ಪ್ರತಿಮೆ ಸ್ಥಳಾಂತರ ಪ್ರಹಸನ `ನಮ್ಮ ಮೆಟ್ರೊ' ನೆಲದಡಿಯ ರೈಲು ನಿಲ್ದಾಣ ಕಾಮಗಾರಿ ಸಲುವಾಗಿ, ಡಾ ಬಿ. ಆರ್. ಅಂಬೇಡ್ಕರ್ ಪ್ರತಿಮೆಯನ್ನು ವಿಧಾನಸೌಧದ ಎದುರಿನಿಂದ ತಾತ್ಕಾಲಿಕವಾಗಿ ಸ್ಥಳಾಂತರ ಮಾಡುವ ವಿಚಾರವನ್ನು ಸರ್ಕಾರ ಅನಗತ್ಯ ವಿವಾದವಾಗಿಸಿಕೊಂಡಿದೆ. ವಿಧಾನಸೌಧ ಪೂರ್ವ ದ್ವಾರ ಬಳಿ ಇದ್ದ ಜವಾಹರಲಾಲ್ ನೆಹರೂ ಮತ್ತು ಸುಭಾಷ್ ಚಂದ್ರ ಬೋಸ್ ಪ್ರತಿಮೆಗಳನ್ನು ಯಾವುದೇ ತಂಟೆ ತಕರಾರುಗಳಿಲ್ಲದೆ ಸುರಕ್ಷಿತವಾಗಿ ಈಗಾಗಲೇ ಸ್ಥಳಾಂತರಿಸಲಾಗಿದೆ. ಆದರೆ, ಈ ಪ್ರತಿಮೆಗಳಷ್ಟೇ ತೂಕ, ಎತ್ತರ ಇರುವ ಅಂಬೇಡ್ಕರ್ ಪ್ರತಿಮೆಯ ಸ್ಥಳಾಂತರ ಮಾತ್ರ ಪ್ರಹಸನವಾಗಿ ಪರಿಣಮಿಸಿದೆ. ಅಂಬೇಡ್ಕರ್ ಪ್ರತಿಮೆಯ ಸ್ಥಳಾಂತರ ವಿಷಯ ಪ್ರಸ್ತಾಪವಾಗಿಯೇ ನಾಲ್ಕು ವರ್ಷಗಳಾದವು. ಸರ್ಕಾರ ಈವರೆಗೆ 21 ಸಭೆಗಳನ್ನು ನಡೆಸಿದೆ. ಇದಕ್ಕೆ ಸಂಬಂಧಿಸಿದ ಕಡತಗಳ ಸಂಖ್ಯೆ ಏರುತ್ತಲೇ ಇದೆ. ಮೆಟ್ರೊ ಅಧಿಕಾರಿಗಳು ಸರ್ಕಾರಕ್ಕೆ ಪತ್ರಗಳನ್ನು ಬರೆದು ಸುಸ್ತಾಗಿದ್ದಾರೆ. ಕಡೆಗೆ ಅಂಬೇಡ್ಕರ್ ಪ್ರತಿಮೆಯನ್ನು 15 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಬೇಕು ಎಂದು ಕಳೆದ ತಿಂಗಳು ಹೈಕೋರ್ಟ್ ಕೂಡ ತಾಕೀತು ಮಾಡಿತು. ಹೀಗಿದ್ದೂ ಸರ್ಕಾರ ಮಾತ್ರ ಕಣ್ಣುಮುಚ್ಚಿ ತಟಸ್ಥವಾಗಿದೆ. ವಿಳಂಬವಾಗುತ್ತಿರುವ ಕಾಮಗಾರಿಯಿಂದ, ನಿರ್ಮಾಣ ವೆಚ್ಚ 100 ಕೋಟಿ ರೂಪಾಯಿಗಳಷ್ಟು ಬೃಹತ್ ಪ್ರಮಾಣದಲ್ಲಿ ಏರಿಕೆ ಕಾಣಲಿದೆ ಎನ್ನುತ್ತಾರೆ ಮೆಟ್ರೊ ಅಧಿಕಾರಿಗಳು. ಇದರಿಂದಾಗುವ ನಷ್ಟಕ್ಕೆ ಯಾರು ಹೊಣೆ? ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ, ಮೆಟ್ರೊದಂತಹ ಸಾರ್ವಜನಿಕ ಸಾರಿಗೆ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾಗಿದೆ. ಆದರೆ ಈ ವಿಚಾರದಲ್ಲಿ ಕೆಲವು ದಲಿತ ಸಂಘಟನೆಗಳು ಸೃಷ್ಟಿಸಿರುವ ಅನಗತ್ಯ ವಿವಾದಕ್ಕೆ ಸರ್ಕಾರ ಮಂಡಿಯೂರಿರುವುದು ಅಕ್ಷಮ್ಯ. ವಾಸ್ತವವಾಗಿ ನಿಜವಾದ ದಲಿತ ನಾಯಕರು ಪ್ರತಿಮೆ ಸ್ಥಳಾಂತರಕ್ಕೆ ವಿರೋಧವನ್ನೆಂದೂ ತೋರಿಲ್ಲ. ಅನಗತ್ಯ ವಿಚಾರಗಳನ್ನು ವಿವಾದವಾಗಿಸಿ ಸ್ವಾರ್ಥ ಸಾಧಿಸಿಕೊಳ್ಳುವವರ ಕೀಳು ರಾಜಕೀಯಕ್ಕೆ, ಸಮಾಜ ಕಲ್ಯಾಣ ಸಚಿವರೂ ಕುಮ್ಮಕ್ಕು ನೀಡುತ್ತಿರುವುದು ಆಶ್ಚರ್ಯ. ಸರ್ಕಾರದ ಒಳಗ್ದ್ದಿದೂ ತಮ್ಮ ಸರ್ಕಾರದ ನಿರ್ಧಾರಗಳ ಜಾರಿಗೆ ಅಪಸ್ವರ ಎತ್ತುತ್ತಿರುವುದು ಎಷ್ಟು ಸರಿ? ಅಷ್ಟಕ್ಕೂ ಮೆಟ್ರೊ ರೈಲು, ದಲಿತ ಸಮುದಾಯದವರೂ ಸೇರಿದಂತೆ ಎಲ್ಲ ಜಾತಿ, ವರ್ಗಗಳನ್ನೊಳಗೊಂಡ ಸಾರ್ವಜನಿಕರ ಸಂಚಾರಕ್ಕೆ ಅಗತ್ಯವಾದ ಮೂಲಸೌಕರ್ಯವಲ್ಲವೆ? ನಿಜವಾಗಿಯೂ ದಲಿತರಿಗೆ ಈಗ ಬೇಕಿರುವುದು ಅನ್ನ, ಬಟ್ಟೆ, ಸೂರು, ಶಿಕ್ಷಣ ಹಾಗೂ ಸ್ವಾಭಿಮಾನದ ಬದುಕು ನೀಡಲು ಅಗತ್ಯವಾದಂತಹ `ರಾಜಕಾರಣ'. ಪ್ರತಿಮೆ ಸ್ಥಳಾಂತರದಂತಹ ವಿಚಾರಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಪುಂಡಾಟಿಕೆಯ ರಾಜಕಾರಣವಲ್ಲ. ಇಂತಹ ಕ್ಷುಲ್ಲಕ ಪುಢಾರಿಗಿರಿಯ ರಾಜಕಾರಣಕ್ಕೆ ಸರ್ಕಾರ ಮಣೆ ಹಾಕಿರುವುದು ದುರದೃಷ್ಟ. ಚುನಾವಣೆ ವರ್ಷದಲ್ಲಿ ದಲಿತರ ಮತ ಕಳೆದುಕೊಳ್ಳಬೇಕಾದೀತೆಂಬ ಅವಾಸ್ತವಿಕ ಲೆಕ್ಕಾಚಾರದಲ್ಲಿ, ದೃಢ ನಿರ್ಧಾರ ತಳೆಯದಿರುವುದು ಸರ್ಕಾರದ ಪುಕ್ಕಲುತನ ಎನ್ನದೆ ವಿಧಿಯಿಲ್ಲ. ವಿನಾ ಕಾರಣ, ತಮ್ಮ ಹೆಸರು ಬಳಸಿಕೊಂಡು, ಜನಸಾಮಾನ್ಯರ ಹಿತದಿಂದ ದೂರ ಸರಿಯುವಂತಹ ಇಂತಹ ಪುಕ್ಕಲುತನವನ್ನು ಅತ್ಯಂತ ದಿಟ್ಟ ಹಾಗೂ ಆಧುನಿಕ ವ್ಯಕ್ತಿಯಾಗಿದ್ದ ಅಂಬೇಡ್ಕರ್ ಸಹ ಸಹಿಸುತ್ತಿರಲಿಲ್ಲ ಎನ್ನಬಹುದು. ಈಗ ಅಂಬೇಡ್ಕರ್ ಪ್ರತಿಮೆಗೆ ಹಾನಿಯಾಗದಂತೆ ಸ್ಥಳಾಂತರ ಮಾಡಲು ತಜ್ಞರ ವರದಿ ಕೇಳಲಾಗಿದೆ ಎಂಬಂತಹ ಕುಂಟುನೆಪಗಳನ್ನು ಮುಂದಿಡುತ್ತಾ ಸರ್ಕಾರ ಕಾಲ ಹರಣ ಮಾಡುತ್ತಿರುವುದು ಹಾಸ್ಯಾಸ್ಪದ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.