ಪಾಕ್ ಮಣಿಸಲು ಸಕಾಲ ಪಾತಕಿ ಒಸಾಮ ಬಿನ್ ಲಾಡೆನ್ ಹತ್ಯೆಯ ನಂತರ ವಿಶ್ವದ ಎದುರು ಪಾಕಿಸ್ತಾನ ಬೆತ್ತಲಾಗಿಹೋಗಿದೆ. ಲಾಡೆನ್ ತಮ್ಮ ದೇಶದಲ್ಲಿ ಇಲ್ಲ ಎಂದು ವಾದಿಸುತ್ತಲೇ ಬಂದ ಪಾಕಿಸ್ತಾನದ ಬಣ್ಣವನ್ನು ಅದರ ಮಿತ್ರರಾಷ್ಟ್ರವಾದ ಅಮೆರಿಕವೇ ಬಯಲು ಮಾಡಿದೆ. ಪಾಕಿಸ್ತಾನ ಒಪ್ಪಲಿ ಬಿಡಲಿ, ಆ ದೇಶ ಮುಸ್ಲಿಮ್ ಭಯೋತ್ಪಾದಕರ ಸುರಕ್ಷಿತ ತಾಣವಾಗಿರುವುದು ಜಗತ್ತಿಗೆಲ್ಲ ಗೊತ್ತಿರುವ ಸತ್ಯ. ಹೀಗಿದ್ದರೂ ಪಾಕಿಸ್ತಾನ ಜಾಗತಿಕ ಅಭಿಪ್ರಾಯವನ್ನೂ ಲೆಕ್ಕಿಸದೆ ಭಯೋತ್ಪಾದಕರಿಗೆ ಆಶ್ರಯ ಮತ್ತು ನೆರವು ನೀಡುತ್ತಾ ಬಂದಿದೆ. ಈ ದುಸ್ಸಾಹಸಕ್ಕೆ ಮುಖ್ಯ ಕಾರಣ ಅಮೆರಿಕದ ಬೆಂಬಲ. 9/11ರ ಭಯೋತ್ಪಾದಕ ದಾಳಿಯ ನಂತರವಾದರೂ ಅಮೆರಿಕ ಕಣ್ಣುತೆರೆಯಬಹುದು ಎಂದು ಭಾರತ ನಿರೀಕ್ಷಿಸಿತ್ತು. ಈ ಹಿನ್ನೆಲೆಯಲ್ಲಿಯೇ ಭಯೋತ್ಪಾದಕರ ವಿರುದ್ಧ ಅಮೆರಿಕ ಜಾಗತಿಕ ಸಮರವನ್ನು ಘೋಷಿಸಿದಾಗ ಅದಕ್ಕೆ ಮೊದಲು ಬೇಷರತ್ ಬೆಂಬಲ ಘೋಷಿಸಿದ್ದು ಭಾರತ. ಅಮೆರಿಕ ಪ್ರಾಮಾಣಿಕವಾಗಿ ನಡೆದುಕೊಂಡಿದ್ದರೆ ‘ಭಯೋತ್ಪಾದಕರನ್ನು ಸೃಷ್ಟಿಸುವ ಕಾರ್ಖಾನೆ’ಯಾಗಿ ಹೋಗಿರುವ ಪಾಕಿಸ್ತಾನದ ವಿರುದ್ಧವೇ ಮೊದಲು ಸಮರ ಸಾರಬೇಕಾಗಿತ್ತು. ಆದರೆ ಜಾಗತಿಕ ಸ್ವರೂಪದ ಈ ಸಮರವನ್ನು ಕೇವಲ ಲಾಡೆನ್ ಮತ್ತು ಅಲ್‌ಖೈದಾ ಸಂಘಟನೆಯ ವಿರುದ್ಧವಷ್ಟೇ ಸೀಮಿತಗೊಳಿಸಿದ ಅಮೆರಿಕ ಪಾಕಿಸ್ತಾನವನ್ನೇ ಸಂಗಾತಿಯಾಗಿ ಕಟ್ಟಿಕೊಂಡಿತು. ಆ ದೇಶಕ್ಕೆ ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಒದಗಿಸಿತು. ಈ ರೀತಿ ಪಾಕಿಸ್ತಾನ ವೃದ್ಧಿಸಿಕೊಂಡ ತೋಳ್ಬಲಕ್ಕೆ ಬಲಿಯಾಗಿದ್ದು ಭಾರತ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಬಂದ ಭಯೋತ್ಪಾದಕರನ್ನು ಪೊರೆಯುತ್ತಾ ಬಂದದ್ದು ಪಾಕಿಸ್ತಾನ. ಹಾಗೆಯೇ ಪಾಕಿಸ್ತಾನದ ವಿರುದ್ದ ಜಾಗತಿಕ ಅಭಿಪ್ರಾಯ ರೂಪಿಸಲು ಅಡ್ಡಿಯಾಗಿದ್ದೇ ಅಮೆರಿಕ. ಈಗ ಎಲ್ಲವೂ ಬಯಲಾಗಿದೆ. ಈಗ ಭಯೋತ್ಪಾಕರ ದಮನದ ವಿಚಾರದಲ್ಲಿ ಪಾಕಿಸ್ತಾನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಅಮೆರಿಕವೇ ತನ್ನ ನಡೆ ಮತ್ತು ನುಡಿ ಮೂಲಕ ಒಪ್ಪಿಕೊಂಡಿದೆ. ‘ನಮ್ಮದು ಭಯೋತ್ಪಾದನೆಗೆ ಬಲಿಯಾದ ದೇಶ’ ಎನ್ನುವ ಪಾಕಿಸ್ತಾನದ ಚೀರಾಟವನ್ನು ಈಗ ನಂಬುವವರು ಯಾರೂ ಇಲ್ಲ. 2001ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ ‘1373 ಗೊತ್ತುವಳಿ’ ಪ್ರಕಾರ ‘ಭಯೋತ್ಪಾದಕರಿಗೆ ಹಣ, ಆಶ್ರಯ ಇತ್ಯಾದಿ ನೆರವನ್ನು ನೀಡುವುದು ಭಯೋತ್ಪಾದನೆಗೆ ಸಮನಾದ ಅಪರಾಧವಾಗಿದೆ’. ಆದ್ದರಿಂದ ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸಲು ಇದು ಸಕಾಲ. ಮುಂಬೈ ಬಾಂಬು ಸ್ಫೋಟದ ಮುಖ್ಯ ಆರೋಪಿಯಾದ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ ಇಲ್ಲಿನ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿದ್ದ ಎಲ್ಲ ದುರುಳರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಪಾಕಿಸ್ತಾನದ ಮೇಲೆ ಭಾರತ ಒತ್ತಡ ಹೇರಬೇಕು. ತನ್ನ ರಾಜತಾಂತ್ರಿಕ ಕೌಶಲವನ್ನೆಲ್ಲ ಬಳಸಿಕೊಂಡು ಭಯೋತ್ಪಾದನೆಯ ವಿರುದ್ದದ ಸಮರದಲ್ಲಿ ಭಾಗಿಯಾಗಿರುವ 142 ದೇಶಗಳ ಬೆಂಬಲವನ್ನು ಭಾರತ ಗಳಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.