ಸಚಿವರ ಬಾಲಿಶ ಹೇಳಿಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಸರ್ಕಾರ ಮೀಸಲಿರಿಸಿರುವ ಶೇ 22.75 ಅನುದಾನ ಆ ವರ್ಗಕ್ಕೆ ತಲುಪಬೇಕೆನ್ನುವುದು ಸರ್ಕಾರದ ಆಶಯ. ಬಜೆಟ್ಟಿನಲ್ಲಿ ಪರಿಶಿಷ್ಟರ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರತಿ ವರ್ಷ ಕೋಟಿಗಟ್ಟಲೆ ಹಣವನ್ನು ಕಾಯ್ದಿರಿಸಲಾಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಇಷ್ಟು ಹಣ ಖರ್ಚಾಗುವುದಿಲ್ಲ. ಅನೇಕ ಸಲ ಹಣ ಖರ್ಚಾಗಿರುತ್ತದೆ. ಅರ್ಹ ಜನರಿಗೆ ಮಾತ್ರ ತಲುಪಿರುವುದಿಲ್ಲ. ಆ ಹಣ ಅಧಿಕಾರಸ್ಥ ರಾಜಕಾರಣಿಗಳ ಮತ್ತು ಅಧಿಕಾರಿಗಳ ಜೇಬಿಗೆ ಹೋಗುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನರ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಇತ್ತೀಚೆಗೆ ಪರಿಶೀಲನೆ ನಡೆಸಿದ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ, ಪರಿಶಿಷ್ಟರ ಅಭಿವೃದ್ಧಿಗಾಗಿ ಕಾಯ್ದಿರಿಸಿರುವ ಹಣವನ್ನು ಖರ್ಚು ಮಾಡದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ. `ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳೂ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜನರ ವಿರುದ್ಧ ನಡೆಯುವ ದೌರ್ಜನ್ಯ ನಿಷೇಧ ಕಾಯ್ದೆಯನ್ವಯ ಎಫ್‌ಐಆರ್ ದಾಖಲಿಸುವ~ ಮಾತನ್ನಾಡಿದ್ದಾರೆ. ಹೀಗೆ ಹೇಳುವುದು ಹೆಚ್ಚುಗಾರಿಕೆಯಲ್ಲ. ಅದನ್ನು ಕಾರ್ಯತಃ ಜಾರಿಗೆ ತರುವುದು ಮುಖ್ಯ. ಸಚಿವರು ತಾವಾಡಿದ ಮಾತುಗಳನ್ನು ಜಾರಿಗೆ ತರುವ ದಿಟ್ಟತನ ಪ್ರದರ್ಶಿಸಲು ಸಾಧ್ಯವೇ? ಈ ಹಿಂದೆಯೂ ಅನೇಕ ರಾಜಕಾರಣಿಗಳು ಇಂತಹ ವೀರಾವೇಶದ ಮಾತುಗಳನ್ನಾಡಿ ಅಷ್ಟಕ್ಕೇ ತೃಪ್ತಿಪಟ್ಟುಕೊಂಡವರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನರ ಮೇಲೆ ನಡೆಯುವ ದೌರ್ಜನ್ಯ, ಜಾತಿ ನಿಂದನೆ ಮತ್ತು ಅವರನ್ನು ಅವಮಾನಿಸುವುದನ್ನು ತಡೆಯುವುದಕ್ಕಾಗಿ ಈ ಕಾಯ್ದೆ ರಚನೆಯಾಗಿದೆ. ಜಾತಿ ನಿಂದನೆ ಮಾಡಿದರೂ ಆರೋಪಿಯನ್ನು ಮೊದಲು ಬಂಧಿಸಿ ನಂತರ ವಿಚಾರಣೆ ಮಾಡುವುದಿತ್ತು. ಆದರೆ ಈ ಕಾಯ್ದೆಯ ದುರುಪಯೋಗವೂ ನಡೆಯುತ್ತಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿದೆ. ಈ ಕಾಯ್ದೆ ಅನ್ವಯ ಸಾಮಾನ್ಯವಾಗಿ ದೂರುಗಳು ದಾಖಲಾಗುವುದೇ ಕಷ್ಟ. ದೂರು ದಾಖಲಾದರೂ, ಅದು ನ್ಯಾಯಾಲಯದಲ್ಲಿ ನಿಲ್ಲಲಾರದಂತೆ ದುರ್ಬಲಗೊಳಿಸಲಾಗಿರುತ್ತದೆ. ಕರ್ನಾಟಕದಲ್ಲಿ ಈ ದೂರಿನ ಅನ್ವಯ ಶಿಕ್ಷೆ ಆಗಿರುವುದಕ್ಕಿಂತ ಖುಲಾಸೆಗೊಂಡಿರುವುದೇ ಹೆಚ್ಚು. ಶಿಕ್ಷೆ ಆಗಿರುವ ಪ್ರಮಾಣ ಶೇ 4ನ್ನೂ ದಾಟಿಲ್ಲ. ಅಂದರೆ ಈ ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾಗದಂತೆ ಪೊಲೀಸ್ ಠಾಣೆಗಳ ಮಟ್ಟದಲ್ಲಿಯೇ ದುರ್ಬಲಗೊಳಿಸಲಾಗಿರುತ್ತದೆ. ಈಗಿರುವ ಕೇಂದ್ರದ ಕಾಯ್ದೆಯ 22ನೇ ಅನುಚ್ಛೇದದ ಪ್ರಕಾರ, `ಸರ್ಕಾರದ ಕೆಲಸವನ್ನು ಸದ್ಭಾವನೆಯಿಂದ ಮಾಡುವಾಗ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಥವಾ ಯಾವುದೇ ಪ್ರಾಧಿಕಾರದ ಅಥವಾ ಯಾವನೇ ಅಧಿಕಾರಿಯ ವಿರುದ್ಧ ದಾವೆ ಹೂಡುವ ಹಾಗಿಲ್ಲ~. ವಾಸ್ತವ ಸ್ಥಿತಿ ಹೀಗಿರುವಾಗ ಸಚಿವರು ಕಾಯ್ದೆ ಕಾನೂನಿನ ಜ್ಞಾನವಿಲ್ಲದೆ ಮಾತನಾಡುವುದು ಬಾಲಿಶವಾಗುತ್ತದೆ. ಕರ್ತವ್ಯಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಕೆಸಿಎಸ್‌ಆರ್ ಪ್ರಕಾರ ಮಾತ್ರ ಕ್ರಮ ಕೈಗೊಳ್ಳಬಹುದು. ಈ ಕ್ರಮಕ್ಕೆ ಸಚಿವರು ಮುಂದಾಗುವರೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.