ತಡವಾಗಿ ಎಚ್ಚೆತ್ತ ಭಾರತ ಆಫ್ರಿಕಾ ದೇಶಗಳ ಜೊತೆ ವಿಶಿಷ್ಟ ಮತ್ತು ಚಾರಿತ್ರಿಕ ಸಂಬಂಧವಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಭಾರತ ಹಿಂದೆ ಬಿದ್ದಿದೆ. ಆಫ್ರಿಕಾದ ದೇಶಗಳು ಈಗ ಹಿಂದಿನಂತಿಲ್ಲ. ಅತಿ ವೇಗದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ದೇಶಗಳ ಸಾಲಿಗೆ ಅವೂ ಸೇರಿವೆ. ಇದನ್ನು ಮೊದಲೇ ಗುರುತಿಸಿದ ಚೀನಾ ಈಗಾಗಲೇ ಅಪಾರ ಪ್ರಮಾಣದಲ್ಲಿ ಆ ದೇಶಗಳಲ್ಲಿ ಬಂಡವಾಳ ಹೂಡಿದೆ. ತನ್ನ ಆರ್ಥಿಕ ಅಭಿವೃದ್ಧಿಗೆ ನೆರವಾಗಬಲ್ಲಂಥ ನೆಲೆಯನ್ನು ಚೀನಾ ಈಗಾಗಲೇ ಸ್ಥಾಪಿಸಿದೆ. ತೈಲ ಮತ್ತು ಸರ್ಕಾರದ ದೊಡ್ಡ ಗುತ್ತಿಗೆಗಳೆಲ್ಲಾ ಚೀನಾದ ಪಾಲಾಗಿವೆ. ಈ ಬೆಳವಣಿಗೆಯನ್ನು ತಡವಾಗಿ ಗುರುತಿಸಿರುವ ಭಾರತ ಇದೀಗ ಚೀನಾಕ್ಕಿಂತಾ ಭಿನ್ನವಾದ ದಾರಿಯಲ್ಲಿ ಆಫ್ರಿಕಾ ದೇಶಗಳ ಜೊತೆ ಆರ್ಥಿಕ ಬಾಂಧವ್ಯ ಕುದುರಿಸುವ ಪ್ರಯತ್ನ ಮಾಡುತ್ತಿದೆ. ಇದರ ಅಂಗವಾಗಿ ಪ್ರಧಾನಿ ಮನಮೋಹನ ಸಿಂಗ್ ಅವರು ಆಫ್ರಿಕಾದಲ್ಲಿ ಪ್ರವಾಸ ಮಾಡಿ ಅಲ್ಲಿನ ಆಡಳಿತಗಾರರ ಜೊತೆ ಚರ್ಚಿಸಿದ್ದಾರೆ. ಭಾರತದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳಲು ಇಥಿಯೋಪಿಯಾದ ರಾಜಧಾನಿ ಅಡ್ಡೀಸ್ ಅಬಾಬಾದಲ್ಲಿ ನಡೆದ ಭಾರತ-ಆಫ್ರಿಕಾ ವೇದಿಕೆಯ ಎರಡನೆಯ ಶೃಂಗಸಭೆ ಪ್ರಧಾನಿ ಅವರಿಗೆ ಉತ್ತಮ ಅವಕಾಶ ಒದಗಿಸಿತ್ತು. ಪ್ರಧಾನಿ ಅವರು ಇಥಿಯೋಪಿಯಾ ಮತ್ತು ನೈಜೀರಿಯಾ ಪ್ರವಾಸ ಕಾಲದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಪಾರ ಪ್ರಮಾಣದ ನೆರವನ್ನು ಘೋಷಿಸಿದ್ದಾರೆ. ಆಫ್ರಿಕಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ದಾರಿಯನ್ನು ಚೀನಾ ಅನುಸರಿಸಿದರೆ ಭಾರತ ಆ ದೇಶಗಳ ಅಭಿವೃದ್ಧಿಗೆ ಚಾಲನೆ ಒದಗಿಸಿ ಭಿನ್ನ ತಾರಿ ತುಳಿದಿದೆ. ಈ ದೃಷ್ಟಿಯಿಂದ ಭಾರತದ ಖಾಸಗಿವಲಯಕ್ಕೆ ಅವಕಾಶಗಳ ಬಾಗಿಲು ತರೆಯುವಂತೆ ಮಾಡುವ ಪ್ರಯತ್ನವನ್ನು ಪ್ರಧಾನಿ ಮನಮೋಹನ ಸಿಂಗ್ ಅವರು ಮಾಡಿದ್ದಾರೆ. ಅಂತರರಾಷ್ಟ್ರೀಯವಾಗಿಯೂ ಆಫ್ರಿಕಾ ದೇಶಗಳನ್ನು ಈಗ ಕಡೆಗಣಿಸುವಂತಿಲ್ಲ. ಆ ದೇಶಗಳು ಒಕ್ಕೂಟ ರಚಿಸಿಕೊಂಡು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬಲಪ್ರದರ್ಶನಕ್ಕೆ ನಿಂತ ನಿದರ್ಶನಗಳಿವೆ. ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ನೀಡಬೇಕೆಂದು ಬಲವಾದ ಒತ್ತಡ ತರುತ್ತಿವೆ. ಭಾರತವೂ ಶಾಶ್ವತ ಸ್ಥಾನಕ್ಕಾಗಿ ಸತತವಾಗಿ ಪ್ರಯತ್ನಿಸುತ್ತ ಬಂದರೂ ಅದು ಇದುವರೆಗೆ ಸಫಲವಾಗಿಲ್ಲ. ವಿಶ್ವಸಂಸ್ಥೆ ಸುಧಾರಣೆಗೆ ಆಫ್ರಿಕಾ ದೇಶಗಳು ಮತ್ತು ಭಾರತ ಸಂಘಟಿತವಾಗಿಯೇ ಕೆಲಸಮಾಡಬೇಕಾಗಿದೆ. ಜಾಗತಿಕ ತಾಪಮಾನ ಏರಿಕೆ, ತಂತ್ರಜ್ಞಾನ ವರ್ಗಾವಣೆ, ಆರ್ಥಿಕ ನೆರವು, ಕೃಷಿಸಬ್ಸಿಡಿ, ಮುಕ್ತ ಮಾರುಕಟ್ಟೆ ನೀತಿ ಮುಂತಾದ ವಿಚಾರಗಳಲ್ಲಿ ಅಭಿವೃದ್ಧಿ ದೇಶಗಳು ನಿಯಂತ್ರಣಗಳನ್ನು ಹೇರಲು ಪ್ರಯತ್ನಿಸುತ್ತಿರುವುದರಿಂದ ಅದನ್ನು ತಡೆಯಲು ಆಫ್ರಿಕಾ ದೇಶಗಳ ಜೊತೆ ಮೈತ್ರಿ ಭಾರತಕ್ಕೆ ಅತ್ಯವಶ್ಯಕವಾಗಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಈಜಿಪ್ಟ್‌ನಿಂದ ಆರಂಭವಾದ ಜನಾಂದೋಲನಗಳು ಇತರ ಆಫ್ರಿಕಾ ದೇಶಗಳಿಗೂ ಹಬ್ಬಿವೆ. ಜನರ ಪ್ರಜಾತಂತ್ರದ ಕೂಗಿಗೆ ಭಾರತ ದನಿಗೂಡಿಸುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿಯೂ ಪ್ರಧಾನಿ ಅವರ ಆಫ್ರಿಕಾ ಪ್ರವಾಸ ಮಹತ್ವಪೂರ್ಣವಾದುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.