ಜನರ ಭಾವನೆ ಗೌರವಿಸಿ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ತೆಲಂಗಾಣ ಭಾಗದ ಕಾಂಗ್ರೆಸ್ ಮತ್ತು ತೆಲುಗುದೇಶಂ ಪಕ್ಷಗಳ ಸಂಸದರು ರಾಜೀನಾಮೆ ನೀಡಿದ್ದಾರೆ. ಚುನಾಯಿತ ಪ್ರತಿನಿಧಿಗಳ ಸಾಮೂಹಿಕ ರಾಜೀನಾಮೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರದ ಭಾಗವೇ ಆದರೂ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿ ಕೇಂದ್ರ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಇಟ್ಟ ಹೊಸ ಹೆಜ್ಜೆ ಎಂದೇ ಈ ಬೆಳವಣಿಗೆಯನ್ನು ಅರ್ಥೈಸಬೇಕಾಗುತ್ತದೆ. ಪ್ರತ್ಯೇಕ ರಾಜ್ಯ ರಚನೆಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಹೊರತುಪಡಿಸಿ ಇತರೆ ಪಕ್ಷಗಳಲ್ಲಿ ಒಮ್ಮತ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತೀಚಿನವರೆಗೂ ಇತ್ತು. ಈಗ ಕಾಂಗ್ರೆಸ್ ಮತ್ತು ತೆಲುಗು ದೇಶಂ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪುವುದು ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಪ್ರತ್ಯೇಕ ರಾಜ್ಯದ ರಚನೆಯ ಬೇಡಿಕೆಯನ್ನು ಭಾವನಾತ್ಮಕ ನೆಲೆಯಲ್ಲಿ ನೋಡಬಾರದು ಎಂಬ ಕಾಂಗ್ರೆಸ್ ವರಿಷ್ಠರ ಮನವಿಯನ್ನು ತೆಲಂಗಾಣ ಭಾಗದ ಪಕ್ಷದ ಶಾಸಕರು ತಳ್ಳಿಹಾಕಿದ್ದಾರೆ. ಇದು ಹೊಸ ಬೆಳವಣಿಗೆ. ತೆಲಂಗಾಣ ರಾಜ್ಯ ರಚನೆ ಬೇಡಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ತಾಳಿರುವ ಧೋರಣೆಗೆ ಜನರು ಬೇಸತ್ತಿದ್ದಾರೆ. ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರ ವಿಶೇಷ ಅಭಿವೃದ್ಧಿ ಪ್ಯಾಕೇಜ್ ನೀಡಲು ಮುಂದಾದರೂ ಅದನ್ನು ಜನ ತಿರಸ್ಕರಿಸಿದ್ದಾರೆ. ಪ್ರತ್ಯೇಕ ರಾಜ್ಯ ರಚನೆಯ ಹೊರತು ಬೇರೆ ಯಾವುದೇ ಸಲಹೆಗೆ ಅವರ ಒಪ್ಪಿಗೆ ಇಲ್ಲ. ಬೇರೆ ಪರಿಹಾರ ಮಾರ್ಗವಿಲ್ಲ ಎಂಬುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಆಯೋಗ ತೆಲಂಗಾಣ ರಾಜ್ಯ ರಚನೆಗೆ ಆಂಧ್ರಪ್ರದೇಶ ವಿಧಾನಮಂಡಲದ ಒಮ್ಮತದ ತೀರ್ಮಾನ ಅಗತ್ಯ ಎಂದು ಹೇಳಿತ್ತು. ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸುವ ಪಕ್ಷದ ನಿರ್ಧಾರಕ್ಕೆ ತನ್ನ ಶಾಸಕರು ಬದ್ಧರಾಗಿರುತ್ತಾರೆ ಎಂದು ಕಾಂಗ್ರೆಸ್ ಭಾವಿಸಿತ್ತು. ತೆಲುಗುದೇಶಂ ಸಹ ಈ ಬೇಡಿಕೆಯನ್ನು ಒಪ್ಪಲಾರದು ಎಂಬ ವಿಶ್ವಾಸ ಕೇಂದ್ರ ಸರ್ಕಾರಕ್ಕೆ ಇತ್ತು. ಶ್ರೀಕೃಷ್ಣ ಆಯೋಗದ ಸಲಹೆಗಳ ನೆಪ ಹೇಳುತ್ತ ಈ ಬೇಡಿಕೆಯನ್ನು ಸಾಧ್ಯವಾದಷ್ಟು ಕಾಲ ಮುಂದೂಡಬಹುದು ಎಂಬ ಅದರ ಆಲೋಚನೆಗೆ ಈಗ ಹಿನ್ನಡೆಯಾಗಿದೆ. ಈ ಎರಡೂ ಪಕ್ಷಗಳ ಶಾಸಕರ ಸಾಮೂಹಿಕ ರಾಜೀನಾಮೆಯಿಂದ ಆಂಧ್ರದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ರಾಜೀನಾಮೆ ಕೊಟ್ಟು ಅಧಿಕಾರ ಕಳೆದುಕೊಂಡ ಧುರೀಣರು ಚಳವಳಿಗೆ ಇಳಿದರೆ ಕಾನೂನು ವ್ಯವಸ್ಥೆ ನಿಯಂತ್ರಣ ತಪ್ಪುತ್ತದೆ. ಆರು ತಿಂಗಳಲ್ಲಿ ಮರು ಚುನಾವಣೆ ನಡೆದರೆ ಏನಾದೀತು ಎಂಬುದನ್ನು ಈಗ ಹೇಳಲಾಗದು. ರಾಜಕೀಯ ಅಸ್ಥಿರತೆ ಆಂಧ್ರದ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಲಂಗಾಣ ಜನರ ಭಾವನೆಗಳನ್ನು ಗೌರವಿಸಬೇಕು. ರಾಜಕೀಯ ಅಸ್ಥಿರತೆಗೆ ಪರಿಹಾರ ಕಂಡುಕೊಳ್ಳದಿದ್ದರೆ ರಾಜ್ಯದ ಅಭಿವೃದ್ಧಿ ಹಳಿ ತಪ್ಪುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.