ಭೂಸ್ವಾಧೀನಕ್ಕೆ ಹೆದರುವುದೇಕೆ ‘ನೈಸ್’ ಸಂಸ್ಥೆಯು ಬೆಂಗಳೂರು ಮತ್ತು ಮೈಸೂರು ನಡುವೆ ನಿರ್ಮಿಸುತ್ತಿರುವ ಕಾರಿಡಾರ್ ಯೋಜನೆಗೆ ಬೇಕಾಗಿರುವ ಭೂಮಿ ನೀಡಲು ರಾಜ್ಯ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ಕ್ಷಮಿಸಲಾಗದು. ಮಂಡ್ಯ ಜಿಲ್ಲೆಯಿಂದ ಮೈಸೂರುವರೆಗೆ ಆಗಬೇಕಾಗಿರುವ ಕಾಮಗಾರಿಗೆ ಬೇಕಾಗಿರುವ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳುವಲ್ಲಿ ಸರ್ಕಾರ ‘ಕೆಲವು ಶಕ್ತಿ’ಗಳಿಗೆ ಹೆದರಿರುವಂತಿದೆ. ಸರ್ಕಾರದ ಈ ಅಸಹಾಯಕತೆಯನ್ನು ರೈತರ ಹೆಸರಿನಲ್ಲಿ ಕೆಲವು ಹಿತಾಸಕ್ತ ರಾಜಕೀಯ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುತ್ತಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಿಕೊಳ್ಳುವಾಗ ಸಹಜವಾಗಿಯೇ ರೈತರಿಂದಲೂ ಪ್ರತಿಭಟನೆ ಕಂಡು ಬರುತ್ತದೆ. ಅನ್ನ ನೀಡುವ ಭೂಮಿಯನ್ನು ಸರ್ಕಾರ ಕಸಿದುಕೊಳ್ಳುವಾಗ ಅದನ್ನೇ ನಂಬಿರುವ ಜನರ ಕಣ್ಣಲ್ಲಿ ನೀರು ಬರುವುದು ಸಹಜ. ಈ ವಾಸ್ತವವನ್ನು ಅರಿತು ಸರ್ಕಾರ ರೈತರ ಜಮೀನನ್ನು ನ್ಯಾಯವಾದ ದರದಲ್ಲಿ ಖರೀದಿಸಿ ಅದನ್ನು ಉದ್ದೇಶಿತ ಯೋಜನೆಗೆ ಬಳಸಿದರೆ ವಿರೋಧ ಬರದು. ಈಗ ಸ್ವಾಧೀನಕ್ಕೆ ಅಡಚಣೆಯಾಗಿರುವ ಪ್ರದೇಶ ಕಬ್ಬು ಮತ್ತು ಭತ್ತ ಬೆಳೆಯುವ ಭೂಮಿಯಾಗಿರುವುದೂ ಸರ್ಕಾರಕ್ಕೆ ತಲೆನೋವಾಗಿದೆ. ಆದರೆ ಕೆಲವು ಕಡೆಗಳಲ್ಲಿ ನೀರಾವರಿ ಪ್ರದೇಶವಾಗಿದ್ದರೂ, ರೈತರ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಅದನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳಿವೆ. ಇದರಿಂದಾಗಿಯೇ ಸರ್ಕಾರ ರೈತರಿಂದ ಪ್ರತಿಭಟನೆಯನ್ನು ಎದುರಿಸಬೇಕಾಗಿರುವುದು ಅನಿವಾರ್ಯ. ‘ಬಿಎಂಐಸಿ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದರೆ ರೈತರಿಂದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ತಡವಾಗಿದೆ’ ಎಂಬುದಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ನೀಡಿರುವ ಉತ್ತರ ಅತ್ಯಂತ ಬೇಜವಾಬ್ದಾರಿಯದು. ‘ನೈಸ್ ಸಂಸ್ಥೆಗೆ ಮೂಲ ಯೋಜನೆಯಂತೆ ಭೂಮಿ ನೀಡಲು ಮತ್ತು ಭೂಸ್ವಾಧೀನ ಪಡಿಸಿಕೊಳ್ಳಲು ಹೆದರುವವರು ಅಧಿಕಾರ ನಡೆಸಲು ಅರ್ಹರಲ್ಲ’ ಎನ್ನುವಂತೆ ಸುಪ್ರೀಂಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿರುವುದು ದುರದೃಷ್ಟಕರ. ಭೂಸ್ವಾಧೀನದ ವಿಳಂಬಕ್ಕೆ ಈಗಿನ ಸರ್ಕಾರವೊಂದೇ ಕಾರಣವಲ್ಲ ಎನ್ನುವುದು ನಿಜ. ಆದರೆ ಈಗಿನ ಸರ್ಕಾರ ಭೂಸ್ವಾಧೀನದ ವಿಷಯದಲ್ಲಿ ತನ್ನ ಪುಕ್ಕಲುತನವನ್ನು ಪ್ರದರ್ಶಿಸಿಕೊಂಡಿರುವುದಂತು ಸ್ಪಷ್ಟವಾಗಿ ಕಾಣುತ್ತದೆ. ಯಾವುದೋ ಕಾಣದ ಶಕ್ತಿಗೆ ಹೆದರಿದರೆ ಯಾವ ಅಭಿವೃದ್ಧಿ ಯೋಜನೆಯನ್ನೂ ನಿಗದಿತ ಕಾಲಮಿತಿಯಲ್ಲಿ ಮುಗಿಸಲು ಸಾಧ್ಯವಿಲ್ಲ. ಈಗಾಗಲೇ ಈ ಯೋಜನೆ 13 ವರ್ಷ ವಿಳಂಬವಾಗಿದೆ. ರೈತರಿಂದ ಪಡೆಯುವ ಭೂಮಿಯನ್ನು ಕಾರಿಡಾರ್ ಯೋಜನೆಗೆ ಮಾತ್ರ ಬಳಸುವುದಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಮನವರಿಕೆ ಮಾಡಿಕೊಡಬೇಕು. ಈ ಯೋಜನೆಯ ಮೂಲ ಒಪ್ಪಂದದಂತೆ ನೀಡಬೇಕಾಗಿರುವ ಭೂಮಿಯನ್ನು ಕೊಟ್ಟರೆ ಹೆದ್ದಾರಿ ಕಾಮಗಾರಿಯು ಆದಷ್ಟು ಬೇಗನೆ ಮುಗಿಯಲು ಸಾಧ್ಯ. ಆದ್ದರಿಂದ ಸರ್ಕಾರ ಅವಶ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಬೇಕು. ಯೋಜನೆಗಳು ಸಕಾಲಕ್ಕೆ ಮುಗಿಸಬೇಕೆನ್ನುವ ಬದ್ಧತೆಯನ್ನು ಸರ್ಕಾರ ಇನ್ನಾದರೂ ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.