ಬಡವರಿಗೆ ಆರೋಗ್ಯ ಬಲ ಸರ್ಕಾರದಿಂದ ಹಲವು ಬಗೆಯ ರಿಯಾಯಿತಿಗಳನ್ನು ಪಡೆದುಕೊಂಡು ದೊಡ್ಡದಾದ ಸಾಮ್ರಾಜ್ಯಗಳನ್ನು ಸ್ಥಾಪಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಸಮಾಜದೆಡೆಗಿನ ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಈ ನಿಟ್ಟಿನಲ್ಲಿ, ಪ್ರತಿ ವರ್ಷ ತಮ್ಮ ಆಸ್ಪತ್ರೆಗಳಿಗೆ ದಾಖಲಾಗುವ ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) ಶೇ 20ರಷ್ಟಾದರೂ ಒಳರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ನಿರ್ದೇಶಿಸುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ನೀಡಿರುವುದು ಸ್ವಾಗತಾರ್ಹ. ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವ ಈ ಶೇ 20ರಷ್ಟು ಮಂದಿಗೆ ಶಸ್ತ್ರಚಿಕಿತ್ಸೆ, ಔಷಧ ಹಾಗೂ ತಪಾಸಣಾ ಸೇವೆಗಳೆಲ್ಲವೂ ಉಚಿತವಾಗೇ ದೊರಕಬೇಕೆಂಬ ಪ್ರಸ್ತಾಪವನ್ನೂ ಕೋರ್ಟ್ ಮುಂದಿಟ್ಟಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಬಿಪಿಎಲ್ ಕಾರ್ಡ್‌ದಾರರೂ ಈ ಉಚಿತ ಚಿಕಿತ್ಸೆಗೆ ಅರ್ಹತೆ ಪಡೆಯುತ್ತಾರೆ. ಈ ಉದ್ದೇಶಿತ ಯೋಜನೆ ಬಗ್ಗೆ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ಖಾಸಗಿ ಆಸ್ಪತ್ರೆಗಳಿಗೆ ನ್ಯಾಯಾಲಯ ನೀಡಿದೆ. ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಮೂಲಕ ಕೇಂದ್ರ ಸರ್ಕಾರಕ್ಕೂ ಈ ವಿಷಯವನ್ನು ಪರಿಗಣನೆಗೆ ಸಲ್ಲಿಸಲಾಗುವುದು. ಅಫಿಡವಿಟ್ ಸಲ್ಲಿಕೆಯಾದ ಆರು ತಿಂಗಳೊಳಗೆ ಅನುಷ್ಠಾನ ಕಾರ್ಯ ಆರಂಭವಾಗಬೇಕು ಎಂದೂ ನ್ಯಾಯಾಲಯ ನಿರ್ದೇಶಿಸಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾದರೆ, ನ್ಯಾಯಾಲಯದ ಈ ತೀರ್ಪು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಭಾರಿ ಪರಿವರ್ತನೆಗೆ ನಾಂದಿಯಾಗಲಿದೆ. ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಎಷ್ಟೆಲ್ಲಾ ಸುಧಾರಣೆಗಳಾಗುತ್ತಿದ್ದರೂ ಅವೆಲ್ಲಾ ಬಡವರಿಗೆ ನಿಲುಕದ ನಕ್ಷತ್ರ ಎಂಬಂತಹ ಸ್ಥಿತಿ ಇದೆ. ದುಡ್ಡಿದ್ದವರಷ್ಟೇ ಆರೋಗ್ಯವನ್ನು ಖರೀದಿಸುವ ವ್ಯವಸ್ಥೆ ಈಗಿನದು. ಜಾಗೃತಿಯ ಕೊರತೆಯಿಂದಾಗಿ ರಾಷ್ಟ್ರದ ಅನೇಕ ಬಡತನ ನಿವಾರಣೆ ಯೋಜನೆಗಳು ವಿಫಲವಾಗಿರುವುದನ್ನು ಗುರುತಿಸಿರುವ ನ್ಯಾಯಾಲಯ, ಈ ಹೊಸ ಯೋಜನೆಯ ಬಗ್ಗೆ ಪ್ರಸಾರ ಭಾರತಿ ಹಾಗೂ ರಾಜ್ಯ ಸರ್ಕಾರಗಳು ವ್ಯಾಪಕ ಪ್ರಚಾರ ಮಾಡಬೇಕೆಂಬ ಹೊಣೆಗಾರಿಕೆಯತ್ತಲೂ ಬೆರಳು ತೋರಿದೆ. ವಿಶ್ವದರ್ಜೆಯ ಅತ್ಯಾಧುನಿಕ ಸೌಕರ್ಯಗಳಿಂದ ಥಳಥಳ ಹೊಳೆಯುವ ಖಾಸಗಿ ಆಸ್ಪತ್ರೆಗಳಿಗೆ ತದ್ವಿರುದ್ಧವಾಗಿ ಸ್ವಚ್ಛತೆಯಂತಹ ಮೂಲಭೂತ ಅಂಶವೂ ಇಲ್ಲದೆ ಅನೇಕ ಬಗೆಯ ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆಗಳಿಂದ ಸರ್ಕಾರಿ ಆಸ್ಪತ್ರೆಗಳು ನರಳುತ್ತಿವೆ. ದಿನೇ ದಿನೇ ಹೆಚ್ಚುತ್ತಿರುವ ರೋಗಿಗಳ ಹೆಚ್ಚುವರಿ ಹೊರೆಯೂ ಸರ್ಕಾರಿ ಆಸ್ಪತ್ರೆಗಳಿಗಿದೆ. ಈಗ ನ್ಯಾಯಾಲಯದ ತೀರ್ಪಿನಿಂದ ಈ ಹೊರೆ ಸ್ವಲ್ಪವಾದರೂ ಕಡಿಮೆಯಾಗಬಹುದೆಂಬ ಭರವಸೆ ಚಿಗುರಿದೆ. ಆದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಗೊಣಗಬಹುದು. ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂಬಂತಹ ವಾದಗಳನ್ನೂ ಅವು ಹೂಡಬಹುದು. ಆದರೆ ಇದು ಅಸಂಗತ ವಾದ. ಖಾಸಗಿ ಆಸ್ಪತ್ರೆಗಳು ಭಾರಿ ಲಾಭ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವಂತಹದ್ದೇ. `ವೈದ್ಯಕೀಯ ಪ್ರವಾಸೋದ್ಯಮ~ಕ್ಕೆ ಉತ್ತೇಜನ ನೀಡುವ ನೆಪದಲ್ಲಿ ಸರ್ಕಾರ ಅನೇಕ ನೆಲೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಸಾಮಾಜಿಕ ಹೊಣೆಗಾರಿಕೆಯನ್ನು ಖಾಸಗಿ ಆಸ್ಪತ್ರೆಗಳು ಪ್ರದರ್ಶಿಸಬೇಕು. ಈ ಮಧ್ಯೆ, ಬಡತನ ರೇಖೆಯಿಂದ ಕೆಳಗಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದನ್ನು, ಖಾಸಗಿ ಆಸ್ಪತ್ರೆಗಳಿಗೆ ಕಡ್ಡಾಯ ಮಾಡಲು ಸದ್ಯದಲ್ಲೇ `ಖಾಸಗಿ ಆಸ್ಪತ್ರೆ ನಿರ್ಮಾಣ ಮಸೂದೆ~ಯನ್ನು ಸರ್ಕಾರ ರೂಪಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿರುವುದು ಈ ವಾದಕ್ಕೆ ಹೆಚ್ಚಿನ ಪುಷ್ಟಿ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.