ಅಕ್ಷಮ್ಯ ಷಾಮೀಲು ಕಂದಾಯ ಮತ್ತು ಅರಣ್ಯಕ್ಕೆ ಸೇರಿದ 12 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿರುವುದು ದಾಖಲೆ ಸಹಿತ ಪತ್ತೆಯಾಗಿದ್ದರೂ ಅದನ್ನು ವಶಪಡಿಸಿಕೊಳ್ಳಲು ಸರ್ಕಾರ ನಿರಾಸಕ್ತಿ ಪ್ರದರ್ಶಿಸಿರುವುದು ಖಂಡನೀಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಜರುಗಿಸದಂತೆ ಮುಖ್ಯಮಂತ್ರಿ ಕಚೇರಿಯಿಂದ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದು ರಾಜ್ಯದ ಈ ಹಿಂದಿನ ಯಾವುದೇ ಪಕ್ಷದ ಸರ್ಕಾರದಲ್ಲಿಯೂ ಕಂಡು ಕೇಳರಿಯದ ಘಟನೆ. ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಜನರಿಂದ ಅಧಿಕಾರ ಪಡೆದ ಮುಖ್ಯಮಂತ್ರಿ ಹೀಗೆ ಭೂಗಳ್ಳರಿಗೆ ಬೆಂಬಲ ನೀಡುವಂತೆ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡ ಕ್ರಮ ಸಂವಿಧಾನ ವ್ಯವಸ್ಥೆಗೆ ಅಪಚಾರ. ಒತ್ತುವರಿಯಾದ ಅರಣ್ಯ ಭೂಮಿಯನ್ನು ತೆರವುಗೊಳಿಸುವಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಹೊರಡಿಸಿದ ಆದೇಶಗಳನ್ನು ಉಲ್ಲಂಘಿಸುವಂಥ, ಮುಖ್ಯಮಂತ್ರಿ ಕಚೇರಿಯ ಈ ಕ್ರಮ ನ್ಯಾಯಾಂಗ ನಿಂದನೆ ಕೂಡ. ಇದು ಅಕ್ಷಮ್ಯ ನಡವಳಿಕೆ. ಭೂಕಬಳಿಕೆಯಲ್ಲಿ ತೊಡಗಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಭೂ ಮಾಫಿಯಾದಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಕ್ತಿ ತುಂಬಬೇಕಾದ ಮುಖ್ಯಮಂತ್ರಿ ಕಚೇರಿ, ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡ ದುಷ್ಕೃತ್ಯವನ್ನು ರಕ್ಷಿಸಲು ಹೊರಟಿರುವುದು ಈ ಅಕ್ರಮದಲ್ಲಿ ಸ್ವತಃ ಭಾಗಿಯಾದಂತೆ. ತಾವು ನೀಡಿದ ಪರಮಾಧಿಕಾರ, ಹೀಗೆ ಕಳ್ಳರ ಪರವಾಗಿ ಬಳಕೆಯಾಗುತ್ತಿರುವುದನ್ನು ರಾಜ್ಯದ ಜನತೆ ಅಸಹಾಯಕತೆಯಿಂದ ನೋಡಬೇಕಾಗಿದೆ. ಸರ್ಕಾರವೇ ನೇಮಕ ಮಾಡಿದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ‌್ಯಪಡೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಅರಣ್ಯ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆ ಮಾಡಿದೆ. ಜೊತೆಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಸುತ್ತಮುತ್ತಲ ಭೂಮಿಗೆ ಸಂಬಂಧಿಸಿ ನಡೆದ ಅಕ್ರಮ ವ್ಯವಹಾರಗಳನ್ನು ಸಿಐಡಿ ತನಿಖೆ ನಡೆಸುವಂತೆ ಸಲಹೆ ಮಾಡಿದೆ. ಆಡಳಿತದ ಉನ್ನತ ಕೇಂದ್ರದಿಂದಲೇ ನ್ಯಾಯಬದ್ದ ಆಡಳಿತ ಕ್ರಮಗಳಿಗೆ ತಡೆ ಹಾಕುವ ಆದೇಶ ಜಾರಿಯಾಗುತ್ತಿರುವ ಪರಿಸ್ಥಿತಿ ರಾಜ್ಯದಲ್ಲಿರುವಾಗ ಸಿಐಡಿ ತನಿಖೆಯಿಂದ ನಿಷ್ಪಕ್ಷಪಾತ ವಿಚಾರಣೆ ನಡೆದು ಸರ್ಕಾರದ ಆಸ್ತಿ ಸ್ವಾಧೀನಕ್ಕೆ ಬರುತ್ತದೆ ಎಂದು ನಿರೀಕ್ಷಿಸಲಾಗದು. ರಾಜ್ಯದ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಗಳಲ್ಲಿ ಅಕ್ರಮ ನಡೆದಿದ್ದರ ಬಗ್ಗೆ ತನಿಖೆ ನಡೆಸಿ ಸಲ್ಲಿಸಿದ ವರದಿಯ ಬಗ್ಗೆ ರಾಜ್ಯದ ಹೈಕೋರ್ಟ್ ವ್ಯಕ್ತ ಪಡಿಸಿದ ಆಕ್ಷೇಪದಿಂದ ಸಿಐಡಿ ತನಿಖೆಯ ವಿಶ್ವಾಸಾರ್ಹತೆಯನ್ನು ಶಂಕಿಸುವಂತಾಗಿದೆ. ಬೆಂಗಳೂರು ನಗರದ ಸುತ್ತಮುತ್ತ ನಡೆದ ಸರ್ಕಾರಿ ಭೂಮಿ ಕಬಳಿಕೆ ಕುರಿತಾಗಿ ಎ.ಟಿ.ರಾಮಸ್ವಾಮಿ ಸಮಿತಿ ಸಲ್ಲಿಸಿದ ವರದಿ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿಲ್ಲ. ಆದ್ದರಿಂದ ರಾಜ್ಯದ ನಿಯಂತ್ರಣಕ್ಕೆ ಒಳಪಡದ ಯಾವುದೇ ಹೊರಗಿನ ಸಂಸ್ಥೆಯಿಂದ ಈ ಹಗರಣಗಳು ತನಿಖೆಗೆ ಒಳಪಟ್ಟರೆ ಸತ್ಯಾಂಶ ಹೊರಬರುವ ಸಾಧ್ಯತೆ ಇದೆ. 12 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದಕ್ಕೆ ರಾಜ್ಯದ ವಿರೋಧ ಪಕ್ಷಗಳೂ ನಿಗೂಢ ಮೌನ ವಹಿಸಿರುವುದು ಸೋಜಿಗದ ಸಂಗತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.