ಮಹಿಳಾ ಸಬಲೀಕರಣದ ರಾಜಕಾರಣ ಗುಲಬರ್ಗಾ ಜಿಲ್ಲಾ ಪಂಚಾಯತ್‌ನಲ್ಲಿ ಆಯ್ಕೆಯಾದ ಮಹಿಳಾ ಸದಸ್ಯೆಯರು ಸಾಮಾನ್ಯ ಸಭೆಯಲ್ಲಿ ತಮ್ಮ ಗಂಡಂದಿರಿಗೂ ಭಾಗವಹಿಸಲು ಅವಕಾಶ ಕೊಡಬೇಕೆಂಬ ಅನಪೇಕ್ಷಿತ ಘಟನೆ ಕುರಿತು ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಸಮಯೋಚಿತ. ಆದರೆ ಇಡೀ ಘಟನೆಯನ್ನು ಪ್ರಸಕ್ತ ರಾಜಕೀಯ ವಿದ್ಯಮಾನಗಳಡಿಯಲ್ಲಿ ಇನ್ನಷ್ಟು ಆಳವಾಗಿ ಅಧ್ಯಯನ ಮಾ ಬೇಕಾದ ಜರೂರಿ ಇದೆ. ಈ ಘಟನೆ ಜರುಗುತ್ತಿರುವಂತೆ ಗುಲಬರ್ಗಾ ಜಿಲ್ಲೆಯ ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಸದಸ್ಯೆಯರು ಮುನ್ನುಗ್ಗಿ ಘಟನೆಯ ವಿವರ ಪಡೆಯುವುದರೊಂದಿಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಆಯ್ಕೆಯಾದ ಮಹಿಳಾ ಸದಸ್ಯೆಯರ ಗಂಡಂದಿರ ಒತ್ತಡಕ್ಕೆ ಮಣಿಯಬಾರದೆಂದು ಆಗ್ರಹ ಮಾಡಿದ್ದಾರೆ. ಮತ್ತೂ ಮುಂದುವರೆದು ಇಡೀ ಘಟನೆಯ ಹಿಂದಿರುವ ಪುರುಷ ರಾಜಕಾರಣ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಬಯಲಿಗೆಳೆಯುವ ಪ್ರಯತ್ನ ಮಾಡಿರುವರು. ಸ್ಥಳೀಯ ಹೋರಾಟಗಾರ್ತಿಯರು ಮತ್ತು ಪ್ರಜ್ಞಾವಂತ ಮಹಿಳೆಯರ ನಿಯೋಗವೊಂದು ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಕಂಡು ಪರಿಸ್ಥಿತಿಯನ್ನು ಕುರಿತು ಕೂಲಂಕಷವಾಗಿ ಚರ್ಚಿಸಿ ಚುನಾಯಿತ ಸದಸ್ಯೆಯರಿಗೆ ನೀಡಬೇಕಾದ ತರಬೇತಿಯ ವಿಧಾನ ಮತ್ತು ಪುರುಷಶಾಹಿ ದಬ್ಬಾಳಿಕೆಯನ್ನು ನಿಯಂತ್ರಿಸಬೇಕಾದ ಅನಿವಾರ್ಯತೆಯನ್ನು ಮನಗಾಣಿಸುವ ಪ್ರಯತ್ನ ಮಾಡಿದೆ. ಘಟನೆ ನಡೆದ ತಕ್ಷಣವೇ ಮಾಡಿರುವ ಸಕಾಲಿಕ ಚಟುವಟಿಕೆಗಳು ಒಂದೆಡೆಯಾದರೆ ಪ್ರಸಕ್ತ ರಾಜಕೀಯ ವಿದ್ಯಮಾನ ಮತ್ತು ಪುರುಷ ಕೇಂದ್ರಿತ ಪಾಲಿಟಿಕ್ಸ್ ಮಾಫಿಯಾವನ್ನು ಅರ್ಥ ಮಾಡಿಕೊಂಡು ಮುಂದಡಿಯಿಡಬೇಕಾದ ಅವಶ್ಯಕತೆ ಇನ್ನೊಂದೆಡೆ ಇದೆ. ಮಹಿಳಾ ಮಸೂದೆಯು ಇನ್ನೇನು ಜಾರಿಯಾಗಲಿದೆ ಎಂಬ ಘಟ್ಟದಲ್ಲಿ ಚುನಾಯಿತ ಮಹಿಳೆಯರ ಈ ವಿಪರೀತ ವರ್ತನೆಗಳು ಏನನ್ನು ಬಿಂಬಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ಭೇದಿಸಬೇಕಿದೆ. ರಾಜಕಾರಣದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಕುರಿತು ಗುಲಬರ್ಗಾದಂಥ ಪಕ್ಕಾ ಫ್ಯೂಡಲ್ ಪ್ರದೇಶದಲ್ಲಿ ಮೇಲಿಂದ ಮೇಲೆ ಇಂಥ ಅವಘಡಗಳು ಮರುಕಳಿಸುತ್ತಿರುವುದಕ್ಕೆ ಕಾರಣಗಳಾದರೂ ಏನಿರಬಹುದು? ಈ ಸಂಕೀರ್ಣ ಪ್ರಶ್ನೆಗಳಿಗೆ ಪ್ರಸಕ್ತ ರಾಜಕೀಯ ಅರಾಜಕತೆ ಮತ್ತು ರಾಜಕಾರಣದಲ್ಲಿ ಹರಿಯುತ್ತಿರುವ ಹೆಂಡ, ಹಣ, ಹತ್ತು ಹಲವು ಆಮಿಷ ಗಳ ಮಹಾಪೂರದಲ್ಲಿಯೇ ಉತ್ತರಗಳಿವೆ. ಜರುಗುತ್ತಿರುವ ಘಟನೆಗಳ ವಾಸ್ತವಗಳನ್ನೇನೋ ನಮಗೆ ಕಾಣಲಿಕ್ಕೆ ಸಾಧ್ಯವಾಗುತ್ತಿದೆ. ಆದರೆ ವಾಸ್ತವಗಳ ಹಿಂದಿರುವ ಕ್ರೂರ ಸತ್ಯಗಳನ್ನು ಅರಿಯಲಿಕ್ಕೂ, ಭೇದಿಸಲಿಕ್ಕೂ ಸಾಧ್ಯವಾಗದಂಥ ಮಂಪರು ಆವರಿಸಿಕೊಳ್ಳುತ್ತಿದೆ. ಜಾಗತಿಕ ಮುಕ್ತ ಮಾರುಕಟ್ಟೆಯ ವಹಿವಾಟಿನ ಲೋಕಕ್ಕೆ ತೆರೆದುಕೊಂಡಿರುವ ಮಹಿಳೆಯರಿಗೆ ಇಂದು ತಮಗೆ ದತ್ತವಾದ ಅಧಿಕಾರವನ್ನು ನಿರ್ವಹಿಸಲು ಅಥವಾ ತಮಗೆ ನೀಡಲಾದ ಜವಾಬ್ದಾರಿಯನ್ನು ನಿಭಾಯಿಸಲು ಬರುವುದಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸಲಾರದು. ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾಗಿ ಇಲ್ಲಿಯವರೆಗೂ ಗ್ರಾಮದಿಂದ ನಗರದವರೆಗೂ ಲಕ್ಷೋಪಲಕ್ಷ ಮಹಿಳೆಯರು ಸ್ಪರ್ಧಿಸಿ ಆಯ್ಕೆಯಾಗಿ ಬಂದು ಮೊದಮೊದಲು ತಡಬಡಾಯಿಸಿದರೂ ನಂತರದ ಅವಧಿಯಲ್ಲಿ ತುಂಬಾ ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ‌್ಯಭಾರ ನಿಭಾಯಿಸಿದ ಉದಾಹರಣೆಗಳಿವೆ. ಅದರ ಪರಿಣಾಮವಾಗಿ ದೇಶದೆಲ್ಲೆಡೆ ಹಲವಾರು ಸಂದರ್ಭದಲ್ಲಿ ಸಾಮಾನ್ಯ ಸ್ಥಾನಗಳಲ್ಲಿಯೂ ಸ್ತ್ರೀಯರು ಚುನಾವಣಾ ಕಣಕ್ಕಿಳಿದು ಪುರುಷ ಅಭ್ಯರ್ಥಿಗಳನ್ನು ಸೋಲಿಸಿ ಆಯ್ಕೆಯಾದದ್ದೂ ಇದೆ. ತಾವು ಭಾಗವಹಿಸಿದ ಕ್ಷೇತ್ರಗಳಲ್ಲೆಲ್ಲ ಮಹಿಳೆಯರು ತಮ್ಮತನದ ಛಾಪು ಮೂಡಿಸಿ ಸಮರ್ಥವಾಗಿ ಮುಂದೆ ಬಂದಿದ್ದಾರೆ. ದೇಶವ್ಯಾಪಿ ಸಮೀಕ್ಷೆಗಳು ಮಹಿಳೆಯರ ಕಾರ‌್ಯಕ್ಷಮತೆ, ಅವರ ರಾಜಕೀಯ ಧಾರಣಶಕ್ತಿ, ದಕ್ಷತೆ, ಅಚ್ಚುಕಟ್ಟುತನ, ಸಂವೇದನಾಶೀಲತೆಯನ್ನು ಎತ್ತಿ ತೋರಿಸಿವೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸ್ತ್ರೀಯರ ತೊಡಗುವಿಕೆಯ ಇತ್ಯಾತ್ಮಕ (ಪಾಜಿಟಿವ್) ಫಲಿತಾಂಶಗಳೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ 50 ರಷ್ಟು ಸೀಟುಗಳನ್ನು ಮಹಿಳೆಯರಿಗಾಗಿ ಮೀಸಲಿಡುವಂತೆ ಪ್ರಭಾವಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗಲೂ ಸಕ್ರಿಯ ರಾಜಕಾರಣದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಸಂದರ್ಭ ಬಂದಾಗ ಅವಿವೇಕದ ವರ್ತನೆಗಳು, ಮಹಿಳೆಯರ ಕುರಿತು ನೇತ್ಯಾತ್ಮಕ ವರದಿಗಳು ಕಾಣಿಸಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ. ಕಾರಣವಿಷ್ಟೆ. ಹಲವು ಒತ್ತಡ. ಒತ್ತಾಯಗಳ ನಡುವೆಯೂ ಇಂದಿಗೂ ನಮ್ಮ ಪುರುಷ ಪ್ರಪಂಚ ಸ್ತ್ರೀಯರ ಕಾರ್ಯಕ್ಷೇತ್ರವು ಗಂಡ, ಮಕ್ಕಳು, ಕುಟುಂಬದಾಚೆ ವಿಸ್ತರಿಸಿಕೊಳ್ಳುವಂತೆಯೇ ಇಲ್ಲ. ನಮ್ಮ ಸಾಮಾಜಿಕ ಸಂರಚನೆಯ ಮೂಲ ಘಟಕಗಳಾಗಿರುವ ವಿವಾಹ, ಕುಟುಂಬದ ವ್ಯಾಪ್ತಿಗಳು ಪುರುಷರಿಗೆ ನೀಡಿದ ಹಕ್ಕು, ಸವಲತ್ತುಗಳೇ ಬೇರೆ. ಸ್ತ್ರೀಯರಿಗೆ ಹೊರಿಸಿದ ಕರ್ತವ್ಯ, ಜವಾಬ್ದಾರಿಗಳೇ ಬೇರೆ. ಅತ್ಯಂತ ವೇಗದಿಂದ ಸಂಕೀರ್ಣವಾಗುತ್ತಿರುವ ರಾಜಕಾರಣ ಮತ್ತು ಪರಂಪರಾಗರ ಸಾಂಸಾರಿಕ ವರ್ತುಲ ಇವೆರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿಯೇ ಚಲಿಸುತ್ತಿವೆ. ಮತ್ತು ವೈರುಧ್ಯವೂ ಒಳಗೊಂಡಿವೆ. ಶತಮಾನಗಳ ಕೌಟುಂಬಿಕ ಮೌಲ್ಯಗಳು ಒಂದೆಡೆಯಾದರೆ, ಊಸರವಳ್ಳಿಯಂತೆ ಕ್ಷಣಕ್ಷಣಕ್ಕೂ ಬಣ್ಣ ಬದಲಿಸುತ್ತಿರುವ ರಾಜಕೀಯ ವಿದ್ಯಮಾನಗಳು ಇನ್ನೊಂದೆಡೆ ಇವೆ. ಇವೆರಡರ ನಡುವೆ ಸಮನ್ವಯ ಸಾಧಿಸಲಾಗದೆ ಸ್ತ್ರೀಯರು ಒದ್ದಾಡುತ್ತಿದ್ದರೆ, ಪುರುಷಲೋಕ ಅದನ್ನು ಮಹಿಳೆಯರ ಜೈವಿಕ ಬಿಕ್ಕಟ್ಟು ಎಂಬಂತೆ ಬಿಂಬಿಸುತ್ತಿದೆ. ಆದ್ದರಿಂದಲೇ ಭಾರತದ ಇಂದಿನ ರಾಜಕಾರಣದಲ್ಲಿ ಯಶಸ್ವಿಯಾದ ಮಹಿಳೆಯರಲ್ಲಿ (ಒಬ್ಬಿಬ್ಬರನ್ನು ಬಿಟ್ಟರೆ) ಹೆಚ್ಚಿನವರು ಅವಿವಾಹಿತರೇ ಎಂಬುದು ಕಾಕತಾಳೀಯವೇನಲ್ಲ. ಇನ್ನೂ ಕೆಲವರು ವಿವಾಹಿತರಾದರೂ ಅವರ ಸಾಂಸಾರಿಕ ಬದುಕು ಅಷ್ಟೇನು ಸಂತೃಪ್ತವಾಗಿಲ್ಲ ಎಂಬುದು ಕೂಡ ವಿನಾಕಾರಣವೇನಲ್ಲ. ಈ ಹಿನ್ನೆಲೆಯಲ್ಲಿ ಗುಲಬರ್ಗಾದ ಘಟನೆಯನ್ನು ನೋಡಿದರೆ, ಅಸಲಿಗೆ ಅಲ್ಲಿ ಆಗಿದ್ದು ಏನೆಂದರೆ, ಆಯ್ಕೆಯಾಗಿರುವ ಮಹಿಳೆಯರನ್ನು ಸ್ವತಂತ್ರವಾಗಿ ವರ್ತಿಸಲು ಅವರ ಗಂಡಂದಿರು ಬಿಡುತ್ತಿಲ್ಲ. ನಾವು ನಡೆದ ಘಟನೆಯನ್ನು ಕುರಿತು ಅಧಿಕಾರಿಗಳನ್ನು ಕಂಡು ಮಾತಾಡಿದಾಗ ತಿಳಿದು ಬಂದ ಸತ್ಯವೆಂದರೆ, ಇದೇ ಸದಸ್ಯೆಯರು ಕಳೆದ ಬಾರಿ ಸಾಮಾನ್ಯ ಸಭೆ ನಡೆದಾಗ ತುಂಬಾ ಸಕ್ರಿ ುವಾಗಿ ಭಾಗವಹಿಸಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕುರಿತು ತುಂಬಾ ಸಮರ್ಪಕವಾಗಿ, ಸಮಯೋಚಿತವಾಗಿ ಚರ್ಚಿಸಿದ್ದಾರೆ. ಆದರೆ ಈ ಬಾರಿ ಸಭೆಯಲ್ಲಿ ಕುಳಿತು ಚರ್ಚೆ ಪ್ರಾರಂಭಿಸಬೇಕು ಎಂದಾಗ ಅವರ ಗಂಡಂದಿರ ಧಮಕಿ, ದಬ್ಬಾಳಿಕೆಗ ಹೆದರಿ ಬಂದಿದ್ದಾರೆ. ಈ ಸಲದ ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳಿಗೆ ಹಣದ ಹಂಚಿಕೆ, ಕಾಮಗಾರಿಗಳ ಗುತ್ತಿಗೆ ಇತ್ಯಾದಿ ಹಣದ ವ್ಯವಹಾರವೇ ಪ್ರಮುಖ ಅಜೆಂಡಾ ಇತ್ತು. ತಮ್ಮ ಹೆಂಡಂದಿರು ಸಮರ್ಥವಾಗಿ ಹಣವನ್ನು ಕಬಳಿಸಲಾರರು ಎಂಬ ಕಾರಣಕ್ಕಾಗಿಯೇ ಅವರ ಗಂಡಂದಿರು, ಸಂಬಂಧಿಕರು ಅವರನ್ನು ನಿಯಂತ್ರಿಸಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಮಾಧ್ಯಮದವರ ಎದುರಲ್ಲಿ ಸದಸ್ಯೆಯರಿಗೆ ಮಾತಾಡಲೂ ಬಿಡದೆ ಅಲ್ಲಿಂದ ಅಕ್ಷರಶಃ ನೂಕಿಕೊಂಡು ಹೋಗಿದ್ದಾರೆ. ಗುಲಬರ್ಗಾದಲ್ಲಿ ಆಯ್ಕೆಯಾದ 23 ಮಹಿಳೆಯರೆಲ್ಲ ನಿರಕ್ಷರಕುಕ್ಷಿಗಳು ಅಥವಾ ಏನೂ ಅರಿಯದ ಅಜ್ಞಾನಿಗಳೇನೂ ಅಲ್ಲ. ಅವರಲ್ಲಿ 16 ಮಹಿಳೆಯರು ಅಕ್ಷರಸ್ಥರು. ಕೆಲವರು ಪದವೀಧರರು. ಇದಕ್ಕಿಂತ ಮುಖ್ಯವಾಗಿ ಅವರು ಹೈದರಾಬಾದ ಕರ್ನಾಟಕದ ಜಡ್ಡುಗಟ್ಟಿದ ಪಾಳೇಗಾರಿ ವ್ಯವಸ್ಥೆಯ ಮೌಲ್ಯಗಳನ್ನೇ ಪಾಲಿಸಿಕೊಂಡು ಬರುತ್ತಿರುವ ನಾರೀಮಣಿಯರು. ಕೆಲವರಂತೂ ಒರಟು ಗಂಡಂದಿರ ದರ್ಪ, ದಬ್ಬಾಳಿಕೆಯನ್ನು ತುಟಿ ಬಿಚ್ಚದಂತೆ ಸಹಿಸಿಕೊಂಡಿರುವ ಅಸಹಾಯಕರು. ಇದಕ್ಕೂ ಮುಖ್ಯವಾದ ಸಂಗತಿಯೆಂದರೆ ಇವರಲ್ಲಿ ಬಹುತೇಕರು ಒಂದಿಲ್ಲೊಂದು ರಾಜಕೀಯ ಪಕ್ಷಗಳ ಮರಿ, ಹಿರಿ, ಕಿರಿ ಪುಢಾರಿಗಳ ಹೆಂಡಂದಿರು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಇಲ್ಲಿನ ಅನಭಿಷಕ್ತ ದೊರೆಗಳು. ಅವರು ಯಾವತ್ತೂ ತಮ್ಮನ್ನು ಅತಿಕ್ರಮಿಸುವಂಥ ಪರ‌್ಯಾಯ ಪುರುಷ ನಾಯಕತ್ವವನ್ನೇ ಬೆಳೆಯಗೊಡುವವರಲ್ಲ. ಹೀಗಿರುವಾಗ ಪ್ರತಿಭಾವಂತ ಮಹಿಳೆಯರಿಗೆ ಇವರು ಅವಕಾಶ ಕೊಡುವುದಂತೂ ದೂರವೇ ಉಳಿಯಿತು. ದೇಶದಾದ್ಯಂತ ಯಾವುದೇ ರಾಜಕೀಯ ಪಕ್ಷದಲ್ಲಿ ಸಮರ್ಥವಾದ ಪ್ರಜ್ಞಾವಂತ ಹಲವು ಕಾರ್ಯಕರ್ತೆಯರಿದ್ದಾಗಲೂ ಅವರಿಗೆ ಟಿಕೇಟು ನೀಡುವುದೇ ಇಲ್ಲ. ಉದ್ದೇಶಪೂರ್ವಕವಾಗಿಯೇ ತೀರ ಅಸಮರ್ಥ, ಅನಾಸಕ್ತ ಮಹಿಳೆಯರಿಗೆ ಆರಿಸಿ ತರುವ ಮೂಲಕ ಇಡೀ ಮಹಿಳಾ ಸಮುದಾಯದ ಬಗೆಗೆ ತಪ್ಪಭಿಪ್ರಾಯ ಮೂಡಿಸುವ ಕುತಂತ್ರ ಇಲ್ಲಿದೆ. ಗುಲಬರ್ಗಾ ಜಿಲ್ಲಾ ಪಂಚಾಯಿತಿಯಲ್ಲಿಯೇ ಗಮನಿಸುವುದಾದರೆ 23 ಸದಸ್ಯೆಯರ ಪೈಕಿ ಒಬ್ಬ ಪ್ರಜ್ಞಾವಂತ ಮಹಿಳೆ ಪಟ್ಟು ಹಿಡಿದು ಕುಳಿತು ಸಭೆ ನಡೆಸುವಂತೆ ಒತ್ತಾಯಿಸಿದರೂ ಉಳಿದ ಪುರುಷ ಸದಸ್ಯರು ಅವಳ ಬೆಂಬಲಕ್ಕೆ ನಿಂತಿಲ್ಲ. ಇಂದು ನಮ್ಮ ನಡುವೆ ರಾಜಕೀಯ ಪ್ರಜ್ಞೆಯುಳ್ಳ ಹಲವಾರು ಸಮರ್ಥ ಮಹಿಳೆಯರಿದ್ದಾಗಲೂ ಯಾವುದೇ ಪಕ್ಷ ಅಂಥವರನ್ನು ಬೆಳೆಯಲು ಬಿಡುವುದಿಲ್ಲ. ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷವು ಹತ್ತಾರು ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ತನ್ನದೇ ಕಾರ್ಯಕರ್ತೆಯೊಬ್ಬಳಿಗೆ ಟಿಕೇಟು ನಿರಾಕರಿಸಿದ್ದು, ಅವಳು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದು ಕೂಡಾ ಇದೇ ಗುಲಬರ್ಗಾದಲ್ಲಿ. ಅವಳಿಗೆ ಟಿಕೆಟ್ ನೀಡಲು ನಿರಾಕರಿಸಿದ್ದ ಕಾರಣವೆಂದರೆ; ಅವಳು ಜಾಣೆ . ಪುರುಷ ಲೋಕ ಯಾವತ್ತೂ ಮಹಿಳೆಯರ ಜಾಣತನ ಮತ್ತು ಅವರ ಧಾರಣಶಕ್ತಿಯನ್ನು ಒಪ್ಪಲಾರದು. ದಲಿತರು ಮತ್ತು ಮಹಿಳೆಯರ ರಾಜಕೀಯ ಪಾಲುದಾರಿಕೆ ಸಂದರ್ಭ ಬಂದಾಗ ಪಕ್ಕಾ ಜಾತಿವಾದಿ, ಪುರುಷವಾದಿಯಾಗಿರುವ ಭಾರತೀಯ ಮನಸ್ಸುಗಳು ದಡ್ಡ, ಅಸಮರ್ಥ, ಕೈಗೊಂಬೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಆರಿಸುವ ಮೂಲಕ ತಮ್ಮ ಶತಮಾನಗಳ ಮನೋಜಾಢ್ಯವನ್ನು ಮೆರೆಯುತ್ತವೆ. ಇಂತಹ ಅಭ್ಯರ್ಥಿಗಳ ಅಸಹಾಯಕತೆ, ಅಶಕ್ತತೆ, ಅನನುಭವಿತನವನ್ನು ಸಿಕ್ಕಾಬಟ್ಟೆ ವೈಭವೀಕರಿಸುವ ಮೂಲಕ ತನ್ನ ಮೇಲರಿಮೆಯನ್ನು ಪೋಷಿಸಿಕೊಳ್ಳುತ್ತದೆ. ಮಹಿಳೆಯರ ವಿಷಯದಲ್ಲಿಯಂತೂ ನಮ್ಮ ರಾಜಕಾರಣವು ತುಂಬಾ ಅಮಾನವೀಯವಾಗಿ ನಡೆದುಕೊಳ್ಳುತ್ತದೆ. ಪ್ರಸಕ್ತ ರಾಜಕಾರಣದಲ್ಲಿ ಒಂದೊ ಪ್ರತಿಷ್ಠಿತ ಮನೆತನಗಳ ಅನನುಭವಿ, ಅವಕಾಶವಾದಿ ಮಹಿಳೆಯರಿಗೆ ಸ್ಥಾನ ಮಾನ ನೀಡುವ ಮೂಲಕ ಅಂಥವರನ್ನು ಮಹಿಳಾ ವಿರೋಧಿಯಾಗಿಯೇ ಬೆಳೆಸಲಾಗುತ್ತದೆ. ಇಲ್ಲವೆ ಸಾಮಾನ್ಯ ಮಹಿಳೆಯೊಬ್ಬಳು ತನ್ನ ಸ್ವಯಂ ಶಕ್ತಿಯಿಂದ ಚುರುಕಾಗುತ್ತಿದ್ದಾಳೆ ಎಂದರೆ, ಅಂಥವರನ್ನು ದೈಹಿಕವಾಗಿ ಮಾನಸಿಕವಾಗಿ ಬಗ್ಗು ಬಡಿದು ಅವಳ ಆತ್ಮಸ್ಥೈರ್ಯವನ್ನೇ ಹೊಸಕಿ ಹಾಕುತ್ತಾರೆ. ಇವೆರಡೂ ಸಾಧ್ಯವಾಗದಿದ್ದಲ್ಲಿ ರಾಜಕೀಯ ಅನನುಭವಿಯೂ, ಇವರ ಕೈಗೊಂಬೆಯೂ ಆಗಬಹುದಾದ ಮಹಿಳೆಯರನ್ನು ಆಯಕಟ್ಟಿನ ಸ್ಥಾನದಲ್ಲಿ ಕುಳ್ಳಿರಿಸಿ ಅವರಿಂದಲೂ ಪುರುಷ ಪರ ಧೋರಣೆಯನ್ನು ಗಟ್ಟಿಗೊಳಿಸಲು ಹವಣಿಸುತ್ತಾರೆ. ಪರ್ಯಾಯವಾಗಿ ಮಹಿಳೆಯರ ಹಿಂದೆ ನಿಂತು ಅಧಿಕಾರ ಚಲಾಯಿಸುತ್ತಾರೆ. ರಾಜಕಾರಣದಲ್ಲಿ ಸೂಕ್ಷ್ಮ ಸಂವೇದನಾಶೀಲ, ಪ್ರಜ್ಞಾವಂತ, ಸ್ತ್ರೀವಾದಿ ಅಸ್ಮಿತೆಯನ್ನು ಮೆರೆಯುವ ಮಹಿಳೆಯರು ಬರದಂತೆ, ಬಂದರೂ ಅಂಥವರು ನೆಲೆ ನಿಲ್ಲದಂತೆ ಮಾಡುವ ಬರ್ಬರತೆಯನ್ನು ಮೆರೆಯುತ್ತಿದ್ದಾರೆ. ಒಟ್ಟಾರೆ ರಾಜಕಾರಣವು ಸ್ತ್ರೀಯರ ಕ್ಷೇತ್ರವಲ್ಲ ಎಂಬ ಕಂದಾಚಾರಿ ನಂಬಿಕೆಗಳನ್ನು ಗಟ್ಟಿಗೊಳಿಸುವ ಅವೇ ಮೌಲ್ಯಗಳನ್ನು ಜನತೆ ಪಾಲಿಸಿಕೊಂಡು ಬರುವಂಥ ಪರಿಸ್ಥಿತಿಯನ್ನು ನಿರ್ಮಿಸುತ್ತಿವೆ. ಜಗತ್ತಿನೆಲ್ಲ ಜ್ಞಾನ ಮತ್ತು ಕಾರ್ಯಸಾಧ್ಯತೆಯನ್ನು ಪುರುಷನಷ್ಟೆ ಸಮರ್ಥವಾಗಿ ನಿಭಾಯಿಸಬಲ್ಲ ಸ್ತ್ರೀಯರನ್ನು ಕೀಳು ಮಾಡುವುದನ್ನು ಸ್ವಭಾವ ಮಾಡಿಕೊಂಡಿರುವ ಪುರುಷರ ಮತ್ತು ಸಮಾಜದ ಇಂಥ ಧೋರಣೆಯನ್ನು ಕುರಿತು 900 ವರ್ಷಗಳ ಹಿಂದೆ ಆಯ್ದಕ್ಕಿ ಲಕ್ಕಮ್ಮ ಎಂಬ ವಚನಕಾರ್ತಿ; ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ? ಎಂದು ಕೇಳುತ್ತಾಳೆ. ಈಗ ಮತ್ತದೇ ಶತಮಾನಗಳಷ್ಟು ಹಳೆಯ ಪ್ರಶ್ನೆಯನ್ನು ಪುರುಷಕೇಂದ್ರಿತ ಪಾಳೇಗಾರಿ ಲೋಕಕ್ಕೆ ಅನಿವಾರ್ಯತೆಯಿಂದ ಕೇಳಲೇಬೇಕಾಗಿದೆ. (ಲೇಖಕರು ಗುಲ್ಬರ್ಗಾ ಎಂಎಸ್‌ಐ ಕಾಲೇಜಿನ ಕನ್ನಡ ಉಪನ್ಯಾಸಕಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.