ಮಹಿಳಾ ಪೊಲೀಸ್ ಬಲ ಹೆಚ್ಚಿಸಿ ರಾಷ್ಟ್ರದ ಒಟ್ಟು ಪೊಲೀಸ್ ಪಡೆಯಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇಕಡ 3.98 ಇದೆ ಎಂಬ ವಿಚಾರದ ಬಗ್ಗೆ ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಪಡೆಯಲ್ಲಿ ಮಹಿಳೆಯರ ಪ್ರಮಾಣವನ್ನು ಶೇಕಡ 33ಕ್ಕೆ ಏರಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕರೆ ನೀಡಲಾಗಿದೆ. ಪೊಲೀಸ್ ಠಾಣೆಗಳೆಂದರೆ ಜನರಲ್ಲಿರುವುದು ಭೀತಿಯ ಭಾವನೆ. ಮರ್ಯಾದಸ್ಥರು ಎಂದೆಂದೂ ಪೊಲೀಸ್ ಠಾಣೆ ಮೆಟ್ಟಿಲೇರಲೇಬಾರದು ಎಂಬಂಥ ಮನೋಭಾವ ಸಮಾಜದಲ್ಲಿದೆ. ಅದರಲ್ಲೂ ಮಹಿಳೆಯರಿಗಂತೂ ಇದು ಇನ್ನೂ ಕಷ್ಟ. ಆದರೆ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವ ದಿನಗಳು ಇವು. ಇಂತಹ ಸನ್ನಿವೇಶದಲ್ಲಿ, ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ದೊರಕಿಸಿಕೊಡಲು ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಬೇಕಾದುದು ಅವಶ್ಯ. ಇದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿ ಸಾಕಷ್ಟು ಪ್ರಮಾಣದಲ್ಲಿ ಇರಬೇಕಾದುದು ಪ್ರಾಥಮಿಕ ಅಗತ್ಯ. ದೂರು ನೀಡಲು ಬರುವಂತಹ ಮಹಿಳೆಯರ ಹಿಂಜರಿಕೆ ದೂರ ಮಾಡಲು ಇದು ಸಹಾಯಕ. ಈ ಹಿನ್ನೆಲೆಯಲ್ಲಿ ಸಿವಿಲ್ ಪೊಲೀಸ್ ಕಾನಸ್ಟೆಬಲ್ ಹಾಗೂ ಸಬ್ ಇನ್ಸಪೆಕ್ಟರ್ ದರ್ಜೆಯ ಹುದ್ದೆಗಳಲ್ಲಿ ಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಆಲೋಚಿಸಲಾಗಿದೆ ಎಂಬಂತಹ ಕೇಂದ್ರದ ಹೇಳಿಕೆ ಸ್ವಾಗತಾರ್ಹ. ಆದರೆ ಇದು ಬಾಯುಪಚಾರದ ಮಾತುಗಳಾಗಿ ಉಳಿಯಬಾರದು. ಪೊಲೀಸ್ ಪಡೆಯಲ್ಲಿ ಶೇ 33ರಷ್ಟು ಮಹಿಳೆಯರ ನೇಮಕಾತಿಯನ್ನು ಕಡ್ಡಾಯ ಮಾಡಬೇಕು. ಇದಕ್ಕಾಗಿ ನಿರ್ದಿಷ್ಟ ಅವಧಿಯಲ್ಲಿ ಕಟ್ಟುನಿಟ್ಟಿನ ಕಾನೂನು ರೂಪಿಸುವುದು ಅಷ್ಟೇ ಅಗತ್ಯ. ಹಾಗಾದಾಗ ಮಾತ್ರ, ಇಂತಹ ಆಶ್ವಾಸನೆಗಳು ಪರಿಸ್ಥಿತಿಯ ಒತ್ತಡಗಳಿಗೆ ಮಣಿದು ನೀಡಿದಂತಹ ರಾಜಕೀಯ ಹೇಳಿಕೆಗಳಾಗಷ್ಟೇ ಉಳಿಯದೆ ಬದ್ಧತೆ ಸಾಧ್ಯವಾಗುತ್ತದೆ. ದೆಹಲಿ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಲೈಂಗಿಕ ಹಿಂಸಾಚಾರಗಳ ಕುರಿತಂತಹ ದೃಷ್ಟಿಕೋನಗಳನ್ನು ಮರುಪರಿಶೀಲಿಸುವುದು ಇಂದು ಅತ್ಯಂತ ಅಗತ್ಯ. ಸಮಕಾಲೀನ ಸಮಾಜದಲ್ಲಿ ಮಹಿಳೆಯ ಪಾತ್ರ ಕುಟುಂಬಕ್ಕಷ್ಟೇ ಸೀಮಿತವಾಗಿಲ್ಲ. ಮಹಿಳೆ ಕುರಿತಾದಂತಹ ಪರಂಪರಾಗತ ಮೌಲ್ಯಗಳಲ್ಲಿ ಇಂದು ಭಾರಿ ಪಲ್ಲಟಗಳಾಗುತ್ತಿವೆ. ಇಂತಹ ಸೂಕ್ಷ್ಮವಾದ ಸ್ಥಿತ್ಯಂತರ ಕಾಲಘಟ್ಟದಲ್ಲಿ ಮಹಿಳೆ ವಿರುದ್ಧದ ಅಪರಾಧಗಳು ಸಾರ್ವಕಾಲಿಕ ಹೆಚ್ಚಳ ಕಂಡಿರುವುದು ದುರದೃಷ್ಟಕರ. ವರದಕ್ಷಿಣೆ, ಕೌಟುಂಬಿಕ ಹಿಂಸೆ, ಲೈಂಗಿಕ ದುರ್ವರ್ತನೆ, ಅತ್ಯಾಚಾರ, ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಹೆಣ್ಣುಭ್ರೂಣ ಹತ್ಯೆಗಳಂತಹ ಸಾಮಾಜಿಕವಾಗಿ ಹಾನಿಕಾರಕ, ಶೋಷಣಾತ್ಮಕ ಆಚರಣೆಗಳು ಮಾಮೂಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪರಾಧ ನ್ಯಾಯ ವ್ಯವಸ್ಥೆಗೆ ಪುನರ್‌ವ್ಯಾಖ್ಯಾನ ಹಾಗೂ ಪುನಶ್ಚೇತನ ಅತ್ಯಂತ ತುರ್ತಿನದಾಗಿದೆ. ಆದರೆ ಪೊಲೀಸ್ ಕೆಲಸ ಕುರಿತಂತೆ ಇರುವ ದೃಷ್ಟಿಕೋನಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೆಲಸಕ್ಕೆ ಸೇರಲು ಪೂರಕವಾಗಿಲ್ಲ. ಸಾಮಾಜಿಕ, ಸಾಂಸ್ಕೃತಿಕ ಕಾರಣಗಳ ಜೊತೆಗೆ ಪೊಲೀಸ್ ಆಯ್ಕೆ ಪ್ರಕ್ರಿಯೆ ಹಾಗೂ ನೇಮಕಾತಿ ನೀತಿಗಳಲ್ಲಿರುವ ದೋಷಗಳೂ ಇದಕ್ಕೆ ಕಾರಣ. ಬೇರೆ ಯಾವುದೇ ಸರ್ಕಾರಿ ಉದ್ಯೋಗಗಳಿಗಿಂತ, ಕಾನ್‌ಸ್ಟೆಬಲ್ ಮಟ್ಟದಲ್ಲಿ ಮಹಿಳೆಯರು ಕೆಲಸ ಬಿಡುವ ಪ್ರಮಾಣ ಹೆಚ್ಚಿದೆ ಎಂಬಂತಹ ಅಭಿಪ್ರಾಯ ಇದೆ. ಈ ಹಿನ್ನೆಲೆಯಲ್ಲಿ, ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರನ್ನು ಸಮಾನ ನೆಲೆಯಲ್ಲಿ ಪರಿಗಣಿಸುವ ಮನಸ್ಥಿತಿ ಪೊಲೀಸ್‌ವ್ಯವಸ್ಥೆಯಲ್ಲಿ ಬೇರೂರಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.