ಬಾಲ್ಯ ವಿವಾಹದ ಪಿಡುಗು ಈ ವರ್ಷ ಫೆಬ್ರುವರಿಯಿಂದ ಮೇ ತಿಂಗಳವರೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು 61 ಬಾಲ್ಯ ವಿವಾಹಗಳನ್ನು ನಿಲ್ಲಿಸಿದ್ದಾರೆ; ಸುಮಾರು 122 ಬಾಲ ವಧು-ವರರನ್ನು ಮಕ್ಕಳ ಸಲಹಾ ಕೇಂದ್ರಗಳ ವಶಕ್ಕೆ ಒಪ್ಪಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ದಿಸೆಯಲ್ಲಿ ಮಾಹಿತಿ ಸಂಗ್ರಹಿಸಿ ಬಾಲ್ಯ ವಿವಾಹಗಳನ್ನು ನಿಲ್ಲಿಸುವ ಪ್ರಕ್ರಿಯೆಗೆ ಯಶಸ್ಸು ತಂದುಕೊಟ್ಟಿದ್ದಾರೆ. ಕೆಲವೆಡೆ, ವಿವಾಹಕ್ಕೆ ಕೊರಳೊಡ್ಡಬೇಕಾದ ಹೆಣ್ಣುಮಕ್ಕಳೂ ಸ್ವತಃ ವಿರೋಧವನ್ನು ತೋರಿ ಅಧಿಕಾರಿಗಳನ್ನು ಸಂಪರ್ಕಿಸಿ ನೆರವು ಪಡೆದಿದ್ದಾರೆ. ಬಾಲ್ಯ ವಿವಾಹ ಪಿಡುಗಿನ ನಿಯಂತ್ರಣಕ್ಕೆ, ಭಿನ್ನ ನೆಲೆಗಳಲ್ಲಿ ಹೀಗೆ ಪ್ರತಿರೋಧ ವ್ಯಕ್ತವಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ವಿವಾಹಯೋಗ್ಯ ವಯಸ್ಸು ಹೆಣ್ಣಿಗೆ 18, ಗಂಡಿಗೆ 21. ಆದರೆ ರಾಜ್ಯದಲ್ಲಿ ವಿವಾಹಕ್ಕೆ ಒಳಗಾಗುವ ಶೇ 45ರಿಂದ 68ರಷ್ಟು ಮಂದಿಗೆ 18 ವರ್ಷಗಳು ತುಂಬಿರುವುದೇ ಇಲ್ಲ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಂತೂ 10 ವರ್ಷಕ್ಕೂ ಕೆಳಗಿನ ಆಡುವ ಕಂದಮ್ಮಗಳೂ ವಧು- ವರರಾಗುತ್ತಾರೆ. ಕೆಲವು ಪಂಗಡಗಳಲ್ಲಿ ಬೇರುಬಿಟ್ಟಿರುವ ಸಾಂಪ್ರದಾಯಿಕ ಆಚರಣೆಗಳು, ಬಡತನ, ಅಜ್ಞಾನ, ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ ಹೊರೆ ಇಳಿಸಿಕೊಳ್ಳುವ ಪ್ರವೃತ್ತಿಯೂ ಈ ಪಿಡುಗಿಗೆ ಮುಖ್ಯ ಕಾರಣ. ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡದಿದ್ದರೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಸಂಪ್ರದಾಯ ಶರಣ ಕುಟುಂಬಗಳು ನಂಬುವುದೂ ಉಂಟು. ಅನೇಕ ಕಡೆ ಸಾಮೂಹಿಕ ವಿವಾಹದ ನೆಪದಲ್ಲಿ ಬಾಲ್ಯವಿವಾಹಗಳು ನಡೆಯುವುದು ಮಾಮೂಲು. ಇಂತಹದನ್ನು ತಡೆಯಬೇಕಾದ ಜನಪ್ರತಿನಿಧಿಗಳು, ರಾಜಕೀಯ ಮುಖಂಡರೂ ಈ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ವಿಪರ್ಯಾಸ. ಇಂತಹ ಸಂದರ್ಭಗಳಲ್ಲಿ ಕಟ್ಟುನಿಟ್ಟಾಗಿ ಕಾನೂನು ಕ್ರಮಗಳನ್ನು ಕೈಗೊಂಡಲ್ಲಿ ಜನರಲ್ಲಿ ಎಚ್ಚರ ಮೂಡುವುದು ಸಾಧ್ಯ. ಜೊತೆಗೆ, ಬಾಲ್ಯ ವಿವಾಹದಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಪೋಷಕರ್ಲ್ಲಲೇ ಅರಿವು ಮೂಡಿಸಬೇಕಾದುದು ಅಗತ್ಯ. ಬಾಲ್ಯವಿವಾಹವಾಗಿ ಸಣ್ಣ ವಯಸ್ಸಿನಲ್ಲೇ ತಾಯಂದಿರಾಗುವ ಹೆಣ್ಣುಮಕ್ಕಳು ಆರೋಗ್ಯವಂತ ಪೀಳಿಗೆಗೆ ಜನ್ಮ ನೀಡುವುದು ಸಾಧ್ಯವಿಲ್ಲ; ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಹೆರಿಗೆಯಲ್ಲಿ ಸಾಯುವ ಪ್ರಮಾಣವೂ ಜಾಸ್ತಿ ಎಂಬುದನ್ನು ಪೋಷಕರು ಮನಗಾಣಬೇಕು. ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳನ್ನು ಶಾಲಾ ಪಠ್ಯವಾಗಿಸುವುದೂ ಅಗತ್ಯ. ಈ ನಿಟ್ಟಿನಲ್ಲಿ, 2006ರ ಬಾಲ್ಯ ವಿವಾಹ ನಿಷೇಧ ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ರಚಿಸಿದ್ದ `ಬಾಲ್ಯ ವಿವಾಹ ತಡೆ ಮುಖ್ಯ ಸಮಿತಿ~ ತನ್ನ ವರದಿಯನ್ನು ಜೂನ್ ಅಂತ್ಯಕ್ಕೆ ಸಲ್ಲಿಸಲಿದೆ. ಇವೆಲ್ಲ ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.