ಪಾರದರ್ಶಕತೆಯ ಕೊರತೆ ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ನಡೆಯುತ್ತಿರುವ ಕೌನ್ಸೆಲಿಂಗ್‌ನಲ್ಲಿ ಆಗಿರುವ ಗೊಂದಲಕ್ಕೆ ಸರ್ಕಾರವೇ ಹೊಣೆ. ವೈದ್ಯಕೀಯ ಶಿಕ್ಷಣಕ್ಕಾಗಿಯೇ ಇರುವ ಪ್ರತ್ಯೇಕ ವಿಶ್ವವಿದ್ಯಾಲಯ ಸುಮಾರು ನಾಲ್ಕು ನೂರರಷ್ಟಿರುವ ಸೀಟುಗಳನ್ನು ಅರ್ಹ ಅಭ್ಯರ್ಥಿಗಳಿಗೆ ನ್ಯಾಯಬದ್ಧವಾಗಿ ಹಂಚುವುದರಲ್ಲಿ ಗೊಂದಲ ಸೃಷ್ಟಿಯಾಗಿರುವುದು ಸರ್ಕಾರದ ಪ್ರಾಮಾಣಿಕತೆಯನ್ನೇ ಶಂಕಿಸುವಂತೆ ಮಾಡಿದೆ. ರಾಜ್ಯ ಹೈಕೋರ್ಟ್ ಸೂಚನೆಯಂತೆ ಕೆಲವು ಅರ್ಹ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲು ಆರಂಭಿಸಿದ ಹಂಚಿಕೆ ಪ್ರಕ್ರಿಯೆ ಮುಚ್ಚುಮರೆಯಲ್ಲಿ ನಡೆದಂತಿರುವುದು ಇನ್ನಷ್ಟು ಗೊಂದಲ ಸೃಷ್ಟಿಸಿದೆ. ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಕೋರ್ಸುಗಳೆಂದರೆ ಖಾಸಗಿ ಸಂಸ್ಥೆಗಳಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಗಳಂತೆ. ಕೋರ್ಸುಗಳ ಬೇಡಿಕೆಯನ್ನು ಅನುಸರಿಸಿ ಅವುಗಳಿಗೆ ಸಂದಾಯಮಾಡಬೇಕಾದ ವಂತಿಗೆಯ ಧಾರಣೆ ನಲವತ್ತು ಲಕ್ಷದಿಂದ ಎರಡು ಕೋಟಿ ರೂಪಾಯಿಯನ್ನೂ ಮೀರುವಷ್ಟು ದುಬಾರಿ ಎನ್ನಲಾಗಿದೆ. ಆದ್ದರಿಂದಲೇ ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಕೋರ್ಸುಗಳನ್ನು ಮಾಡಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಅವಕಾಶಗಳಿಗೆ ಶ್ರಮಿಸುತ್ತಾರೆ. ಸರ್ಕಾರಿ ಸಂಸ್ಥೆಗಳಲ್ಲಿನ ಸೀಟುಗಳಲ್ಲಿ ಸೇವೆಯಲ್ಲಿರುವ ವೈದ್ಯರಿಗೆ ಶೇ 33ರಷ್ಟನ್ನು ಹಂಚಿ ಉಳಿದ ಸೀಟುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆಯೇ ಆಕ್ಷೇಪಕ್ಕೆ ಒಳಗಾಗಿದೆ. ಸೀಟುಗಳ ವಿಷಯವಾರು ಲಭ್ಯತೆಯನ್ನು ಸಿದ್ಧಪಡಿಸದೆ ಕೌನ್ಸೆಲಿಂಗ್ ನಡೆಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಟ್ಟು ಸೀಟುಗಳನ್ನು ವಿಷಯವಾರು ಮೀಸಲಾತಿಯಂತೆ ವಿಂಗಡಿಸಿ ಸೇವಾನಿರತರು ಮತ್ತು ಸಾಮಾನ್ಯ ವರ್ಗಕ್ಕೆ ಹಂಚಿಕೆ ನಡೆಸದ ಕಾರಣ ಈ ಪ್ರಕ್ರಿಯೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಕೋರ್ಸುಗಳ ಹಂಚಿಕೆ ಅಖಿಲ ಭಾರತ ವ್ಯಾಪ್ತಿಯಲ್ಲಿ ಕೂಡ ದೋಷಮುಕ್ತವಾಗಿಲ್ಲ. ತನ್ನ ಪರಿಶೀಲನೆಗೆ ಬಂದಿದ್ದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ಸೀಟು ಹಂಚಿಕೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ಗಮನಿಸಿ `ಈ ಸೀಟುಗಳನ್ನು ಹರಾಜು ಹಾಕಿಬಿಡಬಾರದೇಕೆ?~ ಎಂದು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಖಿಲ ಭಾರತ ವೈದ್ಯಕೀಯ ಮಂಡಲಿಯ ಹಿಂದಿನ ಅಧ್ಯಕ್ಷರೊಬ್ಬರ ಬಳಿ ಸಾವಿರಾರು ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದ್ದ ಸಂಗತಿಯೇ ಈ ಅಧ್ಯಯನ ಕ್ಷೇತ್ರದ ಬೇಡಿಕೆಗೆ ದಿಕ್ಸೂಚಿಯಾಗಿದೆ. ಸ್ನಾತಕೋತ್ತರ ಕೋರ್ಸು ಮಾಡಿಕೊಳ್ಳದಿದ್ದರೆ ವೈದ್ಯಕೀಯ ಪದವಿಗೆ ಬೆಲೆ ಇಲ್ಲ ಎಂಬಷ್ಟರ ಮಟ್ಟಿಗೆ ವೈದ್ಯಕೀಯ ಶಿಕ್ಷಣದ ಪರಿಭಾಷೆ ಬದಲಾಗಿದೆ. ವೈದ್ಯಕೀಯದ ಕಲಿಕೆಗೆ ಸೇವಾದೃಷ್ಟಿ ಈಗ ಉಳಿದಿಲ್ಲ. ಅದು ವೃತ್ತಿಯಾಗಿ ಉದ್ಯಮದ ರೂಪ ಪಡೆದಿದೆ. ಆದ್ದರಿಂದ ಇಲ್ಲಿ ಹಣ ಮಾಡುವುದಷ್ಟೆ ಮುಖ್ಯವಾಗುತ್ತದೆ. ಲಭ್ಯವಿರುವ ಕೋರ್ಸುಗಳ ಸಂಖ್ಯೆ, ಮೀಸಲಾತಿಯ ಪ್ರಮಾಣ, ಹಂಚಿಕೆಯ ಮಾನದಂಡದ ಪ್ರಮುಖ ವಿವರಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದಕ್ಕೆ ಅವಶ್ಯಕ. ಆಯ್ಕೆ ಪ್ರಕ್ರಿಯೆ ಅನುಮಾನಕ್ಕೆ ಎಡೆಕೊಡುವಂತಿದ್ದರೆ ಅಲ್ಲಿ ಅಕ್ರಮ ನಡೆದಿರುವುದನ್ನು ಅಲ್ಲಗಳೆಯುವುದು ಕಷ್ಟ. ಭ್ರಷ್ಟಾಚಾರದಲ್ಲಿ ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವ ಸಂದರ್ಭದಲ್ಲಿ ಸರ್ಕಾರದ ಪ್ರತಿ ಹಂಚಿಕೆಯನ್ನೂ ಸಂಶಯದಿಂದಲೇ ನೋಡುವ ಪರಿಸ್ಥಿತಿ ಇದೆ. ಇದು ನಿವಾರಣೆ ಆಗುವಂತೆ ಸೀಟುಗಳ ಹಂಚಿಕೆ ನಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.