ನಾರ್ವೆ: ರಾಕ್ಷಸೀ ಕೃತ್ಯ ಬಹುಸಂಸ್ಕೃತಿ ಮತ್ತು ಶಾಂತಿಯ ನಾಡಾದ ನಾರ್ವೆಯಲ್ಲಿ ಶುಕ್ರವಾರ ಸಂಭವಿಸಿರುವ ಹತ್ಯಾಕಾಂಡ ಮಾನವತೆಯಲ್ಲಿ ನಂಬಿಕೆಯಿರುವವೆಲ್ಲರನ್ನೂ ಬೆಚ್ಚಿಬೀಳಿಸಿದೆ. 90ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯ ರಾಕ್ಷಸೀ ಕೃತ್ಯದ ಭೀತಿಯ ನೆರಳಿನಿಂದ ದೇಶ ಇನ್ನೂ ಹೊರಬರಲು ಸಾವಾಗಿಲ್ಲ. ದೇಶದಲ್ಲಿ ಇಂಥ ಘಟನೆಗಳು ನಡೆಯಬಹುದೆಂದು ತಾವು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ ಎಂಬ ಪ್ರಧಾನಿ ಜೆನ್ಸ್ ಸ್ಟೋಲ್ಟನ್‌ಬರ್ಗ್ ಅವರ ಪ್ರತಿಕ್ರಿಯೆ ಸಹಜವಾದುದು. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಪರಿಹಾರ ಒದಗಿಸುವ ದಿಸೆಯಲ್ಲಿ ನಾರ್ವೆ ಮೊದಲಿನಿಂದಲೂ ವೇದಿಕೆ ಒದಗಿಸುತ್ತ ಬಂದಿದೆ. ಶಾಂತಿ ನೊಬೆಲ್ ಪುರಸ್ಕಾರದ ನೆಲೆಯಾಗಿರುವ ನಾರ್ವೆಯಲ್ಲಿ ಇಂಥ ಘಟನೆಗಳು ನಡೆದಿರುವುದು ವಿಶ್ವ ಎದುರಿಸುತ್ತಿರುವ ಸಮಸ್ಯೆಗಳ ಕರಾಳಮುಖವನ್ನು ಬಯಲಿಗೆಳೆದಿದೆ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಆಂಡರ್ಸ್ ಬೆಹ್ರಿಂಗ್ ಬ್ರೇವಿಕ್ ಎಂಬ ಒಬ್ಬನ ಬಂಧನವಾಗಿದೆ. ನಾರ್ವೆಯವನೇ ಆದ ಬ್ರೇವಿಕ್ ಇಂಥ ಹತ್ಯಾಕಾಂಡ ಮಾಡಲು ಇನ್ನೂ ನಿಖರ ಕಾರಣಗಳು ಗೊತ್ತಾಗಿಲ್ಲ. ಸದ್ಯಕ್ಕೆ ಅವನು ಕ್ರಿಶ್ಚಿಯನ್ ಮೂಲಭೂತವಾದಿ, ಮುಸ್ಲಿಂ ವಿರೋಧಿ, ವಲಸೆ ಮತ್ತು ಬಹುಸಂಸ್ಕೃತಿ ವಿರೋಧಿ, ನವನಾಜಿವಾದದ ಬೆಂಬಲಿಗ ಎಂಬುದು ಮೊದಲ ಮಾಹಿತಿಯಿಂದ ಗೊತ್ತಾಗಿದೆ. ಆದರೆ ಅಂಥ ಕೃತ್ಯ ನಡೆಸಲು ಈ ಮನೋಭಾವ ಕಾರಣವಾಗಿರಬಹುದೆಂದು ಹೇಳಲು ಸದ್ಯಕ್ಕೆ ಸಿಕ್ಕಿರುವ ಸಾಕ್ಷ್ಯಗಳು ಸಾಲವು. ಉಟೋಯಾ ದ್ವೀಪದಲ್ಲಿ 85 ಜನರ ಮಾರಣ ಹೋಮಕ್ಕೆ ಅವನ ಅರೆ ಹುಚ್ಚು ಮನಸ್ಥಿತಿ ಕಾರಣವೆಂದು ಹೇಳಬಹುದಾದರೂ ಓಸ್ಲೋದಲ್ಲಿ ಪ್ರಧಾನಿ ಕಚೇರಿ ಸೇರಿದಂತೆ ಸರ್ಕಾರದ ಬಹುಮಹಡಿ ಕಟ್ಟಡಗಳ ಬಳಿ ಸಂಭವಿಸಿದ ಕಾರುಬಾಂಬ್ ಸ್ಫೋಟ ಘಟನೆಯ ಹಿಂದೆ ಭಯೋತ್ಪಾದನೆಯ ಕರಾಳ ಮುಖ ಇರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಈ ಘಟನೆಯ ಹಿನ್ನೆಲೆಯನ್ನು ನೋಡಿದರೆ ಉಟೋಯಾ ದ್ವೀಪ ಹತ್ಯಾಕಾಂಡವೂ ಭಯೋತ್ಪಾದನೆಯ ಕೃತ್ಯ ಎಂದು ಗುರುತಿಸಲು ಸಾಧ್ಯವಿದೆ. ಯೂರೋಪ್‌ನಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ಭೀತಿ ಇಲ್ಲವೆಂದಲ್ಲ. 2004ರಲ್ಲಿ ಮ್ಯಾಡ್ರಿಡ್‌ನಲ್ಲಿ ಸಂಭವಿಸಿದ ರೈಲು ಬಾಂಬ್ ಸ್ಫೋಟದಲ್ಲಿ 191 ಜನರು ಸತ್ತಿದ್ದಾರೆ. 2005ರಲ್ಲಿ ಲಂಡನ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಪ್ರವಾದಿ ಮಹಮದ್ ಕುರಿತ ಕಾರ್ಟೂನೊಂದು ಡೆನ್ಮಾರ್ಕ್‌ನಲ್ಲಿ ಸಾಕಷ್ಟು ಆತಂಕಕ್ಕೂ ಎಡೆಮಾಡಿಕೊಟ್ಟಿದೆ. ಭಯೋತ್ಪಾದನೆಯ ಒಂದೆರಡು ವಿಫಲ ಯತ್ನಗಳನ್ನು ಹೊರತು ಪಡಿಸಿದರೆ ನಾರ್ವೆ ಇಸ್ಲಾಮಿಕ್ ಭಯೋತ್ಪಾದನೆಗೆ ಸಿಕ್ಕಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದಲ್ಲಿ ತಾಲಿಬಾನ್ ಮತ್ತು ಅಲ್ ಕೈದಾ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ನಾರ್ವೆ ಭಾಗಿಯಾಗಿದೆ. ಇದರ ವಿರುದ್ಧ ಉಗ್ರವಾದಿ ಇಸ್ಲಾಮಿಕ್ ಸಂಘಟನೆಗಳಿಂದ ನಾರ್ವೆ ಆಡಳಿತಗಾರರಿಗೆ ಬೆದರಿಕೆಗಳು ಬಂದಿವೆ. ಕುರ್ದಿಶ್ ಉಗ್ರವಾದಿ ಇಸ್ಲಾಮಿಕ್ ಗುಂಪಿನ ಸಂಸ್ಥಾಪಕರಲ್ಲಿ ಒಬ್ಬರಾದ ಮುಲ್ಲಾ ಕ್ರೆಕರ್ ಅವರನ್ನು ನಾರ್ವೆಯಿಂದ ಹೊರಹಾಕುವ ಸರ್ಕಾರದ ಪ್ರಯತ್ನಗಳಿಗೂ ವಿರೋಧ ಕಂಡುಬಂದಿದೆ. ಈ ಬೆಳವಣಿಗೆಗಳೂ ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಗೆ ದಾರಿಮಾಡಿಕೊಟ್ಟಿರಬಹುದೇ ಎಂಬುದು ಪತ್ತೆ ಮಾಡಬೇಕಿರುವ ವಿಚಾರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.