ಆರ್‌ಬಿಐನ ಆಕ್ರಮಣಕಾರಿ ನೀತಿ ಪ್ರಸಕ್ತ ಹಣಕಾಸು ವರ್ಷದ ವಾರ್ಷಿಕ ಸಾಲ ನೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಒಟ್ಟಾರೆ ಆಕ್ರಮಣಕಾರಿ ಧೋರಣೆ ತಳೆದಿರುವುದು ಕಂಡು ಬರುತ್ತದೆ. ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಮತ್ತೆ ಶೇ 0.5 ರಷ್ಟು ಹೆಚ್ಚಿಸಿರುವುದು ನಿರೀಕ್ಷಿತ. ಬ್ಯಾಂಕ್‌ಗಳ ಉಳಿತಾಯ ಖಾತೆಯ (ಸೇವಿಂಗ್ಸ್ ಅಕೌಂಟ್ಸ್) ಬಡ್ಡಿ ದರಗಳನ್ನೂ ಶೇ 3.5ರಿಂದ ಶೇ 4ಕ್ಕೆ ಹೆಚ್ಚಿಸಿರುವುದು ಮಾತ್ರ ಅನಿರೀಕ್ಷಿತ. ಅವಶ್ಯಕ ಸರಕುಗಳು ಬೆಲೆ ಏರಿಕೆ ನಿಯಂತ್ರಿಸಲಿಕ್ಕಾಗದ ಮಟ್ಟಕ್ಕೆ ತಲುಪಿ ಗಂಭೀರ ಸಮಸ್ಯೆಯಾಗಿ ಎಲ್ಲರನ್ನೂ ಬಾಧಿಸುತ್ತಿರುವಾಗ ಇಂತಹ ಕಠಿಣ ನಿಲುವು ತಳೆಯುವುದು ಅನಿವಾರ್ಯ. ಅಲ್ಪಾವಧಿಯಲ್ಲಿ ಆರ್ಥಿಕ ವೃದ್ಧಿಯನ್ನು ಕೆಲಮಟ್ಟಿಗೆ ಬಲಿಗೊಟ್ಟಾದರೂ ಹಣದುಬ್ಬರ ನಿಗ್ರಹಿಸಬೇಕಾಗಿದೆ ಎನ್ನುವ ದೃಢ ನಿಲುವಿಗೆ ಆರ್‌ಬಿಐ ಬಂದಂತಿದೆ. ಬ್ಯಾಂಕ್ ಸಾಲ ನೀಡಿಕೆ ಮತ್ತು ಮಾರುಕಟ್ಟೆಯಲ್ಲಿನ ಹಣದ ಹರಿವಿಗೆ ನಿಯಂತ್ರಣ ಹಾಕಲು 15 ತಿಂಗಳಲ್ಲಿ ಸತತ 9ನೇ ಬಾರಿಗೆ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸುತ್ತಲೇ ಬಂದಿರುವುದು ಇಂತಹ ಕ್ರಮಗಳು ಇದುವರೆಗೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎನ್ನುವ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ. ಅಲ್ಪಾವಧಿ ಬಡ್ಡಿ ದರ ಹೆಚ್ಚಳದಿಂದ ಗೃಹ, ವಾಹನ ಮತ್ತಿತರ ಸಾಲಗಳ ಮೇಲಿನ ಬಡ್ಡಿ ದರಗಳು ದುಬಾರಿಯಾಗಲಿವೆ. ಹಣದುಬ್ಬರ ವಿರುದ್ಧದ ಸಮರದಲ್ಲಿ ಆರ್ಥಿಕ ವೃದ್ಧಿ ದರವನ್ನೇ ಬಲಿಗೊಡಲು ಹೊರಟಿರುವುದು ಸರಿಯಾದ ನಿಲುವಲ್ಲ. ಆರ್ಥಿಕ ಬೆಳವಣಿಗೆಯು ಉದ್ದೇಶಪೂರ್ವಕವಾಗಿ ಹಳಿ ತಪ್ಪುವಂತೆ ಮಾಡುವುದು ಜಾಣತನದ ನಿರ್ಧಾರವೂ ಅಲ್ಲ. ಆದರೆ, ಅಲ್ಪಾವಧಿಯಲ್ಲಿ ಇದು ಅನಿವಾರ್ಯ ಎನ್ನುವ ಆರ್‌ಬಿಐ ಗವರ್ನರ್ ದುವ್ವೆರಿ ಸುಬ್ಬರಾವ್ ಅವರ ಮಾತಿನಲ್ಲಿ ವಿಶ್ವಾಸ ಇಡಬಹುದಾಗಿದೆ. ಹಣದುಬ್ಬರಕ್ಕೆ ಮೂಗುದಾರ ಹಾಕಲು ಸಾಧ್ಯವಾಗದೇ, ಅದರಿಂದಲೇ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವಂತಾಗುವುದರ ಬದಲಿಗೆ ಅದನ್ನೇ ನಿಯಂತ್ರಿಸುವುದು ಸರಿಯಾದ ನಿಲುವೂ ಆದೀತು. ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆ ಮಧ್ಯೆ ಸಮತೋಲನ ಸಾಧಿಸಲು, ಕೇಂದ್ರೀಯ ಬ್ಯಾಂಕ್ ತಳೆದಿರುವ ಸದ್ಯದ ನಿಲುವು ಸಾಕಷ್ಟು ಕಠಿಣವಾಗಿದೆ. ಹಣದುಬ್ಬರ ವಿರುದ್ಧ ಮುಗಿ ಬಿದ್ದಿರುವ ಹಣಕಾಸು ನೀತಿಯಿಂದಾಗಿ ಸಾಲಗಳು ದುಬಾರಿಯಾಗಿ ಪರಿಣಮಿಸಿ ಬ್ಯಾಂಕ್‌ಗಳಿಂದ ಉತ್ಪಾದನಾ ಚಟುವಟಿಕೆ ಮತ್ತಿತರ ಉದ್ದೇಶಕ್ಕೆ ಪಡೆಯುವ ಸಾಲಗಳ ಪ್ರಮಾಣವು ಕಡಿಮೆಯಾಗಲಿದೆ. ಇನ್ನೊಂದೆಡೆ ಜನರ ಉಳಿತಾಯ ಪ್ರವೃತ್ತಿ ಉತ್ತೇಜಿಸಲು ಉಳಿತಾಯ ಖಾತೆಗಳ ಬಡ್ಡಿ ದರ ಹೆಚ್ಚಳದಿಂದ ಬ್ಯಾಂಕ್‌ಗಳಲ್ಲಿ ಹೆಚ್ಚು ಹಣ ಕ್ರೋಡೀಕರಣಗೊಂಡೀತು. ಇದರಿಂದ ಠೇವಣಿದಾರರಿಗೂ ಹೆಚ್ಚು ಅನುಕೂಲ. ನಿಶ್ಚಿತ ಅವಧಿಯ ಠೇವಣಿ ಇರಿಸಲು ಬಯಸದವರಿಂದ ಮನೆಯಲ್ಲಿಯೇ ಉಳಿದಿದ್ದ ಹೆಚ್ಚುವರಿ ಹಣವು ಈಗ ಉಳಿತಾಯ ಖಾತೆಗೆ ಹರಿದು ಬರುವ ನಿರೀಕ್ಷೆ ಇದೆ. ಆದರೆ, ಸಾಲದ ಮೇಲಿನ ಬಡ್ಡಿ ದರ ದುಬಾರಿಯಾಗುವುದರಿಂದ ಹಣ ಹೂಡಿಕೆ ಇನ್ನಷ್ಟು ಕಠಿಣವಾಗಲಿದೆ. ವೃದ್ಧಿ ದರ ಕುಂಠಿತಗೊಳ್ಳಲಿದೆ. ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಾರವು. ಇದು ಹೊಸ ಸಮಸ್ಯೆಗಳಿಗೆ ಎಡೆ ಮಾಡಿಕೊಡದಂತೆಯೂ ನೋಡಿಕೊಳ್ಳಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.