ಸ್ವಾಗತಾರ್ಹ ನಿರ್ಧಾರ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಒಂಬತ್ತು ಮತ್ತು ಹತ್ತನೇ ತರಗತಿಯ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತ ಪುಸ್ತಕ ನೀಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈವರೆಗೆ ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಲಾಗುತ್ತಿತ್ತು. ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ನಡುವೆ ಇದ್ದ ತಾರತಮ್ಯವನ್ನು ನಿವಾರಿಸಿದಂತಾಗಲಿದೆ. ಸಮವಸ್ತ್ರ ನೀಡಿಕೆಯಲ್ಲೂ ಇದೇ ನೀತಿಯನ್ನು ಜಾರಿಗೆ ತರಬೇಕು. ಅನುದಾನಿತ ಶಾಲೆಗಳ ಕಟ್ಟಡ ಮತ್ತು ಆಡಳಿತ ವರ್ಗವನ್ನು ಹೊರತು ಪಡಿಸಿದರೆ ಅಲ್ಲಿಯ ಸಿಬ್ಬಂದಿಯ ವೇತನವನ್ನೆಲ್ಲ ಸರ್ಕಾರವೇ ಭರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಅನುದಾನಿತ ಶಾಲೆಗಳ ಮತ್ತು ಅಲ್ಲಿ ವ್ಯಾಸಂಗ ಮಾಡುವ ಮಕ್ಕಳ ಸ್ಥಿತಿಗೂ ಸರ್ಕಾರಿ ಶಾಲೆಗಳ ಸ್ಥಿತಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಕೆಳಮಧ್ಯಮ ವರ್ಗಗಳ ಕುಟುಂಬಗಳಿಂದ ಬಂದವರಾಗಿರುತ್ತಾರೆ. ಅನುದಾನಿತ ಶಾಲೆಗಳ ಮಕ್ಕಳಿಗೆ ಈಗಾಗಲೇ ಬೈಸಿಕಲ್ ನೀಡುತ್ತಿರುವುದರಿಂದ ಸಮವಸ್ತ್ರ ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿನ ಉಳಿದ ಸೌಲಭ್ಯವನ್ನು ವಿಸ್ತರಿಸುವ ಬಗೆಗೆ ಸರ್ಕಾರ ಗಂಭೀರವಾಗಿ ಚಿಂತಿಸುವುದು ಅವಶ್ಯ. ಸಂವಿಧಾನದ ನಿರ್ದೇಶನದಂತೆ ಹದಿನಾಲ್ಕು ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತವಾಗಿ ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಶಿಕ್ಷಣ ಸೌಲಭ್ಯ ಕಲ್ಪಿಸುವುದಕ್ಕೆ ಸರ್ಕಾರ ಹಿಂದೇಟು ಹಾಕಬಾರದು. ಹಲವಾರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಶಾಲೆಗಳಿಲ್ಲದ ಕಡೆಗಳಲ್ಲಿ ಬಹುತೇಕವಾಗಿ ಸೇವಾ ಮನೋಭಾವದಿಂದಲೇ ಆಯಾ ಭಾಗದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಖಾಸಗಿ ಶಾಲೆಗಳು ಆರಂಭವಾದವು. ಖಾಸಗಿ ಒಡೆತನದಿಂದಾಗಿ ಅನೇಕ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿರುವುದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಕೆಲವು ಶಾಲೆಗಳ ಆಡಳಿತ ಮಂಡಳಿಗಳಲ್ಲಿ ಅವ್ಯವಹಾರ ಪ್ರಕರಣಗಳು ನಡೆದಿರುವ ಆರೋಪಗಳಿವೆ. ಕೆಲವರು, ವಿಶೇಷವಾಗಿ ರಾಜಕೀಯ ಹಿನ್ನೆಲೆಯಿಂದ ಬಂದವರು, ಸರ್ಕಾರದಿಂದ ಬರುವ ಅನುದಾನದ ಮೇಲೆ ಕಣ್ಣಿಟ್ಟು ವಾಣಿಜ್ಯ ಉದ್ದೇಶದಿಂದ ಶಾಲೆಗಳನ್ನು ಸ್ಥಾಪಿಸಿರುವುದು ರಹಸ್ಯ ಸಂಗತಿಯೇನಲ್ಲ. ಅಂತಹ ಶಾಲೆಗಳಲ್ಲಿ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸಂಖ್ಯೆಯ ಅನುಪಾತದಲ್ಲಿ ವ್ಯತ್ಯಾಸಗಳಿರುತ್ತವೆ. ಈ ಶಾಲೆಗಳಲ್ಲಿ ಸರಿಯಾಗಿ ಸರ್ಕಾರದಿಂದ ಕೊಡುವ ವೇತನ ಮತ್ತಿತರ ಸೌಲಭ್ಯಗಳನ್ನೂ ನೀಡುತ್ತಿಲ್ಲ ಎನ್ನುವ ದೂರುಗಳಿವೆ. ಇಂಥವುಗಳ ಚರಿತ್ರೆ ಸರ್ಕಾರಕ್ಕೆ ತಿಳಿಯದ್ದೇನೂ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆಗಿಂದಾಗ್ಗೆ ಇವುಗಳ ಕಾರ್ಯವಿಧಾನವನ್ನು ತನಿಖೆ ನಡೆಸಿ ಲೋಪದೋಷಗಳು ಕಂಡು ಬಂದಾಗ ಪ್ರಾಮಾಣಿಕವಾಗಿ ಶಿಸ್ತು ಕ್ರಮ ಕೈಗೊಂಡರೆ ಅವುಗಳನ್ನೂ ಉತ್ತಮಪಡಿಸಲು ಸಾಧ್ಯ. ಸರ್ಕಾರ ಅನುದಾನ ನೀಡುವುದರಿಂದ ಅನುದಾನಿತ ಶಾಲೆಗಳ ಮೇಲೆ ನಿಯಂತ್ರಣ ಸಾಧಿಸುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.