ಬಹಿಷ್ಕಾರ ಪರಿಹಾರವಲ್ಲ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಬಹಿಷ್ಕರಿಸುವ ಮೂಲಕ ಸ್ಪೀಕರ್ ಮತ್ತು ಮುಖ್ಯಮಂತ್ರಿ ಅವರ ರಾಜೀನಾಮೆಗೆ ಒತ್ತಡ ಹೇರುವ ಯೋಚನೆಯ ಕಾಂಗ್ರೆಸ್ ಪಕ್ಷ, ರಾಜಕೀಯವಾಗಿ ತಲುಪಿರುವ ದಿವಾಳಿತನವನ್ನು ತೋರಿಸುತ್ತದೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ಮಾತ್ರಕ್ಕೆ ಅಧಿಕಾರ ಹಿಡಿಯುವುದೇ ಪರಮ ಗುರಿ ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಶಾಸಕನಾಗಿ ತನ್ನ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಶಾಸನ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವ ತನ್ನ ಪ್ರಾಥಮಿಕ ಕರ್ತವ್ಯಕ್ಕೆ ಚ್ಯುತಿ ತರುವಂಥ ಇಂಥ ಚಿಂತನೆ ಬೇಜವಾಬ್ದಾರಿಯ ಪರಮಾವಧಿ. ಶಾಸನಸಭೆಯ ಪಾವಿತ್ರ್ಯಕ್ಕೆ ಎಸಗುವ ಅಪಚಾರ. ನಾಲ್ಕು ವರ್ಷಗಳಿಂದ ಅಧಿಕಾರ ವಂಚಿತರಾಗಿದ್ದ ಮಾತ್ರಕ್ಕೆ ಹೀಗೆ ಯೋಚಿಸುತ್ತಿರುವುದು ಪ್ರಜಾಸತ್ತೆಗೆ ಮಾರಕವಾದ ಬೆಳವಣಿಗೆ. ಸಂಸದೀಯ ಪ್ರಜಾಸತ್ತೆಯಲ್ಲಿ ವಿಶ್ವಾಸ ಇದ್ದ ಯಾವುದೇ ರಾಜಕೀಯ ಪಕ್ಷ ಹೀಗೆ ಯೋಚಿಸುವುದು ಖಂಡನೀಯ. ಅಷ್ಟಕ್ಕೂ ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ, ಯಾವುದೇ ರಾಜಕೀಯ ಪಕ್ಷದ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಜನರ ಪರವಾಗಿ ಕೆಲಸ ಮಾಡುವ ಯಾವ ಪಕ್ಷಕ್ಕೂ ಅಡ್ಡಿಯಾಗುವಂಥ ಕಾಯ್ದೆ ನಿಯಮಗಳಿಲ್ಲ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಟ್ಟು ಅವರನ್ನು ಶಾಂತಿಯುತ ಹೋರಾಟಕ್ಕೆ ಸಜ್ಜುಗೊಳಿಸುವಂಥ ಯಾವುದೇ ರಾಜಕೀಯ ಚಟುವಟಿಕೆಗೂ ಅಡ್ಡಿ ತರುವಂಥ ವಾತಾವರಣವಿಲ್ಲ. ಇಂಥ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನ ಬಹಿಷ್ಕರಿಸುವ ಕಾಂಗ್ರೆಸ್ ಮುಖಂಡರ ಯೋಚನೆ, ಯುದ್ಧರಂಗದಿಂದ ಪಲಾಯನ ಮಾಡುವ ಹೇಡಿತನದ ಪ್ರತೀಕದಂತೆ ತೋರುತ್ತದೆ. ನಿಜ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಹಿಂದಿನ ಯಾವ ಪಕ್ಷದ ಸರ್ಕಾರವೂ ಎದುರಿಸಲಾಗದಂಥ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ಮತ್ತು ಕೆಲವು ಸಚಿವರ ವಿರುದ್ಧ ಬಯಲಿಗೆ ಬಂದ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆಯ ಆರೋಪಗಳ ಕುರಿತಾಗಿ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ `ಅನೈತಿಕ~ ಎಂದು ಬಣ್ಣಿಸುವಷ್ಟು, ಅವು ತೀವ್ರ ಸ್ವರೂಪದ್ದಾಗಿವೆ. `ಆಪರೇಷನ್ ಕಮಲ~ದಂಥ ಕಾರ‌್ಯಾಚರಣೆ ಮೂಲಕ ಬಹುಮತ ಗಳಿಸಿ ಪಕ್ಷಾಂತರ ನಿಷೇಧ ಕಾಯ್ದೆಯನ್ನೇ ನಿಷ್ಕ್ರಿಯಗೊಳಿಸಿದೆ. ವಿಶ್ವಾಸಮತ ಗೆಲ್ಲುವುದಕ್ಕಾಗಿ ಸ್ಪೀಕರ್ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಸುಪ್ರೀಂ ಕೋರ್ಟ್‌ನ ಕಟು ಟೀಕೆಗೂ ಒಳಗಾಗಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಹೀಗೆ ಒಂದಲ್ಲ ಒಂದು ಹಗರಣಗಳಲ್ಲಿ ಸಿಲುಕಿಕೊಳ್ಳುತ್ತ ತಾಂತ್ರಿಕ ಕಾರಣಗಳಿಂದ ಮುಂದುವರಿದಿರುವ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಯಾವ ಪ್ರಯತ್ನವನ್ನೂ ಜವಾಬ್ದಾರಿಯುತ ವಿರೋಧಪಕ್ಷವಾಗಿ ಕಾಂಗ್ರೆಸ್ ಮಾಡುತ್ತಿಲ್ಲ. ಆಂತರಿಕ ಭಿನ್ನಮತ, ನಾಯಕರಲ್ಲಿ ಪರಸ್ಪರ ಅಪನಂಬಿಕೆ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಲಾಗದ ಅಸಹಾಯಕತೆಯಿಂದ ನಲುಗಿಹೋಗಿರುವ ಕಾರಣದಿಂದ ಈಚಿನ ಯಾವೊಂದು ಉಪಚುನಾವಣೆಯಲ್ಲೂ ಗೆಲ್ಲಲಾಗದ ಹೀನಾಯ ಸ್ಥಿತಿಗೆ ಇಳಿದಿದೆ. ಜನಸಾಮಾನ್ಯರ ಮಧ್ಯೆ ನಡೆದು ಸರ್ಕಾರದ ಅಕ್ರಮಗಳ ವಿರುದ್ಧ ಆಂದೋಲನ ನಡೆಸಿ ರಾಜ್ಯದಲ್ಲಿ ಉತ್ತಮ ಪರ್ಯಾಯ ಒದಗಿಸುವ ನಿಟ್ಟಿನಲ್ಲಿ ನಿಷ್ಕ್ರಿಯವಾಗಿರುವ ಕಾಂಗ್ರೆಸ್ಸಿಗೆ, ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಬಲ ಅಸ್ತ್ರವನ್ನಾಗಿಸಿಕೊಳ್ಳುವ ತಂತ್ರಗಾರಿಕೆಯೂ ಇಲ್ಲ. ಅದು ಹಂದೆಯ ಕೈಯಲ್ಲಿನ ಚಂದ್ರಾಯುಧದಂತೆ ವ್ಯರ್ಥವಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.