ಉದ್ಧಟತನ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ವರದಿ ಕುರಿತಾಗಿ ರಾಜ್ಯದ ಕಂದಾಯ ಸಚಿವರ ಹೇಳಿಕೆ ಉದ್ಧಟತನದ್ದು. `ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ~ ಎಂದು ಹೇಳಿರುವ ಸಚಿವರು ಅದರಲ್ಲಿ ಏನಿದೆಯೆಂದು ತಿಳಿಯುವ ಮೊದಲೇ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ತೀರ್ಮಾನವನ್ನು ಪ್ರಕಟಿಸಿರುವುದು ಸಾರ್ವಜನಿಕ ಆಸ್ತಿ ರಕ್ಷಣೆಯಲ್ಲಿ ಸರ್ಕಾರದ ಧೋರಣೆಯನ್ನಷ್ಟೇ ಬಿಂಬಿಸುತ್ತದೆ. ಜವಾಬ್ದಾರಿಯುತ ಸಚಿವರಾಗಿ, ಸರ್ಕಾರವೇ ನೇಮಕ ಮಾಡಿದ ಅಧಿಕಾರಿಗಳ ಸಮಿತಿ, ಸರ್ಕಾರದ ಅಧಿಕೃತ ದಾಖಲೆಗಳನ್ನೇ ಆಧರಿಸಿ ಸಲ್ಲಿಸಿದ ವರದಿಯ ಬಗ್ಗೆ ಪೂರ್ವಗ್ರಹದಿಂದ ಪ್ರತಿಕ್ರಿಯೆ ನೀಡುವುದು ಅವರು ಹೊಂದಿರುವ ಸ್ಥಾನಕ್ಕೆ ತಕ್ಕುದಲ್ಲ. ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರು, ಸಿರಿವಂತರು ಮತ್ತು ಭ್ರಷ್ಟ ಅಧಿಕಾರಿಗಳು ಒಟ್ಟು ಶಾಮೀಲಾಗಿ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡಿದ್ದಾರೆಂದು, ಸರ್ಕಾರದ ದಾಖಲೆಗಳನ್ನೇ ಆಧರಿಸಿ ಸಲ್ಲಿಸಿದ ವರದಿಯನ್ನು, ಅಭಿವೃದ್ಧಿಯ ಹೆಸರನ್ನು ಹೇಳುತ್ತಾ, ಅಧಿಕಾರವಿರುವುದೇ ಹಣ ಮತ್ತು ಆಸ್ತಿ ಮಾಡುವುದಕ್ಕಾಗಿ ಎಂಬಂತೆ ವರ್ತಿಸುತ್ತಿರುವ ಬಿಜೆಪಿ ಸರ್ಕಾರ ಒಪ್ಪಿಕೊಳ್ಳುತ್ತದೆ ಎಂಬ ಭ್ರಮೆ ರಾಜ್ಯದ ಜನತೆಗಿಲ್ಲ. ಆದರೆ ಈ ನಿರಂಕುಶ ಧೋರಣೆ ಸರ್ಕಾರಕ್ಕಿದೆ ಎಂಬುದು ಆಘಾತಕರ ಸಂಗತಿ. ವರದಿಯಲ್ಲಿ ಸರ್ಕಾರಕ್ಕೆ ವಿರುದ್ಧವಾದ ಅಂಶಗಳು ಇರುವುದರಿಂದ ಅದನ್ನು ಮುದ್ರಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ ಕಂದಾಯ ಇಲಾಖೆಯ ಪ್ರಧಾನ ಕಾರ‌್ಯದರ್ಶಿಯ ನಡವಳಿಕೆ ಸಚಿವರ ಉದ್ಧಟತನಕ್ಕೂ ಮೀರಿದ ದುರ್ವರ್ತನೆ. ಕಾರ್ಯಪಡೆ, ಆಡಳಿತದ ಲೋಪಗಳನ್ನೆಲ್ಲ ಮುಚ್ಚಿ ಹಾಕಿ ಸರ್ಕಾರದಲ್ಲಿ ಇರುವವರಿಗೆ ಅನುಕೂಲವಾಗುವಂತೆ ವರದಿ ಸಲ್ಲಿಸಬೇಕೆಂದು ರಾಜಕೀಯ ಪಕ್ಷಗಳ ವಕ್ತಾರನಂತೆ ನಿರೀಕ್ಷಿಸಿದ ಈ ಅಧಿಕಾರಿ ತಾವು ಇರುವ ಉನ್ನತ ಹುದ್ದೆಗೆ ನ್ಯಾಯ ಸಲ್ಲಿಸುತ್ತಾರೆಯೇ ಎಂಬ ಸಂಶಯ ಮೂಡುವಂತಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿದ್ದು ಸರ್ಕಾರ. ಅದರ ಸದಸ್ಯರೆಲ್ಲ ವಿವಿಧ ಇಲಾಖೆಗಳಿಗೆ ಸೇರಿದ ಪ್ರಧಾನ ಕಾರ‌್ಯದರ್ಶಿ, ಕಮೀಷನರ್ ದರ್ಜೆಯ ಅಧಿಕಾರಿಗಳು. ಇದರ ಅರಿವಿಲ್ಲದ ಸಚಿವರು `ಕಾರ್ಯಪಡೆಯ ವರದಿ ಅಧಿಕೃತವಲ್ಲ~ ಎಂದು ಹೇಳುವ ಮೂಲಕ ತಮ್ಮ ಆಡಳಿತಜ್ಞಾನವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಕಾರ್ಯಪಡೆ ಅಧ್ಯಕ್ಷರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ದುರುದ್ದೇಶವನ್ನು ಪ್ರಕಟಿಸಿದ್ದಾರೆ. ಸಂಸದೀಯ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯ ಪ್ರಾಥಮಿಕ ಅರಿವು ಇಲ್ಲದವರಿಗೆ ರಾಜ್ಯಾಡಳಿತದ ಅವಕಾಶ ಲಭಿಸಿದರೆ ಆಗುವ ಅನಾಹುತಗಳಿಗೆ ಮಾದರಿ ಎನ್ನುವಂಥ ಈ ಬಗೆಯ ವರ್ತನೆ ಕರ್ನಾಟಕದಲ್ಲಿ ಹೊಸದು. ನಾಗರಿಕ ಕಾನೂನು ಆಡಳಿತದಲ್ಲಿ ಕನಿಷ್ಠ ಪ್ರಮಾಣದ ನಂಬಿಕೆ ಇದ್ದರೆ, ಕಂದಾಯ ಸಚಿವರು, ತಕ್ಷಣವೇ ಸರ್ಕಾರ ನೇಮಿಸಿದ ಕಾರ್ಯಪಡೆಗೆ ವರದಿ ಮುದ್ರಿಸಲು ಅಸಹಕಾರ ತೋರಿದ ಕಂದಾಯ ಇಲಾಖೆ ಪ್ರಧಾನ ಕಾರ‌್ಯದರ್ಶಿ ಅವರನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಆರಂಭಿಸಲಿ. ವರದಿಯ ಮುದ್ರಣ ವೆಚ್ಚವನ್ನು ಕಾರ್ಯಪಡೆಯ ಅಧ್ಯಕ್ಷರಿಗೆ ಮರುಪಾವತಿ ಮಾಡಿಸಲಿ. ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಿ ತಾವು ಸರ್ಕಾರದ ಆಸ್ತಿಯ ರಕ್ಷಣೆಗಾಗಿ ಇರುವವರೆಂಬುದನ್ನು ಸಾಬೀತುಪಡಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.