ಸುರಕ್ಷತೆಗೆ ನಿರ್ಲಕ್ಷ್ಯ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಪ್ರವಾಸಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಅವಲಂಬಿಸುವುದು ಹೆಚ್ಚುತ್ತಿದೆ. ರಾಜಕೀಯ ಅವಸರ ಮತ್ತು ಅಧಿಕಾರದ ಗತ್ತಿನಿಂದಾಗಿ ಹೆಲಿಕಾಪ್ಟರ್‌ಗಳ ಸುರಕ್ಷತೆಯ ಕಡೆ ಗಮನ ಕಡಿಮೆಯಾಗುತ್ತಿದೆ. ಹವಾಮಾನ ಪ್ರತಿಕೂಲವಾಗಿದ್ದರೂ ಅದನ್ನು ನಿರ್ಲಕ್ಷಿಸಿ ಪ್ರವಾಸ ಮುಂದುವರಿಸುವ ಉಡಾಫೆಯ ಧೋರಣೆ ಇದು. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ಪ್ರಯಾಣ ಕಾಲದಲ್ಲಿಯೇ ದುರಂತಕ್ಕೆ ಈಡಾದ ಘಟನೆಯ ಒಂದೂವರೆ ವರ್ಷದಲ್ಲಿಯೇ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ದೋರ್ಜಿ ಖಂಡು ಅಂಥದ್ದೇ ಸನ್ನಿವೇಶದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಕಳೆದ ಶನಿವಾರ ಮುಂಜಾನೆ ಅವರನ್ನು ಹೊತ್ತ ಪವನಹಂಸ ಹೆಲಿಕಾಪ್ಟರ್ ನಭಕ್ಕೇರಿದ 20 ನಿಮಿಷಗಳಲ್ಲೇ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತಲ್ಲದೆ, ಐದು ದಿನಗಳ ನಂತರ ಅಪಘಾತಕ್ಕೀಡಾಗಿ ಭಗ್ನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಖ್ಯಮಂತ್ರಿ ಅವರಲ್ಲದೆ, ಚಾಲಕ ಸಿಬ್ಬಂದಿ, ಆಪ್ತ ಸಿಬ್ಬಂದಿ ಸೇರಿ ಇತರ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣಗಳು ತನಿಖೆಯ ನಂತರ ಪತ್ತೆಯಾಗಲಿದ್ದರೂ ಹಾರಾಟ ಆರಂಭಿಸುವ ಮೊದಲು ಹೆಲಿಕಾಪ್ಟರ್‌ನ ಸುಸ್ಥಿತಿಯ ಕುರಿತಾದ ಎಚ್ಚರಿಕೆ ವಹಿಸಿರಲಿಲ್ಲವೆಂಬುದು ಸ್ಪಷ್ಟವಾಗಿದೆ. ‘ಪವನಹಂಸ’ ಅರುಣಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವೈಮಾನಿಕ ಸೇವೆ ಒದಗಿಸುತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಹೆಲಿಕಾಪ್ಟರ್. ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ಸಹಯೋಗದಲ್ಲಿ ತೈಲ ನಿಕ್ಷೇಪ ಪತ್ತೆ ಕಾರ್ಯದೊಂದಿಗೆ ಪರ್ವತ ಕಣಿವೆ ಪ್ರದೇಶಗಳಲ್ಲಿ ಹಾರಾಟ ನಡೆಸುತ್ತಿದ್ದ ಈ ಸಂಸ್ಥೆಯ ಹೆಲಿಕಾಪ್ಟರ್‌ಗಳಲ್ಲಿ ಈಚಿನ ದಿನಗಳಲ್ಲಿ ಸಮಸ್ಯೆಗಳು ತಲೆದೋರಿದ್ದವು. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಬಳಸುವ ಮೊದಲು ಹೆಚ್ಚಿನ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿತ್ತು. ಅಂಥ ನಿರ್ಲಕ್ಷ್ಯ ರಾಜ್ಯವೊಂದರ ಮುಖ್ಯಮಂತ್ರಿಯ ಅಕಾಲಿಕ ಸಾವಿಗೆ ಕಾರಣವಾಗಿದೆ. ದೋರ್ಜಿ ಖಂಡು ಅರುಣಾಚಲ ಪ್ರದೇಶದಲ್ಲಿ ವರ್ಚಸ್ವೀ ನಾಯಕರಾಗಿದ್ದು ಎರಡು ಸಲ ಅವಿರೋಧವಾಗಿ ಆಯ್ಕೆಯಾದ ಹೆಗ್ಗಳಿಕೆ ಅವರದು. ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಅವರು ಯುವಜನತೆಯೊಂದಿಗೆ ಹೆಚ್ಚು ಜನಪ್ರಿಯರಾಗಿದ್ದರು. ಸಾರ್ವಜನಿಕ ಸೇವೆಗೆ ಪ್ರವೇಶಿಸುವ ಮೊದಲು ಭಾರತೀಯ ಸೇನೆಯ ಗುಪ್ತಚರ ವಿಭಾಗದಲ್ಲಿ ಏಳು ವರ್ಷ ಸೇವೆ ಸಲ್ಲಿಸಿದ್ದರು. ಬಾಂಗ್ಲಾವಿಮೋಚನೆಯ ಸಂದರ್ಭದಲ್ಲಿ ತಮ್ಮ ವಿಶಿಷ್ಟ ಸೇವೆಗಾಗಿ ಚಿನ್ನದ ಪದಕ ಗಳಿಸಿದ್ದವರು. ಸೇನೆಯ ಸಹಕಾರ ಚಳವಳಿಯಿಂದ ರಾಜಕೀಯ ಪ್ರವೇಶಿಸಿದ ದೋರ್ಜಿ ಖಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ವಹಿಸಿದ ಅಪರೂಪದ ರಾಜಕಾರಣಿ. ಗಣ್ಯರು ಪ್ರವಾಸ ಮಾಡುವ ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.