ದುರುದ್ದೇಶದ ತೀರ್ಮಾನ ಸಿಬಿಐಯನ್ನು (ಕೇಂದ್ರ ತನಿಖಾ ದಳ) ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಿಂದ ಹೊರಗಿಡುವ ಕೇಂದ್ರ ಸಚಿವ ಸಂಪುಟದ ನಿರ್ಧಾರ ಅಸಮರ್ಥನೀಯ. ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ನೀಡಿರುವ ಕಾರಣಗಳನ್ನು ಒಪ್ಪಲು ಸಾಧ್ಯವಿಲ್ಲ. ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಿಂದ ವಿನಾಯ್ತಿ ಬಯಸುವುದಕ್ಕೆ ಸಂಬಂಧಿಸಿದಂತೆ ಸಿಬಿಐ ನೀಡಿರುವ ಕಾರಣಗಳಲ್ಲೂ ಹುರುಳಿಲ್ಲ. ಕೇಂದ್ರ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡು ಆ ಕುರಿತಂತೆ ಅಧಿಸೂಚನೆಯನ್ನೂ ಹೊರಡಿಸಿದ ಕ್ರಮದ ಹಿಂದೆ ದುರುದ್ದೇಶವಿದೆ. ಕೇಂದ್ರದ ಈ ಕ್ರಮದ ವಿರುದ್ಧ ಟೀಕೆಗಳು ಕೇಳಿ ಬರುತ್ತವೆ. ಮಾಹಿತಿ ಹಕ್ಕು ಕಾರ್ಯಕರ್ತರು ಚೆನ್ನೈ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಿದ್ದಾರೆ. ಕೇಂದ್ರದ ಸಚಿವ ಸಂಪುಟ ಈ ನಿರ್ಧಾರ ತೆಗೆದುಕೊಳ್ಳಲು ಏನು ಕಾರಣ ಎಂಬುದನ್ನು ವಿವರಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ. ಸಿಬಿಐಯನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆಗಳಂತೆ ಪರಿಗಣಿಸುವ ಸರ್ಕಾರದ ಕ್ರಮವನ್ನು ಒಪ್ಪಲಾಗದು. ಸಿಬಿಐ ತನಿಖಾ ದಳವೇ ಹೊರತು ರಾಷ್ಟ್ರೀಯ ಭದ್ರತಾ ಸಂಸ್ಥೆ ಅಲ್ಲ. ಅದರ ಚಟುವಟಿಕೆಗಳು ಮತ್ತು ಸಂಗ್ರಹಿಸುವ ಮಾಹಿತಿಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಅಗತ್ಯ ಇಲ್ಲ. ಸಿಬಿಐ ತಾನು ಕೈಗೆತ್ತಿಕೊಳ್ಳುವ ತನಿಖೆಗಳ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದೇ ವಾದಿಸುತ್ತಿದೆ. ತನಿಖೆಯಲ್ಲಿ ಹಲವಾರು ಸೂಕ್ಷ್ಮ ಸಂಗತಿಗಳಿರುತ್ತವೆ. ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳೂ ಇರುತ್ತವೆ. ಯಾವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ಮೊದಲೇ ಗೊತ್ತಿರುವುದರಿಂದ ಅದರ ವಿವರಗಳನ್ನು ಅವರ ಗಮನಕ್ಕೆ ತರುವ ಅಗತ್ಯವಿಲ್ಲ ಎಂದೇ ಹೇಳುತ್ತಿದೆ. ತನಿಖೆ ಪ್ರಗತಿಯಲ್ಲಿರುವಾಗ ಮಾಹಿತಿ ಹಕ್ಕು ಆಯೋಗ ಕೇಳುವ ವಿವರಗಳನ್ನು ಸಾರ್ವಜನಿಕರಿಗೆ ಒದಗಿಸುವುದರಿಂದ ಒಟ್ಟಾರೆ ತನಿಖೆಯ ಪ್ರಗತಿಗೆ ಅಡ್ಡಿಯಾಗುತ್ತದೆ. ತನಿಖೆಯಲ್ಲಿನ ಸಣ್ಣ ಪುಟ್ಟ ವಿವರಗಳಲ್ಲಿ ಸಾರ್ವಜನಿಕರ ಹಿತ ಏನಿರುತ್ತದೆ ಎಂಬ ವಾದವನ್ನು ಸಿಬಿಐ ಮುಂದಿಟ್ಟಿದೆ. ಸಿಬಿಐ ನಡೆಸುವ ಬಹುತೇಕ ತನಿಖೆಗಳು ಪ್ರಭಾವಿ ವ್ಯಕ್ತಿಗಳ ಮೇಲೆ ಬರುವ ಕೊಲೆ, ಭ್ರಷ್ಟಾಚಾರ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿರುತ್ತವೆ. ಸಿಬಿಐ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪ ಬಹಳ ಹಿಂದಿನಿಂದ ಕೇಳಿ ಬರುತ್ತಿದೆ. ಸಿಬಿಐ ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಬಗ್ಗು ಬಡಿಯುವ ಕೆಲಸವನ್ನು ಕೇಂದ್ರ ಮಾಡುತ್ತಿದೆ ಎಂಬ ದೂರುಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸಿಬಿಐ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕರು ಬಯಸುವುದು ತಪ್ಪೇ? ತನಿಖೆಯ ಪ್ರತಿಯೊಂದು ಹಂತದ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಪೊಲೀಸ್, ವರಮಾನ ತೆರಿಗೆ ಸೇರಿದಂತೆ ದೇಶದ ಪ್ರಮುಖ ಇಲಾಖೆಗಳೆಲ್ಲ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಬರುತ್ತವೆ, ಹೀಗಿರುವಾಗ ಸಿಬಿಐಗೆ ವಿನಾಯ್ತಿ ನೀಡುವುದರಲ್ಲಿ ಅರ್ಥವಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.