ಅಕ್ರಮ ಗಣಿಗಾರಿಕೆ ಸಮೀಕ್ಷೆ ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಯಂತ್ರಿಸುವ ಕ್ರಮವಾಗಿ 99 ಗಣಿ ಪ್ರದೇಶಗಳಲ್ಲಿ ಹೊಸದಾಗಿ ಸಮೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಜಂಟಿ ಪಡೆಯನ್ನು ರಚಿಸಿದ ಕ್ರಮ ಸ್ವಾಗತಾರ್ಹ. ಜಂಟಿ ಪಡೆ ರಚನೆಯೇ ಅಕ್ರಮ ಗಣಿಗಾರಿಕೆಯನ್ನು ತಡೆಯುವ ವಿಷಯದಲ್ಲಿ ರಾಜ್ಯ ಸರ್ಕಾರ ವೈಫಲ್ಯವನ್ನು ಸೂಚಿಸುತ್ತದೆ. ಗಣಿಗಾರಿಕೆಗೆ ಅನುಮತಿ ಪಡೆದ ಕಂಪೆನಿಗಳು ಕ್ರಮಬದ್ಧವಾಗಿ ಗಣಿಗಾರಿಕೆ ನಡೆಸುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಕೆಲಸ ರಾಜ್ಯ ಸರ್ಕಾರದ್ದು. ನಿಯಮ ಉಲ್ಲಂಘಿಸಿದ ಕಂಪೆನಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ಅಧಿಕಾರ ಸರ್ಕಾರಕ್ಕಿದೆ. ಗಣಿ ಖಾತೆ ರಾಜ್ಯದ ಮುಖ್ಯಮಂತ್ರಿಯವರ ಕೈಯಲ್ಲಿದೆ. ಅಕ್ರಮ ಗಣಿಗಾರಿಕೆ ತಡೆಯುವ ವಿಷಯದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟಿಗೆ ವಿಶ್ವಾಸವಿಲ್ಲ. ಹೀಗಾಗಿಯೇ ಜಂಟಿ ಪಡೆಯಲ್ಲಿ ರಾಜ್ಯದ ಅರಣ್ಯ, ಗಣಿ, ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳಲ್ಲದೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಹಾಗೂ ಲೋಕಾಯುಕ್ತರ ಪ್ರತಿನಿಧಿಯೂ ಇರಬೇಕು ಎಂದು ಹೇಳಿದೆ. ಗಣಿಗಾರಿಕೆಯ ಅಕ್ರಮಗಳನ್ನು ಪತ್ತೆ ಹಚ್ಚುವ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ಸಹಕಾರ ನೀಡಲಿಲ್ಲ ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು. ಈ ಬೆಳವಣಿಗೆಗಳೂ ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ಹೇಳುತ್ತವೆ. ಅಕ್ರಮ ಗಣಿಗಾರಿಕೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಹೊಣೆ ಮಾಡುವ ಮುಖ್ಯಮಂತ್ರಿಯವರ ರಾಜಕೀಯ ಹೇಳಿಕೆಗಳಿಂದ ಪ್ರಯೋಜನವಿಲ್ಲ. ಇದು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕುವ ತಂತ್ರ. ಇದರಿಂದ ಗಣಿ ಸಂಪತ್ತಿನ ಲೂಟಿ ನಿಲ್ಲುವುದಿಲ್ಲ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಗಣಿ ಕಂಪೆನಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸಮೀಕ್ಷೆ ನಡೆಯಬೇಕು. ನಿಯಮಗಳ ಉಲ್ಲಂಘನೆ ಪತ್ತೆಯಾದರೆ, ಅನುಮತಿ ಪ್ರದೇಶದಾಚೆ ಗಣಿಗಾರಿಕೆ ನಡೆಸಿರುವುದು ಸಾಬೀತಾದರೆ ಅತಿಕ್ರಮಣ ಪ್ರದೇಶದ ಗಣಿಗಾರಿಕೆಯಲ್ಲದೆ, ಅಧಿಕೃತ ಪ್ರದೇಶದ ಗಣಿಗಾರಿಕೆಯನ್ನೂ ಸ್ಥಗಿತಗೊಳಿಸಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿದೆ. ಗಣಿಗಾರಿಕೆ ನಡೆಯುವ ಪ್ರದೇಶಗಳ ಆಸುಪಾಸಿನ ಅರಣ್ಯ, ಖಾಸಗಿ ಹಾಗೂ ಸರ್ಕಾರಿ ಭೂಮಿಗಳ ಗಡಿ ಗುರುತುಗಳನ್ನು ನಾಶ ಮಾಡಲಾಗಿದೆ ಎಂಬ ದೂರುಗಳಿವೆ. ಈ ಕೃತ್ಯದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಕೈಜೋಡಿಸಿದ್ದಾರೆ ಎಂಬ ಆರೋಪಗಳಿವೆ. ಗಣಿ ಪ್ರದೇಶಗಳ ಸಮೀಕ್ಷೆ ಮಾಡಲು ಬರುವ ಜಂಟಿ ಪಡೆಗೆ ಜಿಲ್ಲಾ ಆಡಳಿತ ಸೂಕ್ತ ಸಹಕಾರ ನೀಡಬೇಕು. ಗಡಿ ಗುರುತಿಸುವ ಕಾರ್ಯದಲ್ಲಿ ಸ್ವಲ್ಪ ಲೋಪವಾದರೂ ಸರ್ಕಾರದ ಬೊಕ್ಕಸಕ್ಕೆ, ಪರಿಸರಕ್ಕೆ ನಷ್ಟವಾಗುತ್ತದೆ. ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರ ಮಧ್ಯಂತರ ವರದಿಯನ್ನು ಪರಿಗಣಿಸಿ ಕನಿಷ್ಠ ಕ್ರಮಗಳನ್ನು ತೆಗೆದುಕೊಂಡಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಅಂತಿಮ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುವ ವಿಳಂಬ ತಂತ್ರ ಅನುಸರಿಸಿದ್ದರಿಂದ ಅಪಾರ ಗಣಿ ಸಂಪತ್ತು ಲೂಟಿಯಾಗಿದೆ.ಈಗಲಾದರೂ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ನಿಲ್ಲಿಸುವ ದಿಟ್ಟತನ ತೋರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.