ಜನಾಭಿಪ್ರಾಯಕ್ಕೆ ತಲೆಬಾಗಿ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಉಪಾಯದಿಂದ ಬಚ್ಚಿಟ್ಟುಕೊಂಡಿದ್ದ ದುಷ್ಟ ಉದ್ದೇಶಗಳು ಒಂದೊಂದೇ ಬಯಲಾಗತೊಡಗಿವೆ. ಮಸೂದೆ ರಚನೆಗೆ ಸರ್ಕಾರವೇ ರಚಿಸಿರುವ ಸಮಿತಿ ಸಭೆಯಲ್ಲಿ ಸರ್ಕಾರ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ನಡುವೆ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಸರ್ಕಾರ ತನ್ನ ನಿಲುವನ್ನು ಬದಲಾಯಿಸದೆ ಹೋದರೆ ಸಮಿತಿಯಿಂದಲೇ ಹೊರನಡೆಯುವ ಬೆದರಿಕೆಯನ್ನು ನಾಗರಿಕ ಸಮಾಜದ ಪ್ರತಿನಿಧಿಗಳು ಹಾಕಿರುವುದು ಮಸೂದೆ ರಚನೆಯ ಬಗ್ಗೆಯೇ ಅನುಮಾನ ಮೂಡಿಸಿದೆ. ಪ್ರಧಾನಮಂತ್ರಿ, ನ್ಯಾಯಮೂರ್ತಿಗಳು, ಕೇಂದ್ರ ಸರ್ಕಾರದ ಎಲ್ಲ ಅಧಿಕಾರಿಗಳು ಹಾಗೂ ಸಂಸತ್‌ನೊಳಗಿನ ಸಂಸದರ ನಡವಳಿಕೆಗಳನ್ನು ಲೋಕಪಾಲ ಮಸೂದೆ ವ್ಯಾಪ್ತಿಯಲ್ಲಿ ತರಬೇಕೆಂಬ ಬೇಡಿಕೆಯನ್ನು ಸರ್ಕಾರದ ಪ್ರತಿನಿಧಿಗಳು ಒಪ್ಪದಿರುವುದೇ ಈಗಿನ ಬಿಕ್ಕಟ್ಟಿಗೆ ಕಾರಣ. ಅಧಿಕಾರದ ಬಲದಿಂದ ತಮ್ಮನ್ನು ಸುಲಭದಲ್ಲಿ ರಕ್ಷಿಸಿಕೊಳ್ಳಬಲ್ಲ ಈ ನಾಲ್ಕು ವರ್ಗಗಳನ್ನು ಹೊರಗಿಟ್ಟ ಮೇಲೆ ಲೋಕಪಾಲರನ್ನು ನೇಮಿಸುವುದು ಯಾವ ಪುರುಷಾರ್ಥಕ್ಕಾಗಿ ಎಂದು ಕೇಳಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಯಲಾದ ಹಗರಣಗಳನ್ನೆಲ್ಲ ನೋಡಿದರೆ ಹೆಚ್ಚಿನವುಗಳಲ್ಲಿ ಷಾಮೀಲಾಗಿರುವುದು ಈ ನಾಲ್ಕು ವರ್ಗಗಳೇ. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಮಂತ್ರಿಗಳ ವಿರುದ್ಧವೇ ಕಿಡಿಕಾರಿದೆ. ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಿಂದ ಹಿಡಿದು ಹೈಕೋರ್ಟ್ ನ್ಯಾಯಮೂರ್ತಿಗಳ ವರೆಗೆ ಹಲವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಸಂಸತ್‌ನೊಳಗೆ ಪ್ರಶ್ನೆ ಕೇಳಲು ಮತ್ತು ಮತ ಚಲಾಯಿಸಲು ಕಾಸು ಪಡೆದ ಸಂಸದರ ವಿಚಾರಣೆಗೆ ಈಗಿನ ಕಾನೂನಿನಲ್ಲಿ ಅವಕಾಶವೇ ಇಲ್ಲ. ಜಂಟಿ ಕಾರ‌್ಯದರ್ಶಿ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳನ್ನಷ್ಟೇ ಲೋಕಪಾಲರ ವ್ಯಾಪ್ತಿಯಲ್ಲಿ ಸೇರಿಸಬೇಕೆಂಬ ಸರ್ಕಾರದ ನಿಲುವಿನಲ್ಲಿಯೂ ಸ್ವಹಿತರಕ್ಷಣೆಯ ದುರುದ್ದೇಶವೇ ಇದೆ. ಪ್ರಧಾನಿ ಮತ್ತಿತರರನ್ನು ಲೋಕಪಾಲರ ಕಾರ‌್ಯವ್ಯಾಪ್ತಿಗೆ ತರಬೇಕೆಂಬ ಪ್ರಸ್ತಾವದ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯುವುದಾಗಿ ಕೇಂದ್ರ ಸರ್ಕಾರ ಹೇಳಿರುವುದು ಕಾಲಹರಣದ ತಂತ್ರ ಅಷ್ಟೇ. ಲೋಕಾಯುಕ್ತರನ್ನೇ ನೇಮಿಸದೆ ಇರುವ ರಾಜ್ಯಗಳು ಈ ಪ್ರಸ್ತಾವವನ್ನು ಒಪ್ಪಬಹುದೇ? ಈ ವಿಷಯದಲ್ಲಿ ಯಾವ ರಾಜಕೀಯ ಪಕ್ಷವೂ ಸಾಚಾ ಅಲ್ಲ. ಲೋಕಪಾಲರ ಕಾರ‌್ಯವ್ಯಾಪ್ತಿಯಿಂದ ಪ್ರಧಾನಿಗಳನ್ನು ಹೊರಗಿಡಬೇಕೆಂಬ ಬೇಡಿಕೆಯಿಂದಾಗಿಯೇ ಎನ್‌ಡಿಎ ಅಧಿಕಾರವಧಿಯ ಕಾಲದಲ್ಲಿ ಲೋಕಪಾಲರ ನೇಮಕದ ಪ್ರಯತ್ನ ವಿಫಲಗೊಂಡಿದ್ದು. ಭ್ರಷ್ಟಾಚಾರದ ಹಗರಣಗಳಲ್ಲಿ ಮುಳುಗಿ ಹೋಗಿರುವ ಪ್ರಾದೇಶಿಕ ಪಕ್ಷಗಳಿಗೂ ಲೋಕಾಯುಕ್ತರಾಗಲಿ, ಲೋಕಪಾಲರಾಗಲಿ ಬೇಕಾಗಿಲ್ಲ. ಈ ಕಾರಣದಿಂದಾಗಿಯೇ ಬಹಳಷ್ಟು ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕವೇ ಆಗಿಲ್ಲ. ಈಗಿನ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅಧ್ಯಕ್ಷತೆಯ ಎರಡನೇ ಆಡಳಿತ ಸುಧಾರಣಾ ಆಯೋಗ ಕೂಡಾ ಲೋಕಪಾಲರ ಕಾರ‌್ಯವ್ಯಾಪ್ತಿಯಿಂದ ಪ್ರಧಾನಮಂತ್ರಿಗಳನ್ನು ಹೊರಗಿಡಬೇಕೆಂದು ಶಿಫಾರಸು ಮಾಡಿದೆ. ಲೋಕಪಾಲರ ನೇಮಕಕ್ಕೆ ರಾಜಕೀಯ ಪಕ್ಷಗಳು ಬಾಯಿಮಾತಿನ ಬೆಂಬಲ ನೀಡಿದರೂ ಅಂತರಂಗದಲ್ಲಿ ವಿರೋಧ ಇದ್ದೇ ಇದೆ. ಆದ್ದರಿಂದ ಅವುಗಳ ಅಭಿಪ್ರಾಯವನ್ನು ಕೇಳುವುದು ಅರ್ಥಹೀನ. ಅಭಿಪ್ರಾಯ ಕೇಳಬೇಕಾಗಿರುವುದು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಜನರನ್ನು. ಅಣ್ಣಾ ಹಜಾರೆ ಮತ್ತು ಸ್ನೇಹಿತರು ನಡೆಸುತ್ತಿರುವ ಹೋರಾಟಕ್ಕೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಬೆಂಬಲಕ್ಕಿಂತ ಬೇರೆ ಜನಾಭಿಪ್ರಾಯ ಏನು ಬೇಕು? ಇದಕ್ಕೆ ಕೇಂದ್ರ ಸರ್ಕಾರ ತಲೆಬಾಗಬೇಕು. ಪ್ರಧಾನಿ, ನ್ಯಾಯಮೂರ್ತಿಗಳೆಂಬ ಭೇದ ಮಾಡದೆ ಎಲ್ಲರನ್ನೂ ಲೋಕಪಾಲರ ವ್ಯಾಪ್ತಿಗೆ ಸೇರಿಸಬೇಕು. ಇದಕ್ಕೆ ವಿರುದ್ಧ ನಡೆದರೆ ಜನ ದಂಗೆ ಎದ್ದಾರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.