೊಬ್ಬ ಅರಸಾಗಿ ರಾಜಗದ್ದುಗೆ ಹತ್ತಿದ್ದಾನೆ; ಅಲ್ಲೊಬ್ಬ ಭಿಕಾರಿಯಾಗಿ ಬೀದಿಗೆ ಬಿದ್ದಿದ್ದಾನೆ.ಆದರೆ ಕಬೀರಾ ಇಬ್ಬರೂ ಒಂದು ದಿನ ಸಾಯುತ್ತಾರೆ’ ಇಷ್ಟಾದರೂ, ಶರೀರಕ್ಕೆ ಸಾವು ಅನಿವಾರ್ಯವೆನ್ನುವುದು ಸೂರ್ಯಸ್ಪಷ್ಟವಾಗಿದ್ದರೂ ಕೆಲವು ಮಹಾತ್ಮರು ಸಾವೆಂಬ ಸಿಂಹದ ಮೀಸೆಯನ್ನು ಜಗ್ಗುವುದು ಯಾಕೆ? ಇದು ಕೇಳಬೇಕಾದ ಪ್ರ್ರಶ್ನೆ. ಬಹುಶಃ ಟಿ.ಎಸ್. ಏಲಿಯಟ್ ಹೇಳಿದ ಹಾಗೆ ’ಮ್ಯಾನ್‌ಕೈಂಡ್ ಕ್ಯನಾಟ್ ಬ್ಯೆರ್ ಟೂ ಮಚ್ ರಿಯಾಲಿಟಿ’. ಸಾಮಾನ್ಯ ಮನುಷ್ಯರಿಗೆ ಹೇಗೋ ಹಾಗೆಯೇ ಮಹಾತ್ಮರಿಗೂ ಅಂಟಿಕೊಂಡಿರುವ ಈ ಮೃತ್ಯುಂಜಯತ್ವದ ಅದಮ್ಯ ಮೋಹಕ್ಕೆ ವೈಚಾರಿಕ ಕಾರಣಗಳಿಲ್ಲ. ನೇತ್ಯಾತ್ಮಕವಾಗಿ ನೋಡಿದಾಗ ಈ ಪ್ರವೃತ್ತಿ ಸತ್ಯವಿಮುಖಿಯಾದ ಹೇಡಿತನದಿಂದ ಪ್ರೇರಿತವಾದುದು. ಇದರಿಂದಲೇ ಹಲವು ಕಟ್ಟುಕತೆಗಳೂ ಮೂಢನಂಬಿಕೆಗಳೂ ಹುಟ್ಟಿಕೊಳ್ಳುವುದು. ಆದರೆ ಈ ಮರಣಭೀತಿಗೆ ಇತ್ಯಾತ್ಮಕವಾದ ಮಗ್ಗುಲುಗಳೂ ಇವೆ. ಸಾವಿನ ಭಯದಿಂದ, ಅದನ್ನು ಗೆಲ್ಲುವ ಹಟದಿಂದ ಈಜಿಪ್ಟಿನ ಫ್ಯಾರೋಗಳು ಪಿರಾಮಿಡ್ಡುಗಳನ್ನು ಕಟ್ಟಿಸಿದರು. ಇದೇ ರೀತಿ ಮಾನವ ಸೃಷ್ಟಿಯ ಕೌತುಕಗಳಾಗಿ ಉಳಿದಿರುವ ಮಹಾನ್ ಕಲಾಕೃತಿಗಳು, ಇಮಾರತಿಗಳು, ಮೂರ್ತಿಗಳು, ಮಂದಿರಗಳು ಹುಟ್ಟಿರುವುದು ಸಾವಿನ ಭಯದಿಂದ, ಅದನ್ನು ಗೆಲ್ಲಬೇಕೆಂಬ ವಾಂಛೆಯಿಂದ. ವಿಲ್ಯಂ ಬ್ಲೇಕ್ ಹೇಳುತ್ತಾನೆ: ’ಅನಂತತೆಗೆ ಸದಾ ಮರ್ತ್ಯಸೃಷ್ಟಿಯ ಬಗೆಗೆ ತಹತಹ’. ಕಲಾವಿದರಲ್ಲದ ಶ್ರೀಸಾಮಾನ್ಯರೂ ಸಾವನ್ನು ಗೆಲಲ್ಲು ತಮ್ಮದೇ ಆದ ಬಗೆಗಳಲ್ಲಿ ಸೆಣಸುತ್ತಾರೆ.ಫೋಟೋಗ್ರಫಿ ಬಂದ ನಂತರ ಸತ್ತವರು ಫೋಟೋಗಳಲ್ಲಿ ವಿರಾಜಮಾನವಾಗಿರುತ್ತಾರೆ. ದುಡ್ಡಿನ ದೊಡ್ಡಪ್ಪಗಳು ತಮ್ಮ ಹೆಸರಿನಲ್ಲಿ, ಸತ್ತ ತಮ್ಮ ಬಾಂಧವರ ಹೆಸರುಗಳಲ್ಲಿ ಕೆರೆ, ಕುಂಟೆ, ಬಾವಿ, ದೇಗುಲ, ಆಸ್ಪತ್ರೆ, ಶಾಲೆ, ಕಾಲೇಜು, ಅನಾಥಾಶ್ರಮ ಇತ್ಯಾದಿಗಳನ್ನು ಕಟ್ಟಿಸುತ್ತಲೇ ಬರುತ್ತಿದ್ದಾರೆ. ಇಂಥವುಗಳಿಂದ ಲೋಕಕಲ್ಯಾಣ ಆಗುವುದಿಲ್ಲವೆಂದು ಹೇಳಲಾಗದು. ಆದರೆ ಇವುಗಳೆಲ್ಲದರ ಪ್ರೇರಣೆ ಸ್ವಾರ್ಥದಲ್ಲೂ ಇದೆ. ಸಾವಿನ ಅನುಲ್ಲಂಘನೀಯತೆಯನ್ನು, ಅನಿವಾರ್ಯತೆಯನ್ನು, ಶರೀರಕ್ಷಯವನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಮಹಾತ್ಮರು, ಅವರನ್ನು ನಂಬುವ ಶ್ರಿಸಾಮಾನ್ಯರು ಆತ್ಮವೆಂಬ ಶಾಶ್ವತ ವಸ್ತುವಿನ ಮೇಲಿನ ವಿಶ್ವಾಸದಿಂದ ಸಾವನ್ನು ಗೆಲ್ಲಲು ಯತ್ನಿಸುತ್ತಾರೆ. ಆದರೆ ಆತ್ಮದ ಶಾಶ್ವತತೆ ಎಲ್ಲರ ಅನುಭವದ ತೆಕ್ಕೆಗೊದಗುವುದಲ್ಲ. ಸತ್ತ ನಂತರ ಸ್ವರ್ಗವುಂಬುವ ಮಾತನ್ನು ಅಲ್ಲಮಪ್ರಭು ‘ಬಾಲಭಾಷೆ’ ಎಂದು ಆಡಿಕೊಳ್ಳುತ್ತಾನೆ. ಅಲ್ಲದೆ ಆತ್ಮದ ನಿರಂತರತೆಯನ್ನು ಎತ್ತಿ ಹಿಡಿಯಲು ಹುಟ್ಟಿಕೊಂಡ ಅಮರಕೃತಿಗಳು ಅಂತಿಮವಾಗಿ ಎತ್ತಿಹಿಡಿಯುವುದು ಭೌತಿಕ ಪ್ರಪಂಚದ ಅಮರತೆಯನ್ನೇ. ಭೌತಿಕತೆಯ, ಮರ್ತ್ಯತೆಯ ಅಣಕುಗಳಾಗಲು ಹವಣಿಸುವ ಅಪೂರ್ವ ನಟನೆಗಳು ಭೌತಿಕವಾಗಿಯೇ ಸಂಭವಿಸುತ್ತವೆ ಎಂಬುದು ಒಂದು ಕ್ರೂರ ವ್ಯಂಗ್ಯ. ಈ ವ್ಯಂಗ್ಯವನ್ನು ಜಪಾನಿನ ಪ್ರಸಿದ್ಧ ಲೇಖಕ ಯೂಕಿಯೋ ಮಿಷಿಮಾ ತನ್ನ ಕೊನೆಯ ನಾಟಕದಲ್ಲಿ ತುಂಬಾ ಹೃದ್ಯವಾಗಿ ಚಿತ್ರಿಸಿದ್ದಾನೆ. ಆ ನಾಟಕ ಕ್ಯಾಂಬೋಡಿಯದ ಸುಪ್ರಸಿದ್ಧ ಅಂಕೋರ್ವ್ಯಾಟ್ ವಿಷ್ಣು ಮಂದಿರವನ್ನು ಕುರಿತದ್ದು. ತನ್ನ ದೇಹದ ನಶ್ವರತೆಗೆ ಸವಾಲು ಹಾಕುವ ಉದ್ದೇಶದಿಂದ ರಾಜ, ಮಂದಿರದ ನಿರ್ಮಾಣಕ್ಕೆ ತೊಡಗುತ್ತಾನೆ. ಮಂದಿರ ನಿರ್ಮಾಣ ಕಾರ್ಯ ಕೊನೆಗೊಳ್ಳುತ್ತಿದ್ದ ಹಾಗೆ ಅವನ ಆಯುಷ್ಯವೂ ಮುಗಿಯುತ್ತಾ ಬರುತ್ತದೆ. ಅವನ ಆತ್ಮ ಮತ್ತು ದೇಹಗಳ ನಡುವಿನ ಸಂವಾದವೇ ಆ ನಾಟಕದ ಕೇಂದ್ರ.ಮಂದಿರ ನಿರ್ಮಾಣವನ್ನು ಯಶಸ್ವಿಯಾಗಿ ನೆರವೇರಿಸಿದ ಅವನ ಆತ್ಮ ಹೀಗೆ ಬಡಾಯಿ ಕೊಚ್ಚಿಕೊಳ್ಳುತ್ತದೆ: ’ಈಗಾದರೂ ಗೊತ್ತಾಯಿತಾ ನನ್ನ ನಶಿಸುತ್ತಿರುವ ದೇಹವೇ, ನಾನೇ ಮಿಗಿಲೆಂದು. ನಾನು ಶಾಶ್ವತ, ನೀನು ನಶ್ವರ’. ಇದನ್ನು ಕೇಳಿ ಆತನ ದೇಹ ಹೇಳುತ್ತದೆ: ’ ಹುಚ್ಚ, ನಾನು ಶಾಶ್ವತ, ನೀನು ನಶ್ವರ. ನಿನ್ನ ಅಜರಾಮರತ್ವವನ್ನು ಸಾರುವುದು ನನ್ನ-ಶರೀರದ- ಇನ್ನೊಂದು ರೂಪವಾಗಿರುವ, ಭೌತಿಕವೇ ಆಗಿರುವ ಈ ಮಂದಿರವೇ. ಅಶಾಶ್ವತವಾದ ಆತ್ಮವೇ, ನಿನ್ನ ಮುಂದಿರುವ ಆ ದೀಪದಂತೆ ನೀನೂ ಇನ್ನೇನು ಆರಿಹೋಗುತ್ತೀಯ. ಬೇಗ ಆರಿ ಹೋಗು. ನಾನು ಸದಾ ಇರುತ್ತೇನೆ’. ಹೀಗೆ ಸಾವಿನ ಭೀತಿ, ಮೃತ್ಯುಂಜಯತ್ವಗಳ ನಿತ್ಯ ಕುರುಹುಗಳೂ ಭೌತಿಕವೇ.ಮೃತ್ಯುಂಜಯತ್ವದ ದಾಹ ಹೀಗೆ ನಮ್ಮ ವಸ್ತುಲೋಕಕ್ಕೆ ಅಲಂಕಾರ, ಶೃಂಗಾರಗಳನ್ನು ನೀಡಿದೆ. ಇನ್ನೊಂದು ಕಡೆ ಸತ್ಯದ ಬಂಡವಾಳವಿಲ್ಲದ ಆಧ್ಯಾತ್ಮಿಕ ಬಡಾಯಿಗಳಿಗೂಬಡಾಯಿಗಳಿಗೂ ಕಾರಣವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.