ತೀರ್ಪು ಜಾರಿಯಾಗಲಿ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವಿಗೀಡಾದ ಎಲ್ಲಾ 158 ಮಂದಿಯ ಕುಟುಂಬದವರಿಗೆ ಪರಿಹಾರವಾಗಿ ತಲಾ 75 ಲಕ್ಷ ರೂಪಾಯಿ ನೀಡಬೇಕೆಂದು ಕೇರಳದ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ದುರಂತದಲ್ಲಿ ಮಡಿದವರನ್ನೇ ಜೀವನೋಪಾಯಕ್ಕೆ ಆಶ್ರಯಿಸಿದ್ದ ಕುಟುಂಬಗಳಿಗೆ ಈ ತೀರ್ಪು ಇನ್ನಾದರೂ ನೆಮ್ಮದಿಯಿಂದ ಉಸಿರಾಡಲು ಒಂದು ಊರುಗೋಲಾದಂತಾಗಿದೆ. ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದು ದುರಂತದಲ್ಲಿ ಸತ್ತವರ ಸ್ಥಾನಮಾನದ ನಡುವೆ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ಪರಿಹಾರ ನೀಡಬೇಕೆಂಬ ನ್ಯಾಯಾಲಯದ ತೀರ್ಪು ಮೆಚ್ಚುವಂತಹದ್ದು. ಸತ್ತವರ ಕುಟುಂಬಗಳಿಗೆ ಕೇವಲ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ಉದ್ಯೋಗದ ಭರವಸೆ ನೀಡುವುದಾಗಿ ಏರ್ ಇಂಡಿಯಾ ಘೋಷಣೆ ಮಾಡಿತ್ತು. ದುರಂತ ಸಂಭವಿಸಿ ಒಂದೂವರೆ ವರ್ಷವಾದರೂ, ಪರಿಹಾರದ ಹಣ ನೀಡಿಕೆ ಇನ್ನೂ ಅಪೂರ್ಣವಾಗಿರುವುದು ವಿಪರ್ಯಾಸ. ಪರಿಹಾರದ ಹಣ ನೀಡಿಕೆಯ ಹೊಣೆ ಹೊತ್ತಿದ್ದು, ಅನಗತ್ಯವಾಗಿ ಗೋಳಾಡಿಸುತ್ತಿದ್ದ ಮುಂಬೈನ ಮಧ್ಯವರ್ತಿ ಕಂಪೆನಿಗೆ ಈ ತೀರ್ಪಿನಿಂದ ಸರಿಯಾಗಿ ಬುದ್ಧಿ ಕಲಿಸಿದಂತಾಗಿದೆ. ಈ ಮಧ್ಯವರ್ತಿ ಏಜೆನ್ಸಿಯು ಒಂದೊಂದೇ ಕುಟುಂಬದವರನ್ನು ಕರೆಸಿ, ಪರಿಹಾರ ನೀಡಿಕೆಯಲ್ಲಿ ಚೌಕಾಸಿ ಮಾಡುವ ಜೊತೆಗೆ ತಾರತಮ್ಯ ನೀತಿಯನ್ನೂ ಅನುಸರಿಸುತ್ತಿದ್ದುದು ಅದರ ಅಮಾನವೀಯ ವರ್ತನೆಗೆ ಸಾಕ್ಷಿಯಾಗಿತ್ತು. ಪರಿಹಾರ ನೀಡಿಕೆಯ ಕಾರ್ಯವನ್ನು ಮಧ್ಯವರ್ತಿ ಕಂಪೆನಿಯೊಂದಕ್ಕೆ ವಹಿಸಿ ತನಗೂ ಪರಿಹಾರಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ ವರ್ತನೆಯಿಂದ ಸಂತ್ರಸ್ತರ ಕುಟುಂಬಗಳು ಭ್ರಮನಿರಸನಗೊಂಡಿದ್ದವು. ಪರಿಹಾರಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಹೋರಾಟ ಮಾಡುವ ಮಟ್ಟಕ್ಕೂ ಚಿಂತನೆ ನಡೆಸಿದವರಿಗೆ ಕೇರಳ ನ್ಯಾಯಾಲಯದ ತೀರ್ಪು ನೆಮ್ಮದಿ ತಂದಿದೆ. ಆದರೆ ಈ ತೀರ್ಪಿನ ವಿರುದ್ಧ ವಿಮಾ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಕೊಂಡಿದೆ. ಮೇಲ್ಮನವಿ ಸಲ್ಲಿಸುವುದು ಆ ಸಂಸ್ಥೆಗೆ ಕಾನೂನಿನಲ್ಲಿ ಇರುವ ಅವಕಾಶ ಎನ್ನುವುದು ನಿಜ. ಆದರೆ, ಮಾಂಟ್ರಿಯಲ್ ಒಪ್ಪಂದದ ಅನ್ವಯ ಮೃತರ ಕುಟುಂಬಗಳಿಗೆ ತಲಾ 75 ಲಕ್ಷ ರೂಪಾಯಿಗಳ ಪರಿಹಾರ ನೀಡುವುದನ್ನು ಪರಿಶೀಲಿಸುವುದಾಗಿ ದುರಂತ ಸಂಭವಿಸಿದಾಗ ನಾಗರಿಕ ವಿಮಾನಯಾನ ಸಚಿವರು ಹೇಳಿದ್ದರು. ಆದ್ದರಿಂದ ವಿಮಾ ಸಂಸ್ಥೆ ಮೇಲ್ಮನವಿ ಸಲ್ಲಿಸುವ ನಿರ್ಧಾರದ ಬಗೆಗೆ ಮರುಚಿಂತನೆ ಮಾಡುವುದು ಅವಶ್ಯ. ದುರಂತದಲ್ಲಿ ಸತ್ತ ಬಹುತೇಕ ಮಂದಿ ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ದುಬೈಗೆ ಹೋಗಿದ್ದವರು. ಅಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ದುಡಿಮೆಯಿಂದ ಬರುವ ಹಣದಲ್ಲಿಯೇ ಉಳಿಸಿ ಊರಿನಲ್ಲಿರುವ ತಮ್ಮ ಕುಟುಂಬದವರಿಗೆ ಅನ್ನದಾತರಾಗಿದ್ದವರು. ಆದ್ದರಿಂದ ವಿಮಾ ಸಂಸ್ಥೆಯು ಪರಿಹಾರ ನೀಡಿಕೆಯಲ್ಲಿ ಮಾನವೀಯತೆಯ ಮಾನದಂಡವನ್ನು ಅನುಸರಿಸಿ ಕೇರಳ ನ್ಯಾಯಾಲಯದ ತೀರ್ಪನ್ನು ಗೌರವಿಸುವುದು ಸೂಕ್ತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.