ಜೂಜು, ಮೋಜಿನ ಕ್ರಿಕೆಟ್ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಕನಸು ನನಸಾಗಲಿಲ್ಲ ಎಂಬುದನ್ನು ಬಿಟ್ಟರೆ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಯಾವ ರೀತಿಯಲ್ಲೂ ವಿಶೇಷವಾಗಿರಲಿಲ್ಲ. ಬದಲಿಗೆ ಅದರಲ್ಲಿಯ ನಕಾರಾತ್ಮಕ ಅಂಶಗಳೇ ಎದ್ದುಕಂಡವು. ಐಪಿಎಲ್ ಎಂಬುದು ಒಂದು ರೀತಿಯ `ಪೋಲಿ ಲೀಗ್~ ಅರ್ಥದಲ್ಲೇ ಇದು ನಡೆದುಹೋಯಿತು. ಇದು ಕ್ರಿಕೆಟ್ ಬೆಳವಣಿಗೆಗೆ ಉತ್ತಮ ಸಾಧನ ಎಂಬ ಮಾತೇ ಇಲ್ಲ. ಈ ಬ್ಯಾಂಗ್‌ಬ್ಯಾಂಗ್ ಕ್ರಿಕೆಟ್‌ನಲ್ಲಿ ಹಣ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ಚಟುವಟಿಕೆಗಳಿಗೇ ಆದ್ಯತೆ. ವಿಶ್ವಕಪ್ ಕ್ರಿಕೆಟ್ ಮುಗಿದ ಕೆಲವೇ ದಿನಗಳಲ್ಲಿ ಆರಂಭವಾದ ಈ ಟ್ವೆಂಟಿ-20 ಚುಟುಕು ಕ್ರಿಕೆಟ್ ಕ್ರೀಡಾಂಗಣಗಳಿಗೆ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೂ ಅದೊಂದು ಕ್ರಿಕೆಟ್ ಬಗ್ಗೆ ಅಂಧ ವ್ಯಾಮೋಹ ಹೊಂದಿರುವ ಪ್ರೇಕ್ಷಕರ ಉನ್ಮಾದಭರಿತ ಹುಚ್ಚಾಟವಾಗಿತ್ತೇ ಹೊರತು ಮತ್ತೇನೂ ಆಗಿರಲಿಲ್ಲ. ವಿಶ್ವ ಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಕಂಡು ಬಂದ ರೋಚಕ ಅಂಶಗಳಂತೂ ಇದರಲ್ಲಿ ಕಂಡು ಬರಲೇ ಇಲ್ಲ. ಮೊದಲ ಪಂದ್ಯದಿಂದ ಕೊನೆಯ ಪಂದ್ಯದ ವರೆಗೂ ಚೆಂಡನ್ನು ಯದ್ವಾತದ್ವಾ ಹೊಡೆಯುವುದನ್ನು ಬಿಟ್ಟರೆ ಆಟದಲ್ಲಿ ಯಾವ ರೀತಿಯ ಕೌಶಲವೂ ಕಾಣಲಿಲ್ಲ. ಆಟದಲ್ಲಿ ಸೊಗಸಿದ್ದಾಗ ಮಾತ್ರ ಪಂದ್ಯಗಳು ಕಾವೇರುತ್ತವೆ. ಐಪಿಎಲ್‌ನಲ್ಲಿ ಆಟಗಾರರನ್ನು ಮನಬಂದ ಮೊತ್ತಕ್ಕೆ ಖರೀದಿಸಿದ ಶ್ರೀಮಂತ ವ್ಯಾಪಾರಿಗಳು ಅವರನ್ನು ಕೈಗೊಂಬೆಗಳಂತೆಯೇ ಆಡಿಸಿಕೊಂಡರು. ಇದರ ಪರಿಣಾಮವಾಗಿಯೇ ಆಟಗಾರರಲ್ಲಿ ತಮ್ಮ ರಾಷ್ಟ್ರದ ಮೇಲಿನ ಅಭಿಮಾನವೂ ಕಳೆದುಹೋಯಿತು. ಭಾರತ ಕ್ರಿಕೆಟ್ ತಂಡದ ಕೆಲವು ಆಟಗಾರರು ಗಾಯಗೊಂಡಿರುವ ಅಥವಾ ವಿಶ್ರಾಂತಿಯ ಅಗತ್ಯ ಇದೆ ಎಂಬ ನೆಪಗಳನ್ನು ಕೊಟ್ಟು ವೆಸ್ಟ್‌ಇಂಡೀಸ್ ಪ್ರವಾಸದಿಂದ ದೂರ ಉಳಿದರು. ಐಪಿಎಲ್‌ನಲ್ಲಿ ಸತತವಾಗಿ ಪಂದ್ಯಗಳನ್ನು ಆಡಲೇಬೇಕಾಗಿದ್ದ ಈ ಆಟಗಾರರು ಅದರ ಪರಿಣಾಮಗಳ ಬಗ್ಗೆ ಯೋಚಿಸದಿದ್ದುದೇ ಅವರು ಸುಸ್ತಾಗಲು ಕಾರಣ. ಆದರೆ ಐಪಿಎಲ್‌ನಲ್ಲಿ ದೊರೆತ ಹಣ ಅವರನ್ನು ಕುರುಡಾಗಿಸಿತ್ತು. ಅವರಿಗೆ ರಾಷ್ಟ್ರಕ್ಕಿಂತ ಐಪಿಎಲ್‌ನಲ್ಲಿ ಆಡುವುದೇ ಹೆಚ್ಚು ಲಾಭದಾಯಕ ಎಂಬುದು ಗೊತ್ತಾಗಿತ್ತು. ಜೊತೆಗೆ ಐಪಿಎಲ್ ಎಂಬ ದೊಂಬರಾಟದಲ್ಲಿ ಹಣದ ಜೊತೆ ಇತರ ಮೋಜಿಗೂ ಸಾಕಷ್ಟು ಅವಕಾಶ ಇತ್ತು. ಆಟಗಾರರು ಬೌಂಡರಿ, ಸಿಕ್ಸರ್‌ಹೊಡೆದಾಗ ಅವರನ್ನು ಹುರಿದುಂಬಿಸಲು ಕುಣಿಯುವ ಬೆಡಗಿಯರಲ್ಲಿ ಒಬ್ಬಳು, `ಪಂದ್ಯದ ನಂತರ ಕೆಲವು ಆಟಗಾರರು ನನ್ನ ಹಿಂದೆ ಬಿದ್ದು ಕಾಡಿದರು~ ಎಂದು ಅಂತರ್ಜಾಲದಲ್ಲಿ ಬರೆದದ್ದು ಸಣ್ಣ ವಿವಾದಕ್ಕೆ ಕಾರಣವಾದರೂ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಯಾಕೆಂದರೆ ಐಪಿಎಲ್‌ನಲ್ಲಿ ಅದೇನೂ ದೊಡ್ಡ ವಿಷಯವಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಇದರಲ್ಲಿ ಹಣ ಮಾಡುವವನೇ ಜಾಣ. ಜೂಜು ಮತ್ತು ಮೋಜು ಈ ಟೂರ್ನಿಯ ಮುಖ್ಯ ಆಕರ್ಷಣೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಇಲ್ಲಿ ಪ್ರತಿಭಾನ್ವೇಷಣೆಯೂ ಆಗುವುದಿಲ್ಲ. ಒಂದಿಬ್ಬರು ಹೊಸ ಆಟಗಾರರು ಭರ್ಜರಿ ಎನ್ನುವ ಆಟವಾಡಿದರೂ ಅದು ಅವರಿಗೆ ಮುಂದೆ ಅವಕಾಶ ಸಿಗುವುದಕ್ಕೆ ಮಾನದಂಡವಲ್ಲ. ಆಟದಲ್ಲಿ ಮನರಂಜನೆ ಇದ್ದರೂ ಸದಾ ಖುಷಿ ಕೊಡುವ ಅಂಶಗಳು ಅದರಲ್ಲಿ ಬಹಳ ಕಡಿಮೆ ಇವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.