ಕೊಳವೆ ಬಾವಿ; ಎಚ್ಚರ ಅಗತ್ಯ ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ಸರ್ಕಾರ ಆದ್ಯತೆಯನ್ನು ನೀಡಿ ಕ್ರಮ ಕೈಗೊಳ್ಳುತ್ತಿದ್ದರೂ ಅದರಿಂದ ಶಾಶ್ವತ ಪರಿಹಾರ ಸಿಕ್ಕಿಲ್ಲ. ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರವಾಗುತ್ತಿದ್ದು ಅದಕ್ಕಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾವಿಗಳೆಲ್ಲ ಬತ್ತಿ ಹೋದ ಕಡೆ ಟ್ಯಾಂಕರುಗಳ ಮೂಲಕ ನೀರನ್ನು ಒದಗಿಸುವ ವ್ಯವಸ್ಥೆಗೆ ಹಣ ಖರ್ಚು ಮಾಡಲಾಗುತ್ತದೆ. ಆದರೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ತೃಪ್ತಿಕರ ವರದಿಗಳಿಲ್ಲ. ಗ್ರಾಮೀಣ ಭಾಗಗಳಲ್ಲಿ ನೀರಿನ ಕೊರತೆ ತೀವ್ರವಾದ ಕಡೆ ಖಾಸಗಿಯವರ ಕೊಳವೆ ಬಾವಿಗಳಿಂದ ಸಾರ್ವಜನಿಕರಿಗೆ ನೀರು ಒದಗಿಸುವ ಕ್ರಮಕ್ಕೂ ಸರ್ಕಾರ ಮುಂದಾಗಿದೆ. ಕೊರತೆಯನ್ನು ಪೂರೈಸುವ ಧಾವಂತದಲ್ಲಿ ನೀರಿನ ಶುದ್ಧತೆಯ ಪ್ರಶ್ನೆ ಗಮನಕ್ಕೆ ಬರುತ್ತಿಲ್ಲ. ಈ ನಡುವೆ, ರಾಜ್ಯದ ಎರಡು ಲಕ್ಷ ಕೊಳವೆ ಬಾವಿಗಳಲ್ಲಿ ಲಭ್ಯವಿರುವ ನೀರು ಅಪಾಯಕಾರಿ ಪರಿಣಾಮ ಬೀರುವ ಫ್ಲೋರೈಡ್, ನೈಟ್ರೇಟ್‌ನಂಥ ರಾಸಾಯನಿಕಗಳಿಂದ ಕಲುಷಿತಗೊಂಡಿದೆ ಎಂಬ ಆಘಾತಕಾರಿ ವರದಿ ಪ್ರಕಟವಾಗಿದೆ. ಸರ್ಕಾರದ ಗ್ರಾಮಾಂತರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಸ್ವಯಂಪ್ರೇರಣೆಯಿಂದ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿರುವುದರಿಂದ ಇದನ್ನು ಲಘುವಾಗಿ ಪರಿಗಣಿಸಲಾಗದು. ನೀರು ಪೂರೈಸುವುದಷ್ಟೇ ಮುಖ್ಯವಲ್ಲ, ಶುದ್ಧ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿ. ಸಾಂಕ್ರಾಮಿಕ ರೋಗಗಳು ಕಲುಷಿತ ನೀರಿನ ಬಳಕೆಯ ಪರಿಣಾಮಗಳಾಗಿದ್ದರೆ, ಅಕಾಲ ಮುಪ್ಪು, ಎಲುಬುಗಳ ಸವೆತದಂತಹ ದೀರ್ಘಕಾಲೀನ ಸಮಸ್ಯೆಗಳು ರಾಸಾಯನಿಕಯುಕ್ತ ನೀರಿನ ಬಳಕೆಯಿಂದ ಉಂಟಾಗುತ್ತವೆ. ಫ್ಲೋರೈಡ್ ಅಂಶವಿರುವ ನೀರಿನ ಸತತ ಬಳಕೆಯಿಂದ ಜನತೆಯ ಮೇಲೆ ಆಗಿರುವ ಪರಿಣಾಮದಿಂದ ಎಚ್ಚೆತ್ತುಕೊಂಡ ಸರ್ಕಾರ ಈ ಸಮಸ್ಯೆ ಇದ್ದ ಪ್ರದೇಶಗಳಿಗೆ ಶುದ್ಧ ನೀರನ್ನು ಪೂರೈಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಈಗ ಪತ್ತೆಯಾಗಿರುವಂತೆ ಹೆಚ್ಚು ಆಳದ ಕೊಳವೆ ಬಾವಿಗಳಲ್ಲಿ ರಾಸಾಯನಿಕಗಳ ಪ್ರಮಾಣವೂ ಹೆಚ್ಚಾಗಿರುವುದು ಆತಂಕಕಾರಿ ಸಂಗತಿ. ನೀರಾವರಿ ಉದ್ದೇಶಕ್ಕೆ ಕೊಳವೆ ಬಾವಿಗಳನ್ನು ಹೆಚ್ಚು ಹೆಚ್ಚು ಆಳಕ್ಕೆ ಕೊರೆಸಲಾಗುತ್ತಿದ್ದರೂ ಆ ನೀರನ್ನು ಬೆಳೆಗಳಿಗೆ ಮಾತ್ರವೇ ಬಳಕೆ ಮಾಡಿಕೊಳ್ಳುತ್ತಿಲ್ಲ. ನಿತ್ಯದ ಬಳಕೆಗೂ ಕೊಳವೆ ಬಾವಿಗಳ ನೀರನ್ನು ಬಳಸುವುದು ಅನಿವಾರ್ಯವೂ ಆಗಿದೆ. ಕೊಳವೆ ಬಾವಿಗಳ ನೀರನ್ನು ಸತತವಾಗಿ ಬಳಸುತ್ತಿರುವುದರಿಂದ ಜನತೆಯ ಆರೋಗ್ಯದ ಮೇಲೆ ಯಾವ ಪರಿಣಾಮವಾಗಿದೆ ಎಂಬುದರ ಸಮೀಕ್ಷೆ ನಡೆದಿಲ್ಲವಾದರೂ ನೀರಿನಲ್ಲಿ ರಾಸಾಯನಿಕಗಳು ಪತ್ತೆಯಾದ ಮೇಲೆ ಅದರ ಬಳಕೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ. ಫ್ಲೋರೈಡ್‌ಯುಕ್ತ ನೀರನ್ನು ಶುದ್ಧಗೊಳಿಸುವ ಪ್ರಕ್ರಿಯೆ ಮುಂದುವರಿದ ದೇಶಗಳಲ್ಲಿದೆ.ಅಂಥ ತಂತ್ರಜ್ಞಾನ ಅಮೆರಿಕದಲ್ಲಿಯೇ ದುಬಾರಿ ಎನಿಸಿದೆ. ಇಲ್ಲಿ ನೀರು ಸಿಕ್ಕಿದರೆ ಸಾಕು ಎಂಬಂಥ ಸ್ಥಿತಿ. ಹಾಗೆಂದು ವಿಷಯುಕ್ತ ನೀರನ್ನು ಬಳಸಿ ಮಾರಕ ರೋಗಗಳಿಗೆ ಗುರಿಯಾಗುವ ಅಪಾಯವನ್ನು ಎಳೆದುಕೊಳ್ಳಲಾಗದು. ಕೊಳವೆ ಬಾವಿಗಳ ನೀರನ್ನು ಕುಡಿಯುವುದಕ್ಕೆ ಬಳಸುವ ಮೊದಲು ಅದು ಯೋಗ್ಯವೇ ಎಂಬುದನ್ನಾದರೂ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವಂಥ ಜಾಗೃತಿಯನ್ನು ಸರ್ಕಾರ ಮೂಡಿಸಬೇಕು. ರೋಗ ಬಂದಾಗ ಗುಣಪಡಿಸಿಕೊಳ್ಳುವುದಕ್ಕಿಂತ ಅದು ಬಾರದಿರುವಂತೆ ಎಚ್ಚರ ವಹಿಸುವುದು ಮೇಲು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.