ಸಾಲ್ವ ಜುಡುಮ್ ರದ್ದುಪಡಿಸಿ ಇದು ಕೈಲಾಗದ ಸರ್ಕಾರ ಮಾಡುವ ಹೇಡಿ ಕೆಲಸ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿರುವ ಚುನಾಯಿತ ಸರ್ಕಾರವೇ ಜನರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಿ ಕಾನೂನು ಉಲ್ಲಂಘನೆಯನ್ನು ಪ್ರಚೋದಿಸುವುದು ಸಂವಿಧಾನಕ್ಕೆ ಬದ್ದವಾದ ಸರ್ಕಾರ ಮಾಡುವಂತಹ ಕೆಲಸ ಅಲ್ಲ. ಛತ್ತೀಸ್‌ಗಡದ ಬಿಜೆಪಿ ಸರ್ಕಾರ ಕಳೆದ ಆರುವರ್ಷಗಳಿಂದ ಈ ಸಂವಿಧಾನ ವಿರೋಧಿ ಕೆಲಸವನ್ನು ಮಾಡುತ್ತಲೇ ಬಂದಿದೆ. ಬುಡಕಟ್ಟು ಜನಾಂಗದ ಬಡ ಮತ್ತು ಅಶಿಕ್ಷಿತ ಯುವಕರಿಗೆ ಶಿಕ್ಷಣ ನೀಡಿ ಅವರನ್ನು ಸುಧಾರಣೆಯ ಹಾದಿಯಲ್ಲಿ ಮುನ್ನಡೆಸಬೇಕಾದ ಸರ್ಕಾರ ಅವರ ಕೈಗೆ ಬಿಲ್ಲು-ಬಾಣ, ಕತ್ತಿ-ಹಾರೆ, ಬಂದೂಕುಗಳನ್ನು ನೀಡಿ ಮಾವೋವಾದಿಗಳ ವಿರುದ್ಧ ಎತ್ತಿಕಟ್ಟುತ್ತಿರುವುದು ಅಕ್ಷಮ್ಯ ಅಪರಾಧ. ಛತ್ತೀಸ್‌ಗಡ ಸರ್ಕಾರ ಇದಕ್ಕೆ ಇಟ್ಟಿರುವ ಹೆಸರು `ಸಾಲ್ವ ಜುಡುಮ್~. ವಿಶೇಷ ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ಇದಕ್ಕೆ ನೇಮಕಗೊಂಡವರೆಲ್ಲ ಎರಡರಿಂದ ಮೂರು ಸಾವಿರ ರೂಪಾಯಿ ಸಂಬಳಕ್ಕಾಗಿ ಮಾವೋವಾದಿಗಳನ್ನು ಎದುರು ಹಾಕಿಕೊಂಡ ಸರ್ಕಾರಿ ಜೀತದಾಳುಗಳು. ಇವರಲ್ಲಿ ನೂರಾರು ಮಂದಿ ಮಾವೋವಾದಿಗಳ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮೂರುವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟ್ ನೆಲದ ಕಾನೂನಿಗೆ ವಿರುದ್ಧವಾಗಿರುವ ಸಾಲ್ವ ಜುಡುಮ್ ಅನ್ನು ವಿಸರ್ಜಿಸುವಂತೆ ಆದೇಶ ನೀಡಿತ್ತು. ಆ ಆದೇಶವನ್ನು ಪಾಲನೆ ಮಾಡದ ಛತ್ತೀಸ್‌ಗಡ ಸರ್ಕಾರವನ್ನು ಮತ್ತೊಮ್ಮೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಾಲ್ವ ಜುಡುಮ್ ಎನ್ನುವುದು `ಅಕ್ರಮ~ ಮತ್ತು `ಸಂವಿಧಾನ ವಿರೋಧಿ~ ಎಂದು ಈ ಬಾರಿ ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸುವಂತೆ ಆದೇಶ ನೀಡಿರುವುದು ಸ್ವಾಗತಾರ್ಹ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು, ಜನತೆ ಶಾಂತಿ ಮತ್ತು ಗೌರವದಿಂದ ಬಾಳಲು ಬೇಕಾದ ವಾತಾವರಣವನ್ನು ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ತಮಗೆ ವಿಶ್ವಾಸ ಇಲ್ಲ ಎಂದು ಹೇಳುತ್ತಿರುವ ಮಾವೋವಾದಿಗಳ ನಿಲುವನ್ನು ಸಮರ್ಥಿಸುವಂತಿದೆ ಛತ್ತೀಸ್‌ಗಡದ ರಾಜಕೀಯ ಪಕ್ಷಗಳ ಸಂವಿಧಾನ ವಿರೋಧಿ ನಡವಳಿಕೆ. ಆಳುವ ಪಕ್ಷವಾದ ಬಿಜೆಪಿ ಮಾತ್ರವಲ್ಲ, ವಿರೋಧಪಕ್ಷವಾದ ಕಾಂಗ್ರೆಸ್ ಕೂಡಾ ಈ ಸರ್ಕಾರಿ ಪ್ರಾಯೋಜಿತ ಹಿಂಸಾಚಾರದಲ್ಲಿ ಶಾಮೀಲಾಗಿದೆ. ಸಾಲ್ವ ಜುಡುಮ್ ಎಂಬ ಸಂಘಟನೆಯ ರೂವಾರಿಯೇ ಅಲ್ಲಿನ ಕಾಂಗ್ರೆಸ್ ನಾಯಕ ಮಹೇಂದ್ರ ಕರ್ಮ. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಅವರ ಪ್ರತಿಕ್ರಿಯೆ ಕೂಡಾ ಕಾಂಗ್ರೆಸ್ ಪಕ್ಷದ ಎಡಬಿಡಂಗಿತನವನ್ನು ಪುಷ್ಟೀಕರಿಸುವಂತಿದೆ. ಛತ್ತೀಸ್‌ಗಡ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು `ಸಾಲ್ವ ಜುಡುಮ್~, `ಕೋಯಾ ಕಮಾಂಡೊ~ ಮೊದಲಾದ ಅಕ್ರಮ ಸಂಘಟನೆಗಳನ್ನು ರದ್ದುಪಡಿಸಬೇಕು ಮಾತ್ರವಲ್ಲ~ ಒತ್ತಡ ಆಮಿಷಗಳಿಗೆ ಬಲಿಬಿದ್ದು ಇದರಲ್ಲಿ ಸೇರಿಕೊಂಡ ಯುವಕರಿಗೆ ಸೂಕ್ತ ಭದ್ರತೆ ಒದಗಿಸಿ ಪುನರ್ವಸತಿ ಕಲ್ಪಿಸಬೇಕು. ನಕ್ಸಲೀಯ ಸಮಸ್ಯೆಗೆ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳೂ ಇರುವುದನ್ನು ಈಗಾಗಲೇ ನ್ಯಾಯಾಲಯ ಹಲವು ಬಾರಿ ಹೇಳಿದೆ. ಸರ್ಕಾರಗಳು ಕೂಡಾ ಒಪ್ಪಿಕೊಂಡಿವೆ. ಆದ್ದರಿಂದ ನಕ್ಸಲೀಯ ಹಿಂಸೆಯನ್ನು ಪ್ರತಿಹಿಂಸೆಯ ಮೂಲಕ ಎದುರಿಸುವ ಹಳೆಯ ಕಾರ‌್ಯತಂತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಕೂಡಾ ಇದು ಸಕಾಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.