ಮನಮೋಹನ್ ಸಿಂಗ್ ವೈಫಲ್ಯ ಯುಪಿಎ ಸರ್ಕಾರದ ಕಾರ‌್ಯವೈಫಲ್ಯಕ್ಕಾಗಿ ಸುಪ್ರೀಂಕೋರ್ಟ್ ಚಾಟಿ ಬೀಸಿದ್ದು ಇದು ಮೊದಲ ಸಲವೇನಲ್ಲ. ಸುಪ್ರೀಂ ಕೋರ್ಟ್ ತಪರಾಕಿ ನೀಡಿದ ನಂತರವೇ ಕಾಮನ್‌ವೆಲ್ತ್ ಕ್ರೀಡಾಕೂಟ, 2ಜಿ ತರಂಗಾಂತರ, ಆದರ್ಶ ಸೊಸೈಟಿ ಮೊದಲಾದ ಹಗರಣಗಳ ಬಗ್ಗೆ ಕೇಂದ್ರ ಸರ್ಕಾರ ಕನಿಷ್ಠ ತನಿಖೆ ಪ್ರಾರಂಭಿಸಿದ್ದು. ಈಗ ಕಪ್ಪುಹಣದ ಪತ್ತೆಗಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ತನಿಖೆಯಿಂದ ಅಸಮಾಧಾನಗೊಂಡಿರುವ ಸುಪ್ರೀಂ ಕೋರ್ಟ್ ಅದರ ಮೇಲ್ವಿಚಾರಣೆಗಾಗಿ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಕೇಂದ್ರ ಸರ್ಕಾರ ಇದೇ ಉದ್ದೇಶಕ್ಕಾಗಿ ರಚಿಸಿರುವ ಉನ್ನತಾಧಿಕಾರ ಸಮಿತಿ ಇನ್ನು ಮುಂದೆ ಎಸ್‌ಐಟಿ ಕಾವಲು ಕಣ್ಣಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಎಸ್‌ಐಟಿ ರಚನೆಯ ಜತೆಯಲ್ಲಿಯೇ ಕಪ್ಪುಹಣದ ನಿಯಂತ್ರಣ ವಿಷಯದಲ್ಲಿ ಕೇಂದ್ರ ಸರ್ಕಾರ ಆಗಾಗ ವ್ಯಕ್ತಪಡಿಸುವಂತಹ ಅಸಹಾಯಕತೆಯ ಹಿಂದಿನ ಪೊಳ್ಳುತನವನ್ನು ಕೂಡಾ ಸುಪ್ರೀಂಕೋರ್ಟ್ ಬಯಲುಗೊಳಿಸಿದೆ. ದ್ವಿಪಕ್ಷೀಯ ಒಪ್ಪಂದದ ಕಾರಣದಿಂದಾಗಿ ವಿದೇಶಿ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳ ಹೆಸರು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೇಂದ್ರದ ಸಮಜಾಯಿಷಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿರುವುದು ವಿಶೇಷ. ಕಪ್ಪುಹಣದ ಖಾತೆದಾರರ ಹೆಸರು ಪ್ರಕಟಿಸಲು ದ್ವಿಪಕ್ಷೀಯ ಒಪ್ಪಂದ ಅಡ್ಡಿಯಾಗಿಲ್ಲ ಎಂದು ಒಪ್ಪಂದದ ಪಠ್ಯ ಮತ್ತು ಕಾನೂನಿನ ವ್ಯಾಖ್ಯಾನದ ಆಧಾರದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವುದು ಗಮನಾರ್ಹ. ಕಪ್ಪುಹಣದ ಬಗೆಗಿನ ತನಿಖೆಯನ್ನು ಮುಂದೂಡುತ್ತಾ ಹೋಗಲು ಯುಪಿಎ ಸರ್ಕಾರದ ಬಳಿ ಈಗ ಬಹಳ ಸಬೂಬುಗಳು ಉಳಿದಿಲ್ಲ. ನಾಗರಿಕ ಸಮಾಜದ ಮಧ್ಯಪ್ರವೇಶದಿಂದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ ಎಂದು ಬೊಬ್ಬಿಡುತ್ತಿರುವ ಆಳುವ ಪಕ್ಷದ ನಾಯಕರು, ಸುಪ್ರೀಂಕೋರ್ಟ್ ಮಧ್ಯಪ್ರವೇಶವನ್ನು ಅದೇ ದನಿಯಲ್ಲಿ ವಿರೋಧಿಸುವಂತೆಯೂ ಇಲ್ಲ. ಭ್ರಷ್ಟಾಚಾರದ ಹಗರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಪರಾಕಿ ನೀಡಿದಾಗ ವೈಯಕ್ತಿಕವಾಗಿ ಪ್ರಾಮಾಣಿಕರೆಂದೇ ಹೇಳಲಾಗುತ್ತಿರುವ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಯಾರೂ ಅನುಮಾನದಿಂದ ನೋಡಲು ಹೋಗಲಿಲ್ಲ. ಆದರೆ ಈ ಬಾರಿ ಇಂತಹ ಗುರಾಣಿಗಳನ್ನು ಮುಂದಿಟ್ಟು ಪ್ರಧಾನಮಂತ್ರಿಗಳು ತಪ್ಪಿಸಿಕೊಳ್ಳುವಂತಿಲ್ಲ. ಕಪ್ಪುಹಣ ಎನ್ನುವುದು ಸಂಪೂರ್ಣವಾಗಿ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ. ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವವಿಖ್ಯಾತ ಆರ್ಥಿಕ ತಜ್ಞ, ಮಾತ್ರವಲ್ಲ, ಹೊಸ ಆರ್ಥಿಕ ನೀತಿಯ ಹರಿಕಾರರೆಂಬ ಬಣ್ಣನೆಗೊಳಗಾಗಿರುವವರು. ಆದರೆ ಕಳೆದ ಏಳುವರ್ಷಗಳ ಅಧಿಕಾರವಧಿಯಲ್ಲಿ ಈ ಆರ್ಥಿಕ ತಜ್ಞ ಪ್ರಧಾನಿಗೆ ಕಪ್ಪುಹಣವನ್ನು ನಿಯಂತ್ರಿಸಲು ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಅದನ್ನು ಅಕ್ರಮವಾಗಿ ಕೂಡಿಟ್ಟವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇದು ಸರ್ಕಾರಕ್ಕಿಂತಲೂ ಹೆಚ್ಚಾಗಿ ಮನಮೋಹನ್‌ಸಿಂಗ್ ಅವರ ವೈಯಕ್ತಿಕ ವೈಫಲ್ಯ ಎಂದೇ ಹೇಳಬೇಕಾಗುತ್ತದೆ. ಈ ಬೆಳವಣಿಗೆ ಮನಮೋಹನ್‌ಸಿಂಗ್ ಅವರ ಪ್ರಾಮಾಣಿಕತೆ ಮತ್ತು ಆಡಳಿತ ಸಾಮರ್ಥ್ಯ ಎರಡನ್ನೂ ಅನುಮಾನದಿಂದ ನೋಡುವಂತೆ ಮಾಡಿದೆ. ಈಗಿನ ಅಗ್ನಿಪರೀಕ್ಷೆಯಿಂದ ಅವರು ಪಾರಾಗಿ ಬರಬೇಕಾದರೆ ಕಪ್ಪುಹಣದ ಪತ್ತೆ ಕಾರ‌್ಯವನ್ನು ಚುರುಕುಗೊಳಿಸಿ ಅದರ ಹಿಂದಿರುವ ಕರಾಳಮುಖಗಳನ್ನು ದೇಶದ ಎದುರು ಅನಾವರಣಗೊಳಿಸಲೇ ಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.