ದುರುಪಯೋಗ ಅಕ್ಷಮ್ಯ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಲು ಮತ್ತು ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನೀಡಿರುವ 1.26 ಕೋಟಿ ರೂಪಾಯಿ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ದುರುಪಯೋಗ ಆಗಿರುವ ಪ್ರಕರಣ ಗಂಭೀರವಾದುದು. ಕಾಲೇಜಿನಲ್ಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ಹೊಸ ಕೋರ್ಸುಗಳನ್ನು ಆರಂಭಿಸಲು ಈ ಅನುದಾನವನ್ನು ನೀಡಲಾಗಿತ್ತು. ಆದರೆ ಈ ಹಣ ನಿಜವಾದ ಉದ್ದೇಶಕ್ಕೆ ಬಳಕೆಯಾಗಿಲ್ಲ. ಯುಜಿಸಿ ನೀಡಿದ ಅನುದಾನವನ್ನು ನಿಯಮಾನುಸಾರ ಬಳಕೆ ಮಾಡದೆ ದುರುಪಯೋಗ ಮಾಡಿಕೊಂಡಿರುವ ಪ್ರಕರಣ ತನಿಖೆಯಿಂದಲೇ ಗೊತ್ತಾಗಿದೆ. ಈ ಹಣದ ದುರ್ಬಳಕೆಗೆ ಕಾಲೇಜಿನ ಪ್ರಿನ್ಸಿಪಲ್, ಈ ಹಿಂದಿನ ವ್ಯವಸ್ಥಾಪಕ ಮತ್ತು ಅಧೀಕ್ಷಕರೇ ಕಾರಣ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದ್ದರೂ ಇವರ ವಿರುದ್ಧ ಸರ್ಕಾರ ಇದುವರೆಗೆ ಕಾನೂನು ಕ್ರಮಕೈಗೊಳ್ಳದಿರುವುದು ಅಚ್ಚರಿಯ ಸಂಗತಿ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದರೆ, ಸರ್ಕಾರವೇ ಇಂತಹವರನ್ನು ಉತ್ತೇಜಿಸಿದಂತೆ. ಕಾಲೇಜಿನ ಆಡಳಿತವು ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಯುಜಿಸಿಗೆ ಸಲ್ಲಿಸದಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬರಬಹುದಾಗಿದ್ದ 2.5 ಕೋಟಿ ರೂಪಾಯಿ ಕೈತಪ್ಪುವುದು ಖಚಿತವಾಗಿದೆ. ಹೀಗೆ ಭಾರಿ ಪ್ರಮಾಣದಲ್ಲಿ ಹಣ ದುರುಪಯೋಗ ನಡೆದು ಲೆಕ್ಕಪತ್ರ ಒಪ್ಪಿಸದಿದ್ದರೆ ಈ ಕಾಲೇಜು ಇನ್ನು ಹತ್ತುವರ್ಷ ಯುಜಿಸಿಯ ಕಪ್ಪುಪಟ್ಟಿಗೆ ಸೇರುವ ಅಪಾಯವೂ ಇರುವುದರಿಂದ ಈ ಪ್ರಕರಣಕ್ಕೆ ತುರ್ತಾಗಿ ತಾರ್ಕಿಕ ಅಂತ್ಯ ಕಾಣಿಸುವುದು ಅವಶ್ಯ. ಸರ್ಕಾರಿ ಕಾಲೇಜುಗಳಲ್ಲಿನ ಇಂತಹ ದುರಾಡಳಿತದಿಂದಾಗಿ ಬಹುತೇಕ ಖಾಸಗಿ ಕಾಲೇಜುಗಳು ಮೂಲಭೂತ ಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟದಲ್ಲಿ ದಾಪುಗಾಲು ಇಡುತ್ತಿವೆ. ವಿದ್ಯಾರ್ಥಿಗಳೂ ಆ ಕಡೆಗೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲೆಂದು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಪೋಷಕರ ಒಲವೂ ಹೆಚ್ಚಿದೆ. ಇದಕ್ಕೆ ಕಾರಣ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿರುವ ನಿರ್ಲಕ್ಷ್ಯ ಧೋರಣೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯಿಂದ ಸರ್ಕಾರಿ ಮತ್ತು ವಿಶ್ವವಿದ್ಯಾಲಯಗಳ ಕಾಲೇಜುಗಳು ಸೊರಗುತ್ತಿವೆ. ಯುಜಿಸಿಯು ಶಿಕ್ಷಕ ವರ್ಗಕ್ಕೆ ಕೈತುಂಬ ಸಂಬಳ ಕೊಡುತ್ತಿರುವುದರಿಂದ ಅವರು ಮಾತ್ರ ಸಂತೃಪ್ತರಾಗಿದ್ದಾರೆ. ಆದರೆ ಅವರು ಕೆಲಸ ಮಾಡುವ ಉನ್ನತ ಶಿಕ್ಷಣ ಕ್ಷೇತ್ರದ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ. ಈ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ಕಾರವೂ ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕಾಗಿದೆ. ಭ್ರಷ್ಟರನ್ನು ರಕ್ಷಿಸಿದರೆ ಉನ್ನತ ಶಿಕ್ಷಣದ ಮೂಲ ಸೌಲಭ್ಯಗಳಿಗೆ ಧಕ್ಕೆಯಾಗುವುದನ್ನು ಅರ್ಥ ಮಾಡಿಕೊಳ್ಳಬೇಕು.ತಕ್ಷಣವೇ ಈಗ ಆಗಿರುವ ಪ್ರಮಾದವನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.