ಅರ್ಥ ವಿಚಾರ: ಸುಸ್ಥಿರ ಆರ್ಥಿಕ ವೃದ್ಧಿಗೆ ಕಾಯಕಲ್ಪ ಅಗತ್ಯ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಇತ್ತೀಚಿನ ಪತ್ರಿಕಾಗೋಷ್ಠಿಯ ಟೆಲಿವಿಷನ್ ನೇರ ಪ್ರಸಾರವನ್ನು ಅದೆಷ್ಟು ಜನ ವೀಕ್ಷಿಸಿರುವರೊ ನನಗೆ ಗೊತ್ತಿಲ್ಲ. ಆ ಸುದ್ದಿಗೋಷ್ಠಿಯನ್ನು ಆಸಕ್ತಿಯಿಂದ ವೀಕ್ಷಿಸಿದವರಲ್ಲಿ ನಾನೂ ಒಬ್ಬ. ಆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಇನ್ನೊಂದು ಬಗೆಯಲ್ಲಿ ಭಾರತಕ್ಕೂ ಪ್ರಸ್ತುತಗೊಳ್ಳುವ ಕಾರಣಕ್ಕೆ ನಾನು ಆ ಬಗ್ಗೆ ಇಲ್ಲಿ ಉಲ್ಲೇಖಿಸುತ್ತಿರುವೆ. ಸುದ್ದಿಗೋಷ್ಠಿಯ ಆರಂಭದಲ್ಲಿಯೇ ಒಬಾಮ, ತಮ್ಮ ದೇಶದ ಆರ್ಥಿಕತೆ, ಉದ್ಯೋಗ ಅವಕಾಶ, ಹಣಕಾಸು ಕೊರತೆ, ವ್ಯಾಪಾರ ಕೊರತೆ, ತೆರಿಗೆ, ತೆರಿಗೆ ರಿಯಾಯ್ತಿಗಳು ಸೇರಿ ಅರ್ಥ ವ್ಯವಸ್ಥೆಯ ಎಲ್ಲ ಮುಖಗಳ ಬಗ್ಗೆ ಸವಿವರವಾಗಿ ಉಲ್ಲೇಖಿಸಿದರು. ಆರ್ಥಿಕ ವಿಚಾರಗಳನ್ನು ಹೊರತುಪಡಿಸಿ ಉಳಿದ ಸಂಗತಿಗಳು ಅಲ್ಲಿ ಗೌಣವಾಗಿದ್ದವು. ಅರ್ಥ ವ್ಯವಸ್ಥೆಯ ಒಟ್ಟಾರೆ ಪರಿಸ್ಥಿತಿ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡ ನಂತರವಷ್ಟೇ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಅವಕಾಶ ಮಾಡಿಕೊಟ್ಟರು. ಅರ್ಥ ವ್ಯವಸ್ಥೆ ಬಗ್ಗೆ ಒಬಾಮ ಅಧಿಕಾರಯುತವಾಗಿ ಮಾತನಾಡಿದ್ದು ನಿಜಕ್ಕೂ ಅಚ್ಚರಿದಾಯಕ ಸಂಗತಿಯಾಗಿತ್ತು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ಬಹಳ ದೂರವಿಲ್ಲ ಎನ್ನುವುದನ್ನೂ ನಾನು ಬಲ್ಲೆ. ಅಲ್ಲಿನ ಅರ್ಥ ವ್ಯವಸ್ಥೆಯು ಈಗಲೂ ಕುಂಟುತ್ತ ಸಾಗುತ್ತ, ಆರ್ಥಿಕ ಹಿಂಜರಿಕೆಯ ಸುಳಿಯಲ್ಲಿ ಸಿಲುಕಿ ಅದಕ್ಕೊಂದು ಖಚಿತ ಸ್ವರೂಪ ಕೊಡುವ ಬೆದರಿಕೆ ಒಡ್ಡುತ್ತಿದೆ. ತೀವ್ರ ನಿರ್ಲಕ್ಷ್ಯಕ್ಕೆ ಒಳಗಾದ ಆರ್ಥಿಕತೆ ಮತ್ತು ಮೂಲಸೌಕರ್ಯ, ವಹಿವಾಟು ವೃದ್ಧಿಗೆ ಅಡ್ಡಿಯಾದ ಪ್ರತಿಕೂಲತೆಗಳು ಅದರಲ್ಲೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ), ಭಾರತ ಮತ್ತು ಚೀನಾದ ತೀವ್ರ ಸ್ಪರ್ಧೆ, ಸಂಶೋಧನೆಗಳು ಮತ್ತಿತರ ಸಂಗತಿಗಳನ್ನು ಒಬಾಮ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ವಹಿವಾಟು ಆರಂಭಕ್ಕೆ ಅಡ್ಡಿಯಾಗಿರುವ ಎಲ್ಲ ಬಗೆಯ ನಿಯಮಾವಳಿಗಳನ್ನು ತಮ್ಮ ಸರ್ಕಾರವು ಪರಾಂಬರಿಸಿ ಅವುಗಳನ್ನು ಸರಳಗೊಳಿಸಲಿದೆ ಎಂದು ಒಬಾಮ ವಾಗ್ದಾನ ನೀಡಿದ್ದರು. ತೆರಿಗೆಗಳನ್ನು ಸರಳೀಕರಣಗೊಳಿಸುವ ಮತ್ತು ಶಿಕ್ಷಣ, ಸಂಶೋಧನೆಗೆ ನಿರಂತರ ಬೆಂಬಲ ನೀಡುವ ಬಗ್ಗೆಯೂ ಅವರು ಭರವಸೆಯ ಮಾತುಗಳನ್ನಾಡಿದ್ದರು. ಅಮೆರಿಕ ಅಧ್ಯಕ್ಷರ ಈ ಚಿಂತನೆಗಳೆಲ್ಲ ಭಾರತಕ್ಕೂ ಸಾಕಷ್ಟು ಬಗೆಯಲ್ಲಿ ಅನ್ವಯಿಸುತ್ತವೆ ಎನ್ನುವ ಭಾವನೆ ಮೂಡಿಸುತ್ತವೆ, ಅಲ್ಲವೆ? ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ಆರ್ಥಿಕ ತಜ್ಞರಾಗಿದ್ದಾರೆ. ವಿಶ್ವಬ್ಯಾಂಕ್ ಮತ್ತಿತರ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವ ಅವರದ್ದು. ಆದರೆ, ಅವರೆಂದೂ ದೇಶದ ಅರ್ಥ ವ್ಯವಸ್ಥೆ ಬಗ್ಗೆ ಒಬಾಮ ಅವರಂತೆ ಭಾವಾವೇಶದಿಂದ ಮಾತನಾಡಿರುವುದನ್ನು ನಾವು ಯಾವತ್ತೂ ಕಂಡಿಲ್ಲ. ಇತ್ತೀಚೆಗೆ ಅವರು ಪ್ರಾದೇಶಿಕ ಭಾಷಾ ಪತ್ರಿಕೆಯ ಕೆಲ ಆಯ್ದ ಸಂಪಾದಕರನ್ನು ಸಂವಾದಕ್ಕಾಗಿ ಆಹ್ವಾನಿಸಿದ್ದರು. ಮುಚ್ಚಿದ ಕೊಠಡಿಯಲ್ಲಿ ನಡೆದ ಸಂವಾದದ ಆಯ್ದ ಭಾಗಗಳನ್ನಷ್ಟೆ ಸುದ್ದಿಯನ್ನಾಗಿ ಬಿತ್ತರಿಸಲಾಯಿತು. ಒಬಾಮಾ ಅವರ ಬಿಚ್ಚು ಮಾತಿಗೆ ಹೋಲಿಸಿದರೆ ಮನಮೋಹನ್ ಸಿಂಗ್ ಅವರ ಧೋರಣೆ ಒಂದು ಬಗೆಯಲ್ಲಿ ದುರಹಂಕಾರದಂತೆ ಕಂಡುಬರುತ್ತದೆ. ಎರಡು ದಶಕಗಳಲ್ಲಿ ದೇಶದ ಅರ್ಥ ವ್ಯವಸ್ಥೆ ಉತ್ತಮ ಪ್ರಗತಿ ದಾಖಲಿಸುತ್ತಿರುವುದರಲ್ಲಿ ಎರಡು ಮಾತಿಲ್ಲ. ಆರ್ಥಿಕ ಸುಧಾರಣಾ ಕ್ರಮಗಳು ಭಾರತೀಯರ ಉದ್ಯಮಶೀಲತೆಯ ಸಾಮರ್ಥ್ಯ ಹೊರತರುವಲ್ಲಿ ಸಫಲವಾಗಿವೆ. ಉದ್ಯಮ ಜಗತ್ತಿನಲ್ಲಿ ಹೊಸ ಹೊಸ ಪ್ರವರ್ತಕರು ಸೇವಾ ವಲಯದಲ್ಲಿನ ಸಾಂಪ್ರದಾಯಿಕ ನಂಬಿಕೆ ಹುಸಿಗೊಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಆರ್ಥಿಕ ಸುಧಾರಣಾ ಕ್ರಮಗಳ ಫಲಗಳು ಎಲ್ಲರಿಗೂ ದೊರೆಯುತ್ತಿರುವುದನ್ನು ಪ್ರತಿಯೊಬ್ಬರೂ ಕಾಣಬಹುದು. ಈ ಪ್ರಕ್ರಿಯೆಯಲ್ಲಿ ಸರ್ಕಾರವೇ ಅತಿ ಹೆಚ್ಚು ಪ್ರಯೋಜನ ಪಡೆದಿದೆ. ಸರ್ಕಾರದ ಖಜಾನೆಗೆ ಹರಿದು ಬರುವ ವರಮಾನ ಹಲವಾರು ಪಟ್ಟು ಹೆಚ್ಚಿದೆ. ಸಾಮಾಜಿಕ ವಲಯದಲ್ಲಿ ಸರ್ಕಾರ ಮಾಡುತ್ತಿರುವ ಗಮನಾರ್ಹ ಪ್ರಮಾಣದ ವೆಚ್ಚವು ಗ್ರಾಮೀಣ ಅರ್ಥ ವ್ಯವಸ್ಥೆಯ ಬೆಳವಣಿಗೆಗೂ ನೆರವಾಗುತ್ತಿದೆ. ಇಂತಹ ಚಟುವಟಿಕೆಗಳಿಂದ ದೇಶದ ಅರ್ಥ ವ್ಯವಸ್ಥೆಯು ಸುಗಮವಾಗಿ ಸಾಗುತ್ತಿದೆ. ಭಾರತದ ಆರ್ಥಿಕ ಯಶೋಗಾಥೆ ಕಂಡು ಹಲವಾರು ದೇಶಗಳು ಕರುಬುತ್ತಿವೆ. ಅಷ್ಟೇ ಅಲ್ಲ, ನಮ್ಮ ಸಾಧನೆಯನ್ನು ಅನುಕರಿಸಲೂ ಹೊರಟಿವೆ. ಈ ಆರ್ಥಿಕ ಬದಲಾವಣೆಯು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಮನ್ನಣೆಯನ್ನೂ ತಂದುಕೊಟ್ಟಿದೆ. ಸಿರಿವಂತ ಮತ್ತು ಬಲಾಢ್ಯ ದೇಶಗಳ ಸಾಲಿನಲ್ಲಿ ಭಾರತಕ್ಕೂ ಒಂದು ಸ್ಥಾನ ಸಿಗುವಂತೆ ಮಾಡಿದೆ. ಉದಾಹರಣೆಗೆ `ಜಿ-20~ ದೇಶಗಳ ಗುಂಪಿನಲ್ಲಿ ಭಾರತವನ್ನು ಈಗ ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ವರ್ಷಗಳ ಹಿಂದೆ ಈ ಅನೌಪಚಾರಿಕ ಗುಂಪಿನ ಸದಸ್ಯರ ಸಂಖ್ಯೆ ಕೇವಲ 6 (ಜಿ-6) ಇತ್ತು. ವರ್ಷಗಳು ಗತಿಸಿದಂತೆ ಈ ಗುಂಪಿನ ಪ್ರಭಾವ ಮಸುಕಾಗತೊಡಗಿತ್ತು. ಹೀಗಾಗಿ ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದಂತಹ ದೇಶಗಳನ್ನು ಈ ಗುಂಪಿಗೆ ಸೇರ್ಪಡೆ ಮಾಡಲಾಯಿತು. ವಿಶ್ವ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರುವ ಯಾವುದೇ ಪ್ರಮುಖ ನಿರ್ಧಾರವನ್ನು `ಜಿ-20~ ಗುಂಪಿನಲ್ಲಿ ನಿರ್ಧರಿಸಿಯೇ ಕೈಗೊಳ್ಳಲಾಗುತ್ತಿದೆ. ಎರಡು ವರ್ಷಗಳ ಹಿಂದಿನ ಜಾಗತಿಕ ಹಣಕಾಸು ಬಿಕ್ಕಟ್ಟಿನ ಪರಿಣಾಮದ ತೀವ್ರತೆ ತಗ್ಗಿಸಲು ಈ ಗುಂಪಿನ ದೇಶಗಳೆಲ್ಲ ಒಗ್ಗಟ್ಟಿನಿಂದ ಶ್ರಮಿಸಿದ್ದವು. `ಬಂದೂಕಿನ ನಳಿಕೆಯಿಂದ ಮತ್ತು ಚೆಕ್ ಬುಕ್‌ನಿಂದ ಅಧಿಕಾರ ಹರಿದು ಬರುತ್ತದೆ~ ಎನ್ನುವ ಹಳೆಯ ನಾಣ್ಣುಡಿಯನ್ನು ಇಲ್ಲಿ ಸ್ಮರಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಸ್ವಾತಂತ್ರ್ಯಾನಂತರದ ದಿನಗಳಿಂದ ಭಾರತ ಆರ್ಥಿಕವಾಗಿ ತುಂಬ ನಿಧಾನವಾಗಿ ಪ್ರಗತಿ ಸಾಧಿಸುತ್ತ ಬಂದಿದೆ. ನೆಹರೂ ಅವರ ಸಮಾಜವಾದವು ಅಧಿಕಾರಶಾಹಿಯ ಮನದಲ್ಲಿ ಗಟ್ಟಿಯಾಗಿ ಬೇರೂರಿತ್ತು. ಉದ್ದಿಮೆ - ವಹಿವಾಟು ಮತ್ತು ಲಾಭ-ದುರಾಸೆಗೆ ಸಮಾಜವಾದದಲ್ಲಿ ಸ್ಥಾನವಿಲ್ಲ. ಎಲ್ಲ ಸಮಸ್ಯೆಗಳಿಗೆ ಸರ್ಕಾರದ ಬಳಿ ಪರಿಹಾರ ಇದೆ ಎನ್ನುವ ಭಾವನೆಯೇ ಉದ್ದಕ್ಕೂ ಮನೆ ಮಾಡಿತ್ತು. ಬ್ರೆಡ್ ಮಾರಾಟದಿಂದ ವಿಮಾನಯಾನ ಸಂಸ್ಥೆ ನಿರ್ವಹಿಸುವವರೆಗೆ ಎಲ್ಲ ಬಗೆಯ ಉದ್ದಿಮೆಗಳನ್ನು ನಿರ್ವಹಿಸುವ ಜಾಣತನ ತನ್ನ ಬಳಿ ಇದೆ ಎಂದೇ ಸರ್ಕಾರ ಭಾವಿಸಿತ್ತು. ಆದರೆ, ಕಾಲ ಗತಿಸಿದಂತೆ ಸರ್ಕಾರದ ಇಂತಹ ಭ್ರಮೆಗಳು ಕರಗಿ ಹೋದವು. ಒಂದು ಹಂತದಲ್ಲಂತೂ ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಮ್ಮ ಚಿನ್ನದ ಮೀಸಲು ಸಂಗ್ರಹವನ್ನೇ ವಿದೇಶಗಳಲ್ಲಿ ಒತ್ತೆ ಇಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಕುಟುಂಬದ ಚಿನ್ನವನ್ನು ಅಡಮಾನ ಇಡುವುದು ಅಥವಾ ಮಾರಾಟ ಮಾಡುವುದು ಎಂದರೆ, ಹಣಕಾಸಿನ ಬಿಕ್ಕಟ್ಟಿನಿಂದ ಪಾರಾಗುವ ಅಂತಿಮ ಯತ್ನ ಎಂದೇ ಅರ್ಥ. ಹಣ ಹರಿದು ಬರುವ ಎಲ್ಲ ಮಾರ್ಗಗಳು ಮುಚ್ಚಿವೆ ಎಂದೂ ಇದರರ್ಥ. ಹಲವಾರು ಪಾಠ ಕಲಿತ ನಂತರ ಸರ್ಕಾರ ಅಂತಿಮವಾಗಿ ಬದಲಾವಣೆಗೆ ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಮುಂದಾಯಿತು. ಸದ್ಯಕ್ಕೆ, ಮೊದಲ ಸುತ್ತಿನ ಆರ್ಥಿಕ ಸುಧಾರಣಾ ಕ್ರಮಗಳು ಮುಗಿದಿವೆ. ಈ ಕ್ರಮಗಳಷ್ಟೇ ದೇಶದ ಅರ್ಥವ್ಯವಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವೇ? ಎನ್ನುವ ಪ್ರಶ್ನೆಗೆ ಉತ್ತರ ಸಿಗದೇ ಹಾಗೆಯೇ ಉಳಿದುಕೊಂಡಿದೆ. ಸದ್ಯದ ಆರ್ಥಿಕ ವೃದ್ಧಿ ದರವನ್ನೇ ನಾವು ಕಾಯ್ದುಕೊಂಡು ಹೋದರೆ, 2030ರಷ್ಟೊತ್ತಿಗೆ ದೇಶದ ತಲಾ ವರಮಾನವು 10,000 ಡಾಲರ್‌ಗಳಿಗೆ (ರೂ 4,50,000) ತಲುಪಲಿದೆ ಎಂದು ಪ್ರಧಾನಿಗಳ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರು ಮೊನ್ನೆಯಷ್ಟೇ ಅಭಿಪ್ರಾಯಪಟ್ಟಿದ್ದಾರೆ. ಇವರ ಅಂದಾಜಿನ ಪ್ರಕಾರ ನಮ್ಮ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) 15 ಲಕ್ಷ ಕೋಟಿ ಡಾಲರ್‌ಗಳಷ್ಟು ( ್ಙ 675 ಲಕ್ಷ ಕೋಟಿ) ಆಗಲಿದೆ. ವಾಹ್! ಎಂತಹ ಅದ್ಭುತ ಚಿತ್ರಣ. ಇದು ಸದ್ಯದ `ಜಿಡಿಪಿ~ ದರದ ಹತ್ತು ಪಟ್ಟುಗಳಷ್ಟು ಹೆಚ್ಚಿಗೆ ಇದೆ. ಅದರಿಂದ ನಮ್ಮ ಬಡತನ ನಿವಾರಣೆ ಮತ್ತು ನಮ್ಮ ಜನರಿಗೆ ಸಿಗುವ ಅವಕಾಶಗಳ ಬಗ್ಗೆ ಬರೀ ಕಲ್ಪನೆ ಮಾಡಿಕೊಂಡರೆ ಸಾಕು, ಖಂಡಿತವಾಗಿಯೂ ರೋಮಾಂಚನ ಆಗುತ್ತದೆ. ಜತೆಗೆ ನಮಗೆ (ಭಾರತೀಯರಿಗೆ) ಸಿಗುವ ಇನ್ನೂ ಹೆಚ್ಚಿನ ಗೌರವಾದರ ಮತ್ತು ಮನ್ನಣೆ ಬಗ್ಗೆಯೂ ನಾವು ಸಾಕಷ್ಟು ಸಂಭ್ರಮಿಸಬಹುದು. ನಮ್ಮ ಸದ್ಯದ ಮತ್ತು ಭವಿಷ್ಯದ ಆರ್ಥಿಕ ಸಾಧನೆ ಬಗ್ಗೆ ಸಂತಸಪಡುತ್ತಿರುವಾಗಲೇ, ಆರ್ಥಿಕ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಉತ್ತೇಜನಕಾರಿಯಾಗಿಲ್ಲ. ತಯಾರಿಕೆ ಚಟುವಟಿಕೆ ಕುಂಠಿತಗೊಂಡಿವೆ. ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇದೆ. ಷೇರುಪೇಟೆ ದುರ್ಬಲವಾಗಿದೆ. ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಕಡಿಮೆಯಾಗಿದೆ. ಇಂಧನ ಬೆಲೆ ಹೆಚ್ಚಳವು ಹಣದುಬ್ಬರವನ್ನು ಇನ್ನಷ್ಟು ವಿಷಮಗೊಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ನೀತಿಗಳು ತಯಾರಿಕಾ ರಂಗದ ಮೇಲೆ ಒತ್ತಡ ಹೇರುತ್ತಿವೆ. ಭ್ರಷ್ಟಾಚಾರ ಹಗರಣಗಳು `ಎಫ್‌ಡಿಐ~ ಹರಿವಿಗೆ ಅಡ್ಡಿಯಾಗಿವೆ. ಇದು ಷೇರುಪೇಟೆ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ. ಯೂರೋಪ್ ಮತ್ತು ಉತ್ತರ ಅಮೆರಿಕದಲ್ಲಿನ ಆರ್ಥಿಕ ಚೇತರಿಕೆಯ ಸುದ್ದಿಗಳು ಅಲ್ಪಾಯುಷಿಗಳಾಗಿವೆ. `ಯೂರೊ~ ಬಿಕ್ಕಟ್ಟು ದೂರವಾಗಿರುವಂತೆ ಭಾಸವಾದರೂ ಹಾಗೆ ಭಾವಿಸುವುದು ಆತುರ ನಿರ್ಧಾರವಾಗಿರುವ ಸಾಧ್ಯತೆಯೂ ಇದೆ. ಯೂರೋಪ್‌ನ ಅನೇಕ ದೇಶಗಳು ಈ ಬಿಕ್ಕಟ್ಟಿನ ಜತೆಗೇ ಏಗುತ್ತಿವೆ. ಇದು ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಮತ್ತು ಗಂಡಾಂತರ ಪರಿಸ್ಥಿತಿಯ ಸಾಧ್ಯತೆ ಹೆಚ್ಚಿಸಿದೆ. ಉತ್ತರ ಅಮೆರಿಕ ಮತ್ತು ಐರೋಪ್ಯ ಒಕ್ಕೂಟವು ಜಾಗತಿಕ `ಜಿಡಿಪಿ~ಗೆ ಶೇ 50ರಷ್ಟು ಕೊಡುಗೆ ನೀಡುತ್ತಿದ್ದು, ಸದ್ಯದ ಜಾಗತೀಕರಣದ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಇಂತಹ ಜಾಗತಿಕ ವಿದ್ಯಮಾನಗಳಿಂದ ನಮ್ಮ ಮುಖಂಡರೇಕೆ ಪಾಠ ಕಲಿಯುವುದಿಲ್ಲ? ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಬದಲಾವಣೆ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ದೃಢ ನಿರ್ಧಾರ ಮಾಡಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಮತ್ತೊಂದು ಗಂಭೀರ ಸ್ವರೂಪದ ಬಿಕ್ಕಟ್ಟನ್ನು ಅವರು ಎದುರು ನೋಡುತ್ತಿರುವರೇ? ಅವರು ಹಾಗೆ ಮಾಡದಿರಲಿ, ಅದಕ್ಕಾಗಿ ಕಾಯದಿರಲಿ ಎಂದೇ ನಾವು ಆಶಿಸೋಣ. (ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: @..) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.