ಮದ್ದಿನಲ್ಲಿ ಹೋದ ಮಾನ ಪಿ.ಟಿ. ಉಷಾ ನಂತರ ಭಾರತದ ಅಥ್ಲೆಟಿಕ್ಸ್‌ನಲ್ಲಿ ಭರವಸೆಯ ಬೆಳಕು ಮೂಡಿಸಿದ್ದ, ಚಿನ್ನದ ಓಟಗಾರ್ತಿ ಅಶ್ವಿನಿ ಅಕ್ಕುಂಜಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬೀಳುವುದರೊಂದಿಗೆ `ಅವಮಾನದ ಅರಗಿನ ಅರಮನೆ~ಯಲ್ಲಿ ಬಂದಿಯಾಗಿದ್ದಾರೆ. ಜಪಾನಿನ ಕೋಬೆಯಲ್ಲಿ ಈ ವಾರ ಆರಂಭವಾಗುವ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಸೋಮವಾರ ವಿಮಾನ ಹತ್ತಬೇಕಿದ್ದ ಅಶ್ವಿನಿ ಅದರಿಂದ ವಂಚಿತರಾದರಷ್ಟೇ ಅಲ್ಲ, ಕಳೆದ ಒಂದು ವರ್ಷದಲ್ಲಿ ಆಕೆ ಗಳಿಸಿದ್ದ ಕೀರ್ತಿಗೆ ಕೆಸರು ಚೆಲ್ಲಿದಂತಾಗಿದೆ. ರಿಲೆಯಲ್ಲಿ ಆಕೆಯ ಜೊತೆಗಾರ್ತಿ ಪ್ರಿಯಾಂಕಾ ಪನ್ವಾರ್ ಕೂಡ ಉದ್ದೀಪನ ಮದ್ದು ಸೇವಿಸಿದ್ದು ಪತ್ತೆಯಾಗಿದೆ. ಇದಕ್ಕೆ ಮೊದಲು ನಡೆದ ಪರೀಕ್ಷೆಯಲ್ಲಿ ಇನ್ನಿಬ್ಬರು ಓಟಗಾರ್ತಿಯರಾಗಿದ್ದ ಮನದೀಪ್ ಕೌರ್ ಮತ್ತು ಸಿನಿ ಜೋಸ್ ಕೂಡ ಮದ್ದು ಸೇವಿಸಿದ್ದು ಕಂಡುಬಂದಿದೆ. ಇವರಲ್ಲದೆ, ಇನ್ನೂ ನಾಲ್ವರು ಕಳಂಕಿತರಾಗಿದ್ದಾರೆ. ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸುವುದು ಕ್ರೀಡಾರಂಗಕ್ಕೆ ಹಿಡಿದಿರುವ ದೊಡ್ಡ ರೋಗ. ದಿಢೀರ್ ಯಶಸ್ಸು, ಅದರಿಂದ ದೊರೆಯುವ ಹಣ ಮತ್ತು ಖ್ಯಾತಿಯ ಮೋಹಕ್ಕೆ ಬೀಳುವ ಅಥ್ಲೀಟುಗಳು ದುರ್ಮಾರ್ಗ ಹಿಡಿಯ್ತುರೆ. ತರಬೇತುದಾರರು ಇದನ್ನು ಪ್ರಚೋದಿಸುತ್ತಾರೆ. ಎಲ್ಲ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮೋಸದಾಟವನ್ನು ತಡೆಯಲು, ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಅರಿವು ಮೂಡಿಸುವದರ ಜೊತೆಗೆ ಆಜೀವ ಪರ್ಯಂತ ನಿಷೇಧಿಸುವ ಕ್ರಮ ತೆಗೆದುಕೊಂಡರೂ ಅಥ್ಲೀಟುಗಳು ರಂಗೋಲಿಯ ಕೆಳಗೆ ನುಸುಳುವ ಯತ್ನ ಮಾಡುತ್ತಾರೆ. 1988ರ ಸೋಲ್ ಒಲಿಂಪಿಕ್ಸ್‌ನ ನೂರು ಮೀಟರ್ಸ್ ಓಟದಲ್ಲಿ ಕಾರ್ಲ್ ಲೂಯಿಸ್ ಅವರನ್ನು ಸೋಲಿಸಿ ಪ್ರಚಂಡ ಜಯಗಳಿಸಿದ್ದ ಬೆನ್ ಜಾನ್ಸನ್ ನಂತರ ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದಾಗ ಕ್ರೀಡಾ ಜಗತ್ತೇ ತಲ್ಲಣಗೊಂಡಿತ್ತು. ಉದ್ದೀಪನ ಮದ್ದು ಸೇವನೆಯ ಪ್ರತಿಕೂಲ ಪರಿಣಾಮದ ಅರಿವಿದ್ದರೂ ಕ್ರೀಡಾಪಟುಗಳು ಅದನ್ನು ಲೆಕ್ಕಿಸದೇ ಅದರ ಚಟಕ್ಕೆ ಬೀಳುತ್ತಿದ್ದಾರೆ. ಇದನ್ನು ತಡೆಯಲು ಕಠಿಣ ಕ್ರಮಗಳು ಇದ್ದರೂ ತರಬೇತುದಾರರು ತಮ್ಮ ಕ್ರೀಡಾಪಟುಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ಮುಖ್ಯವಾಗಿ ಉಕ್ರೇನ್ ಮೂಲದ ತರಬೇತುದಾರರು ಇದಕ್ಕೆ ಕಾರಣರು ಎಂದು ಉಷಾ ಸೇರಿದಂತೆ ಹಲವು ಹಿರಿಯ ಅಥ್ಲೀಟುಗಳು ದೂರಿದ್ದು ಗಮನಾರ್ಹ. (ಕೇಂದ್ರ ಕ್ರೀಡಾ ಇಲಾಖೆ ಉಕ್ರೇನ್ ತರಬೇತುದಾರ ಯೂರಿ ಅವರನ್ನು ವಜಾ ಮಾಡಿದೆ.) ಹೆಚ್ಚು ಸಂಭಾವನೆ ಪಡೆಯುವ ವಿದೇಶಿ ಕೋಚ್‌ಗಳು ಅಲ್ಪಾವಧಿಯಲ್ಲಿ ಪ್ರಗತಿ ತೋರಿಸಲು ವಾಮಮಾರ್ಗ ಹಿಡಿಯುತ್ತಾರೆಂಬುದರಲ್ಲಿ ಅನುಮಾನವಿಲ್ಲ. ಅಥ್ಲೀಟುಗಳಲ್ಲಿ ಹೆಚ್ಚಿನವರು ಅವಿದ್ಯಾವಂತರಾದರೂ ಅವರಿಗೆ ಅಂತರರಾಷ್ಟ್ರೀಯ ಕ್ರೀಡಾರಂಗದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವಿದ್ದೇ ಇರುತ್ತದೆ. ಅವರು ಎಚ್ಚರದಿಂದಿರಲೇಬೇಕು. ಅಶ್ವಿನಿ ಮತ್ತು ಇತರರು ಈಗ ಎರಡನೇ ಪರೀಕ್ಷೆಗೆ ಒಳಪಡಲಿದ್ದಾರೆ. ಅದರಲ್ಲೂ ಅವರು ಉದ್ದೀಪನ ಮದ್ದು ಸೇವಿಸಿದ್ದು ಕಂಡುಬಂದರೆ ಎರಡು ವರ್ಷ ಪ್ರತಿಬಂಧಕ್ಕೊಳಗಾಗುತ್ತಾರೆ. ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡೆಗಳಲ್ಲಿ ಚಿನ್ನ ಗೆದ್ದು, ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡೆಗಳಲ್ಲಿ ಪದಕದ ಭರವಸೆ ಮೂಡಿಸಿದ್ದ ಕರ್ನಾಟಕದ ಚಿನ್ನದ ಓಟಗಾರ್ತಿ ಒಲಿಂಪಿಕ್ಸ್‌ಗೆ ಹೋಗುವ ಅವಕಾಶ ತಪ್ಪಿಸಿಕೊಳ್ಳುತ್ತಾರೆ. ಉದ್ದೀಪನ ಮದ್ದಿನಲ್ಲಿ ಹೋದ ಮಾನ ಏನಾದರೂ ವಾಪಸ್ಸು ಬರುವುದು ಕಷ್ಟ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.