ಅತಂತ್ರ ಜಾರ್ಖಂಡ್ ಜಾರ್ಖಂಡ್ ರಾಜ್ಯದಲ್ಲಿ ರಾಜಕೀಯ ಅನಿಶ್ಚಯ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ರಾಜ್ಯಗಳ ಕಲ್ಪನೆ ಆಡಳಿತಾತ್ಮಕ ದೃಷ್ಟಿಯಿಂದ, ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಎಂಬ ಕಲ್ಪನೆ ಇದೆ. ಆದರೆ 82 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ಅಸ್ಥಿರ ರಾಜಕೀಯ ಪರಿಸ್ಥಿತಿಯಿಂದಾಗಿ ನರಳುತ್ತಿದೆ. ಕಳೆದ 12 ವರ್ಷಗಳ ಹಿಂದೆ ಪುಟ್ಟ ರಾಜ್ಯವಾದ ಜಾರ್ಖಂಡ್ ಉದಯವಾದಾಗ ಬಹಳ ನಿರೀಕ್ಷೆಗಳಿದ್ದವು. ಆದರೆ 12 ವರ್ಷಗಳ ಇತಿಹಾಸದಲ್ಲಿ ಎಂಟು ಸರ್ಕಾರಗಳು ಬಂದು ಹೋದವು. ಒಂದು ಸರ್ಕಾರವಂತೂ ಹನ್ನೊಂದು ತಿಂಗಳಿಗೇ ಪತನವಾಯಿತು. ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿತು. ದುರಾಸೆ ಪೀಡಿತ ಮುಖ್ಯಮಂತ್ರಿಯೊಬ್ಬರು ವಿಪರೀತ ಭ್ರಷ್ಟಾಚಾರದಿಂದಾಗಿ ಸೆರೆಮನೆ ಸೇರಿದರು. ಹೀಗಾಗಿ ಜಾರ್ಖಂಡ್ ಅಭಿವೃದ್ಧಿ ದೃಷ್ಟಿಯಿಂದ ತೀರಾ ಹಿಂದುಳಿದಿದೆ. ರಾಜ್ಯದಲ್ಲಿ ಆರಂಭದಿಂದಲೂ ಸತತವಾಗಿ ಅತಂತ್ರ ರಾಜಕೀಯ ಸ್ಥಿತಿಯೇ ಇದೆ. ಭ್ರಷ್ಟಾಚಾರ ಮೇರೆ ಮೀರಿದೆ. ಹೀಗಾಗಿ ಸ್ವಚ್ಛ ಮತ್ತು ದಕ್ಷ ಆಡಳಿತ ನೀಡುವಲ್ಲಿ 12 ವರ್ಷಗಳ ಕಾಲ ಆಡಳಿತ ನಡೆಸಿದವರೆಲ್ಲಾ ವಿಫಲರಾಗಿದ್ದಾರೆ. ಶಿಬು ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿಮೋರ್ಚಾ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಾಗಲೇ ಸರ್ಕಾರದ ಪತನದ ಸೂಚನೆ ದೊರಕಿತ್ತು.2009 ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ತಲೆದೋರಿದ್ದರಿಂದ ತಲಾ 18 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಹಾಗೂ ಜೆಎಂಎಂ ಗಳು `ಸರದಿ ಮೇಲೆ ಸರ್ಕಾರ' ಎಂಬ ಒಪ್ಪಂದದಂತೆ ಸರ್ಕಾರ ರಚನೆಗೆ ಮುಂದಾದವು. ರಾಜಕೀಯದಲ್ಲಿ ಯಾರು ಯಾರಿಗೆ ಯಾವಾಗ ಇರಿಯುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ. ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವಧಿ ಮುಗಿಯಲು ಕೆಲವೇ ದಿನಗಳಿವೆ ಎನ್ನುವಾಗ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಹಿಂದೇಟು ಹಾಕಿದ್ದಾರೆ. ಮುಂಡಾ, ಸರ್ಕಾರವನ್ನು ಅವಧಿಗೆ ಮುನ್ನವೇ ವಿಸರ್ಜನೆ ಮಾಡಲು ತರಾತುರಿಯಿಂದ ಶಿಫಾರಸು ಮಾಡಿರುವುದೂ ಕೂಡ ಒಪ್ಪುವ ನಡೆ ಅಲ್ಲ. ಜೆಎಂಎಂ ಜೊತೆ ಮೈತ್ರಿ ಸಾಧಿಸುವಾಗ ಮಾಡಿಕೊಂಡ ಒಪ್ಪಂದವನ್ನೂ ಮುಂಡಾ ಉಲ್ಲಂಘಿಸಿದ್ದಾರೆ. ರಾಜಕೀಯದಲ್ಲಿ ಇಂತಹ ವಚನಭ್ರಷ್ಟತೆ ಈಗ ಸಲೀಸು. ಕರ್ನಾಟಕದಲ್ಲಿ ಜೆಡಿಎಸ್ ಮಾಡಿದ್ದನ್ನೇ ಜಾರ್ಖಂಡ್‌ನಲ್ಲಿ ಬಿಜೆಪಿ ಪುನರಾವರ್ತಿಸಿದೆ. ಹಾಗೆ ನೋಡಿದರೆ, ಜಾರ್ಖಂಡ್ ಮುಕ್ತಿ ಮೋರ್ಚಾಗೂ, ಹಿಂದುತ್ವವಾದಿ ಬಿಜೆಪಿಗೂ ಅಂತಹ ತಾತ್ವಿಕ ಸಂಘರ್ಷವೇನೂ ಇಲ್ಲ. ಜೆಎಂಎಂ, ಗಿರಿಜನರ ಚಳವಳಿಯನ್ನೇ ಹಿನ್ನೆಲೆಯಾಗಿಟ್ಟುಕೊಂಡು ಬೆಳೆದ ಪಕ್ಷ. ಈಗ ತೀರ್ಮಾನ ರಾಜ್ಯಪಾಲರ ಬಳಿ ಇದ್ದರೂ, ಕಾಂಗ್ರೆಸ್ ಸರ್ಕಾರ ರಚನೆಗೆ ಹವಣಿಸುತ್ತಿರುವ ಸಾಧ್ಯತೆ ಇದೆ. 13 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್, ಜೆಎಂಎಂ ಜೊತೆಗೂಡಿ ಸರ್ಕಾರ ರಚಿಸುವ ಅವಕಾಶವಿದೆ. ಆದರೆ ಹಿಂದೆ ಬೆಂಬಲ ನೀಡಿ ಕೈ ಸುಟ್ಟುಕೊಂಡದ್ದನ್ನೂ ಕಾಂಗ್ರೆಸ್ ಮರೆತಿಲ್ಲ. ಮುಂದಿನ ದಿನಗಳಲ್ಲಿ ವಿವಿಧ ಪಕ್ಷಗಳ ಹೊಂದಾಣಿಕೆಯಿಂದ ಸರ್ಕಾರ ರಚಿಸಬಹುದಾದ ಎಲ್ಲ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ಜಾರ್ಖಂಡ್ ಸದಾ ಅಭದ್ರತೆಯಿಂದ ನರಳುವುದು ತಪ್ಪುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.