ಅಮೆರಿಕದ ಒತ್ತಡಕ್ಕೆ ಮಣಿಯಬೇಕಿಲ್ಲ ನಾಗರಿಕ ಪರಮಾಣು ಶಕ್ತಿ ಸಹಕಾರ ಒಪ್ಪಂದ ಕುರಿತಂತೆ ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಭಾರತದ ಮೇಲೆ ಒತ್ತಡ ಹೇರಿದ್ದಾರೆ. ಒಪ್ಪಂದ ಆಗಿ ಮೂರು ವರ್ಷಗಳು ಕಳೆದರೂ ಪರಮಾಣು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಯಾರ ಜವಾಬ್ದಾರಿ ಎಷ್ಟು ಎಂಬ ಬಗ್ಗೆ ಭಾರತದಲ್ಲಿ ಒಮ್ಮತ ಮೂಡಿ ಬರದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿದೆ. ಈ ವರ್ಷಾಂತ್ಯದೊಳಗೆ ಆ ಸಂಬಂಧವಾದ ಕಾನೂನಿಗೆ ಒಪ್ಪಿಗೆ ಸೂಚಿಸಬೇಕೆಂದು ಹಿಲರಿ ಕ್ಲಿಂಟನ್ ತಮ್ಮ ಭಾರತ ಭೇಟಿ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಅಂತರರಾಷ್ಟ್ರೀಯವಾಗಿ ಇದುವರೆಗೆ ಪಾಲಿಸಿಕೊಂಡು ಬಂದಿರುವಂಥ ಪದ್ಧತಿಯನ್ನು ಅನುಸರಿಸಬೇಕೆಂಬುದು ಅವರ ಅಭಿಪ್ರಾಯ. ಆದರೆ ಪರಮಾಣು ತಂತ್ರಜ್ಞಾನ ಪೂರೈಕೆ ರಾಷ್ಟ್ರಗಳು ಅನುಸರಿಸಿಕೊಂಡು ಬಂದಿರುವ ಕಾನೂನುಗಳು ಆ ರಾಷ್ಟ್ರಗಳಿಗೆ ಅನುಕೂಲಕರವಾಗಿಯೇ ಹೊರತು ತಂತ್ರಜ್ಞಾನ ಪಡೆದ ರಾಷ್ಟ್ರಗಳಿಗಲ್ಲ. ಪರಮಾಣು ಅಪಘಾತದ ಸಂದರ್ಭದಲ್ಲಿ ತಂತ್ರಜ್ಞಾನ ಪೂರೈಕೆ ಮಾಡಿದ ಕಂಪೆನಿಯ ಮೇಲೆ ಹೊರಿಸುವ ಜವಾಬ್ದಾರಿ ತೀರಾ ಕಡಿಮೆ. ಅಪಘಾತದಲ್ಲಿ ಸತ್ತವರಿಗೆ ಮತ್ತು ಗಾಯಗೊಂಡವರಿಗೆ ಅದು ಪರಿಹಾರವನ್ನೇನೂ ಕೊಡಬೇಕಿಲ್ಲ. ಅದನ್ನು ನಿರ್ವಹಿಸುತ್ತಿರುವ ಕಂಪೆನಿ ಅಥವಾ ದೇಶವೇ ಬಹುಪಾಲು ಜವಾಬ್ದಾರಿಯನ್ನು ಹೊರಬೇಕು. ವಿರೋಧ ಪಕ್ಷಗಳ ಮತ್ತು ತಜ್ಞರ ವಿರೋಧದಿಂದಾಗಿ ಕೇಂದ್ರ ಸರ್ಕಾರ ಕಾನೂನಿಗೆ ಮಹತ್ವದ ಬದಲಾವಣೆಗಳನ್ನು ತಂದಿದೆ. ತಂತ್ರಜ್ಞಾನ ಪೂರೈಸಿದವರ ಮೇಲೆ ಪರಿಹಾರದ ಹೊರೆ ಹೊರಿಸಲು ಸಾಧ್ಯವಾಗುವಂತೆ ಕಾನೂನಿಗೆ ತಿದ್ದುಪಡಿ ಸೂಚಿಸಲಾಗಿದೆ. ಈ ತಿದ್ದುಪಡಿ ಪರಮಾಣು ಶಕ್ತಿ ತಂತ್ರಜ್ಞಾನ ಪೂರೈಕೆ ರಾಷ್ಟ್ರಗಳ ಖಾಸಗಿ ಕಂಪೆನಿಗಳಿಗೆ ಒಪ್ಪಿಗೆ ಇಲ್ಲ. ಹೀಗಾಗಿ ಹಿಲರಿ ಒತ್ತಡ ಹೇರುತ್ತಿದ್ದಾರೆ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಭಾರತದ ನಿಲುವನ್ನು ನಿಖರವಾಗಿಯೇ ಸ್ಪಷ್ಟಪಡಿಸಿದ್ದಾರೆ. ಭಾರತ ಈ ಒಪ್ಪಂದವನ್ನು ದೇಶದ ಜನರ ಸುರಕ್ಷತೆಯ ದೃಷ್ಟಿಯಿಂದಲೂ ನೋಡಬೇಕಿದೆ. ಭೋಪಾಲ್ ಅನಿಲ ದುರಂತ ಜನರ ನೆನಪಿನಿಂದ ಇನ್ನೂ ಮರೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ಒತ್ತಡಕ್ಕೆ ಭಾರತ ಮಣಿಯಬೇಕಾದ ಅಗತ್ಯ ಇಲ್ಲ. ಮುಂಬೈ ಮೇಲೆ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಹಿಲರಿಯವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಹಿಲರಿ ಮತ್ತು ಕೃಷ್ಣ ಅವರ ನಡುವಣ ಮಾತುಕತೆಯಲ್ಲಿ ಸಹಜವಾಗಿಯೇ ಭಯೋತ್ಪಾದನೆ ಪಿಡುಗು ಪ್ರಸ್ತಾಪವಾಗಿದೆ. ಭಯೋತ್ಪಾದನೆ ವಿರುದ್ಧ ಹಿಲರಿ ಅವರು ಎಂದಿನಂತೆ ವೀರಾವೇಶದ ಮಾತುಗಳನ್ನು ಆಡಿದ್ದಾರೆ. ಆದರೆ ಭಯೋತ್ಪಾದಕರಿಗೆ ಪಾಕಿಸ್ತಾನ ಸ್ವರ್ಗವಾಗಿ ಪರಿಣಮಿಸಿರುವ ಮತ್ತು ಸಾಕ್ಷ್ಯಾಧಾರ ಒದಗಿಸಿದರೂ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳದ ಅಲ್ಲಿನ ಸರ್ಕಾರದ ಬಗ್ಗೆ ಪ್ರಸ್ತಾಪಿಸಿದಾಗ ಹಿಲರಿ ಮೆತ್ತಗಾಗುತ್ತಾರೆ. ಅವರು ಪಾಕಿಸ್ತಾನದ ಮೇಲೆ ನೇರ ಒತ್ತಡ ಹೇರುವಂಥ ಯಾವುದೇ ಮಾತನ್ನು ಆಡದೆ ನುಣುಚಿಕೊಂಡದ್ದು ಅಮೆರಿಕದ ಕಪಟ ಧೋರಣೆಗೆ ನಿದರ್ಶನ. ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ಕಪಟ ನಾಟಕ ಗೊತ್ತಿದ್ದರೂ ಅದನ್ನು ಇನ್ನೂ ಮಿತ್ರ ರಾಷ್ಟ್ರವೆಂದು ಪರಿಗಣಿಸಿರುವುದು ಸಮಯಸಾಧಕತನವೇ. ಇಂಥ ಸಂದರ್ಭದಲ್ಲಿ ಭಾರತ ಬಹಳ ಎಚ್ಚರಿಕೆಯಿಂದ ಅಂತರರಾಷ್ಟ್ರೀಯ ಸಂಬಂಧಗಳನ್ನು ನಿಭಾಯಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.