ವಿಷಬೀಜ ಬಿತ್ತುವ ಕೆಲಸ ಬೇಡ ಸಮಾಜದಲ್ಲಿ ಗಣ್ಯವ್ಯಕ್ತಿಗಳೆನಿಸಿಕೊಂಡವರು, ವಿವಾದಾತ್ಮಕ ಹೇಳಿಕೆಗಳನ್ನು ಕೊಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ. ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಘಟನೆಯ ಬಗ್ಗೆಯೇ ಆಗಬಹುದು, ಗೀತಿಕಾಶರ್ಮಾ ಪ್ರಕರಣವೇ ಆಗಿರಬಹುದು ಸಚಿವರು, ಶಾಸಕರು, ಸರಸಂಘ ಚಾಲಕ್ ಹೀಗೆ ಎಲ್ಲರೂ ನಾಲಿಗೆಯನ್ನು ಹರಿಯಬಿಟ್ಟು ಪ್ರಜ್ಞಾವಂತ ಸಮಾಜ ಕೆರಳುವಂತೆ ಮಾಡುತ್ತಿದ್ದಾರೆ. ಜೊತೆಗೆ ಮತೀಯ ಭಾವನೆಗಳನ್ನು ಕೆರಳಿಸುವ ಪ್ರಸಂಗಗಳು ನಮ್ಮ ಕಣ್ಣೆದುರೇ ನಡೆಯುತ್ತಿವೆ. ಧರ್ಮದ್ವೇಷ ಹೆಡೆ ಎತ್ತುವಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಪರಿಪಾಠವನ್ನು ರಾಜಕಾರಣಿಗಳು ಅಗ್ಗದ ಜನಪ್ರಿಯತೆಗಾಗಿ ಮಾಡುತ್ತಾರೆ. ಚುನಾವಣೆ ಸಮಯದಲ್ಲಿ ಇಂತಹ ಅತಿರೇಕ ಜಾಸ್ತಿ. ಹಿಂದುತ್ವವಾದಿಗಳಾಗಿರಬಹುದು, ಇಸ್ಲಾಂವಾದಿಗಳಿರಬಹುದು ಎರಡೂ ಕಡೆ ಮತೀಯ ಭಾವನೆಗಳನ್ನು ಕೆರಳಿಸುವ ಉಗ್ರವಾದಿಗಳಿದ್ದಾರೆ. ಆಂಧ್ರಪ್ರದೇಶದ ಮಜ್ಲಿಸ್-ಎ-ಇತ್ತೆಹಾದ್-ಉಲ್ ಮುಸ್ಲಿಮೀನ್ (ಎಂಐಎಂ) ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ಇತ್ತೀಚೆಗೆ ಮಾಡಿರುವ ಪ್ರಚೋದನಕಾರಿ ಭಾಷಣಗಳು ಧರ್ಮದ್ವೇಷದ ಕಿಡಿ ಹಚ್ಚುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆ ಇರಿಸಿರುವ ಧರ್ಮ ನಿರಪೇಕ್ಷ ರಾಷ್ಟ್ರ ಭಾರತ ಎಂಬುದನ್ನು ರಾಜಕೀಯ ನೇತಾರರು ಮೊದಲು ಅರಿತುಕೊಳ್ಳಬೇಕು. ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಏಳು ಸದಸ್ಯರಿರುವ ಪಕ್ಷದ ಶಾಸಕ ಒವೈಸಿ, ಈ ಹಿಂದೆಯೂ ಇದೇ ರೀತಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿರುವ ಉದಾಹರಣೆ ಇದೆ. ಸಮಾಜದ ನೆಮ್ಮದಿಯನ್ನು ಕದಡಲು ಯತ್ನಿಸುವ ಇಂತಹ ನಾಯಕರುಗಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಬಹಿಷ್ಕರಿಸುವ ಕೆಲಸವೂ ಅವರಿಗೆ ತಕ್ಕ ಪಾಠವಾಗಬಹುದು. ರಾಜಕೀಯ ಕಾರಣಗಳಿಗಾಗಿ ಇಂತಹ ಶಾಸಕರಿಗೆ ರಕ್ಷಣೆ ಕೊಡುವುದೂ ಅಪಾಯಕಾರಿ. ಲಂಡನ್‌ನಲ್ಲಿರುವ ಅಕ್ಬರುದ್ದೀನ್ ಸದ್ಯದಲ್ಲೇ ರಾಷ್ಟ್ರಕ್ಕೆ ವಾಪಸಾಗಿ ಪೊಲೀಸರಿಗೆ ಶರಣಾಗತರಾಗಲಿದ್ದಾರೆ ಎಂದು ಸಂಸತ್ ಸದಸ್ಯರಾಗಿರುವ ಅವರ ಸಹೋದರ ಹೇಳಿಕೆ ನೀಡಿದ್ದಾರೆ. ಒವೈಸಿ ಈ ಹಿಂದೆ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದಾಗ, ಪೊಲೀಸರು ಪ್ರಕರಣ ದಾಖಲಿಸಿ ಸುಮ್ಮನಾದುದರ ಪರಿಣಾಮ ಈಗ ವಿಪರೀತಕ್ಕೆ ಹೋಗಿದೆ. ಕಳೆದ ಹತ್ತುದಿನಗಳಲ್ಲಿ ಎರಡುಬಾರಿ ಪ್ರಚೋದನಾತ್ಮಕ ಭಾಷಣ ಮಾಡಿದಾಗಲೂ ಪೊಲೀಸರು ಅಸಹಾಯಕರಾಗಿದ್ದರು. ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ, ಶಿವಸೇನೆ ನಾಯಕ ಬಾಳಠಾಕ್ರೆ, ಬಿಜೆಪಿ ನಾಯಕ ವರುಣ್‌ಗಾಂಧಿ ಅವರುಗಳು ಕೂಡಾ ಈ ಹಿಂದೆ ಇದೇ ರೀತಿ ಪ್ರಚೋದನಕಾರಿ ಭಾಷಣ ಮಾಡಿದಾಗಲೂ ಇದೇ ಸ್ಥಿತಿ. ಅಲ್ಪಸಂಖ್ಯಾತ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಆಂಧ್ರ ಪ್ರದೇಶದ ಕಾಂಗ್ರೆಸ್ ಸರ್ಕಾರ ಕೂಡ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಆದರೂ ಶಾಸಕ ಸ್ಥಾನವನ್ನೇ ಗುರಾಣಿ ಮಾಡಿಕೊಂಡಿರುವ ಒವೈಸಿ, ಪೊಲೀಸರ ಕಣ್ಣುತಪ್ಪಿಸಿ ಓಡಾಡುತ್ತಿದ್ದಾರೆ. ಈಗಲೂ ಪೊಲೀಸರು ಒವೈಸಿಗೆ ವೈಯಕ್ತಿಕವಾಗಿ ನೋಟಿಸ್ ಜಾರಿಮಾಡಲು ಸಾಧ್ಯವಾಗಲಿಲ್ಲ ಎನ್ನುವುದು ವ್ಯವಸ್ಥೆಯ ಕ್ರೂರ ವ್ಯಂಗ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.